spot_img
spot_img

ಹೊಸ ಪುಸ್ತಕ ಓದು: ವಚನ ಸಾಹಿತ್ಯಕ್ಕೊಂದು ಹೊಸ ಸೇರ್ಪಡೆ

Must Read

- Advertisement -

ವಚನ ಸಾಹಿತ್ಯಕ್ಕೊಂದು ಹೊಸ ಸೇರ್ಪಡೆ

  • ಪುಸ್ತಕದ ಹೆಸರು: ಮಡಿವಾಳ ಮಾಚಿದೇವರ ಸಮಗ್ರ ವಚನಗಳು
  • ಸಂಪದಕರು: ಅಶೋಕ ದೊಮ್ಮಲೂರು
  • ಪ್ರಕಾಶಕರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು
  • ಮುದ್ರಣ: ೨೦೨೨ ಪು. ೩೦೦
  • ಬೆಲೆ: ರೂ. ೩೦೦
  • ಸಂಪರ್ಕವಾಣಿ : ೯೮೮೬೮೬೭೧೮೫

ಸುಜ್ಞಾನ ಪ್ರಭೆಯ ಹಾಸಿ ಮಹಾಜ್ಞಾನದಲ್ಲಿ ನಿರ್ಭಾವ ಸಂಪನ್ನನಾದ
ಮಡಿವಾಳನ ಮಡಿಯ ಪ್ರಸಾದವ ನಾನು ಹೊದೆದ ಕಾರಣ
ನಿರ್ಮಳನಾದೆನು ನಿಜೈಕ್ಯನಾದೆನು ನಿಶ್ಚಿಂತವಾದೆನು.
ಮಡಿವಾಳನ ಕೃಪೆಯಿಂದ ನಾನು ಬದುಕಿದೆ ಕಾಣಾ, ಗುಹೇಶ್ವರಾ.
ಎನ್ನ ಕಾಯುವ ಶುದ್ಧ ಮಾಡಿದಾತ ಮಡಿವಾಳ,
ಎನ್ನ ಮನದ ಶುದ್ಧ ಮಾಡಿದಾತ ಮಡಿವಾಳ,
ಎನ್ನ ಬಹಿರಂಗವ ಶುದ್ಧ ಮಾಡಿದಾತ ಮಡಿವಾಳ,
ಕೂಡಲಸಂಗಮದೇವಾ, ಎನ್ನ ನಿನಗೆ ಯೋಗ್ಯ ಮಾಡಿದಾತ ಮಡಿವಾಳ.

ಹೀಗೆ ಅಲ್ಲಮಪ್ರಭು ಮತ್ತು ಬಸವಣ್ಣನವರಿಂದ ಪ್ರಶಂಸೆಗೆ ಒಳಗಾದ ಒಬ್ಬ ವೈಚಾರಿಕ ವಚನಕಾರ ಮಡಿವಾಳ ಮಾಚಿದೇವ ಶರಣ ಸಂಕುಲದ ಮಹಾಚೇತನ. ಇಂಥ ಮಾಚಿದೇವರ ಸಮಗ್ರ ವಚನಗಳು ಇದೀಗ ಮೊದಲ ಬಾರಿಗೆ ಅಶೋಕ ದೊಮ್ಮಲೂರ ಅವರಿಂದ ಪ್ರಕಟವಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.

ವಚನ ಸಾಹಿತ್ಯ ಹುಡುಕಿದಷ್ಟು ಸಿಗುತ್ತ ಹೋಗುತ್ತಿದೆ. ಸಮಗ್ರ ವಚನ ಸಂಪುಟಗಳು ಪ್ರಕಟವಾದ ನಂತರವೂ ಡಾ. ಕಲಬುರ್ಗಿ ಅವರಿಗೆ  ಸಿದ್ಧರಾಮಯ್ಯದೇವರ ವಚನ ಕಟ್ಟು, ಪರಮಾನಂದ ಸುಧೆಯಂತಹ ಹೊಸ ವಚನ ಕಟ್ಟುಗಳು ದೊರೆತವು. ಎಸ್. ಶಿವಣ್ಣನವರಿಗೂ ನೂರಾರು ಹೊಸ ವಚನಗಳು ದೊರೆತವು. ಹೀಗೆ ಅಗೆದಷ್ಟು ನಿಧಿಯಂತೆ ತೋರುವ ವಚನ ಸಾಹಿತ್ಯವನ್ನು ಪೂರ್ಣಪ್ರಮಾಣದಲ್ಲಿ ಶೋಧಿಸುತ್ತಿರುವ ಶ್ರೀ ಅಶೋಕ ದೊಮ್ಮಲೂರು ಅವರ ಸೇವೆ ಅನನ್ಯವಾದುದು. ಸಮಸ್ತ ಲಿಂಗಾಯತ ಸಮುದಾಯ ಅವರಿಗೆ ಚಿರಕಾಲ ಋಣಿಯಾಗಿರಬೇಕು. ಅಂಥ ಒಂದು ಮಹಾಮಣಿಹವನ್ನು ಅವರು ಪೂರೈಸುತ್ತಿದ್ದಾರೆ.

- Advertisement -

ವಚನ ಸಾಹಿತ್ಯ ಪ್ರಕಟಣೆ ಕುರಿತಾದ ಒಂದು ಸ್ಥೂಲನೋಟವನ್ನು ಇಲ್ಲಿ ನೀಡಿರುವೆ:

ವಚನ ಸಾಹಿತ್ಯ ೧೨ನೇ ಶತಮಾನದಲ್ಲಿ ಹುಟ್ಟಿತು, ೧೫ನೇ ಶತಮಾನದಲ್ಲಿ ಪುನರುಜ್ಜೀವನಗೊಂಡಿತು. ನಂತರ ಮತ್ತೆ ಗುಪ್ತಗಾಮಿನಿಯಾಯಿತು. ಆಂಗ್ಲರ ಆಡಳಿತ ಕಾರಣವಾಗಿ ನಾಡಿನ ತುಂಬ ಶೈಕ್ಷಣಿಕ ಚಟುವಟಿಕೆಗಳು ವಿಸ್ತಾರಗೊಂಡ ಕಾರಣವಾಗಿ ವಚನಗಳು ಮತ್ತೆ ಪುಸ್ತಕ ರೂಪದಲ್ಲಿ ಪ್ರಕಟವಾಗುವ ಭಾಗ್ಯ ಕಂಡವು. ಆದರೆ ಮತಾಂತರದ ಉದ್ದೇಶ ಇಟ್ಟುಕೊಂಡು ಬಂದ ಕ್ರೈಸ್ತ ಪಾದ್ರಿಗಳು ನಿಜಗುಣರ ವೇದಾಂತ ಕೃತಿಗಳನ್ನು ಪ್ರಕಟಿಸಿದಂತೆ, ಒಂದೂ ವಚನ ಸಂಕಲನ ಪ್ರಕಟಿಸಲಿಲ್ಲವೆಂಬುದು ಆಶ್ಚರ್ಯದ ಸಂಗತಿಯಾಗಿದೆ. ಆದರೂ ಬಳ್ಳಾರಿಯ ಶಿವಲಿಂಗಶೆಟ್ರ ಮುದ್ರಣಾಲಯದಲ್ಲಿ ‘ಶಿಖಾರತ್ನ ಪ್ರಕಾಶ’ ಎಂಬ ಮೊದಲ ವಚನ ಸಂಕಲನ ಪುಸ್ತಕದಲ್ಲಿ ಪ್ರಕಟಗೊಂಡಿತು. ಬಳ್ಳಾರಿ ಶೆಟ್ಟರ ಪ್ರಯತ್ನವಾಗಿ ಅಂಬಿಗರ ಚೌಡಯ್ಯನ ವಚನಗಳು, ಉರಿಲಿಂಗಪೆದ್ದಿ ವಚನಗಳು ಮೊದಲಾದ ಬೆರಳಣಿಗೆಯ ಕೃತಿಗಳು ಮಾತ್ರ ಪ್ರಕಟಗೊಂಡವು.

೧೯೮೫ರಲ್ಲಿ ಡಾ. ಕಲಬುರ್ಗಿ ಅವರು  ಸಮಗ್ರ ವಚನ ಸಾಹಿತ್ಯ ಪ್ರಕಟನ ಯೋಜನೆ ರೂಪಿಸಿ ೧೦ ಸಂಪುಟಗಳ ಒಂದು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳಿಸಿಕೊಟ್ಟರು.  ಸರಕಾರದ ಸ್ಥಿತ್ಯಂತರಗಳ ಪರಿಣಾಮವಾಗಿ ೧೯೮೮ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಶ್ರೀ ಎಂ.ಪಿ. ಪ್ರಕಾಶ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು. ಹೆಗಡೆ ಅವರ ಸರಕಾರ ಡಾ. ಕಲಬುರ್ಗಿ ಅವರ ಯೋಜನೆಗೆ ಅನುದಾನ ಮಂಜೂರು ಮಾಡಿತು. ಆದರೆ ಅದನ್ನು ಕನ್ನಡ ಅಧ್ಯಯನ ಪೀಠದ ಮುಖಾಂತರ ಮಾಡದೆ, ವೈಯಕ್ತಿಕ ಯೋಜನೆಯಲ್ಲಿ ಮಾಡಬೇಕೆಂದು ಒಂದು ಸಂಪಾದಕ ಮಂಡಳಿ ರಚನೆಯಾಗಬೇಕೆಂದು ಸರಕಾರ ನಿರ್ದೇಶನ ನೀಡಿತು.

ಸರಕಾರದ ನಿರ್ದೇಶನದಂತೆ ಡಾ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಡಾ. ಎಂ. ಚಿದಾನಂದಮೂರ್ತಿ, ಡಾ. ಸಿ.ಪಿ.ಕೆ., ಡಾ. ಎಸ್. ವಿದ್ಯಾಶಂಕರ ಅವರು ಸದಸ್ಯರಾಗಿರುವ ಒಂದು ಸಮಿತಿಯನ್ನು ರಚಿಸಿತು. ೧೯೮೮ ಜೂನ್ ೬ರಂದು ಈ ಯೋಜನೆಯ ಮೊದಲ ಸಭೆ ಕೂಡಿತು. ಈ ಸಭೆಯಲ್ಲಿ ಡಾ. ಎಂ. ಎಂ. ಕಲಬುರ್ಗಿ, ಡಾ. ಎಸ್. ವಿದ್ಯಾಶಂಕರ, ಡಾ. ಬಿ.ವಿ.ಮಲ್ಲಾಪುರ, ಡಾ. ವಿ.ಬಿ.ರಾಜೂರ, ಡಾ. ಬಿ.ಆರ್. ಹಿರೇಮಠ, ಶ್ರೀ ಎಸ್. ಶಿವಣ್ಣ ಇವರು ಭಾಗವಹಿಸಿದ್ದರು. ಎಲ್ಲರೂ ಕೂಡಿ  ರೂಪರೇಷೆಯನ್ನೂ, ಎದುರಾಗಬಹುದಾದ ಸಂಪಾದನ ಸಮಸ್ಯೆಗಳನ್ನೂ, ಅವುಗಳಿಗೆ ಪರಿಹಾರೋಪಾಯಗಳನ್ನೂ ಕುರಿತು ಸಮಾಲೋಚಿಸಿ ಒಂದು ನಿರ್ಣಯಕ್ಕೆ ಬಂದರು. ೧೯೮೫ರಲ್ಲಿ ಡಾ. ಕಲಬುರ್ಗಿ ಅವರು ಹಾಕಿದ ೧೦ ಸಂಪುಟಗಳ ಯೋಜನೆ ಬದಲಾಗಿ, ಅದು ಹದಿನಾಲ್ಕು ಸಂಪುಟಗಳಿಗೆ ಬೆಳೆಯಿತು. ಪಾರಿಭಾಷಿಕ ಕೋಶ ಕೂಡಿ ಒಟ್ಟು ಹದಿನೈದು ಸಂಪುಟಗಳಾದವು. ಬಸವಯುಗಕ್ಕೆ ಸಂಬಂಧಿಸಿದಂತೆ ಒಂಬತ್ತು ಸಂಪುಟಗಳು, ಬಸವೋತ್ತರ ಯುಗಕ್ಕೆ ಸಂಬಂಧಿಸಿದಂತೆ ಐದು ಸಂಪುಟಗಳು ಸಿದ್ಧವಾದವು. ಒಟ್ಟು ೨೪೨ ವಚನಕಾರರು, ಒಟ್ಟು ವಚನಗಳು ೨೧೦೩೨. ಇದು ಡಾ. ಕಲಬುರ್ಗಿ ಮತ್ತು ಇತರ ಸಂಪಾದಕರ  ಜೀವಮಾನದ ದೊಡ್ಡ ಸಾಧನೆಯಾಗಿದೆ.

- Advertisement -

ಪಾಠಾಂತರ-ರೂಪಾಂತರ, ಪ್ರಕ್ಷೇಪ-ವಿಕ್ಷೇಪ ಮೊದಲಾದ ದಾಳಿಗಳಿಗೆ ಗುರಿಯಾಗುತ್ತ ಬಂದ, ವಚನಗಳಂಥ ಜನಪ್ರಿಯ ಸಾಹಿತ್ಯದ ಪರಿಷ್ಕರಣ ಕೆಲಸ ತುಂಬ ಕಷ್ಟಕರವಾದುದು. ಹಳಕಟ್ಟಿಯವರ ಕಾಲದಿಂದಲೂ ಬೆರೆತುಕೊಳ್ಳುತ್ತ ಬಂದ ಪ್ರಕ್ಷಿಪ್ತ ವಚನಕಾರರನ್ನು, ಅವರ ಕೃತಕ ವಚನಗಳನ್ನು ಗುರುತಿಸುವುದು ಮತ್ತು ತೆಗೆದು ಹಾಕುವುದು ಈ ಸಂಪಾದಕರ ಮೊದಲ ಜವಾಬ್ದಾರಿಯಾಗಿತ್ತು. ಸಂಪಾದಕರ ಶೋಧದ ಪ್ರಕಾರ ೧೧೦ಕ್ಕೂ ಹೆಚ್ಚು ಕೃತಕವಚನಕಾರರು, ಸಾವಿರಕ್ಕೂ ಮಿಕ್ಕ ವಚನಗಳನ್ನು ಅವರು ಕೈಬಿಟ್ಟರು. ಇದಕ್ಕಾಗಿಯೇ ಡಾ. ಕಲಬುರ್ಗಿ ಅವರು ‘ವಚನಸಾಹಿತ್ಯ ಪ್ರಾಚೀನ ಆಕರಕೋಶ’ ಎಂಬ ಕೃತಿಯನ್ನು ರಚಿಸಿದರು. ಅದರಲ್ಲಿ ಉಲ್ಲೇಖಿತವಾದ ೧೦೮ ಪ್ರಾಚೀನ ಶುದ್ಧ ವಚನ ಸಂಕಲನಗಳನ್ನು ಬಳಸಿಕೊಂಡು ಈ ವಚನಗಳ ಪರಿಷ್ಕರಣ ಕಾರ್ಯವನ್ನು ಮುಂದುವರಿಸಿದರು.

ಈ ಪರಿಷ್ಕರಣದ ಕಾರ‍್ಯ ನಿತ್ಯ ನಿರಂತರ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಶೋಕ ದೊಮ್ಮಲೂರು ಅವರು ಸಂಗ್ರಹಿಸಿದ ‘ಮಡಿವಾಳ ಮಾಚಿದೇವರ ಸಮಗ್ರ ವಚನಗಳು’ ಕನ್ನಡ ಸಾರಸ್ವತ ಪ್ರಪಂಚಕ್ಕೆ ಒಂದು ಹೊಸ ಸೇರ್ಪಡೆಯಾಗಿದೆ. ತಾಂತ್ರಿಕ ಶಿಕ್ಷಣ ಪಡೆದ ಅಶೋಕ ಅವರು ವಚನ ಸಾಹಿತ್ಯದತ್ತ ಆಕರ್ಷಿತರಾದುದು ಒಂದು ಯೋಗಾಯೋಗವೆಂದೇ ಹೇಳಬೇಕು.

ವಕೀಲರಾಗಿದ್ದ ಹಳಕಟ್ಟಿಯವರು ಯಾವುದೋ ಪುಣ್ಯ ಘಳಿಗೆಯಲ್ಲಿ ವಚನ ಸಾಹಿತ್ಯದತ್ತ ಆಕರ್ಷಿತರಾದಂತೆ, ಅಶೋಕ ಅವರು ವಚನ ಸಾಹಿತ್ಯ ಸಂಗ್ರಹದತ್ತ ಮನಸ್ಸು ಮಾಡಿರುವುದು ಸಮಾಜದ ಪುಣ್ಯವೆಂದೇ ಹೇಳಬೇಕು.

ಸಮಗ್ರ ವಚನ ಸಂಪುಟದಲ್ಲಿ ಬಿ. ಆರ್. ಹಿರೇಮಠ ಅವರು ಸಂಪಾದಿಸಿದ ೩೪೬ ವಚನಗಳಿದ್ದವು. ಈಗ ಅಶೋಕ ಅವರು ಈ ೩೪೬ ವಚನಗಳ ಜೊತೆಗೆ ತಾವು ಹೊಸದಾಗಿ ಶೋಧಿಸಿದ ೩೯೧ ಹೊಸ ವಚನಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಮೊದಲ ಭಾಗದಲ್ಲಿ ತಾವು ನೂತನವಾಗಿ ಸಂಗ್ರಹಿಸಿದ ವಚನಗಳನ್ನು ನೀಡಿದ್ದಾರೆ. ಈ ಹೊಸ ವಚನಗಳ ಮೂಲ ಆಧಾರಗಳನ್ನು ಕೊಟ್ಟಿರುವುದು ಗಮನಿಸಬೇಕಾದ ಅಂಶ. ಎರಡನೆಯ ಭಾಗದಲ್ಲಿ ಸಮಗ್ರ ವಚನ ಸಂಪುಟದಲ್ಲಿ ಪ್ರಕಟವಾದ ವಚನಗಳನ್ನು ನೀಡಿದ್ದಾರೆ. ಕೊನೆಯಲ್ಲಿ ಮಾಚಿದೇವರಿಗೆ ಸಂಬಂಧಿಸಿದ ಅಪರೂಪದ ವರ್ಣಚಿತ್ರಗಳನ್ನು ನೀಡಿದ್ದಾರೆ.

ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ, ತಮ್ಮ ಈ ಶೋಧವನ್ನು ಹಿರಿಯ ವಿದ್ವಾಂಸರಾದ ವೀರಣ್ಣ ರಾಜೂರ, ಟಿ. ಆರ್. ಮಹಾದೇವಯ್ಯ, ಬಿ. ನಂಜುಂಡ ಸ್ವಾಮಿ ಅವರಿಗೆ ತೋರಿಸಿ, ಅವರ ಮಾರ್ಗದರ್ಶನದಲ್ಲಿ ಈ ಕೃತಿಯನ್ನು ಸಂಪಾದಿಸಿದ್ದಾರೆ. ಅಶೋಕ ಅವರಿಗೆ ಬೆನ್ನ ಹಿಂದಿನ ಶಕ್ತಿಯಾಗಿ ನಿಂತಿರುವ ನಾಡೊಜ ಡಾ. ಗೊ. ರು. ಚನ್ನಬಸಪ್ಪ ಅವರು ಈ ಕೃತಿಗೆ ಆಶಯ ನುಡಿಗಳನ್ನು ಅನುಗ್ರಹಿಸಿದ್ದಾರೆ. ಈ ಕೃತಿಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಪ್ರಕಟಿಸಿದ್ದಾರೆ. ರಂಜಾನ್ ದರ್ಗಾ, ಎಸ್. ಉಮಾಪತಿ, ಬಿ. ನಂಜುಂಡ ಸ್ವಾಮಿ ಅವರು ಹಾರೈಕೆ, ಪರಿವೇಷಗಳನ್ನು ಬರೆದುಕೊಟ್ಟಿದ್ದಾರೆ. ಅಶೋಕ ದೊಮ್ಮಲೂರು ಅವರು ತಮ್ಮ ಸಂಪಾದಕರ ನುಡಿಯಲ್ಲಿ ಈ ಕೃತಿ ಪ್ರಕಟಣೆಯ ಸಮಗ್ರ ವಿವರಗಳನ್ನು ತುಂಬ ಆಪ್ತವಾಗಿ ದಾಖಲಿಸಿದ್ದಾರೆ. ಸಿದ್ಧಗಂಗೆಯ ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ ಶುಭಸಂದೇಶದಿಂದ ಪ್ರಕಟಗೊಂಡ ಈ ಕೃತಿ ವಚನ ಸಾಹಿತ್ಯ ಅಭ್ಯಾಸಿಗಳಿಗೊಂದು ಪ್ರಮುಖ ಆಕರ ಕೃತಿಯಾಗಿದೆ.

ಈ ಮಹತ್ವದ ಕೃತಿಗೆ ದಾಸೋಹ ಸೇವೆ ನೀಡಿದವರು ಶ್ರೀ ಶಿವಾನಂದ ಕಲಕೇರಿ ಅವರು. ತಮ್ಮ ತಂದೆಯ ಸ್ಮರಣೆಯಲ್ಲಿ ಈ ಕೃತಿ ಪ್ರಕಟಣೆಗೆ ಸಹಾಯ ಮಾಡಿದ್ದಾರೆ. ಪುಣೆಯ ಆದಾಯ ತೆರಿಗೆ ಆಯುಕ್ತರಾಗಿರುವ ಅವರ ಸಾಹಿತ್ಯ ಸಂಸ್ಕೃತಿ ಪ್ರೀತಿ ನಿಜಕ್ಕೂ ಪ್ರಶಂಸನೀಯ.

ಕರ್ನಾಟಕ ಎಲ್ಲ ಮಠ-ಸಂಸ್ಥೆಗಳಲ್ಲಿ ಇರುವ ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡಿಕೊಳ್ಳುತ್ತಿರುವ ಅಶೋಕ ಅವರಿಗೆ ಸಾವಿರಾರು ಹೊಸ ವಚನಗಳು ದೊರೆತಿವೆ. ಅವುಗಳನ್ನೆಲ್ಲ ಒರೆಗೆ ಹಚ್ಚಿ ಪ್ರಕ್ಷಿಪ್ತ ವಚನಗಳನ್ನು ದೂರಿಟ್ಟು ನೈಜ ವಚನಗಳನ್ನು ಸಂಪಾದಿಸಿ ಪ್ರಕಟಿಸಬೇಕಾದ ಅನಿವರ‍್ಯತೆ ಇದೆ. ಸಿಕ್ಕ ಸಿಕ್ಕ ವಚನಗಳನ್ನೆಲ್ಲ ಪ್ರಕಟಿಸುತ್ತ ಹೋದರೆ, ಈ ಹಿಂದೆ ಆರ್. ಸಿ. ಹಿರೇಮಠ ಅವರು ಮುಕ್ತಿಕಂಠಾಭರಣ ಎಂಬ ಕೃತ್ರಿಮ ಪ್ರಕ್ಷಿಪ್ತ ಸಂಕಲನ ಪ್ರಕಟಿಸಿ ಸಮಾಜದ ಆಕ್ರೋಶಕ್ಕೆ ಕಾರಣವಾದಂತಾಗಬಾರದು. ಹೀಗಾಗಿ ಅಶೋಕ ಅವರು ಸಂಗ್ರಹಿಸಿದ ವಚನಗಳನ್ನು ವಚನ ಸಾಹಿತ್ಯ ವಿದ್ವಾಂಸರು ಅವಲೋಕಿಸಿ, ಅವುಗಳ ನೈಜತೆ ಗಮನಿಸಿ ಪ್ರಕಟಿಸಿದರೆ ತುಂಬ ಉಪಯುಕ್ತವಾಗುವುದೆಂದು ನಾನು ಭಾವಿಸಿದ್ದೇನೆ.

ಅಶೋಕ ದೊಮ್ಮಲೂರ ಅವರ ಈ ವಚನ ಸಾಹಿತ್ಯ ಪ್ರಕಟನಾ ಸೇವಾ ನಿತ್ಯ ನಿರಂತರವಾಗಿ ನಡೆಯಲಿ, ಅವರಿಗೆ ಸಮಾಜ ಬಾಂಧವರು ಅತುಲ ಸಹಾಯ ಸಹಕಾರ ನೀಡಲಿ ಎಂದು ಆಶಿಸುತ್ತೇನೆ.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಕಾರ್ಯಕರ್ತರೇ, ನಾಯಕರ ದಾಳಗಳಾಗದೆ ಜಾಗೃತರಾಗಿರಿ.

ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಎಚ್ಚರಿಕೆ.ಕಾರ್ಯಕರ್ತರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಸಲಹೆ. ನಿಮ್ಮನ್ನ ರಾಜ್ಯ ಸರ್ಕಾರ ತಮ್ಮದಿದೆ ಆದ್ದರಿಂದ ನಿಮಗೆ ರಕ್ಷಣೆ ನೀಡುತ್ತದೆ ಏನೂ...
- Advertisement -

More Articles Like This

- Advertisement -
close
error: Content is protected !!
Join WhatsApp Group