spot_img
spot_img

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರಿಂದ ಪ್ರಗತಿ ಪರಿಶೀಲನೆ

Must Read

spot_img
- Advertisement -

ಬರ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ– (ಕರ್ನಾಟಕ ವಾರ್ತೆ): ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಬರ ಪರಿಸ್ಥಿತಿ ಉದ್ಭವಿಸಿದೆ. ಬರಗಾಲದಿಂದ ಪರಿಸ್ಥಿತಿ ತೀವ್ರ ವಿಕೋಪಕ್ಕೆ ಹೋಗಬಹುದು. ಆದ್ದರಿಂದ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ ಸೇರಿದಂತೆ ಎಲ್ಲ ಇಲಾಖೆಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ(ಸೆ.30) ನಡೆದ ಬರ ನಿರ್ವಹಣೆ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

- Advertisement -

ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಕೊರತೆ; ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಬಾರದು. 

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ನಿಷ್ಕ್ರೀಯ ಕೊಳವೆ ಬಾವಿಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ಖಾಸಗಿ‌ ಕೊಳವೆಬಾವಿಗಳನ್ನು ಗುರುತಿಸಬೇಕು ಎಂದು ನಿರ್ದೇಶನ ನೀಡಿದರು.

ಮುಂಗಾರು ಹಂಗಾಮಿನಲ್ಲಿ ಬೆಳೆ ಕಳೆದುಕೊಂಡಿರುವ ರೈತರು ಪರ್ಯಾಯ ಬಿತ್ತನೆಗೆ ಯಾವುದೇ ಕಾರಣಕ್ಕೂ ಬಿತ್ತನೆ ಬೀಜಗಳ ಕೊರತೆ ಉಂಟಾಗಬಾರದು ಎಂದು ತಿಳಿಸಿದರು.

ಜಿಲ್ಲೆ ಶೀಘ್ರ ಕೇಂದ್ರ ಬರ ಅಧ್ಯಯನ ತಂಡ ಭೇಟಿ:

- Advertisement -

ಬರಹಾನಿ ಪರಿಶೀಲನೆಗೆ ಕೇಂದ್ರ ಅಧ್ಯಯನ ತಂಡವು ಶೀಘ್ರ ಜಿಲ್ಲೆಗೆ ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಬರ ಪರಿಸ್ಥಿತಿ ಮತ್ತು ಬೆಳೆಹಾನಿ ಕುರಿತು ಅವರಿಗೆ ಮನವರಿಕೆ ಆಗುವಂತಹ ಕ್ಷೇತ್ರವನ್ನು ತೋರಿಸಬೇಕು ಎಂದು ಅಂಜುಂ ಪರ್ವೇಜ್ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯ ಕೆಲವೆಡೆ ತೇವಾಂಶದಿಂದ ಬೆಳೆ ಹಸಿರಾಗಿ‌ ಕಂಡರೂ ವಾಸ್ತವದಲ್ಲಿ ಬೆಳೆಹಾನಿಯಾಗಿದ್ದು, ಇಳುವರಿ ಕುಂಠಿತಗೊಳ್ಳಲಿದೆ. ಆದ್ದರಿಂದ ಈ ಅಂಶವನ್ನು ಸಮರ್ಪಕವಾಗಿ ತಿಳಿಸಿಕೊಡಬೇಕು ಎಂದರು.

ಮಳೆ ಮುಂದುವರಿದರೆ ಹಿಡಕಲ್, ಮಾರ್ಕಂಡೇಯ ಜಲಾಶಯಗಳು ಭರ್ತಿಯಾಗುವ ನಿರೀಕ್ಷೆಯಿದೆ. ಮಲಪ್ರಭಾ ಜಲಾಶಯ ಯಾವಾಗಲೂ ಸಂಪೂರ್ಣ ಭರ್ತಿಯಾಗುವುದಿಲ್ಲ; ಆದರೆ ಕಳೆದ ಬಾರಿ ಜಲಾಶಯ ಭರ್ತಿಯಾಗಿತ್ತು. ಜಲಾಶಯಗಳಲ್ಲಿರುವ ನೀರಿನ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು. 

ನೀರಾವರಿ ಯೋಜನಾ ಸಲಹಾ ಸಮಿತಿ, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಸಮಗ್ರವಾಗಿ ಚರ್ಚಿಸಿದ ಬಳಿಕ ನೀರು ಬಿಡುಗಡೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿರುವ ಕುಟುಂಬಗಳ ಸಮೀಕ್ಷೆ ಹಾಗೂ ಪರಿಹಾರ ವಿತರಣೆ ಕುರಿತು ಮಾಹಿತಿ ಪಡೆದುಕೊಂಡ ಅವರು, ಈಗಾಗಲೇ ಮೊದಲ ಕಂತಿನ ಪರಿಹಾರ ಪಡೆದುಕೊಂಡಿರುವವರು ಕಡ್ಡಾಯವಾಗಿ ಮನೆಗಳನ್ನು ನಿರ್ಮಾಣ ಮಾಡುವಂತೆ ನಿಗಾವಹಿಸಬೇಕು ಎಂದು ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಅಥವಾ ಕಾಮಗಾರಿಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳಬಾರದು. 

ರಾಜ್ಯದ ಕೆಲವೆಡೆ ನೀರು ವಿತರಣೆ ಸಮಸ್ಯೆಯಿಂದಾಗಿ ಯೋಜನೆಗಳು ಕುಂಠಿತಗೊಂಡಿರುತ್ತವೆ. ಆದ್ದರಿಂದ ಜಿಲ್ಲೆಯಲ್ಲಿ ಬಹುಗ್ರಾಮ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸೂಚನೆ:

ಸರಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.

ಗೃಹಲಕ್ಷ್ಮೀ ಯೋಜನೆಯಡಿ ಅರ್ಹರಾಗಿರುವ ಯಾವುದೇ ಮಹಿಳೆಯು ಸೌಲಭ್ಯದಿಂದ ವಂಚಿತಗೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ನಿರ್ದೇಶನ ನೀಡಿದರು.

65 ಸಾವಿರ ಜನರ ನೋಂದಣಿ ಬಾಕಿ ಇರುವುದರಿಂದ ನೋಂದಣಿಗೆ ಅಡ್ಡಿಯಾಗಿರುವ ಆಧಾರ್‌ ಸೀಡಿಂಗ್, ಬ್ಯಾಂಕ್ ಖಾತೆ‌ ಮತ್ತಿತರ ತಾಂತ್ರಿಕ ಅಂಶಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಮಹಿಳಾ ಮತ್ತು‌ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಅಂಜುಂ ಪರ್ವೇಜ್ ಸೂಚನೆ ನೀಡಿದರು.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 9.56 ಲಕ್ಷ ಫಲಾನುಭವಿಗಳಿಗೆ ಸೆಪ್ಟೆಂಬರ್ ಮಾಹೆಯಲ್ಲಿ

53 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಶಕ್ತಿ ಯೋಜನೆ ಆರಂಭದಿಂದ ಪ್ರತಿದಿನ 2.50 ಲಕ್ಷ ಜನ ಪ್ರಯಾಣಿಕರು ಹೆಚ್ಚಾಗಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಹೆಚ್ಚುವರಿ ಬಸ್ ಖರೀದಿಗೆ ಸಂಪುಟ‌ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಸರಾಸರಿ ಪ್ರಮಾಣ ನಿಗದಿಪಡಿಸಿರುವುದರಿಂದ ಈ ಯೋಜನೆ ಆರಂಭವಾದ ಬಳಿಕ ವಿದ್ಯುತ್ ಬಳಕೆ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿರುವುದಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ಇದಲ್ಲದೇ ಸಮಾಜಕಲ್ಯಾಣ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿನಿಲಯಗಳ ಸ್ಥಾಪನೆಗೆ ತಕ್ಷಣವೇ ನಿವೇಶನಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ‌ ಬಗೆಹರಿಸಬೇಕಾದರೆ ಅಮೃತ 1 ಹಾಗೂ 2 ನೇ ಹಂತದ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ನಿರಂತರ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಪರ್ವೇಜ್ ಹೇಳಿದರು.

ಸ್ಮಾರ್ಟ್ ಸಿಟಿ ಪೂರ್ಣಗೊಂಡ ಯೋಜನೆ- ಹಸ್ತಾಂತರಕ್ಕೆ ಸೂಚನೆ:

ಸ್ಮಾರ್ಟ್ ಸಿಟಿ ಯೋಜನೆಯಡಿ ಪೂರ್ಣಗೊಳಿಸಲಾಗಿರುವ ಯೋಜನೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕು ಎಂದು ಅಂಜುಂ ಪರ್ವೇಜ್‌ ತಿಳಿಸಿದರು.

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯು 1 ಸಾವಿರ ಕೋಟಿ ರೂಪಾಯಿ ಯೋಜನೆಯಾಗಿದ್ದು, ಇದುವರೆಗೆ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಹತ್ತು ಲಕ್ಷದೊಳಗಿನ ಜನಸಂಖ್ಯೆ ಇರುವ ನಗರಗಳ ಪೈಕಿ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ದೇಶದಲ್ಲಿಯೇ ಪ್ರಥಮ ಸ್ಥಾನ‌ ಲಭಿಸಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕರಾದ ಸಯೀದಾ ಆಫ್ರಿನ್ ಬಾನು ಬಳ್ಳಾರಿ ತಿಳಿಸಿದರು.

ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿರುವ ಕುಟುಂಬಗಳ ಸಮೀಕ್ಷೆ ಹಾಗೂ ಪರಿಹಾರ ವಿತರಣೆ; ಸಕಾಲ ಅರ್ಜಿಗಳ ವಿಲೇವಾರಿ, ಸಾಮಾಜಿಕ ಭದ್ರತಾ ಪಿಂಚಣಿ ಮಂಜೂರಾತಿ ಮತ್ತಿತರ ವಿಷಯಗಳ ಕುರಿತು ಅಪರ ಜಿಲ್ಲಾಧಿಕಾರಿ‌ ವಿಜಯಕುಮಾರ್ ಹೊನಕೇರಿ ಅವರು ಸಭೆಯಲ್ಲಿ ಮಾಹಿತಿಯನ್ನು ನೀಡಿದರು.

ಬಿತ್ತನೆ ಬಳಿಕ ಮಳೆಯ‌ ಕೊರತೆಯಾಗಿದ್ದರಿಂದ ಬೀಜಗಳು ಮೊಳಕೆ ಒಡೆಯದೇ ಅಥವಾ ಸಸಿ ಸಮರ್ಪಕ ಬೆಳವಣಿಗೆಯಾಗದ್ದರಿಂದ ಇಳುವರಿ ಕುಂಠಿತಗೊಳ್ಳಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟಾರೆ ಶೇ.95ಕ್ಕೂ ಅಧಿಕ ಬಿತ್ತನೆಯಾಗಿದ್ದು, ಒಟ್ಟಾರೆ ಬೆಳೆಯಲ್ಲಿ ಶೇ.30 ಕ್ಕೂ ಅಧಿಕ ಪ್ರಮಾಣದಲ್ಲಿ ಬೆಳೆಹಾನಿ/ಇಳುವರಿ ಕುಂಠಿತವಾಗಿರುತ್ತದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯ ಹದಿನೈದು‌ ತಾಲ್ಲೂಕುಗಳ ಪೈಕಿ 13 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬೆಳಗಾವಿ ಮತ್ತು‌ ಖಾನಾಪುರದಲ್ಲೂ ಮಳೆ ಕೊರತೆಯಿಂದ ಅಪಾರ ಬೆಳೆಹಾನಿಯಾಗಿರುವುದರಿಂದ ಅವುಗಳನ್ನು ಕೂಡ ಬರಪೀಡಿತ ಎಂದು‌ ಘೋಷಿಸುವಂತೆ ಕೋರಿ ವಿಶೇಷ ವರದಿಯನ್ನು ಜಿಲ್ಲಾಧಿಕಾರಿಗಳು ಸರಕಾರಕ್ಕೆ ಕಳಿಸಿದ್ದಾರೆ ಎಂದು ಜಂಟಿ ನಿರ್ದೇಶಕ ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಕೃಷಿ, ತೋಟಗಾರಿಕೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group