ಸಿಂದಗಿ: ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ, ಜ್ಞಾನದ ಮಟ್ಟವನ್ನು ಪರೀಕ್ಷಿಸುವ ಸ್ಪರ್ಧೆಗಳಲ್ಲಿ ರಸಪ್ರಶ್ನೆಯು ಒಂದಾಗಿದೆ. ಮಕ್ಕಳಲ್ಲಿ ಇಂತಹ ವಿವಿಧ ಸಹಪಠ್ಯಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯವು ಬೆಳೆಯುತ್ತದೆ ಎಂದು ಉಪನ್ಯಾಸಕ ಮಂಜುನಾಥ ಬಡಿಗೇರ ಹೇಳಿದರು.
ತಾಲೂಕಿನ ಕನ್ನೊಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಡಿ ಎಸ್ ಪಾಟೀಲ್ ಸ್ವತಂತ್ರ ಪ ಪೂ ಕಾಲೇಜ್ ಹಾಗೂ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳ ಸಹಯೋಗದಲ್ಲಿ ಹಮ್ಮಿಕೊಂಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿ,ನಾವು ಗ್ರಹಿಸಿದ ಮಾಹಿತಿ, ತಿಳಿದುಕೊಂಡ ವಿಷಯಗಳು ಸಕಾಲಕ್ಕೆ ಅಭಿವ್ಯಕ್ತವಾಗುತ್ತವೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಏಳು ತಂಡಗಳು ಭಾಗವಹಿಸಿದ್ದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಮುಖ್ಯಗುರು ಎಸ್.ಎಸ್.ಯಂಕಂಚಿ ಮಾತನಾಡಿ, ಪ್ರಶ್ನೆ ಕೇಳಿದ ಕೂಡಲೇ ಆ ಮಾಹಿತಿ ನೆನಪಿನ ಕೋಶದಿಂದ ಹೊರಬರುತ್ತದೆಯೇ ಎನ್ನುವುದನ್ನು ಪರಿಶೀಲಿಸುವ ಮಾರ್ಗವೇ ರಸಪ್ರಶ್ನೆಯಾಗಿದೆ. ಈ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಗಳನ್ನು ಕುತೂಹಲ ಕಾಡುವಂತೆ ರಸವತ್ತಾಗಿ ನಡೆಸಿಕೊಡುವ ರಸಪ್ರಶ್ನೆ ಮಾಸ್ಟರಗಳಾಗಿ ಬಹುತೇಕ ವಿದ್ಯಾರ್ಥಿಗಳನ್ನು ಬೆಳೆಸುವ ಕಾರ್ಯ ಮಾಡುತ್ತದೆ ಎಂದು ಹೇಳಿದರು.
ನಿರ್ಣಾಯಕರಾಗಿ ಆಗಮಿಸಿದ ಪ್ರಾಚಾರ್ಯ ಈರಣ್ಣ ಪಡಶೆಟ್ಟಿ ಹಾಗೂ ಮಹಾಂತೇಶ ನೂಲಾನವರ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮುಂದಿನ ಪರೀಕ್ಷೆಗಳಲ್ಲಿ ಹೆಚ್ಜಿನ ಅಂಕಗಳನ್ನು ಪಡೆಯಲು ಅನುಕೂಲವಾಗಿತ್ತವೆ. ಇದನ್ನು ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು, ಈಗಾಗಲೇ ನೀವು ಶೈಕ್ಷಣಿಕ ವರ್ಷದ ಕೊನೆ ಹಂತಕ್ಕೆ ಬಂದಿದ್ದು ಪ್ರಶ್ನೆ ಪತ್ರಿಕೆಯಲ್ಲಿ ಬರುವ ಒಂದು ಅಂಕದ ಪ್ರಶ್ನೆಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಈ ರಸಪ್ರಶ್ನೆ ಕಾರ್ಯಕ್ರಮ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಈ ಕಾರ್ಯಕ್ರಮದ ಸದುಪಯೋಗ ಪಡೆದು ಉತ್ತಮ ದರ್ಜೆಯಲ್ಲಿ ಪಾಸಾಗಿ ಶಾಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರಾದ ಆರ್.ಎಸ್.ಬಿರಾದಾರ, ಎಂ ಎಸ್ ಶಂಭೇವಾಡ, ಎಸ್ ಜಿ ಬರಗಿ, ಎನ್.ಜಿ.ಕೂಡಲಗಿ, ಪ್ರಶಿಕ್ಷಣಾರ್ಥಿಗಳಾದ ವೀರಕುಮಾರ ಕುಕನೂರ, ಪ್ರದೀಪ್ ಹದರಿ, ಪ್ರವೀಣ ಇಂಗಳೇಶ್ವರ, ಶ್ರೀಶೈಲ ಹುಗ್ಗೆನವರ, ಹಣಮಂತ ನಾಯ್ಕೊಡಿ, ಸಂಜೀವ ಪರಗೊಂಡ, ಸುನೀತಾ ಜಮಾದಾರ, ಲಕ್ಷ್ಮೀ ತಳವಾರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುನೀತಾ ಜಮಾದಾರ ಹಾಗೂ ಲಕ್ಷ್ಮೀ ತಳವಾರ ಪ್ರಾರ್ಥಿಸಿದರು. ವೀರಕುಮಾರ ಕುಕನೂರ ಸ್ವಾಗತಿಸಿದರು. ಸಂಜೀವ ಪರಗೊಂಡ ನಿರೂಪಿಸಿದರು.