ಮಳೆ ಹನಿಗಳು.
“ಮಳೆ “
ಜೋರು ಮಳೆ
ಥೇಟ್ ಅವಳಂತೆಯೇ..;
ಒಲವ ಧಾರೆ ಹೊರಗಡಿಯಿಡಲು ಬಿಡದು
ನಿಂತರೂ ನೆನಪು
ಮರದ ಹನಿಯಂತೆ ತೊಟ್ಟಿಕ್ಕದೇ ಬಿಡದು..!
_________
“ಹೋಳಿ”
ಬಾನಿಗೂ ಆಡುವ ಆಸೆ
ಹೋಳಿ..;
ಅದಕೇ ನೋಡಿ
ಬಿಸಿಲು ಮಳೆಯ ಕೇಳಿ..!
________
“ಕಾಮನಬಿಲ್ಲು”
ಭುವಿಗೆ ಮಳೆಯ ಸ್ಪರ್ಶ
ಭುವಿ ತಂಪಾಗಿ ಬಿಸಿಯಾಗಿ
ಆಗಸದ ಮಳೆಯ ಬಿಸಿಲ ಬೆಳಕಿಗೆ
ನಾಚಿಕೆಯಿಂದ ರಂಗೇರುತ್ತಿರುವಳು ಎಲ್ಲೆಲ್ಲೂ
ಅವಳ ಪ್ರೇಮದ ರಂಗಿನಾಟಕೆ ಸಾಕ್ಷಿ ಬೇಕೆ
ಅದೋ ಕಾಮನಬಿಲ್ಲು..!
________
“ಅಳು”
ಕೆಲವೊಮ್ಮೆ ಸೋನೆಯಾಗಿ ಸುರಿಯುತ್ತೀ
ಮತ್ತೊಮ್ಮೆ ಗುಡುಗು ಸಿಡಿಲಿನೊಂದಿಗೆ ಬಿಕ್ಕುತ್ತೀ
ಮಗದೊಮ್ಮೆ ಯಾರನ್ನೋ ನೆನೆಸಿಕೊಂಡವರಂತೆ
ಬಿಟ್ಟು ಬಿಟ್ಟು ತೊಯ್ಯುತ್ತಿರುತ್ತೀ..;
ನಿಜ ಹೇಳು ವರುಣದೇವಾ
ನಿನ್ನ ಮನದ ಬೇಗುದಿಯೇನು
ನೀನು ಯಾರಿಗಾಗಿ ಅಳುತ್ತಿರುತ್ತೀ..?!
ಆರ್.ಸುನೀಲ್, ತರೀಕೆರೆ