ಬೆಳಗಾವಿ – ದೇವರಾಜ ಅರಸ ಬಡಾವಣೆ, ಬಸವನ ಕುಡಚಿ ವೀರಶೈವ ಲಿಂಗಾಯತ ಶಿವಬಸವ ದೇವಾಲಯ ಟ್ರಸ್ಟ ಹಾಗೂ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಇಲ್ಲಿಯ ರಹವಾಸಿ ಹಿರಿಯ ಕವಿ, ಸಮಾಜ ಚಿಂತಕರಾದ ಗುರುಸಿದ್ಧಯ್ಯ ಹಿರೇಮಠ ಇವರ “ಚುಟುಕು ಚೌ ಚೌ ಚಮಕು”, “ಚುಟುಕು ಚೌಪದಿ ಚಂದನ” ಹಾಗೂ “ಚುಟುಕು ಚುಂಬಕ” ಕೃತಿಗಳ ಬಿಡುಗಡೆ ಮತ್ತು ಅವಲೋಕನ ಸಮಾರಂಭ ದಿನಾಂಕ: 21-05-2022 ರಂದು ಸಾಯಂಕಾಲ ಶಿವಾಲಯ ಮಂದಿರದಲ್ಲಿ ಇಲ್ಲಿಯ ನಾಗರಿಕರ ಸಮ್ಮುಖದಲ್ಲಿ ಜರುಗಿತು.
ಮಹಿಳೆಯರ ಪ್ರಾರ್ಥನೆಯ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷತೆಯನ್ನು ಶ್ರೀನೀಲಕಂಠ ಶಾಸ್ತ್ರೀ ಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸ ರಾ ಸುಳಕೂಡೆಯವರು ಗುರುಸಿದ್ಧಯ್ಯ ಹಿರೇಮಠರ ಕೃತಿ ಬಗ್ಗೆ ಮಾತನಾಡಿದರು. ಯ ರು ಪಾಟೀಲ ಕ.ಸಾಪ ಮಾಜಿ ಅಧ್ಯಕ್ಷರು ಬೋಧಕ ಸಾಹಿತಿಗಳಂತೆ ಬೋಧಕೇತರ ಸಾಹಿತಿಗಳ ಸಾಲಿನಲ್ಲಿ ಸೇರಿ ಗುರುಸಿದ್ಧಯ್ಯ ಹಿರೇಮಠರು ಸಾಹಿತ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ ಎಂದರು.
ಪುಸ್ತಕ ಪರಿಚಯಿಸಿದ ಎ ಎ ಸನದಿ, ಗುರುಸಿದ್ಧಯ್ಯ ಹಿರೇಮಠರು ಕವನ ಲೇಖನಗಳೊಂದಿಗೆ ಚುಟುಕು ಸಾಹಿತ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದು, ಸುಮಾರು ನಾಲ್ಕೈದು ಸಾವಿರ ಚುಟುಕುಗಳನ್ನು ರಚಿಸಿ, ಐದು ಪುಸ್ತಕಗಳನ್ನು ಹೊರ ತಂದಿದ್ದು ಇದು ನಮ್ಮಲ್ಲಿ ದಾಖಲೆಯಾಗಿದೆ. ಹಿರಿಯರಿಂದ ಕಿರಿಯವರೆಗೆ ಅಮೂಲಾಗ್ರ ಜ್ಞಾನ ಸಂಪಾದನೆಗೆ ಇಲ್ಲಿಯ ವಿವಿಧ ಬಗೆಯ ವಿಷಯಗಳ ಚುಟುಕುಗಳು ಸಾಮಾನ್ಯ ಜ್ಞಾನ ನಿಧಿಗೆ ಪೂರಕವಾಗಿದೆ.
ಅಲ್ಪದಲ್ಲಿ ಅದ್ಭುತ ವಿಷಯ ತಿಳಿಸಿ ಆಡುವ ಮುಟ್ಟದ ಸೊಪ್ಪಿಲ್ಲ ಹಿರೇಮಠರು ಬರೆಯದ ವಿಷಯವಿಲ್ಲ, ಚುಟುಕು ಕವಿ ಸರದಾರರಾಗಿ ಇವರು ಹೊರ ಹೊಮ್ಮಿದ್ದಾರೆ ಎಂದು ತಮ್ಮ ಮನದಾಳದ ಮಾತನ್ನು ತಪ್ಪು ಒಪ್ಪುಗಳ ಬಗ್ಗೆ ಸಹಿತ ಸುಧೀರ್ಘವಾಗಿ ಮಾತನಾಡಿದರು. ಸಮಾರಂಭದ ಕೇಂದ್ರ ಬಿಂದು ಗುರುಸಿದ್ಧಯ್ಯ ಹಿರೇಮಠ ಬಸವ ತತ್ವ ಪ್ರಕಾರ ಇವನಾರವ ಅನ್ನದೆ ಇವ ನಮ್ಮವ ಅನ್ನುತ ಬಾಳಿದರೆ ಸಮಾಜ ಶಾಂತಿಯ ತೋಟವಾಗುವುದು. ಹಾಗೆ ನಡೆಯೋಣ ಅಂದರು.
ಇದೇ ಸಂದರ್ಭದಲ್ಲಿ ಕವಿ ಗುರುಸಿದ್ಧಯ್ಯ ಹಿರೇಮಠರು ಎಲ್ಲ ಅತಿಥಿಗಳನ್ನು ಶಾಲು ಹಾಗೂ ಪುಷ್ಪಹಾರದೊಂದಿಗೆ ಸನ್ಮಾನಿಸಿದರು. ನದೀಮ ಸನದಿಯವರನ್ನು ಕೂಡಾ ಇದೇ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಿದರು. ವೇದಿಕೆ ಮೇಲೆ ಶಿವಾಲಯದ ಬಸವರಾಜ ಹವಾನಿ ಉಪಸ್ಥಿತಿ ವಹಿಸಿದ್ದರು. ವಿರೇಶ ಪವಾಡಿ ಸ್ವಾಗತಿಸಿದರು. ಬಸವರಾಜ ಬ ಮಠಪತಿ ನಿರೂಪಿಸಿದರು ಹಾಗೂ ಶಿವಬಸವ ಹಿರೇಮಠ ವಂದಿಸಿದರು.