ಕೆನಡಾದ ಸಂಸತ್ತಿನಲ್ಲಿ ಕನ್ನಡದ ಕಹಳೆ ಮೊಳಗಿಸಿದ ತುಮಕೂರು ಮೂಲದ ಚಂದ್ರಶೇಖರ ಆರ್ಯ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು ಬೆಂಗಳೂರಿನಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಜೃತಿ ಗೆ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕುತ್ತು ಬಂದಿದೆ. ಹಲವು ವಿದ್ಯಾವಂತರು ತಮ್ಮ ಮಕ್ಕಳನ್ನು ಮುಂದಿನ ಭವಿಷ್ಯದ ಸಲುವಾಗಿ ಆಂಗ್ಲ ಭಾಷಾ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ .ಗಡಿ ಜಿಲ್ಲೆಗಳಲ್ಲಿ ಕನ್ನಡ ನಾಮಫಲಕಗಳಿಗೂ ತಿಲಾಂಜಲಿ ನೀಡಲಾಗುತ್ತಿದೆ.
ಇಂತಹ ಸಂದರ್ಭದಲ್ಲಿ ದೂರದ ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಚಂದ್ರ ಶೇಖರ ಆರ್ಯ ಅವರ ಕಾರ್ಯ ಶ್ಲಾಘನೀಯ. ಅಂತಹವರನ್ನು ಗುರ್ತಿಸಿ ಗೌರವಿಸಬೇಕಾದ್ದು ಕರ್ನಾಟಕ ಸರ್ಕಾರದ ಕರ್ತವ್ಯ ಎಂದು ಒತ್ತಾಯಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳೂ ಸಹ ಚಂದ್ರಶೇಖರ ಆರ್ಯ ಅವರನ್ನು ತಮ್ಮ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಸೂಕ್ತ ಗೌರವ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.