spot_img
spot_img

ಹೊಸ ಪುಸ್ತಕ ಓದು: ನಿಜ ಇತಿಹಾಸದೊಂದಿಗೆ ಮುಖಾಮುಖಿ

Must Read

- Advertisement -

ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅನನ್ಯ ಕೃತಿ

ನಿಜ ಇತಿಹಾಸದೊಂದಿಗೆ ಮುಖಾಮುಖಿ 

ಲೇಖಕರು: ಮಂಜುನಾಥ ಅಜ್ಜಂಪುರ

ಪ್ರಕಾಶಕರು: ಮನು-ಮನೆ ಪ್ರಕಾಶನ, ಬೆಂಗಳೂರು, ೨೦೨೩

- Advertisement -

ಸಂಪರ್ಕವಾಣಿ: ೯೯೦೧೦೫೫೯೯೮


ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್|

ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ೧೫

- Advertisement -

 (ಸರ್ವರ ಪೋಷಕನಾದ ದೇವನೇ, ನಿನ್ನ ನಿಜಸ್ವರೂಪವು ಸುವರ್ಣ ಪಾತ್ರೆಯಿಂದ ಮುಚ್ಚಿದೆ. ಸತ್ಯಶೋಧಕನಾದ ನನಗೆ ನಿನ್ನ ನಿಜರೂಪು ಕಾಣುವಂತೆ ಆ ಹೊದಿಕೆಯನ್ನು ತೆಗೆದು ಹಾಕು.)


ಈಶ್ಯಾವಾಸ್ಯೋಪನಿಷತ್ತಿನಲ್ಲಿ ಸಾವಿರ  ಸಾವಿರ ವರ್ಷಗಳ ಹಿಂದೆ ಹೇಳಿದ ಮಾತಿದು. ಈ ನುಡಿಗೆ ಇಂದು ಉಜ್ವಲಂತ ನಿದರ್ಶನವಾಗಿ ನಿಂತಿದೆ ಮಂಜುನಾಥ ಅಜ್ಜಂಪುರ ಅವರ ‘ನಿಜ ಇತಿಹಾಸದೊಂದಿಗೆ ಮುಖಾಮುಖಿ’ ಕೃತಿ.

ಮೆಕಾಲೆ ಶಿಕ್ಷಣ ನೀತಿ ಕಾರಣವಾಗಿ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯಾಗಿ, ಭೌತಿಕ ಸಂಪತ್ತಿನ ಬೆನ್ನು ಹತ್ತಿ ಭಾರತೀಯ ಮೂಲಸತ್ವವನ್ನು ಮರೆಯುವ ಪ್ರಯತ್ನಗಳು ನಡೆದವು.  ಪಾಶ್ಚಾತ್ಯರು ನೀಡಿದ ಪ್ರಮೇಯಗಳ ಮೇಲೆ ನಮ್ಮ ಧರ್ಮ ಸಂಸ್ಕೃತಿ ಇತಿಹಾಸಗಳ ಕುರಿತಾಗಿ ಅಧ್ಯಯನ ಪ್ರಾರಂಭವಾಗಿ ಪಶ್ಚಿಮದಿಂದ ಬಂದದ್ದು ಮಾತ್ರ ಶ್ರೇಷ್ಠ, ಉಳಿದುದೆಲ್ಲವೂ ಕನಿಷ್ಠ ಎಂಬ ಅಭಿಪ್ರಾಯವನ್ನು ಮೂಡಿಸಿದರು. ಹೀಗಾಗಿ ಪ್ರಾಚೀನ ಕಾಲದಿಂದಲೂ ಭವ್ಯ ಸಂಸ್ಕೃತಿಯನ್ನು ಮೆರೆದ ಭಾರತೀಯ ಸಂಸ್ಕೃತಿಯ ಕುರಿತಾಗಿ ನಮ್ಮ ಜನರಲ್ಲಿಯೇ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಲಾಯಿತು. 

ಇಷ್ಟು ವರ್ಷ ನಮ್ಮ ಇತಿಹಾಸಕಾರರು ರಾಜಕೀಯ ನೇತಾರರ ಅಭಿಪ್ಸೆ-ಆಶಯಕ್ಕೆ ಅನುಗುಣವಾಗಿ ಇತಿಹಾಸವನ್ನು ದಾಖಲಿಸುತ್ತ ಬಂದ ಪರಿಣಾಮವಾಗಿ ನಿಜವಾದ ಇತಿಹಾಸದ ಎಳೆಗಳು ನಮ್ಮ ಜನತೆಗೆ ತಿಳಿಯದೆ ಹೋಯಿತು. ಇತ್ತೀಚೆಗೆ ನಮ್ಮ ಜನರಿಗೆ ಯೋಗ್ಯ ನಿಜವಾದ ಇತಿಹಾಸ ತಿಳಿಸುವ ಕೆಲವು ಅಪರೂಪದ ಕೃತಿಗಳು ಪ್ರಕಟಗೊಳ್ಳುತ್ತಿರುವುದು ಕನ್ನಡಿಗರ ಪುಣ್ಯವಾಗಿದೆ. ಅಂತಹ ಅಪರೂಪದ ಕೃತಿಗಳಲ್ಲಿ ಮಂಜುನಾಥ ಅಜ್ಜಂಪುರ ಅವರ ಪ್ರಸ್ತುತ ಕೃತಿಯು ಹಲವು ದೃಷ್ಟಿಗಳಿಂದ ಒಂದು ಅಪರೂಪದ ಆಕರ ಕೃತಿಯಾಗಿ ರೂಪುಗೊಂಡಿದೆ. 

ಖ್ಯಾತ ಅಂಕಣಕಾರರಾದ ಮಂಜುನಾಥ ಅವರು ಅರುಣ ಶೌರಿ ಸಾಹಿತ್ಯ ಮಾಲೆ ಮತ್ತು ವಾಯ್ಸ್ ಆಫ್ ಇಂಡಿಯಾ ಸಾಹಿತ್ಯ ಸರಣಿಯ ಗೌರವ ಸಂಪಾದಕರಾಗಿ ನಾಡವರಿಗೆ ಚಿರಪರಿಚಿತರು. ಸೀತಾರಾಮ್ ಗೋಯಲ್ ಮತ್ತು ಅರುಣ ಶೌರಿ ಅವರ ವಿಚಾರಧಾರೆಯನ್ನು ಕನ್ನಡಿಗರಿಗೆ ಮುಟ್ಟಿಸಿದ ಕೀರ್ತಿ ಮಂಜುನಾಥ ಅವರಿಗೆ ಸಲ್ಲುತ್ತದೆ. 

“ನಿಜ ಇತಿಹಾಸದೊಂದಿಗೆ ಮುಖಾಮುಖಿ” ಕೃತಿ ನಿಜಕ್ಕೂ ಒಂದು ಅಪೂರ್ವ ಆಕರ ಕೃತಿಯಾಗಿದೆ. ಸಮಸ್ತ ಕನ್ನಡಿಗರು ಓದಲೇಬೇಕಾದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿ ಪರಿಣಮಿಸಿದೆ. ಕೃತಿಯಲ್ಲಿ ಒಟ್ಟು ೬೪ ಲೇಖನಗಳಿವೆ. ಪ್ರತಿಯೊಂದು ಲೇಖನವು ಓದುಗರಲ್ಲಿ ಕುತೂಹಲ ಆಸಕ್ತಿ ಅರಿವು ಎಲ್ಲವನ್ನೂ ಮೂಡಿಸುತ್ತವೆ. ನಮ್ಮ ದೇಶದ ಸಂಸ್ಕೃತಿಯನ್ನು ವಿದೇಶಿಗರು ಹೇಗೆಲ್ಲ ವಿಕೃತಗೊಳಿಸಿ, ಅಪವ್ಯಾಖ್ಯಾನ ಮಾಡಿದರೆಂಬುದರ ಸಮಗ್ರವೂ ಸಮೃದ್ಧವೂ ಆದ ವಿವರಗಳು ಈ ಕೃತಿಯಲ್ಲಿವೆ. 

ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಇಂದಿರಾಗಾಂಧಿ ಕಾಲದಿಂದಲೂ ನಡೆಯುತ್ತ ಬಂದ ಈ ದಮನಕಾರಿ ನೀತಿಯನ್ನು ಕುರಿತು ಲೇಖಕರು ತುಂಬ ಮನೋಜ್ಞವಾಗಿ ನಿರೂಪಿಸುತ್ತಾರೆ. ಗೋಯಲ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಕೃತಿಯನ್ನು ಕಾಣದ ಕೈಗಳು ಷಡ್ಯಂತ್ರ ರೂಪಿಸಿ ನಿಷೇಧಿಸಿದ ಘಟನೆಯನ್ನು ಲೇಖಕರು ವಾಸ್ತವ ನೆಲೆಯಲ್ಲಿ ವಿವರಿಸಿದ್ದಾರೆ. 

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು? ಎಂಬುದರ ಜಿಜ್ಞಾಸೆ ಇಂದು ಕೆಲವು ಪ್ರಜ್ಞಾವಂತರಲ್ಲಿ ಮೂಡುತ್ತಿದೆ. ನಿಜವಾಗಿಯೂ ಗಾಂಧೀಜಿ ಅವರ ಹೋರಾಟದ ಫಲವಾಗಿ ಈ ಸ್ವಾತಂತ್ರ್ಯ ಸಿಕ್ಕಿತೆ. ಅಥವಾ ಕಾಂಗ್ರೆಸ್ ಕೃಪಾಪೋಷಿತ ಇತಿಹಾಸಜ್ಞರು ಹೇಳುವಂತೆ ಕಾಂಗ್ರೆಸ್ ಮುಖಂಡರಿಂದ ಸ್ವಾತಂತ್ರ್ಯ ಬಂತೆ? ಎಂಬ ವಿಷಯ ಕುರಿತು ಒಂದು ಅದ್ಭುತವಾದ ವಿಚಾರವನ್ನು ಅಜ್ಜಂಪುರ ಅವರು ನೀಡುತ್ತಾರೆ. ನರರಾಕ್ಷಸನಾಗಿದ್ದ ಚರ್ಚಿಲ್ ಚುನಾವಣೆಯಲ್ಲಿ ಸೋತು, ಅಟ್ಲೀ ಪ್ರಧಾನಿ ಆಗದೇ ಹೋಗಿದ್ದರೆ ಭಾರತಕ್ಕೆ ಸ್ವಾತಂತ್ರö್ಯ ಕನಸಿನ ಮಾತಾಗುತ್ತಿತ್ತು ಎಂಬ ಸತ್ಯ ಸಂಗತಿಯನ್ನು ಇಲ್ಲಿ ವಿಶ್ಲೇಷಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ನೈಜ ದಾಖಲೆಗಳು, ಸಾವರ್ಕರ ಎಂಬ ಅತ್ಯದ್ಭುತ ಚೇತನ, ಕನ್ನಡಿಗರಿಗೇ ಅಪರಿಚಿತ ಈ ಕರುನಾಡ ಹುಲಿ ಧೊಂಡಿಯಾ, ಅಂತಿಮ ಕ್ಷಣದವರೆಗೂ ಓದುತ್ತಲೇ ಇದ್ದ ಅಧ್ಯಯನಶೀಲ ಭಗತ್ ಸಿಂಗ್, ಸ್ವಾತಂತ್ರ್ಯ ಸೇನಾನಿಗಳ ರುಧಿರಾಭಿಷೇಕ, ಭಾರತ ಸ್ವಾತಂತ್ರ್ಯಪ್ರಾಪ್ತಿಯ ನೈಜ ಸಾಕ್ಷ್ಯಾಧಾರಗಳೊಂದಿಗೆ ಮುಖಾಮುಖಿ’ ಮೊದಲಾದ ಲೇಖನಗಳು ಭಾರತದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಹಲವು ಮಗ್ಗಲುಗಳನ್ನು ತಿಳಿಸುತ್ತವೆ. ನಡೆದಿರುವ ಇತಿಹಾಸವೊಂದು, ಬರೆದ ಇತಿಹಾಸವೊಂದು ಹೇಗೆ ಇತಿಹಾಸವನ್ನು ತಿರುಚುವ ಕಾರ್ಯ ನಡೆದಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. 

ನಮ್ಮ ಕನ್ನಡ ನಾಡಿನ ಕೆಲವು ಎಡಪಂಥಿಯ ಲೇಖಕರು ನಮ್ಮ ಸಂಸ್ಕೃತಿಯ ಕುರಿತಾಗಿ ಇಟ್ಟುಕೊಂಡ ಕೀಳರಿಮೆ ಕಾರಣವಾಗಿ ಮಾಡಿದ ಅವಾಂತರಗಳನ್ನು ವಿವೇಚನೆಗೊಳಪಡಿಸಿದ್ದಾರೆ. ಅನಂತಮೂರ್ತಿ, ಕಾರ್ನಾಡ, ಲಂಕೇಶರಂತಹ ವಿಕ್ಷಿಪ್ತ ಮನಸ್ಸಿನ ವ್ಯಕ್ತಿಗಳು ಕನ್ನಡ ಸಾಹಿತ್ಯದಲ್ಲಿ ಮಾಡಿದ ದಗಲಬಾಜಿಗಳ ಒಟ್ಟು ನೋಟದ ನೈಜ ಚಿತ್ರಣ ಇಲ್ಲಿದೆ. 

ರಾಜ ಮಹಾರಾಜರ ಕಾಲದ ಕೆಲವು ಅಪೂರ್ವ ಘಟನೆಗಳ ವಿಶ್ಲೇಷಣೆಯಂತೂ ಓದುಗರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ‘ನಿನ್ನ ಮಗಳನ್ನೇ ಕೊಟ್ಟು ಮದುವೆ ಮಾಡುತ್ತೇನೆ ಎಂದರೂ ಮತಾಂತರಕ್ಕೆ ನಾನು ಒಪ್ಪುವುದಿಲ್ಲ’ ಎಂಬ ಲೇಖನದಲ್ಲಿ ಶಿವಾಜಿಯ ವೀರಪುತ್ರ ಸಂಭಾಜಿ ಔರಂಗಜೇಬನಿಗೆ ಹೇಳುವ ಮಾತುಗಳನ್ನು ಇಟ್ಟುಕೊಂಡು ಎಂತಹ ಕಠಿಣತಮ ಶಿಕ್ಷೆಯನ್ನು ಸಂಭಾಜಿ ಅನುಭವಿಸಿದ ಎಂಬುದನ್ನು ಹೃದಯಕಲಕುವಂತೆ ವಿವರಿಸಿದ್ದಾರೆ.

ಜಯಪುರದ ರಾಜ ಮಾನ್ ಸಿಂಗ್, ಕ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಮೈಸೂರು ಒಡೆಯರ್ ರಾಜವಂಶ, ಕೆಳದಿ ಚೆನ್ನಮ್ಮ ಮೊದಲಾದ ವಿಚಾರಗಳು ತುಂಬ ಮೌಲಿಕವಾಗಿವೆ. ‘ಪ್ರಾಚೀನ ಭಾರತದಲ್ಲಿ ಬೇಹುಗಾರಿಕೆಯ ಹೆಜ್ಜೆ ಗುರುತುಗಳು’ ಲೇಖನ ಸೂಫಿ ಸಂತರ ನೆಪದಲ್ಲಿ ಭಾರತಕ್ಕೆ ಬಂದ ಮತಾಂಧರು ಹಿಂದೂ ಸಂಸ್ಕೃತಿಯನ್ನು ನಾಶಗೊಳಿಸಲು ಮಾಡಿದ ಪ್ರಯತ್ನಗಳು ಹೇಗಿದ್ದವು ಎಂಬುದನ್ನು ತಿಳಿಸುತ್ತದೆ.

ನಮ್ಮ ಜನರಲ್ಲಿ ವಿಶ್ವಕೋಶವೆಂದರೆ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ ಎಂಬ ಭ್ರಮೆ ಇದೆ. ಕನ್ನಡದಲ್ಲಿಯೇ ನೂರಾರು ವರ್ಷಗಳ ಹಿಂದೆ ಕೆಳದಿ ಬಸವರಾಜನ ಶಿವತತ್ವ ರತ್ನಾಕರ, ಸೋಮೇಶ್ವರನ ಮಾನಸೊಲ್ಲಾಸ ಮೊದಲಾದ ವಿಶ್ವಕೋಶಗಳು ರಚನೆಗೊಂಡುದರ ಬಗ್ಗೆ ಕನ್ನಡಿಗರು ಹೆಮ್ಮ ಮತ್ತು ಅಭಿಮಾನ ಪಡಬೇಕು ಎಂಬುದು ಲೇಖಕರ ಸದಾಶಯ.  

ಚಂದ್ರಶೇಖರ ಭಂಡಾರಿ, ಎಸ್. ಆರ್. ರಾಮಸ್ವಾಮಿ, ಶ್ರೀಲ ಪ್ರಭುಪಾದರು, ಮಹಂತ ದಿಗ್ವಿಜಯನಾಥರು, ಎಸ್. ಎಲ್. ಭೈರಪ್ಪ ಮೊದಲಾದ ವ್ಯಕ್ತಿಚಿತ್ರಗಳು ತುಂಬ ಆಪ್ತವಾಗಿವೆ. 

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ‘ಹಿಂದೂಗಳಿಗೆ ಹಿಂದೂಸ್ತಾನ, ಮುಸಲ್ಮಾನರಿಗೆ ಪಾಕಿಸ್ತಾನ’ ಕೃತಿಯ ಕುರಿತಾದ ಚಿಂತನೆ ಇಂದಿನ ವರ್ತಮಾನದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುತ್ತದೆ. ದೇಶದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ ಅಂಬೇಡ್ಕರ್ ಅವರು ಅಂದೇ ಒಂದು ಸೂಕ್ತ ಪರಿಹಾರವನ್ನು ಹುಡುಕಿ ‘ಭಾರತ ಪಾಕಿಸ್ತಾನ ವಿಭಜನೆ’ ಎಂಬ ಕೃತಿಯನ್ನು ರಚಿಸಿದ್ದರು. ಆ ವಿಷಯದ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಅಜ್ಜಂಪುರ ಅವರು ಮಾಡಿದ್ದಾರೆ.

ತಾವು ಕಂಡ ಅನೇಕ ಸತ್ಯಗಳನ್ನು ಘಟನೆಗಳು ಲೇಖಕರು ಇಲ್ಲಿಯ ಲೇಖನಗಳಲ್ಲಿ ದಾಖಲಿಸುತ್ತಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಾಹಿತಿಗಳೊಬ್ಬರು, ಬ್ರಿಟಿಷರು ಬರದೇ ಇದ್ದರೆ ನಾವೆಲ್ಲ ಇನ್ನೂ ಅಂಧಕಾರದಲ್ಲಿರುತ್ತಿದ್ದೆವು ಎಂದು ಹೇಳಿದ ಘಟನೆಯನ್ನು ಅಜ್ಜಂಪುರ ಅವರು ವಿವರಿಸುತ್ತ, ಬ್ರಿಟಿಷರು ಬರುವ ಪೂರ್ವದಲ್ಲಿಯೇ ನಮ್ಮ ನಾಡು ಸಾಹಿತ್ಯ ಸಂಸ್ಕೃತಿಗಳ ವಿಷಯದಲ್ಲಿ ಎಷ್ಟೆಲ್ಲ ಎತ್ತರದ ಸ್ಥಾನದಲ್ಲಿತ್ತೆಂಬುದನ್ನು ಆಧಾರಗಳ ಸಮೇತ ದಾಖಲಿಸುತ್ತಾರೆ.

‘ಇತಿಹಾಸವೊಂದು ವಾಸ್ತವ. ಕಟುವಾಸ್ತವವೂ ಇತಿಹಾಸವೇ. ಸತ್ಯ ಸಂಗತಿಗಳನ್ನು-ವಾಸ್ತವವನ್ನು ಎದುರಿಸಲು ವಿಫಲವಾಗುವ ಸಮುದಾಯಗಳ ವಿನಾಶವು ಶತಃಸಿದ್ಧ. ನಮ್ಮ ಪರಂಪರೆ, ಧರ್ಮ, ಸಂಸ್ಕೃತಿಗಳಿಗೆ ಹತ್ತಾರು ಸಹಸ್ರ ವರ್ಷಗಳ ಇತಿಹಾಸವಿದೆ. ಅದೆಷ್ಟೋ ಕ್ಷೇತ್ರಗಳಲ್ಲಿ ನಾವು ಪ್ರಗತಿ ಸಾಧಿಸಿದ್ದರೂ, ಶತ್ರುಗಳನ್ನು ಆಕ್ರಮಕರನ್ನು ಅರಿಯುವಲ್ಲಿ ವಿಫಲರಾದೆವು. ಈಗಲೂ ವಿಫಲರಾಗಿದ್ದೇವೆ. ಎಂತಹ ಶಕ್ತಿ, ಶೌರ್ಯಗಳಿದ್ದರೂ ಅಪಾತ್ರರಿಗೆ ಕ್ಷಮೆ ನೀಡುವ ಮೂಲಕ ಪೆಟ್ಟು ತಿಂದೆವು. ಗುಲಾಮರಾದೆವು.

ಅದಕ್ಕಿಂತ ಭಯಾನಕವಾದ ಆತ್ಮ ವಿಸ್ಮೃತಿಗೆ ತುತ್ತಾದೆವು. ಭಗವಾನ್ ಶ್ರೀಕೃಷ್ಣನ, ಆಚಾರ್ಯ ಚಾಣ್ಯಕರ ಅಭಿಗಮನ, ಕಾರ್ಯತಂತ್ರಗಳನ್ನು ಮೈಗೂಡಿಸಿಕೊಳ್ಳೋಣ’ ಎಂದು ಲೇಖಕರು ಹೇಳುವ ಮಾತುಗಳು ಕೃತಿಯ ಒಟ್ಟು ಆಶಯವನ್ನು ಪ್ರತಿಪಾದಿಸುತ್ತದೆ.

ಈ ವರ್ಷ ಪ್ರಕಟವಾದ ಒಂದು ಅಪರೂಪದ ನೈಜ ಇತಿಹಾಸ ಸಾರುವ ಮಹತ್ವದ ಆಕರ ಗ್ರಂಥವಾಗಿದೆ. ಈ ಕೃತಿ ದಿನಾಂಕ ೧೯ ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ನಾಡೋಜ ಎಸ್. ಆರ್. ರಾಮಸ್ವಾಮಿ, ಡಾ. ಮಲ್ಲೇಪುರಂ ಜಿ. ವೆಂಕಟೇಶ, ಹರಿಪ್ರಕಾಶ ಕೋಣೆಮನೆ, ಎಸ್. ಆರ್. ಲೀಲಾ ಮೊದಲಾದ ವಿದ್ವಜ್ಜನರು ಕೃತಿಯ ಅಂತರಂಗವನ್ನು ಕುರಿತು ತುಂಬ ಮೌಲಿಕವಾದ ಅಭಿಪ್ರಾಯಗಳನ್ನು ನೀಡಿದರು.  ಈ ಕೃತಿ ಕುರಿತು ಪ್ರತಿಯೊಂದು ಜಿಲ್ಲೆಯಲ್ಲಿ ವಿಚಾರ ಸಂಕಿರಣಗಳು ಜರುಗಿದರೆ ಜನರಿಗೆ ನಿಜವಾದ ಅರಿವು ಮೂಡುತ್ತದೆ ಎಂದು ನಾನು ಭಾವಿಸಿದ್ದೇನೆ. ಇಂಥ ಒಂದು ಮಹತ್ವದ ಕೃತಿಯನ್ನು ಕನ್ನಡ ಸಾರಸ್ವತ ಪ್ರಪಂಚಕ್ಕೆ ನೀಡಿದ ಮಂಜುನಾಥ ಅಜ್ಜಂಪುರ ಅವರಿಗೆ ವಂದನೆ-ಅಭಿನಂದನೆಗಳು.


ಪ್ರಕಾಶ ಗಿರಿಮಲ್ಲನವರ

- Advertisement -
- Advertisement -

Latest News

ಜಲ ಜೀವನ ಮಿಷನ್ ಅಡಿಯಲ್ಲಿ ಕಲ್ಯಾಣಿ ಪುನಶ್ಚೇತನ

ಮೂಡಲಗಿ: ಜಿಲ್ಲಾ ಪಂಚಾಯತ್ ಬೆಳಗಾವಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ, ತಾಲೂಕು ಪಂಚಾಯತ್ ಮೂಡಲಗಿ, ಗ್ರಾಮ ಪಂಚಾಯತ್ ಯಾದವಾಡ ಹಾಗೂ ಅನುಷ್ಠಾನ ಬೆಂಬಲ...
- Advertisement -

More Articles Like This

- Advertisement -
close
error: Content is protected !!
Join WhatsApp Group