ಸಿಂದಗಿ: ಕರೋನಾ ಎಂಬ ಮಹಾಮಾರಿಯ ಸಂದಿಗ್ದ ಸ್ಥಿತಿಯಲ್ಲಿಯೂ ಅಲ್ಲದೆ ಶಿಕ್ಷಕರ ಕೊರತೆಯಲ್ಲಿಯೂ ಮಕ್ಕಳು ಈ ರೀತಿ ಸಾಧನೆ ಮಾಡಿರುವುದು ಶಾಲೆಗೆ ಕಿರೀಟ ತೊಡಸಿದಂತಾಗಿದೆ ಎಂದು ಪ್ರಭಾರಿ ಮುಖ್ಯೋಪಾಧ್ಯಾಯ ರಮೇಶ ಚಟ್ಟರಕಿ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯ ಹಾಗೂ ವಿಜನ್ ಪಿಯು ಕಾಲೇಜಿನ ಸಹಯೋಗದಲ್ಲಿ 2021-22ನೇ ಸಾಲಿನ ಎಸ್ಎಸ್ ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ ಪಡೆದ ವಿದ್ಯಾರ್ಥಿನಿಗೆ ಹಾಗೂ ಪ್ರತಿಶತ 95ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮುಂದಿನ ದಿನಮಾನಗಳಲ್ಲಿ ಪೂರ್ಣ ಪ್ರಮಾಣ ಶಿಕ್ಷಕರ ಕೊರತೆ ನೀಗಿಸಿಕೊಂಡು ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಸನ್ನದ್ಧರಾಗುತ್ತೇವೆ ಎಂದರು.
ಎಸ್ಡಿಎಂ.ಸಿ ಅಧ್ಯಕ್ಷ ರವಿ ಬಮ್ಮಣ್ಣಿ ಮಾತನಾಡಿ, ಶಾಲೆಗೆ ಕೀರ್ತಿ ತಂದಿರುವ ಮಕ್ಕಳಿಗೆ ಹಾಗೂ ಕಾರಣಿಕರ್ತರಾದ ಶಿಕ್ಷಕರಿಗೆ ಅಭಿನಂದನೆ ತಿಳಿಸುತ್ತ ಶಾಲೆ ಇನ್ನೂ ಉತ್ತರೋತ್ತರವಾಗಿ ಬೆಳೆಯಲು ಯಾವುದೇ ಸಮಯದಲ್ಲಿ ಸಹಾಯ ಮಾಡಲು ಸಿದ್ದರಿದ್ದೇವೆ ಶುಭ ಹಾರೈಸಿದರು.
ಶಿಕ್ಷಕ ನಾಗರಾಜ ಕುಂಬಾರ ಮಾತನಾಡಿ, 2019-20ನೇ ಸಾಲಿನಲ್ಲಿ ಅಕ್ಷತಾ ರಾಠೋಡ ಇವಳು ರಾಜ್ಯಕ್ಕೆ 3ನೇ ರ್ಯಾಂಕ ಪಡೆದುಕೊಂಡಿದ್ದಳು ಅದನ್ನು ಮೀರಿಸಲಾಗದು ಎಂದುಕೊಂಡು ಮಕ್ಕಳಲ್ಲಿ ಪಾಠಭೋಧನೆ ಮಾಡಿದ್ದೇವೆ ಅದನ್ನು ಸವಾಲಾಗಿ ಸ್ವೀಕರಿಸಿ ಅಪೂರ್ವ ಕುಂಬಾರ ಇವಳು 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದುಕೊಂಡಿದ್ದಾಳೆ ಅಲ್ಲದೆ 14 ವಿದ್ಯಾರ್ಥಿಗಳು ಪ್ರತಿಶತ 95 ಅಂಕ ಪಡೆದುಕೊಂಡಿದ್ದಾರೆ ಮತ್ತು 39 ವಿದ್ಯಾರ್ಥಿಗಳು 90ಕ್ಕಿಂತಲೂ ಹೆಚಿನ ಅಂಕ ಪಡೆದು ದಾಖಲೆ ನಿರ್ಮಿಸಿ ಶಾಲೆಯ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ಹಬ್ಬಿಸಿದ್ದು ಹರ್ಷ ತಂದಿದೆ ಎಂದರು.
ರಾಜ್ಯಕ್ಕೆ 2ನೇ ರ್ಯಾಂಕ ಪಡೆದ ವಿದ್ಯಾರ್ಥಿನಿ ಅಪೂರ್ವ ಕುಂಬಾರ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರ ಎಲ್ಲರಿಗೂ ಒಂದೇ ರೀತಿಯ ಪಾಠ ಬೋಧನೆ ಮಾಡುತ್ತಾರೆ ಅದನ್ನು ಆಲಿಸುವ ನಾವುಗಳು ಪಾಲಕರ ಒತ್ತಾಯಕ್ಕೆ ಅಣಿಯಾಗದೇ ಇಷ್ಟ ಪಟ್ಟು ಶಿಕ್ಷಣ ಪಡೆದುಕೊಂಡು ವಿದ್ಯಾಭ್ಯಾಸ ಮಾಡಿದರೆ ಇಂತಹ ಸಾಧನೆ ಮಾಡಲು ಸಾಧ್ಯ. ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಬೆಂಗಳೂರ ವಿಜನ್ ಸಂಸ್ಥೆಯ ರಾಜಣ್ಣ ಮಾತನಾಡಿದರು. ಗೀತಾ ಹಿರೇಮಠ ನಿರೂಪಿಸಿದರು. ಅರ್.ಜೆ. ಪವಾರ ವಂದಿಸಿದರು.