spot_img
spot_img

ಸುರೇಶ ಗುದಗನವರ ‘ಅವರ ಸುಪ್ತ ಸಾಧಕರು’ ಕೃತಿ ಬಿಡುಗಡೆ

Must Read

ಇದೇ ಡಿಸೆಂಬರ್ ೧೦ ರಂದು ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ(ರಿ) ಧಾರವಾಡ. ಹಾಗೂ ಸುಮಾ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ಪ್ರೊ.ಸುರೇಶ ಗುದಗನವರ ಅವರ ಸುಪ್ತ ಸಾಧಕರು ಕೃತಿ ಲೋಕಾರ್ಪಣೆ ಜರುಗಲಿದೆ.

ಈ ಕೃತಿ ಲೋಕಾರ್ಪಣೆಗೊಳಿಸುವವರು ಹಿರಿಯ ಸಾಹಿತಿಗಳಾದ ಪ್ರೊ.ಮಾಲತಿ ಪಟ್ಟಣಶೆಟ್ಟಿಯವರು. ಮುಖ್ಯ ಅತಿಥಿಗಳಾಗಿ ಧಾರವಾಡ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಸಾಹಿತಿಗಳಾದ ಪ್ರೊ.ಕೃಷ್ಣಮೂರ್ತಿ ಬಿ.ಆರ್. ಆಗಮಿಸುವರು. ಸವದತ್ತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಯಕ್ಕುಂಡಿ ಸರಕಾರಿ ಪಿ.ಯು.ಕಾಲೇಜಿನ ಪ್ರಾಚಾರ್ಯರು ಆತ್ಮೀಯ ಹಿರಿಯ ಸನ್ಮಿತ್ರರಾದ ಡಾ.ವೈ.ಎಂ.ಯಾಕೊಳ್ಳಿ ಪುಸ್ತಕ ಪರಿಚಯ ಮಾಡಲಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡ ಕುಮಾರೇಶ್ವರ ಕಲ್ಚರಲ್ ಸೊಸೈಟಟಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಚಿಕ್ಕಮಠ, ಭಾವಸಿಂಚನಾ ಪ್ರಕಾಶನದ ಭದ್ರಾವತಿ ತಾರಾನಾಥ್, ವಿದ್ವಾನ್ ಸರ್ವೇಶ ಮನ್ವಾಚಾರ್ಯ ಕುಮಾರೇಶ್ವರ ಕಲ್ಚರಲ್ ಸಂಸ್ಥೆಯ ಸಂಯೋಜಕರಾದ ಪ್ರಕಾಶ ಬಾಳೀಕಾಯಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರುವರು.

ಅಂಕಣ ಬರಹಗಾರ; ಸುರೇಶ ಗುದಗನವರ

ಉಪನ್ಯಾಸಕರು ಅಂದ್ರೆ ಸಾಕು ಬರಿ ಪಾಠ ಮಾಡಿ ಮನೆಗೆ ಹೋಗುತ್ತಾರೆ ಎಂಬ ಮಾತು ಸಾಮಾನ್ಯ. ಆದರೆ ಇದರ ಹೊರತಾಗಿಯೂ ಕೆಲ ಉಪನ್ಯಾಸಕರು ಒಂದಿಷ್ಟು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬುದಕ್ಕೆ ಇವರೇ ಸಾಕ್ಷಿ. ಆಶ್ಚರ್ಯವೆಂದರೆ ನಿವೃತ್ತಿಯ ನಂತರವು ಸಂಖ್ಯಾಶಾಸ್ತ್ರ, ಉಪನ್ಯಾಸಕರೊಬ್ಬರು ಸಾಹಿತ್ಯಕ್ಕೆ ಸಂಬಂಧಪಟ್ಟ ಲೇಖನಗಳನ್ನು, ಅಂಕಣ ಬರಹಗಳನ್ನು ಬರೆಯುವುದು ತೀರಾ ಅಪರೂಪದ ಸಂಗತಿ. ಬೆಳಗಾವಿ ಜಿಲ್ಲೆಯ ರಾಮದುರ್ಗದ ಸುರೇಶ ಗುದಗನವರ ಪ್ರವರ್ಧಮಾನಕ್ಕೆ ಬರುತ್ತಿರುವ ಉತ್ತಮ ಬರಹಗಾರರು. ವಿವಿಧ ಪತ್ರಿಕೆಗಳಿಗೆ ಅಂಕಣ ಲೇಖನಗಳನ್ನು ಬರೆಯುವುದು ಅವರ ಮುಖ್ಯ ಹವ್ಯಾಸ. ನನ್ನ ಹಾಗೂ ಗುದಗನವರ ಗುರುಗಳು ಪರಿಚಯಕ್ಕೆ ಎರಡು ದಶಕಗಳೇ ಸಂದಿವೆ. ನಾನಾಗ ಕನ್ನಡ ಪ್ರಭ ದಿನಪತ್ರಿಕೆಯ ಚರಿತ್ರೆಗೊಂದು ಕಿಟಕಿ ಅಂಕಣಕ್ಕೆ ಸ್ಥಳನಾಮ ಸಂಗ್ರಹಿಸುವ ಸಂದರ್ಭದಲ್ಲಿ ಶಬರಿಕೊಳ್ಳ ಕಿಲ್ಲಾ ತೊರಗಲ್ ಸೇರಿದಂತೆ ರಾಮದುರ್ಗದ ಹಲವು ಸ್ಥಳಗಳಿಗೆ ತಮ್ಮ ಉಪನ್ಯಾಸಕ ವೃತ್ತಿಯ ಕಾಲೇಜಿಗೆ ರಜೆ ಹಾಕಿ ನನ್ನನ್ನು ಸುತ್ತಾಡಿಸಿಕೊಂಡು ಬಂದಿದ್ದಲ್ಲದೇ ತಾವು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕವನ ರಚನಾ ಕಮ್ಮಟದಲ್ಲಿ ನನಗೆ ಅವಕಾಶ ನೀಡಿದ್ದರು. ತಮ್ಮ ತಾಯಿಯ ಸ್ಮರಣಾರ್ಥ ಚಂದರಗಿ ಕ್ರೀಡಾಶಾಲೆಯಲ್ಲಿ ಜರುಗಿಸಿದ್ದ ಕವಿಗೋಷ್ಠಿಯಲ್ಲಿ ಅವಕಾಶ ನೀಡಿದ್ದರು. ತಮ್ಮ ಮನೆಯ ಯಾವುದೇ ಶುಭ ಸಮಾರಂಭಗಳಿರಲಿ ನನಗೆ ಆಮಂತ್ರಿಸುವ ಮೂಲಕ ನನ್ನನ್ನು ತಮ್ಮ ಕುಟುಂಬದ ಓರ್ವ ಸದಸ್ಯನಂತೆ ಕಾಣುವ ಹಿರಿಯರು ಪ್ರೊ.ಸುರೇಶ ಗುದಗನವರ ಉಪನ್ಯಾಸಕರು. ಹೀಗಾಗಿ ಅವರ ಒಡನಾಟ ನನ್ನ ಬರವಣಿಗೆಯ ಜೊತೆ ಸಾಗಿದ್ದು ನನ್ನ ಭಾಗ್ಯವೇ ಸರಿ.

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮರಡಿ ಶಿವಾಪುರದವರಾದ ಸುರೇಶ ಗುದಗನವರ ಅವರ ತಾಯಿಯ ತವರು ಮನೆ ರಾಮದುರ್ಗ ತಾಲೂಕಿನ ಚುಂಚನೂರಿನಲ್ಲಿ ೧೯೬೧ ರ ಜುಲೈ ೧೫ರಂದು ಜನಿಸಿದರು. ತಂದೆ ವೀರಪ್ಪ, ತಾಯಿ ಗೌರಮ್ಮ. ತಂದೆಯವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಉತ್ತಮ ಹೆಸರು ಸಂಪಾದಿಸಿದ್ದರು. ಸುರೇಶ ಅವರ ಪ್ರಾಥಮಿಕ ಶಿಕ್ಷಣ ಚುಂಚನೂರಿನ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿಯೇ ನಡೆಯಿತು.  ಅವರು ೭ನೇ ತರಗತಿಯಲ್ಲಿದ್ದಾಗಲೇ ಬರಹ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನವನ್ನು  ಗಳಿಸಿದ್ದರು. ಪ್ರೌಢಶಿಕ್ಷಣಕ್ಕಾಗಿ ಅವರು ಸಮೀಪದ ಕಟಕೋಳ ಶ್ರೀ ಗಂಗಾಧರ ಕುಮಾರ ಸ್ವಾಮೀಜಿ ಪ್ರೌಢಶಾಲೆಗೆ ಸೇರಿದರು. ನಿತ್ಯವೂ ೫-೬ ಕಿಮೀ ನಡೆದುಕೊಂಡೇ ಹೋಗಿ ಬರಬೇಕಾಗುತ್ತಿತ್ತು. ಅಂಥದರಲ್ಲಿ ಪರಿಶ್ರಮದಿಂದ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿಕೊಂಡರು. ನಂತರ ಪಿಯುಸಿಯನ್ನು ಕಟಕೋಳದ ಎಸ್.ಜಿ.ತೋಡಕರ ಜ್ಯೂನಿಯರ್ ಕಾಲೇಜಿನಿಂದ ವಿಜ್ಞಾನ ವಿಭಾಗದಲ್ಲಿ ಮಾಡಿಕೊಂಡರು. ಅವರ ಸಹೋದರ ಟೆಲಿಕಾಂ ಅಧಿಕಾರಿ ವಿಜಯಕುಮಾರ ಅವರ ಸಲಹೆಯಂತೆ ಸುರೇಶರವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿಗೆ ಸೇರಿದರು. ೧೯೮೨ರಲ್ಲಿ ಸುರೇಶ ಗುದಗನವರ ಅವರು ಬಿ.ಎ. ಪದವಿಯನ್ನು ಸಂಖ್ಯಾಶಾಸ್ತ್ರದೊಂದಿಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ೧೯೮೪ರಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ತ್ರದಲ್ಲಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾದರು. 

ನಂತರ ರಾಮದುರ್ಗದ ಸಿ.ಎಸ್.ಬೆಂಬಳಗಿ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಅವರ ಬದುಕಿನಲ್ಲಿ ರಾಮದುರ್ಗದ ಪಾತ್ರ ಅತ್ಯಂತ ಮಹತ್ವದ ಘಟ್ಟವಾಗಿದೆ. ಸಂಖ್ಯಾಶಾಸ್ತ್ರದ ಉಪನ್ಯಾಸಕರಾಗಿ ಗುದಗನವರ ಅವರು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಪ್ರೀತಿ, ಅಭಿಮಾನವನ್ನು ಸಂಪಾದಿಸಿದ್ದಾರೆ. ಅವರು ಸಂಖ್ಯಾಶಾಸ್ತ್ರದ ಪರಿಭಾಷೆಯನ್ನು ವಿಶ್ಲೇಷಣೆಗೂ ಅಳವಡಿಸಿಕೊಂಡು ಅಧ್ಯಾಪನದ ಸತ್ವವನ್ನು ಹೆಚ್ಚಿಸುತ್ತಿದ್ದರು. ವಿಷಯ ಬೋಧನೆಯಲ್ಲಿ ಪರಿಣಾಮಕಾರಿ ಕ್ರಮಗಳ ಅನುಸರಣೆ ಕಾರಣ ಅವರ ವಿಷಯದಲ್ಲಿ ಹಲವು ವಿದ್ಯಾರ್ಥಿಗಳು ಶೇಕಡಾ ನೂರರಷ್ಟು ಅಂಕ ಪಡೆದಿರುವದು ಸುರೇಶ ಅವರ ಗುಣಮಟ್ಟದ ಬೋಧನೆಗೆ ಸಾಕ್ಷಿ. ಮೂರು ವರ್ಷಗಳ ಕಾಲ ಶಿಗ್ಗಾವಿಯ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಪುನಃ ರಾಮದುರ್ಗದ ವಿಶ್ವಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರಾಗಿ ನೇಮಕಗೊಂಡರು. ಅವರು ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರು ವಿಷಯದಲ್ಲಿಯ ಉತ್ತಮ ಫಲಿತಾಂಶಕ್ಕಾಗಿ ಪಿ.ಯು. ಮಂಡಳಿಯಿಂದ ಅಭಿನಂದಿತರಾಗಿದ್ದಾರೆ. ಸುರೇಶ ಗುದಗನವರ ಅವರು ೨೦೨೧ರಲ್ಲಿ ನಿವೃತ್ತರಾದರು. ಅವರು ೧೯೯೦ರ ಡಿಸೆಂಬರ್ ೧೦ರಂದು ರಾಜಶ್ರೀ ಕೊಟಬಾಗಿ ಅವರನ್ನು ಪ್ರೀತಿಸಿ ಮದುವೆಯಾದರು. ಬೆಂಬಳಗಿ ಕಾಲೇಜಿನಲ್ಲಿದ್ದಾಗಲೇ ಪ್ರೀತಿ ಅಂಕುರವಾಗಿ, ಹೆಮ್ಮರವಾಗಿ ಬೆಳೆದು ಡಾ.ರಾಜಶ್ರೀ ಅವರನ್ನು ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಅಂತರಜಾತೀಯ ವಿವಾಹವಾದರು. ಡಾ.

ರಾಜಶ್ರೀಯವರು ಬೆಂಬಳಗಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವರು. ಅವರಿಗೆ ಒಬ್ಬಳೇ ಮಗಳು ಅನುಪಮಾ. ಮಗಳು ಮತ್ತು ಅಳಿಯ ಗಣೇಶ ರ‍್ವರೂ ಸಾಪ್ಟ್ವೇರ್ ಇಂಜಿನೀಯರರು. 

ಸಂಖ್ಯಾಶಾಸ್ತ್ರ ವಿಷಯ ಹಲವರಿಗೆ ಕಬ್ಬಿಣದ ಕಡಲೆ. ಸುರೇಶರವರು ಕಠಿಣ ವಿಷಯವನ್ನು ಆಸಕ್ತಿದಾಯಕವಾಗಿ ಬೋಧಿಸುವ ನಿಟ್ಟಿನಲ್ಲಿ ಮಾದರಿಯಾಗಿದ್ದಾರೆ. ಅವರು ಪಿಯುಸಿ ದ್ವಿತೀಯ ವರ್ಷದ ಸಂಖ್ಯಾಶಾಸ್ತ್ರ ವಿಷಯದ ಪದವಿಪೂರ್ವ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಪರಿಷ್ಕರಣೆಯಲ್ಲೂ ಪಾಲ್ಗೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ವಾಣಿಜ್ಯದ ಪದವಿ ವಿದ್ಯಾರ್ಥಿಗಳಿಗಾಗಿ ಸೆಮಿಸ್ಟರ್ ಅನುಗುಣವಾಗಿ ಸಂಖ್ಯಾಶಾಸ್ತ್ರ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಸುರೇಶ ಅವರು ಅನುಪಮ ಪ್ರಕಾಶನದಿಂದ ನಾಟಕಕಾರ ಸಂಗಮೇಶ ಗುರವ ರಚಿಸಿದ ಆಯ್ದಕ್ಕಿ ಲಕ್ಕಮ್ಮ ಮತ್ತು ಫಲಹಾರೇಶ್ವರ ಮಹಾತ್ಮೆ ನಾಟಕ ಕೃತಿಗಳನ್ನು ಪ್ರಕಟಿಸಿರುವರು. 

೨೦೦೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಮದುರ್ಗ ತಾಲೂಕಾ ಘಟಕದ ಅಧ್ಯಕ್ಷರಾಗಿ, ಗ್ರಾಮೀಣ ಮಟ್ಟದಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಪಸರಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಅಲ್ಲದೇ ತಾಲೂಕ ತುಂಬೆಲ್ಲ ಸ್ಕೂಟರಿನಲ್ಲಿಯೇ ಸಂಚರಿಸಿ ಕನ್ನಡ ಸಾಹಿತ್ಯ ಪರಿಷತ್ತಗೆ ಹೆಚ್ಚಿನ ಸದಸ್ಯರನ್ನು ನೊಂದಾಯಿಸಿದ್ದು ಗಮನಾರ್ಹ ಸಂಗತಿ. ಹೆಗ್ಗೂಡಿನ ನೀನಾಸಂ ನಾಟಕಗಳನ್ನು ರಾಮದುರ್ಗದಲ್ಲಿ ಹಲವು ವರ್ಷಗಳ ಕಾಲ ಏರ್ಪಡಿಸಿ ರಂಗಕಲೆಗೆ ಉತ್ತೇಜನ ನೀಡುವಲ್ಲಿ ಶ್ರಮಪಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ಭರತನಾಟ್ಯ ಕಲೆಯನ್ನು ಪರಿಚಯಿಸಿದ, ಬೆಳೆಸಿದ ಕೀರ್ತಿ ಅವರದ್ದಾಗಿದೆ. ಅನುಪಮ ಕಲಾ ಸಂಸ್ಥೆಯಿಂದ ರಾಮದುರ್ಗ, ಸುರೇಬಾನ, ಬೈಲಹೊಂಗಲ ಭಾಗಗಳಲ್ಲಿ ಭರತನಾಟ್ಯ ಕೇಂದ್ರಗಳನ್ನು ತೆರೆದು ಗ್ರಾಮೀಣ ಪ್ರತಿಭೆಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೇ ಕಳೆದ ಹದಿನೈದು ವರ್ಷಗಳಿಂದ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರವನ್ನು ಕನ್ನಡ ಮಾಧ್ಯಮದಲ್ಲಿ ನಡೆಸುತ್ತಿದ್ದು, ರಾಮದುರ್ಗ, ಬೈಲಹೊಂಗಲ ಹಾಗೂ ಬಾಗಲಕೋಟೆಯ ನೂರಾರು ಪರೀಕ್ಷಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ನಾಡಿನ ಖ್ಯಾತ ಕವಿ ಡಿ.ಎಸ್.ಕರ್ಕಿ ಅವರ ಹೆಸರಿನಲ್ಲಿ ಸಾಹಿತ್ಯ ವೇದಿಕೆ ಪ್ರಾರಂಭಿಸಿ, ಹಲವು ವರ್ಷಗಳವರೆಗೆ ಯುವಕವಿಗಳಿಗೆ ಕರ್ಕಿಯವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ ಕಾರ್ಯ ಮೆಚ್ಚುವಂತಹುದು. 

ಪುಣ್ಯಸ್ಮರಣೆ, ಗೃಹಪ್ರವೇಶ ಹಾಗೂ ಮದುವೆ ಸಮಾರಂಭಗಳಲ್ಲಿ ಕನ್ನಡದ ಚಟುವಟಿಕೆಗಳೊಂದಿಗೆ ಸಂಭ್ರವಿಸುವವರು ಬಹಳ ವಿರಳ. ಸುರೇಶ ಗುದಗನವರ ಅವರು ಮನೆಯ ಎಲ್ಲ ಕಾರ್ಯಕ್ರಮಗಳಿಗೂ ಕನ್ನಡಕ್ಕಾಗಿ ಮೀಸಲಿಟ್ಟಿದ್ದಾರೆ. ಅವರ ತಂದೆಯವರ ಪುಣ್ಯಸ್ಮರಣೆಯಲ್ಲಿ ಜಿಲ್ಲಾಮಟ್ಟದ ಕವಿಗೋಷ್ಠಿ, ಧಾರವಾಡದಲ್ಲಿ ಕಟ್ಟಿಸಿದ ‘ಸಿರಿ’ ಗೃಹ ಪ್ರವೇಶದಲ್ಲಿ ಕವಿಗೋಷ್ಠಿ ಹಾಗೂ ಮಗಳು ಅನುಪಮಾಳ ಮದುವೆ ಸಮಾರಂಭದಲ್ಲಿ ‘ಶರಣರ ದಾಂಪತ್ಯ ಧರ್ಮ’ ಸಂಪಾದಿತ ಕೃತಿಯನ್ನು ಪ್ರಕಟಿಸಿ, ಡಾ.ವೀರಣ್ಣ ರಾಜೂರ ಅವರಿಂದ ಬಿಡುಗಡೆಗೊಳಿಸಿದರು. ಸುರೇಶರವದು ಸದಾ ಕ್ರಿಯಾಶೀಲವಾದ  ಮನಸ್ಸು. ಅವರ ಕಾಳಜಿ ಕನ್ನಡ ಚಟುವಟಿಕೆಗಳಿಗೆ ಸದಾ ಮೀಸಲಾಗಿರುತ್ತದೆ. ಸುರೇಶ ಅವರು ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ, ವಲಯ ಅಧ್ಯಕ್ಷರಾಗಿ, ಪ್ರಾದೇಶಿಕ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿರುತ್ತಾರೆ. ಅವರ ಸಾಮಾಜಿಕ ಸೇವೆಗೆ ಬೆಂಬಲವಾಗಿ ನಿಂತ ಪತ್ನಿ ಡಾ.ರಾಜಶ್ರೀ ಯವರ ಸಹಕಾರವನ್ನು ಸದಾ ಸ್ಮರಿಸುತ್ತಾರೆ.

ನಿವೃತ್ತಿಯ ನಂತರ ಸುರೇಶರವರು ಬರವಣಿಗೆಯಲ್ಲಿ ಬಹಳ ತೊಡಗಿಸಿಕೊಂಡಿದ್ದಾರೆ. ಅವರು ಕರ್ನಾಟಕ ಕಾಲೇಜಿನಲ್ಲಿ ಪದವಿ ಓದುತ್ತಿರುವಾಗಲೇ ‘ಕೆಂಪಿ’ ಕಥೆಯನ್ನು ಬರೆದಿದ್ದರು. ಅದು ಕಾಲೇಜಿನ ಸಂಚಿಕೆಯಲ್ಲಿ ಪ್ರಕಟಗೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಲೇಖಕ ಸುರೇಶ ಗುದಗನವರ ಅವರ ವಿಭಿನ್ನ ಬರಹಗಳನ್ನು ಕಾಣಬಹುದು. ಅದರಲ್ಲೂ ಸಂಯುಕ್ತ ಕರ್ನಾಟಕ, ವಿಶ್ವವಾಣಿ, ಲೋಕದರ್ಶನ, ಉದಯವಾಣಿ, ಉದಯಕಾಲ, ಕೃಷಿ ಪೇಟೆ, ಪ್ರಿಯಾಂಕ ಮೊದಲಾದ ಪತ್ರಿಕೆಗಳಲ್ಲಿ ಅವರ ಲೇಖನ ಇದ್ದೇ ಇರುತ್ತದೆ. ೨೦೨೧ರಲ್ಲಿ ಅವರು ಅರವತ್ತು ಮಹಿಳಾ ಸಾಧಕಿಯರ ಸಾಧನೆಯನ್ನು ಪರಿಚಯಿಸುವ ‘ಅನುಪಮ ಸಾಧಕರು’ ಕೃತಿಯನ್ನು ಹೊರತಂದಿದ್ದಾರೆ. ಅವರ ‘ಸಾಲು ದೀಪಗಳು’ ಕನ್ನಡದ ದೀಪಗಳು’ ಕೃತಿಯನ್ನು ಹೊರತಂದಿದ್ದಾರೆ  ಸುರೇಶರವರು ತಾಲೂಕಿನ ಹಾಗೂ ಸುತ್ತಮುತ್ತಲಿನ ರೈತರ ಮತ್ತು ರೈತ ಮಹಿಳೆಯರ ಸಾಧನೆಗಳನ್ನು ಗುರುತಿಸಿ ಲೇಖನದಲ್ಲಿ ಹಿಡಿದಿಟ್ಟು ನಾಡಿಗೆ ಪರಿಚಯಿಸಿದ್ದಾರೆ. ಆ ಮೂಲಕ ಅವರೆಲ್ಲ ಸರ್ಕಾರದಿಂದ ಪ್ರಶಸ್ತಿಗಳನ್ನು ಪಡೆದಿರುವರು.

ಸುರೇಶ ಗುದನಗವರ ಅವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಶ್ರೀ ಪ್ರಶಸ್ತಿ, ಬಸವ ಜ್ಯೋತಿ ಪ್ರಶಸ್ತಿ, ಸಮಾಜ ಸೇವಾ ರತ್ನ ಮುಂತಾದ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಸದ್ಯ ಡಿಸೆಂಬರ್ ೧೦ ರಂದು ಸುಪ್ತ ಸಾಧಕರು ಲೋಕಾರ್ಪನೆಗೊಳ್ಳುವುದು. ಕೃಷಿಗೆ ಸಂಬಂಧಿಸಿದ ಪುಸ್ತಕವೊಂದು ಕೂಡ ಅಚ್ಚಿನಲ್ಲಿರುವುದು ಹೆಮ್ಮೆಯ ಸಂಗತಿ ಹೊಸ ವರ್ಷ ಆ ಕೃತಿ ಲೋಕಾರ್ಪಣೆಗೊಳ್ಳಲಿರುವುದು ಕೂಡ ಅಭಿಮಾನದ ಸಂಗತಿ. ನಿವೃತ್ತಿಯ ಬದುಕನ್ನು ಸಾಹಿತ್ಯಕ್ಕೆ ಮೀಸಲಿಟ್ಟು ದಿನವೂ ನಾಡಿನ ಒಂದಲ್ಲ ಒಂದು ಪತ್ರಿಕೆಗಳಲ್ಲಿ ತಮ್ಮ ವಿಭಿನ್ನ ಶೈಲಿಯ ಬರಹಗಳ ಮೂಲಕ ನಿವೃತ್ತಿ ಬದುಕನ್ನು ಕಟ್ಟಿಕೊಳ್ಳುತ್ತಿರುವ ಎಲೆ ಮರೆಯ ಸಾಹಿತಿಯಂತೆ ಇರುವ ಪ್ರೊ.ಸುರೇಶ ಗುದಗನವರ ಅವರ ಸಾಹಿತ್ಯ ಕೃತಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮೂಡಿ ಬರಲಿ.ದೇವರು ಅವರಿಗೆ ಆಯುರಾರೋಗ್ಯ ಕರುಣಿಸಲಿ ಎಂದು ಗುರುಗಳಿಗೆ ನನ್ನ ಅಕ್ಷರಗಳ ಮೂಲಕ ಅಭಿನಂದನೆ ಸಲ್ಲಿಸುವೆನು.


ವಾಯ್. ಬಿ. ಕಡಕೋಳ                                                                          ಮುನವಳ್ಳಿ
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ ೫೯೧೧೧೭ 

ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ 

೯೪೪೯೫೧೮೪೦೦  ೮೯೭೧೧೧೭೪೪೨

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!