ಹುನಗುಂದ: ಕಾವ್ಯದೊಳಗಿರುವ ಮಹೋನ್ನತ ಶಕ್ತಿಯು ಓದುಗರನ್ನು ತನ್ನೊಳಗೆ ಹಿಡಿದಿಟ್ಟುಕೊಂಡು ಸತ್ಯದ ದರ್ಶನ ಮಾಡಿಸುವುದೇ ಕಾವ್ಯ ಮತ್ತು ಕವಿಯ ಮೂಲ ಉದ್ದೇಶವಾಗಿದೆ ಎಂದು ಲೇಖಕ ಮುಕುಂದ ಅಮೀನಗಡ ಹೇಳಿದರು.
ಶನಿವಾರ ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ತಾಲೂಕಾಡಳಿತ,ತಾಲೂಕು ಪಂಚಾಯತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸುವರ್ಣ ಕರ್ನಾಟಕ ಸಂಭ್ರಮ ಸಮಾರೋಪ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತವಾಗಿ ಹಮ್ಮಿಕೊಳ್ಳಲಾಗಿದ್ದ ತಾಲೂಕ ಮಟ್ಟದ ಕವಿಗೋಷ್ಠಿಯನ್ನು ಸ್ವರಚಿತ ಕವನ ವಾಚಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಅಂತರಂಗದೊಳಗಿರುವ ಭಾವನೆಗಳಿಗೆ ಧ್ವನಿಯ ಚೌಕಟ್ಟನ್ನು ಒದಗಿಸುವನ್ನೇ ಕವಿಯಾಗಿದ್ದಾನೆ. ಆತನು ಕಾವ್ಯದಲ್ಲೇ ಭಗವಂತನನ್ನು ಕಾಣುತ್ತಾನೆ. ಇಂದು ಎಲ್ಲೋ ಒಂದು ಕಡೆಗೆ ಸಾಹಿತ್ಯವನ್ನು ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಹಿತ್ಯ ದಾರಿ ತಪ್ಪುತಿದೆ ಎನ್ನಿಸುತ್ತಿದೆ. ಸಮಾಜದ ಶುದ್ದಿಕರಣಕ್ಕೆ ಸಾಹಿತ್ಯ ಬಹಳ ಅವಶ್ಯಕ. ಶುದ್ಧ ಸಾಹಿತ್ಯ ಈ ಮಣ್ಣಿನಿಂದ ಬೆಳೆಯಬೇಕು ಅದು 12ನೇ ಶತಮಾನದ ಬಸವಣ್ಣನ ಕ್ರಾಂತಿಯಂತೆ ಇಂದು ಸಾಹಿತ್ಯ ಕ್ರಾಂತಿ ಆಗಬೇಕಾಗಿದೆ ಎಂದರು.
ತಾಳಿಕೋಟೆಯ ಖಾಸ್ಗತೇಶ್ವರ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕಿ ಸುಜಾತಾ ಸಿ ಮಾತನಾಡಿ ಕನ್ನಡ ರಾಜ್ಯೋತ್ಸವ ಬಂದಾಗ ಮಾತ್ರ ಕನ್ನಡ ನೆನಪಿಸಿಕೊಳ್ಳುವ ಬದಲು ಭಾಷೆ ಬಗ್ಗೆ ನಿರಂತರತೆ ಇರಬೇಕು. ತಾಯಿಯ ಭಾಷೆಯನ್ನು ಹತ್ತಿಕ್ಕಿ ಪರಭಾಷೆ ವ್ಯಾಮೋಹಕ್ಕೆ ಒಳಗಾಗಬಾರದು. ಕಾವ್ಯದಲ್ಲಿ ರಸ ಧ್ವನಿ ಗುಣ ಇರಬೇಕು. ಕವಿಯಾದವನು ಸಮಾಜ ಕಟ್ಟುವ ಕೆಲಸವನ್ನು ಮಾಡಬೇಕು. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರತಿ ತಾಲೂಕ ಜಿಲ್ಲಾ ಮಟ್ಟದಲ್ಲಿ ಕಮ್ಮಟಗಳನ್ನು ಏರ್ಪಡಿಸುವ ಮೂಲಕ ಯುವ ಸಾಹಿತಿಗಳಿಗೆ ಒಂದು ವೇದಿಕೆಯನ್ನು ಒದಗಿಸಿ ಕೊಡಬೇಕು ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಸಾಹಿತಿ ಮಹಾದೇವ ಬಸರಕೋಡ ಮಾತನಾಡಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮೂರು ಜನ ಮಹಾನ ಕವಿಗಳ ಪುಸ್ತಕ ಪ್ರಕಟಣೆ ಹಾಗೂ 50 ಮಹಿಳಾ ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಅಕಾಡೆಮಿಯಿಂದ ಮಾಡುವ ಮೂಲಕ ಕನ್ನಡ ಕಟ್ಟುವ ಕೈಂಕರ್ಯದಲ್ಲಿ ನಾವೆಲ್ಲ ಭಾಗಿಯಾಗೋಣ ಎಂದರು.
ಈ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಯುವ ಕವಿಗಳು ಕವಿಗೋಷ್ಠಿಯಲ್ಲಿ ಭಾಗಿಯಾಗಿ ತಮ್ಮ ಕಾವ್ಯ ವಾಚನವನ್ನು ಮಾಡಿದರು.ಕವಿಗೋಷ್ಠಿಯಲ್ಲಿ ಭಾಗಿಯಾದ ಕವಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ನಾಡು ನುಡಿ ಪರಂಪರೆ ಮತ್ತು ಐತಿಹಾಸಿಕತೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ವೇದಿಕೆಯಲ್ಲಿ ಗ್ರೇಡ್-2 ತಹಶೀಲ್ದಾರ ಮಹೇಶ ಸಂದಿಗವಾಡ, ಹಿರಿಯ ಸಾಹಿತಿಗಳಾದ ಎಸ್ಕೆ ಕೊನೆಸಾಗರ, ಸಿದ್ದಲಿಂಗಪ್ಪ ಬೀಳಗಿ, ಡಾ.ನಾಗರಾಜ ನಾಡಗೌಡರ, ಶಿಕ್ಷಕರಾದ ಸಂಗಮೇಶ ಹೊದ್ಲೂರ, ಗೀತಾ ತಾರಿವಾಳ, ಆನಂದ ಗದ್ದೆನಕೇರಿ ಸೇರಿದಂತೆ ಅನೇಕರು ಇದ್ದರು. ಶಿಕ್ಷಕ ಪ್ರಭು ಮಲಗತ್ತಿಮಠ ನಿರೂಪಿಸಿ ವಂದಿಸಿದರು.