ಬೀದರ – ಎಸ್ ಸಿ, ಎಸ್ ಟಿ, ಓಬಿಸಿಗಳ ಮೀಸಲಾತಿಯನ್ನು ರದ್ದು ಮಾಡುವುದಾಗಿ ಹೇಳಿದ ರಾಹುಲ್ ಗಾಂಧಿ ಹೇಳಿಕೆ, ನಗರದ ರಸ್ತೆಗಳಲ್ಲಿ ಗುಂಡಿಗಳು, ಅತಿವೃಷ್ಟಿಗೆ ಒಳಗಾದ ರೈತರ ಕಷ್ಟ ಆಲಿಸದ ಸರ್ಕಾರ ಹಾಗೂ ಬಿಜೆಪಿ ಶಾಸಕ ಸಿದ್ದು ಪಾಟೀಲ ಪ್ರಕರಣದ ನಿರ್ಲಕ್ಷ್ಯದ ವಿರುದ್ಧ ಬೀದರ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದರು.
ತಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದುಪಡಿಸುವುದಾಗಿ ಇತ್ತೀಚೆಗೆ ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಹೇಳಿಕೆ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ ಪ್ರತಿಭಟನಾಕಾರರು ನಗರದ ಶಿವಾಜಿ ವೃತ್ತದಲ್ಲಿ ರಾಹುಲ್ ಅವರ ಪ್ರತಿಕೃತಿಗೆ ಒದ್ದು ಆಕ್ರೋಶ ವ್ಯಕ್ತಪಡಿಸಿದರು.
ಸತ್ತಾನಪ್ಪೊ ಸತ್ತಾನೋ ರಾಹುಲ ಗಾಂಧಿ ಸತ್ತಾನೋ ಎಂಬ ಘೋಷಣೆ ಕೂಗಿದರು.
ಅದರ ಜೊತೆಗೇ ಮುಖ್ಯಮಂತ್ರಿ ಸಿದ್ಧರಾಮಯ್ಯ, ಖರ್ಗೆ, ಡಿಕೆಶಿವಕುಮಾರ ಮುಂತಾದ ಕಾಂಗ್ರೆಸ್ ನಾಯಕರ ವಿರುದ್ಧವೂ ಘೋಷಣೆ ಕೂಗಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿಯೇ ಮುಳುಗಿದೆ. ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಣ ಲೂಟಿ ಹೊಡೆದಿದ್ದಾರೆ. ನಾಗಮಂಗಲ ಗಲಭೆಯಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗಿದೆ, ಮುನಿರತ್ನ ಬಂಧನ ಮಾಡಿ ಬಿಜೆಪಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಎಂದರು.
ಆಪರೇಷನ್ ಕಮಲದಲ್ಲಿ ನೂರು ಕೋಟಿ ಆಫರ್ ಮಾಡುತ್ತಿದ್ದಾರೆ ಎಂದು ಸುಳ್ಳು ಹಬ್ಬಿಸಿ ತಮ್ಮ ರೇಟನ್ನೇ ತಾವು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಛಲವಾದಿ ವ್ಯಂಗ್ಯವಾಡಿದರು.
ವರದಿ : ನಂದಕುಮಾರ ಕರಂಜೆ, ಬೀದರ