ಮೂಡಲಗಿ: ಪ್ರಸಕ್ತ ಸಾಲಿನ ೨೦೨೨ ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಮೂಡಲಗಿ ವಲಯದಲ್ಲಿ ೭೦೪೧ ಪರೀಕ್ಷೆ ಎದುರಿಸುತ್ತಿದ್ದು, ರಾಜ್ಯದಲ್ಲಿಯೇ ವಿನೂತನ ಕಾರ್ಯಚಟುವಟಿಕೆಗಳಿಂದ ಹೆಸರುವಾಸಿಯಾಗಿರುವದು ಸಂತಸದ ವಿಷಯವಾಗಿದೆ ಎಂದು ಬೆಳಗಾವಿ ಸಿಟಿಇ ಪ್ರಾಚಾರ್ಯರು ಹಾಗೂ ಸಹ ನಿರ್ದೇಶಕ ರಾಜೀವ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ೮೧ ಪ್ರೌಢ ಶಾಲೆಗಳ ಮೇಲ್ವಿಚಾರಣೆ ಹಾಗೂ ೨೬ ಪರೀಕ್ಷಾ ಕೇಂದ್ರಗಳ ತಯಾರಿ ಕುರಿತು ಮಾತನಾಡಿ, ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಾಗಿ ತೊಂದರೆಯಾಗದ ನಿಟ್ಟಿನಲ್ಲಿ ಪೂರ್ವ ತಯಾರಿ ಮೆಚ್ಚುವಂತಹದು. ಗೂಗಲ್ ಮೀಟ್, ಟೆಲಿಗ್ರಾಂ ಸಂವನದ ಮೂಲಕ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ ಮಾಡಿ ಕುಂದು ಕೊರತೆ ಆಲಿಸಿದಾಗ ವಲಯದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಗಳು ಲಭ್ಯವಾದವು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ, ಕೊಠಡಿ ಮೇಲ್ವಿಚಾರಕರ ಮಾಹಿತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ಬಿಇಒ ಅಜಿತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ. ಬಳಿಗಾರ, ಎಸ್.ಎಸ್.ಎಲ್.ಸಿ ತಾಲೂಕಾ ನೋಡಲ್ ಅಧಿಕಾರಿ ಸತೀಶ್.ಬಿ,.ಎಸ್, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ವರ್ಗದವರು ಹಾಜರಿದ್ದರು.