ರಾಯಚೂರು: ರಾಯಚೂರಿನಿಂದ ಮೆಹಬೂಬ ನಗರಕ್ಕೆ ಹೋಗುವ ಹೆದ್ದಾರಿಯಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿರುವ ಕೃಷ್ಣಾ ಸೇತುವೆ ಶಿಥಿಲಗೊಂಡಿದ್ದರೂ ಇಲ್ಲಿ ಅಸಂಖ್ಯ ಪ್ರಮಾಣದಲ್ಲಿ ಭಾರೀ ವಾಹನಗಳ ಸಂಚಾರ ನಡೆದೇ ಇದೆ.
ಶುಕ್ರವಾರ ಈ ಕೃಷ್ಣಾ ಸೇತುವೆಯ ಮೇಲೆ ಭಾರೀ ವಾಹನಗಳ ದಟ್ಟಣೆ ಕಂಡುಬಂದು ಟ್ರಕ್ ಚಾಲಕರ ಮಧ್ಯೆ ಜಗಳಕ್ಕೂ ಕಾರಣವಾಯಿತು. ಯಾವಾಗ ಬೇಕಾದರೂ ಅಪಾಯ ಸಂಭವಿಸಬಹುದಾದ ಈ ಸೇತುವೆಯ ಮೇಲೆ ಭಾರೀ ವಾಹನಗಳಿಗೆ ಪರವಾನಿಗೆ ಇಲ್ಲ ಎಂಬ ಬೋರ್ಡ್ ಹಾಕಿದ್ದರೂ ಅದಕ್ಕೆ ಬೆಲೆ ಇಲ್ಲದಂತಾಗಿದೆ. ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗ ಇಲ್ಲವಾದರೆ ಇದೇ ಸೇತುವೆಯ ಮೇಲೆ ವಿರಳವಾಗಿ ಚಲಿಸುವಂತೆ ಸಂಚಾರಿ ಇಲಾಖೆ ಕ್ತಮ ಕೈಗೊಳ್ಳಬೇಕಾಗಿದೆ.
ಕೃಷ್ಣಾ ಸೇತುವೆ ಇಕ್ಕಟ್ಟಾಗಿದ್ದು ದೊಡ್ಡ ದೊಡ್ಡ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತದೆ. ಆದರೂ ಸೇತುವೆಯ ಮೇಲೆ ಸುಗಮ ಸಂಚಾರಕ್ಕೆ ಇಲ್ಲಿನ ಜನಪ್ರತಿನಿಧಿಗಳು ಮನಸು ಮಾಡಿದಂತಿಲ್ಲ. ಕೃಷ್ಣಾ ಸೇತುವೆಯ ಪಕ್ಕದಲ್ಲಿಯೇ ಇನ್ನೊಂದು ಸೇತುವೆಯ ಕೆಲಸ ಬಹಳ ದಿನಗಳಿಂದ ಸ್ಥಗಿತಗೊಂಡಿದೆ. ಅರ್ಧ ಕಾಮಗಾರಿಯಾಗಿರುವ ಈ ಕಟ್ಟಡದ ಸುತ್ತೆಲ್ಲ ಗಿಡಗಂಟಿಗಳು ಬೆಳೆದು ನಿಂತು ಅವ್ಯವಸ್ಥೆಯನ್ನು ಸಾರುತ್ತಿದೆ.
ಸಂಬಂಧಿಸಿದ ಇಲಾಖೆ ಆದಷ್ಟು ಬೇಗ ಸೇತುವೆ ದುರಸ್ತಿ ಹಾಗೂ ಪಕ್ಕದ ಹೊಸ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂಬುದು ಇಲ್ಲಿ ಪ್ರಯಾಣಿಸುವ ಅಸಂಖ್ಯ ಪ್ರಯಾಣಿಕರ ಆಶಯವಾಗಿದೆ.