spot_img
spot_img

ಸ್ಮರಿಸು ಗುರುಗಳ ಮನವೇ ; ಜುಲೈ 21 ಗುರು ಪೂರ್ಣಿಮ ತದಂಗವಾಗಿ ವಿಶೇಷ ಚಿಂತನ

Must Read

- Advertisement -

ಹಿಂದೆ ಗುರುವಿದ್ದ ಮುಂದೆ ಗುರಿ ಇತ್ತು ಸಾಗುತ್ತಿತ್ತು ರಣಧೀರರ ದಂಡು, ಇಂದು ಹಿಂದೆ ಗುರುವಿಲ್ಲ ಮುಂದೆ ಗುರಿಯಿಲ್ಲ ಸಾಗುತ್ತಿದೆ ರಣಹೇಡಿಗಳ ಹಿಂಡು’ ಎಂಬ ಉಕ್ತಿ ಅದೆಷ್ಟು ಅರ್ಥಗರ್ಭಿತ! ನಿಜವಾದ ಗುರು ಮತ್ತು ನಿರ್ದಿಷ್ಟ ಗುರಿ ಇದ್ದರೆ ಖಂಡಿತಾ ಯಶಸ್ಸು ಸಾಧ್ಯ. ಒಳ್ಳೆಯ ಮಾರ್ಗದರ್ಶಕನಾಗಿ ಸರಿದಾರಿಯನ್ನು ತೋರುವ ಗುರು ಮತ್ತು ಏನು ಮಾಡಬೇಕೆಂಬ ಗುರಿ ಇಲ್ಲದಿದ್ದರೆ ಅಂತಹ ಬದುಕು ಅಡ್ಡ ದಾರಿ ಹಿಡಿದು, ಅತಂತ್ರವಾಗುತ್ತದೆ . ಗುರುಬಲ್ಲವಿಲ್ಲದೇ ಯಾವುದೇ ಕಾರ್ಯ ಸಾಧಿತವಾಗದು. ಜೀವನದ ಗುರಿಗೆ ಬೆಂಬಲವಾಗಿ ಗುರುವಿರಬೇಕು. ಗುರು ಜ್ಞಾನಿ-ವಿಜ್ಞಾನಿ. ಜುಲೈ 21, ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ಗುರುವಿನ ಮಹತ್ವ ವರ್ಣಿಸುವ ಬರಹವು ಇಲ್ಲಿದೆ.

ಗುರುಗಳಿಂತಧಿಕ ಇನ್ನಾರು ಆಪ್ತರು ನಿನಗೆ|
ಗುರುಗಳೇ ಪರಮಹಿತಕರು ನೋಡು|
ಗುರುಗಳ ಬಗ್ಗೆ ತಿಳಿಯೋಣ…
ಗುರುಸೇವೆಯನ್ನು ಮಾಡೋಣ…
ಗುರುಕೃಪೆಗೆ ಪಾತ್ರರಾಗೋಣ…
ಗುರುಗಳು ಏಕೆ ಬೇಕು ?
“ವ್ಯವಹಾರದಲ್ಲಿಯೂ ಕೂಡ ನಮಗೆ ಗುರುಗಳು ಬೇಕಾಗುತ್ತಾರೆ , ಅಂದಮೇಲೆ ಅದಕ್ಕಿಂತ ಕಠಿಣವಾದ ಜ್ಞಾನವಾಗುವದಕ್ಕಾಗಿ ಗುರುಗಳು ಬೇಡವೆಂದು ಹೇಳಿದರೆ ಹೇಗೆ ನಡೆಯುತ್ತದೆ ? ಪ್ರಪಂಚದಲ್ಲಿಯ ಸುಖದುಃಖಗಳನ್ನು ಅನುಭವಿಸುತ್ತಿರುವೆವು , ಆದರೆ ಸಮಾಧಾನ ಪ್ರಾಪ್ತವಾಗಲಿಲ್ಲವೆಂದಮೇಲೆ ನಿಜವಾದ ಸುಖವು ಯಾವದರಲ್ಲಿದೆ. ಹಾಗೂ ನನಗೆ ಅದನ್ನು ಯಾರು ತೋರಿಸುತ್ತಾರೆ ಎಂಬ ತಳಮಳವು ಯಾರಿಗೆ ಉಂಟಾಗುತ್ತದೆಯೋ , ಅವನು ಗುರುಗಳನ್ನು ಹೊಂದಿಯೆ ಹೊಂದುತ್ತಾನೆ . ಪ್ರಪಂಚವು ನಮಗೆ ಕಹಿಯೆನಿಸಿದರೆ ಮಾತ್ರ ಶಿಷ್ಯನಾಗುವ ಪ್ರಶ್ನೆ ಬರುತ್ತದೆ . ಕಲಿಯಬೇಕೆಂದು ಯಾರಿಗೆ ಅನಿಸುತ್ತದೆಯೋ ಅವನೇ ಶಿಷ್ಯನು ಹಾಗೂ ಯಾರು ಕಲಿಸುತ್ತಾರೆಯೋ ಅವರೇ ಗುರುಗಳು . ತನಗೆ ಏನೂ ತಿಳಿಯುವದಿಲ್ಲವೆಂದು ಯಾರಿಗೆ ಅನಿಸುತ್ತದೆಯೋ ಅವನೇ ಗುರುವನ್ನು ಮಾಡಿಕೊಳ್ಳುತ್ತಾನೆ . ಕೆಲವರು , ನಾನು ರಾಮ ರಾಮ ಅನ್ನುತ್ತೇನೆ , ಕೆಟ್ಟಮಾರ್ಗದಿಂದ ನಡೆಯುವದಿಲ್ಲ , ಅಂದಮೇಲೆ ಗುರುಗಳು ಏಕೆ ಬೇಕು ಎಂದು ಅನ್ನುತ್ತಾರೆ . “ ನಾನು ಮಾಡುತ್ತೇನೆ ” ಎಂಬ ಅರಿವು ಅಡ್ಡ ಬರುವದರಿಂದಲೇ ಸದ್ಗುರುಗಳ ಅವಶ್ಯಕತೆ ಇರುತ್ತದೆ . ನಾವು ಸತ್ಕರ್ಮಗಳ ಅಭಿಮಾನವನ್ನು ಹೊಂದಿದ್ದಾದರೆ ರಾಮನ ವಿಸ್ಮರಣೆಯಾಗಲಿಲ್ಲವೆ ? ಅಭಿಮಾನ ಹೋಗದ ಹೊರತು ರಾಮನ ದರ್ಶನವಾಗಲಾರದು . ದೇವರ ಹತ್ತಿರ ಹೋದರೂ ನಾಮದೇವನ ಅಭಿಮಾನ ಹೋಗಲಿಲ್ಲ . ಆದ್ದರಿಂದ ಭಗವಂತನು ಅವನಿಗೆ ಗುರು ಮಾಡಿಕೊಳ್ಳಲು ಹೇಳಿದನು .
“ಸಂತರ ಕೃಪೆಯಿಂದ ವೇದನೆಯು ಕಡಿಮೆಯಾಯಿತೆಂದು ಅವರನ್ನು ಮನ್ನಿಸುವದು ಉಚಿತವಲ್ಲ . ಯಾರು ಶಿಷ್ಯನನ್ನು ವಿಷಯದ ಕಡೆಗೆ ಎಳೆಯುತ್ತಾನೋ ಅವನನ್ನು ಗುರು ಎಂದು ಹೇಗೆ ಅನ್ನಬೇಕು ? ಚಮತ್ಕಾರ ಮಾಡಿ ತೋರಿಸುವವನನ್ನು ನಾವು ಸಾಧು ಅನ್ನುತ್ತೇವೆ . ನಾವು ಸಂತರ ಪರೀಕ್ಷೆಯನ್ನು ಅವರ ಹೊರಗಿನ ವ್ಯವಹಾರದಿಂದಲೇ ಮಾಡುತ್ತೇವೆ . ಸರ್ವಭೂತಗಳಲ್ಲಿಯೂ ಭಗವಂತನನ್ನು ನೋಡಲು ಬಂದವರಿಗೆ ಮಾತ್ರ ಸಂತರ ನಿಜವಾದ ಪರಿಚಯವಾಗುತ್ತದೆ . ಸಂತರ ಸಂಗತಿಯಿಂದ ನಮ್ಮ ಮನಸ್ಸಿನ ಮೇಲೆ ಆಗುವ ಪರಿಣಾಮದಿಂದಲೇ ಸಂತರ ಪರೀಕ್ಷೆ ಮಾಡಬೇಕು . ನನ್ನ ಚಿತ್ತವು ಎಲ್ಲಿ ನಿರ್ವಿಷಯವಾಗುತ್ತದೆಯೋ ಅಲ್ಲಿಯ ಸಂತರ ನಿಜವಾದ ವಾಸ್ತವ್ಯ ಎಂದು ತಿಳಿಯಬೇಕು . ಯಾರಿಗೆ ಭಗವತ್ಪ್ರಾಪ್ತಿಯ ತಳಮಳವು ಹತ್ತಿರುತ್ತದೆಯೋ ಅವರಿಗೆ ಶಿಷ್ಯರೆನ್ನಬೇಕು . ಯಾರು ಗುರ್ವಾಜ್ಞೆಯನ್ನು ಮೀರುವದಿಲ್ಲವೋ ಹಾಗೂ ಗುರುಗಳೇ ಭಗವತ್ಪ್ರಾಪ್ತಿಯ ಸಾಧನವೆಂದು ತಿಳಿಯುತ್ತಾನೋ ಅವನೇ ಸತ್ ಶಿಷ್ಯನು . ಗುರುಗಳಿಗಿಂತ ಶ್ರೇಷ್ಟವಾದ ದೇವರು , ಧರ್ಮ ಇಲ್ಲವೇ ಇಲ್ಲವೆಂದು ತಿಳಿಯಬೇಕು .

ಕೆಲವು ಕರ್ನಾಟಕದ ಜನರು ಮಹಾರಾಷ್ಟ್ರಕ್ಕೆ ಬಂದರು . ಅವರಿಗೆ ಮರಾಠಿ ಬರುತ್ತಿರಲಿಲ್ಲ . ಅವರು ಒಬ್ಬ ದ್ವಿಭಾಷಿಯನ್ನು ಕರೆದುಕೊಂಡು ಅನೇಕ ಸ್ಥಾನಗಳನ್ನು ತಿರುಗಿದರು . ಅವರೆಲ್ಲರ ಚಿಂತೆ ಹಾಗೂ ಜವಾಬ್ದಾರಿಗಳು ಆ ದ್ವಿಭಾಷಿಯಮೇಲೆ ಬಿದ್ದಿದ್ದವು . ಅದರಂತೆ ನಾವು ಕೂಡ ದ್ವಿಭಾಷಿ ಅಂದರೆ ಸದ್ಗುರುಗಳ ಸಹವಾಸ ಮಾಡಬೇಕು . ಅವರು ಹೇಳಿದಲ್ಲಿ ಹೋಗಬೇಕು . ಅವರು ಹೇಳಿದ್ದನ್ನು ಮಾಡಬೇಕು . ಅಂದರೆ ಭಗವಂತನ ಪ್ರಾಪ್ತಿ ಆಗಿಯೇ ತೀರುತ್ತದೆ . ಶಾಸ್ತ್ರ ಹಾಗೂ ವೇದಗಳು ಅನಂತವಾಗಿರುತ್ತವೆ , ಅವುಗಳನ್ನು ಕಲಿಯಲು ನಮಗೆ ಸಮಯವೆಲ್ಲಿರುತ್ತದೆ ? ಸದ್ಗುರುಗಳು ಬೆಣ್ಣೆಯಂತೆ ಸರ್ವಸಾಧನೆಗಳ ಸಾರವಾದ ನಾಮವನ್ನು ಹೇಳಿರುತ್ತಾರೆ ನಾವು ಅದನ್ನು ಮಾಡಬೇಕು . ಅಂದರೆ ಭಗವತ್ಪ್ರೇಮವು ಬಂದೇ ಬರುತ್ತದೆ . ಪೇಟೆಯಲ್ಲಿ ಹೋದಮೇಲೆ ನಮಗೆ ಅನುಕೂಲವಾದ ಹಾಗೂ ಯೋಗ್ಯವಾದ ದರದ ವಸ್ತುವನ್ನೇ ಖರೀದಿಸುತ್ತೇವೆ . ಅದರಂತೆ ಪರಮಾರ್ಥದ ಅನೇಕ ಸಾಧನೆಗಳಲ್ಲಿ ನಮಗೆ ಅನುಕೂಲ ಹಾಗೂ ಯೋಗ್ಯವಾದ ನಾಮಸ್ಮರಣೆಯೆ ಉತ್ತಮ ಸಾಧನೆಯಾಗಿರುತ್ತದೆ . ನಾವು ಅದನ್ನೇ ಮಾಡಬೇಕು ಹಾಗೂ ಆನಂದದಲ್ಲಿರಬೇಕು .

- Advertisement -

ಗುರುಸೇವೆ ಮಾಡುವದೆಂದರೆ ಏನು ?
ಸಾಧನೆಯ ಖಟಿಪಿಟಿಯನ್ನು ಎಲ್ಲಿಯವರೆಗೆ ಮಾಡಬೇಕು ? ಜಪ , ತಪ , ನೇಮ , ಯಾಗ ಮುಂತಾದವುಗಳನ್ನು ನಾವು ಏತಕ್ಕಾಗಿ ಮಾಡುತ್ತೇವೆ ? ಭಗವತ್ಪ್ರಾಪ್ತಿಯಾಗಬೇಕೆಂದು ಮಾಡುತ್ತೇವೆ . ಆದರೆ ಅದೇ ದೇವರು ಮನೆಗೆ ಬಂದರೆ ಸಾಧನೆಯ ಖಟಿಪಿಟಿಯನ್ನು ಮಾಡಬೇಕಾಗುವದೇ ? ಅಂದರೆ ಹಾಗೆ ಮಾಡಬೇಕಾದ ಕಾರಣ ಉಳಿಯುವದಿಲ್ಲ . ಇಲ್ಲದಿದ್ದರೆ ಅದರದೆ ಅಭಿಮಾನವಾಗುತ್ತದೆ . ಹಾಗೂ ಸಂಪಾದಿಸಬೇಕಾದದ್ದು ಬದಿಗೆ ಉಳಿದು ನಮಗೆ ಹಾನಿಯೆ ಆಗುತ್ತದೆ . ನಡೆಯುವದೆಲ್ಲವು ನನ್ನ ( ಗುರುಗಳ ) ಇಚ್ಚೆಯಿಂದಲೇ ನಡೆಯುತ್ತದೆಂದು ತಿಳಿದು ಅದರಲ್ಲಿಯೆ ಆನಂದವನ್ನು ಹೊಂದಿರಿ . ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ನನ್ನನ್ನು ಸ್ಮರಿಸಿರಿ . ಗುರುಭಕ್ತಿ ಮಾಡುವದೆಂದರೆ ಏನು ? ಅವರ ದೇಹದ ಸೇವೆ ಮಾಡುವದೇ ಗುರುಸೇವೆ ಎಂದು ನಿಮಗೆ ಅನಿಸುತ್ತದೆಯೆ? ಅವರ ದೇಹದ ಸೇವೆ ಮಾಡುವದು ನಿಜವಾದ ಗುರುಸೇವೆಯಾಗಿರುವದಿಲ್ಲ . ಗುರುಗಳು ಹೇಳಿದಂತೆ ನಡೆಯುವದೇ ಅವರ ನಿಜವಾದ ಸೇವೆಯಾಗಿರುತ್ತದೆ . ನನ್ನ ಹತ್ತಿರ ಬಂದವರು ಕೆಲವರು ಮಕ್ಕಳನ್ನು ಕೇಳುತ್ತಾರೆ , ಕೆಲವರು ಸಂಪತ್ತನ್ನು ಕೇಳುತ್ತಾರೆ , ಕೆಲವರು ರೋಗನಿವಾರಣೆಯಾಗಬೇಕೆಂದು ಕೇಳುತ್ತಾರೆ . ಅಂದಮೇಲೆ ನೀವು ನನ್ನ ಸೇವೆಮಾಡಲು ಬರುತ್ತೀರೋ ಅಥವಾ ನಾನೇ ನಿಮ್ಮ ಸೇವೆಮಾಡಬೇಕೆಂದು ಬರುತ್ತೀರೋ ? ನನ್ನ ಹತ್ತಿರ ಬಂದು ಮನುಷ್ಯ ದೇಹದ ನಿಜವಾದ ಸಾರ್ಥಕತೆ ಆಗುವಂತೆ ಮಾಡಿರಿ . ನೀವು ಕೇಳಿದಂತೆ ನಾನು ಸ್ವಲ್ಪವೂ ಕೊಡುವುದಿಲ್ಲವೆಂದೇನೂ ಇಲ್ಲ . ಆದರೆ ಕಷಾಯ ತಗೆದುಕೊಳ್ಳುವದಕ್ಕಾಗಿ ಬೆಲ್ಲದ ಕರಣಿ ಕೊಟ್ಟಂತೆ ಕೊಡುತ್ತೇನೆ

ಇವು ಮೂರು ವಿದ್ಯೆಯ ಶತ್ರುಗಳು
1.ಗುರುಗಳ ಸೇವೆ ಮಾಡದಿರುವಿಕೆ. 2.ಅವಸರ. 3.ತನ್ನನ್ನು ಹೊಗಳಿಕೊಳ್ಳುವುದು (ಭಾರತ-ವಿದುರನೀತಿ)
ಗುರು ಪ್ರಸನ್ನ ಮನಸ್ಸಿನಿಂದ ನೀಡಿದ ವಿದ್ಯೆ ಮಾತ್ರವೇ ಫಲಪ್ರದ ಎನ್ನುವುದಾಗಿ ಆಚಾರ್ಯ ಮಧ್ವರು ತಿಳಿಸಿರುವರು…”ಶಿಷ್ಯಾಯ ಸತ್ಯಂ ಭವತಿ ಯದ್ದದ್ಯಾತ್ ಸುಪ್ರಸನ್ನ ಧೀಃ”ಎನ್ನುವುದಾಗಿ..ಈ ಗುರುಪ್ರಸನ್ನತೆಯನ್ನು ಸಂಪಾದಿಸಲಿರುವ ಸುಲಭೋಪಾಯದಲ್ಲೊಂದು ಗುರುಶುಶ್ರೂಷೆಯು…ಗುರುವಿನ ಅನುಗ್ರಹದಿಂದ ಎತ್ತರಕ್ಕೇರಿದ ಸಾವಿರಾರು ಸಾಧಕರನ್ನು ಪುರಾಣಗಳಲ್ಲಿ ನೋಡಬಹುದಾಗಿದೆ…ಇವತ್ತಿಗೂ ಅಪರೂಪದಲ್ಲಿ ಕಾಣುವಂಥದ್ದೇ..

ಗುರುವು ಒಂದೇ ಪಾಠವೂ ಒಂದೆ…ಹೀಗಿದ್ದೂ ಶಿಷ್ಯರ ಅಭಿವೃದ್ಧಿಯಲ್ಲಿ ಅಜಗಜ ಅಂತರವಿರುವುದುಂಟು…ಯಾಕೆ ಹೀಗೆ..ಎನ್ನುವ ಪ್ರಶ್ನೆಗೆ ಉತ್ತರ ಹಲವಿದ್ದರೂ ಒಂದುತ್ತರ ಗುರುವಿನ ಅನುಗ್ರಹ ಆಗಿದೆ ಆಗಿಲ್ಲ ಎನ್ನುವುದೂ ಹೌದು…ಓದಿ ಒಳ್ಳೆಯ ಸಂಪಾದನೆ ಆದ ಮಾತ್ರಕ್ಕೆ ಗುರುವಿನ ಅನುಗ್ರಹ ಆಗಿದೆ ಎನ್ನಲು ಬರುವುದಿಲ್ಲ…ಅದೊಂದು ಅಂತರಂಗದ ಬೆಳವಣಿಗೆ..ಅದರ ದಾರಿಯೇ ಬೇರೆ…ಇಂತಹದೊಂದು ಅನುಗ್ರಹ ಸಂಪಾದನೆಗಾಗಿ ಗುರುವಿನ ಶುಶ್ರೂಷೆ(ಸೇವೆ) ಅತೀ ಅಗತ್ಯ…ಗುರುಶೂಶ್ರೂಷೆ ಪೂರ್ಣ ಆಗದಿರುವುದು ಕೂಡ ವಿದ್ಯೆಯ ಅಸಿದ್ಧಿಗೆ ಕಾರಣವೆಂದಿರುವರು

- Advertisement -

ಆಚಾರ್ಯರು…”…ಗುರುವೃತ್ತೇರಪೂರ್ತಿತಃ”
ಕೇವಲ ಗುರುಶಿಷ್ಯರ ಸಂಬಂಧ ತರಗತಿಗೆ..ಸಂಬಳಕ್ಕೆ ಮಾತ್ರವೇ ಮೀಸಲಾಗಿರುವ ಈ ಕಾಲದಲ್ಲಿ ನಿಜವಾದ ಗುರುಕುಲದ ಆ ಮಾತು ಅರ್ಥವಾಗುವುದು ತುಸು ಕಷ್ಟವೇ…
ಎರಡನೆಯದ್ದು ಅವಸರ…
ಅಧ್ಯಯನದ ವಿಷಯದಲ್ಲಿ ಉದಾಸೀನ ಬುದ್ಧಿ ಸರಿಯಲ್ಲವಾದರೂ ದುಡುಕುವುದು ಕೂಡ ತಪ್ಪು…ಎಲ್ಲ ಗ್ರಂಥಗಳನ್ನು ಇವತ್ತಿಂದ ನಾಳೆ ಓದಿ ನಾಡಿದ್ದು ವಿದ್ವಾಂಸ ಪದವಿ ಪಡೆಯುವೆನೆಂಬ ಹಗಲುಗನಸಿನಿಂದ ಯಾವುದೇ ಪ್ರಯೋಜನ ಇರದು…ಅದು ಹುಚ್ಚು ಕೂಡ.
ಯಾವುದೇ ಗ್ರಂಥಗಳ ಓದು ಇರಲಿ ಅದನ್ನು ತಾಳ್ಮೆಯಿಂದ ಸರಿಯಾಗಿ ತಿಳಿದು ಮನನದಲ್ಲಿ ಅವಸರ ನಡೆಸದೆ ಅದನ್ನು ಜೀರ್ಣಿಸಿಕೊಂಡು ಇನ್ನೊಂದು ಗ್ರಂಥವನ್ನು ಹಿಡಿದನಾದರೆ ಅದು ಸಾರ್ಥಕ ಎನಿಸುವುದು…ಇವತ್ತೊಂದು ಪುಸ್ತಕ ಹಿಡಿದು ನಾಳೆ ಮತ್ತೊಂದೊದಬೇಕೆಂದು ಕಂಡು ಯಾರದ್ದೋ ಮಾತಿಗೆ ಬಲಿಯಾಗಿಗೆ ನಾಡಿದ್ದು ಇನ್ನೊಂದು ಓದಲು ಕೂರುವವ ಓದಿನಲ್ಲಿ ಎಂದಾದರೂ ಗುರಿ ಮುಟ್ಟಿಯಾನೇ?
ಮೂರನೆಯದ್ದು ಹೊಗಳಿಸಿಕೊಳ್ಳುವಿಕೆ…ಹೊಗಳುವಿಕೆ…
ಓದುವ ಹೊತ್ತಿನಲ್ಲಿ ದಾರಿತಪ್ಪಿಸುವ ಮಾದಕ ದ್ರವ್ಯವೆಂದರೂ ಏನೂ ತಪ್ಪಿಲ್ಲ…ಅದಾದರೂ ಪ್ರಭಾವ ಇಳಿದಾಗ ಇಳಿಯಬಹುದು ಈ ಹೊಗಳಿಕೆಯಿಂದ ಬಂದ ಮದ ಇಳಿಯದು…

ಅಧ್ಯಾಪಕ ಸ್ಥಾನದಲ್ಲಿರುವವರಂತು ವಿದ್ಯಾರ್ಥಿಯ ಈ ವಿಷಯದಲ್ಲಿ ತುಂಬ ಎಚ್ಚರವಹಿಸಬೇಕು…ಪ್ರೋತ್ಸಾಹಿಸುವ ಕಾಯಕ ನಿರಂತರ ನಡೆಸಬೇಕೇ ಹೊರತು ಯಾವುದೋ ಒಂದು ವಿಷಯದಲ್ಲಿ ಸ್ವಲ್ಪ ಹೆಚ್ಚು ಅಂಕ ಗಳಿಸಿದಾಗ ಹೊಗಳಿ ಅಟ್ಟಕ್ಕೇರಿಸಬಾರದು…ಅದವನ ಅವನತಿಗೆ ಕಾರಣ ಆಗುವುದೇ ಹೊರತು ಉನ್ನತಿಗಲ್ಲ..ವಿದ್ಯಾರ್ಥಿಗು ಈ ವಿಷಯದಲ್ಲಿ ಎಚ್ಚರ ಇರಬೇಕು…ಯಾರಾದರೂ ಹೊಗಳಿದರೆ ಒಳಗಿನಿಂದ ಅಹಂಕಾರ ಪಡಬಾರದು..ಓದಿನ ಹೊತ್ತಿನಲ್ಲಿ ಹೊಗಳಿಕೆಯನ್ನು ಶತ್ರುವಿನಂತೆ ಕಾಣಬೇಕೆಂದು.
ಇವತ್ತಂತು ಶಾಲೆಗಳಲ್ಲಿ ಸ್ವಲ್ಪ ಹೆಚ್ಚು ಅಂಕಗಳನ್ನು ಗಳಿಸಲಿಕ್ಕಿಲ್ಲ ಅವರ ಭಾವಚಿತ್ರವನ್ನು ಊರಿನ ನಡುವೆ ಸಿಕ್ಕಿಸಿಯೂ ಆಯಿತು!! ಅವರನ್ನಟ್ಟಕ್ಕೇರಿಸಿಯೂ ಆಯಿತು…ಒಂದು ದೃಷ್ಟಿಯಿಂದ ವ್ಯಕ್ತಿತ್ವವನ್ನೆ ಹಾಳುಗೈಯ್ಯುವ ಕೆಲಸವದು…ಓದುವ ಹುಡುಗನನ್ನೆಂದು ಹೊಗಳಬಾರದೆನ್ನುವುದು ಹಿರಿಯರು ನಂಬಿದ ಸಿದ್ಧಾಂತ…”ಶಿಷ್ಯಂ ನೈವ ಚ ನೈವ ಚ”
ಇಲ್ಲಿ ಇನ್ನೂ ಒಂದು ಗಮನಿಸಬೇಕಾದ ವಿಶೇಷಾಂಶವಿದೆ…ಈ ಮಾತನ್ನು ವ್ಯಾಸರು ನುಡಿಸಿರುವುದು ವಿದುರನ ಮೂಲಕ…ವಿದ್ಯೆಯಲ್ಲಿ ರತಿ ಉಳ್ಳವನಾದ್ದರಿಂದಲೇನೆ ವಿದುರನಿಗೆ ವಿದುರನೆಂದು ಹೆಸರು ಎನ್ನುವುದಾಗಿ ಆಚಾರ್ಯರು ತಿಳಿಸಿರುವರು…ವಿದ್ಯೆಯಲ್ಲಿ ನಿರಂತರ ರತಿ ಪಡೆದು ಅದರ ಸಿದ್ಧಿ ಪಡೆದವವನಿಂದಲೆ ವಿದ್ಯೆಯ ಶತ್ರುಗಳ ಪರಿಚಯ ಮಾಡಿಸಿರುವುದು ಅತ್ಯಂತ ಸಮಂಜಸವಾಗಿದೆ…
ಗುರುವಿನ ಆಯ್ಕೆಮನುಜ ದೇಹಕೆ ಬಂದಾದ ಮೇಲೆ ತಾನೊಂದು ಗತಿ ಕಾಣದಿರೆ ಚಂದನದ ಕೊರಡನು ಸುಟ್ಟು ,ಅದರ ಬೂದಿಯನು ಮೈಗೆಲ್ಲಾ ಪೂಸಿಕೊಂಡಂತಾಗುವುದು. ಹಾಗಾಗಿ ಮನುಜ ಜನ್ಮಕ್ಕೆ ಬಂದ ಬಳಿಕ ಘನ ಗುರುವರನನು ಸೇರಿ ಪುನಃ ಜನ್ಮಕ್ಕೆ ಬಾರದಂತಾದರೆ ಅದೇ ಸಾರ್ಥಕ.

ಆದರೆ ಗುರುನನ್ನು ಹೊಂದುವಾಗ ಜಾಣ್ಮೆ ಬೇಕು. ಆತ್ಮಜ್ಞಾನ ಬಲ್ಲಂತ ಗುರುವನೇ ಹುಡುಕಿ ಹಿಡಿಯಬೇಕು. ಬುದ್ಧಿಯಿಲ್ಲದ ಗುರುವನ್ನು ಹೊಂದಲು ಈರ್ವರೂ ಬುದ್ಧಿಶೂನ್ಯರಾಗಿ, ಬದ್ಧಜೀವನ ನಡೆಸಿ ಕೊನೆಗೆ ಯಮನಾಳುಗಳ ಕೈವಶವಾಗಿ ನರಕದ ಪಾಲಾಗುವರು.
ಅಂಧಕನ ಕೈಹಿಡಿದು ನಡೆವ ಅಂಧಕನೂ ಎಡವಿ ಬೀಳುವ ಪರಿಯಂತೆ, ಆತ್ಮಜ್ಞಾನವಿಲ್ಲದ ಗುರುವು ಒಬ್ಬ ಅಂಧಕ. ಆತನ ಕೈಹಿಡಿದ ಬದ್ಧಜೀವಿ, ಅಜ್ಞಾನವುಳ್ಳ ಶಿಷ್ಯನು ಮತ್ತೊಬ್ಬ ಅಂಧಕ. ಇಬ್ಬರೂ ಗತಿ ಕಾಣದೆ ನರಕಕೂಪಕೆ ಬೀಳ್ವರು.
ತಿಳಿದಂತವರು, ಮತಿಯುಳ್ಳವರು ಇಂಥಾ ಗುರುಗಳನ್ನು ಎಂದಿಗೂ ಸೇರಬಾರದು,ಹೊಂದಬಾರದು. ತನ್ನನ್ನೇ ತಾ ತಿಳಿಯದ ಗುರುವು ಶಿಷ್ಯನಿಗೆ ದಾರಿ, ಮಾರ್ಗ ತೋರ್ವದೆಂತು? ಆಲೋಚಿಸಬೇಕು.
ಜಾರಣ ಮಾರಣ ಬೋಧಿಪ ಗುರುವು, ಕಾಮಧೇನು ಕಲ್ಪವೃಕ್ಷ ತಂದು ಕೊಡುವೆನೆಂಬ ಗುರುವು, ಇಷ್ಟಾರ್ಥ ಸಿದ್ಧಿಗಾಗಿ ಯಜ್ಞ ಯಾಗ ಮಾಡಿಸಿ ಹಣ ಸೆಳೆವ ಗುರುವು, ಸಂಸಾರ ಭೋಗ ವೃದ್ಧಿಸುವ ಗುರುವು,ಐಸಿರಿ, ಐಭೋಗ ಕೊಡುವೆನೆಂದು ಆಶೆ ಹುಟ್ಟಿಸುವ ಗುರುವು, ನಿಧಿ ಅಗಿದು ತಂದು ಕೊಡುವೆ ಎಂಬ ಗುರುವು. ಗುರುಬೋಧ ಕೊಡುವೆ ಎಂದು ಮನೆಯಲಿ ಜಾಂಡವೂರಿ ಮಡದಿ ಹೊತ್ತೊಯ್ಯುವ ನಾಪತ್ತೆಗುರುವು ಇವರೆಲ್ಲಾ ಮೋಸ , ವಂಚನೆ ಎಸಗುವ ಗುರುಗಳೇ ಸೈ. ಇವರು ನರಕದ್ವಾರವನು ತೋರಿಸುವ ಗುರುವೇ ವಿನಃ ಮೋಕ್ಷ ಗತಿ ತೋರುವ ಗುರುಗಳಲ್ಲ. ಕೇವಲ ಕೈವಲ್ಯ ಪಡೆವ ಅಪೇಕ್ಷೆಯುಳ್ಳ ಮುಮುಕ್ಷುಗಳು ಆತ್ಮಜ್ಞಾನ ಬೋಧಿಪ ಗುರುವರೇಣ್ಯರನನು ಹೊಂದುವುದು ಸೂಕ್ತ. ಉಳಿದವರ ಬಗ್ಗೆ ಬಹು ಎಚ್ಚರವಾಗಿರಬೇಕು.

ಸದ್ಗುರುಗಳ ಕಾರ್ಯಕೌಶಲ್ಯ
ಸದ್ಗುರುಗಳ ಕಾರ್ಯಕೌಶಲ್ಯ ಯಾವುದು ? ಕನ್ನಡಿಯ ಮೇಲೆ ಧೂಳು ಬಿದ್ದಿರುತ್ತದೆ . ಸದ್ಗುರುಗಳು ಅದನ್ನು ಸ್ವಚ್ಛಗೊಳಿಸಲು ಹೇಳುತ್ತಾರೆ . ನಾವು ಎಲ್ಲಿ ತಪ್ಪುತ್ತೆವೆಂಬುದನ್ನೇ ಸದ್ಗುರುಗಳು ನಮಗೆ ಹೇಳುತ್ತಾರೆ . ಸದ್ಗುರುಗಳು ನಮಗೆ ಮಾರ್ಗ ತೋರಿಸುತ್ತಾರೆ . ಸ್ವಪ್ನದಲ್ಲಿ , ತಾನು ಕೆರೆಯಲ್ಲಿ ಬಿದ್ದಿರುವನೆಂದು ಒದರುತ್ತಿದ್ದನು , ಆದರೆ ಅವನೇ ಎಚ್ಚರವಾದ ಮೇಲೆ ಒದರುವದನ್ನು ನಿಲ್ಲಿಸಿದನು . ಸದ್ಗುರುಗಳು ಎಚ್ಚರಗೊಳಿಸುವ ಕೆಲಸ ಮಾಡುತ್ತಾರೆ . ನನಗೆ ಮಾಡುವದೇನೂ ಉಳಿಯಲಿಲ್ಲವೆಂದು ಯಾರು ಅನ್ನುತ್ತಾರೋ , ಅವರೇ ನಿಜವಾಗಿಯೂ ಸದ್ಗುರುಗಳನ್ನು ಹೊಂದಿದವರೆಂದು ತಿಳಿಯಬೇಕು . ಅನುಕೂಲ ಪರಿಸ್ಥಿತಿ ಇರುವ ಮನುಷ್ಯನು , ” ನಾನು ಸುಖವಾಗಿರುವೆ ” ಅನ್ನುತ್ತಾನೆ , ಆದರೆ ಅದೇನೂ ನಿಜವಲ್ಲ . ಮನಸ್ಸು ಎಲ್ಲಿಯವರೆಗೆ ಅಸ್ಪಸ್ಥವಾಗಿರುವದೋ ಅಲ್ಲಿಯವರೆಗೆ ಸ್ವಸ್ಥನಿರುವನೆಂದು ಹೇಳಲಾಗುವದಿಲ್ಲ .

ಶಿಷ್ಯನ ಭಾವನೆಯೆ ಗುರುವಿಗೆ ಗುರುಪದವನ್ನು ಕೊಡುತ್ತದೆ . ಯಾರು ಶರಣು ಹೋಗುತ್ತಾರೋ ಅವರ ಕಾರ್ಯಭಾರವನ್ನು ಸದ್ಗುರುಗಳು ಹೊತ್ತುಕೊಳ್ಳುತ್ತಾರೆ . ಯಾರ ದೃಷ್ಟಿಯು ರಾಮರೂಪವಾಗಿರುತ್ತದೆಯೋ ಅವನೆ ನಿಜವಾದ ಗುರು , ಯಾವದು ಚಿರಕಾಲ ಉಳಿಯುತ್ತದೆಯೋ ಅದೇ ಗುರುಪದವೆಂದು ತಿಳಿಯಬೇಕು . ನಿಜವಾಗಿಯೂ ಸದ್ಗುರುಗಳೆಂದರೆ ಮೂರ್ತಿಮಂತ ನಾಮವೇ ಆಗಿರುತ್ತಾರೆ . ಗುರುಗಳು ಹೇಳಿದ್ದನ್ನು ಅಕ್ಷರಶಃ ಪಾಲಿಸುವದೇ ನಿಜವಾದ ಸಾಧನೆಯಾಗಿರುತ್ತದೆ . ಸತ್ಪುರುಷರು ದೇಹದಿಂದ ಯಾರಿಗೂ ನಿರಂತರ ಲಭಿಸುವುದಿಲ್ಲ , ಸತ್ಪುರುಷರಿಗೆ ಭಗವಂತನ ಧ್ಯಾನವು ಅತ್ಯಂತ ಮಹತ್ವದ ವಿಷಯವಾಗಿರುತ್ತದೆ . ಬಹಳಷ್ಟು ಜನರಿಗೆ ಸಂತರ ಭೇಟಿಯಾಗುತ್ತದೆ , ಆದರೆ ಸತ್ಸಂಗತಿಯ ಮಹತ್ವ ತಿಳಿಯದೇ ಇರುವುದರಿಂದ ಅವರಿಂದಾಗಬೇಕಾದ ಲಾಭವು ಆ ಜನರಿಗೆ ಆಗುವದಿಲ್ಲ . ನಮ್ಮ ಪಾಲಿಗೆ ಬಂದ ಕರ್ತವ್ಯಗಳನ್ನು ನಾವು ಸರಿಯಾಗಿ ಮಾಡಬೇಕು , ವ್ಯಾಪಾರವನ್ನು ಅಲ್ಪಪ್ರಮಾಣದಲ್ಲಿ ಮಾಡುತ್ತಾ ಹೋದರೂ ಮುಂದೆ ಅದು ಬೆಳೆಯುತ್ತದೆ . ಅದರಂತೆ ಕರ್ತವ್ಯವನ್ನು ಮಾಡುತ್ತಾ ಹೋದಂತೆ ಫಲಾಪೇಕ್ಷೆಯು ತಾನಾಗಿಯೇ ಕಡಿಮೆಯಾಗುತ್ತಾ ಹೋಗುತ್ತದೆ . ನಮ್ಮ ಕರ್ತವ್ಯ ಏನು ಇರುತ್ತದೆಂಬುದನ್ನು ಸದ್ಗುರುಗಳು ನಮಗೆ ತೋರಿಸಿ ಕೊಡುತ್ತಾರೆ .
ರಥ ಇರುತ್ತದೇನೋ ನಿಜ , ಆದರೆ ಅದಕ್ಕೆ ಸಾರಥಿ ಅಂದರೆ ನಡೆಸುವವನು ಇಲ್ಲದಿದ್ದರೆ ರಥವು ಎಲ್ಲಿಗಾದರೂ ಹೋಗಿಬಿಡುತ್ತದೆ . “ಗಾಡಿ ನನ್ನದು ಇರುತ್ತದೆ ” ಎಂದು ಕೇವಲ ಅನ್ನುವದರಿಂದ ಯಜಮಾನನಿಗೆ ಅದನ್ನು ನಡೆಸಲು ಬರುವದಿಲ್ಲ . ಸಾಮಾನ್ಯ ಎತ್ತಿನ ಗಾಡಿಯನ್ನು ಕೂಡ ನಡೆಸಲು ಬರುವುದಿಲ್ಲ . ಮನುಷ್ಯನು ತನ್ನ ದೇಹವನ್ನು ತನ್ನ ಮನಸ್ಸಿನಂತೆ ನಡೆಸುತ್ತಾನೆ ಹಾಗೂ ತಗ್ಗಿನಲ್ಲಿ ಬೀಳುತ್ತಾನೆ . ಸದ್ಗುರುಗಳು ಆ ಗಾಡಿ ನಡೆಸುವವನ ಕಾರ್ಯ ಮಾಡುತ್ತಾರೆ ಹಾಗೂ ನಮ್ಮ ದೇಹರೂಪಿ ಗಾಡಿಯನ್ನು ಯೋಗ್ಯದಿಶೆಯಲ್ಲಿ ತಗೆದುಕೊಂಡು ಹೋಗುತ್ತಾರೆ . ನಾವು ಯಾವಾಗಲೂ ಭಗವಂತನ ಅನುಸಂಧಾನದಲ್ಲಿ ಮಗ್ನರಾಗಿರಬೇಕು ಹಾಗೂ ಗಾಡಿನಡೆಸುವವನ ಮೇಲೆ ವಿಶ್ವಾಸವಿಟ್ಟು , ಸ್ವಸ್ಥಚಿತ್ತರಾಗಿರಬೇಕು . ಆಗ ನಮಗೆ ಯಾವದೇ ಅಪಾಯ ಸಂಭವಿಸುವದಿಲ್ಲ . ನಮ್ಮ ಪ್ರಾರಬ್ದಕ್ಕನುಸಾರ ಎಷ್ಟು ಸಿಗಬೇಕೊ ಅಷ್ಟೇ ಸಿಗುತ್ತದೆಂಬ ವೃತ್ತಿ ನಿರ್ಮಾಣವಾಯಿತೆಂದರೆ ನಮ್ಮ ಅಪೇಕ್ಷೆಯು ಕಡಿಮೆಯಾಗುತ್ತದೆ . ಮನಸ್ಸಿನ ಈ ವೃತ್ತಿಯು ಉಂಟಾಯಿತೆಂದರೆ ಆದದ್ದೆಲ್ಲವೂ ಭಗವಂತನ ಇಚ್ಛೆಯಿಂದಲೇ ಆಯಿತೆಂದು ನಮಗೆ ಅನಿಸತೊಡಗುತ್ತದೆ . ಈ ರೀತಿ ಅನಿಸತೊಡಗಿತೆಂದರೆ ಸಮಾಧಾನವು ತಾನಾಗಿಯೇ ನಡೆದುಕೊಂಡು ಬರುತ್ತದೆ . ಆದರೆ ಇದೆಲ್ಲವೂ ಆಗುವದಕ್ಕಾಗಿ ನಮ್ಮ ಅಂತಃಕರಣದ ಶುದ್ಧತೆಯೇ ತಳಹದಿಯಾಗಿರುತ್ತದೆ .

ಗುರುವಿನ ಕೃಪಾಕಟಾಕ್ಷದಿಂದ ಮತ್ತು ದಿವ್ಯಸಾನ್ನಿಧ್ಯದಿಂದ ಶಿಷ್ಯರೂ ಗುರುಗಳಾಗಲು ಸಾಧ್ಯ . ಸ್ಪರ್ಶ ಮಣಿ ಎಂದೂ ಕಬ್ಬಿಣವಾಗುವುದಿಲ್ಲ . ಆದರೆ ಸ್ಪರ್ಶಮಣಿಯ ಸ್ಪರ್ಶದಿಂದ ಕಬ್ಬಿಣ ಮಾತ್ರ ಬಂಗಾರವಾಗಲು ಸಾಧ್ಯ . ಆದರೆ ಕಬ್ಬಿಣ ಸ್ಪರ್ಶಮಣಿಯಾಗುವುದು ಸಾಧ್ಯವೇ? ಎಂದೆಂದಿಗೂ ಇಲ್ಲ. ಗುರುವಿನ ಅನುಗ್ರಹ ಶಿಷ್ಯನ ಮೇಲಾದರೆ ಆತನು ಗುರುನಾಥನಾಗಲು ಸಾಧ್ಯ . ಆದ್ದರಿಂದಲೇ ಸ್ಪರ್ಶಮಣಿಗಿಂತಲೂ ಗುರುವು ಶ್ರೇಷ್ಠನು .ಅದೇ ರೀತಿ ಗುರುವು ಶಿಷ್ಯನಿಗೆ ಬೋಧನೆ ಮಾಡಿದ ನಂತರ ಆ ಶಿಷ್ಯನು ಗುರುವಾಗಿ ಆ ಪರಂಪರೆ ಬೆಳಗಬೇಕು.
ಗುರು-ಹೇಗಿರಬೇಕು ?
ಗುರುವೇ ಸಾಕ್ಷಾತ್ ಹರಿಯಾಗಿರುವನು ಎಂದು ವೇದವೇ ಹೇಳಿದೆ. ಇಂತಹ ಶ್ರೀ ಗುರುವನ್ನು ಯಾರು ಸಾಧಾರಣ ಮಾನವನೋಪಾದಿಯಲ್ಲಿ ಸ್ಮರಿಸುವನೋ ಅವನ ಸುಕೃತಗಳು ವಿನಾಶಗೊಳ್ಳುತ್ತದೆ. ಗುರುವನ್ನು ಭಗವತ್ಸ್ವರೂಪವೆಂದು ತಿಳಿಯಬೇಕು. ಗುರುವಿನ ಬಗ್ಗೆ ತಿರಸ್ಕಾರ ಸಲ್ಲದು. ಗುರುವೇ ಸರ್ವ ದೇವತಾಸ್ವರೂಪಿಯಾಗಿರುವನು. ಗುರುವಿನಲ್ಲಿ ಮಾನವತಾ ಬುದ್ಧಿಯನ್ನು, ಮಂತ್ರದಲ್ಲಿ ಅಕ್ಷರ ಬುದ್ಧಿಯನ್ನು, ಪ್ರತಿಮೆಯನ್ನು ಶಿಲೆಯೆಂದು ಗ್ರಹಿಸುವವನು ನರಕಗಾಮಿಯಾಗುತ್ತಾನೆ.
ಗುರುಗಳಲ್ಲಿ ಎರಡು ವಿಧಗಳಿವೆ. ಯಾರು ಮೋಹಪಾಶಕ್ಕೆ ಸಿಲುಕಿ, ತಾನು, ತನ್ನದು ಎಂಬ ಭಾವನೆಯಿಂದ ಅವಿದ್ಯೆಯ ಅಂಧಕಾರದಲ್ಲಿ ಸ್ತ್ರೀಪುತ್ರಕಳತ್ರಾದಿ ವಾಸನಾವಿಷಯದಲ್ಲಿ ಮುಳುಗಿ, ಧನಾಕಾಂಕ್ಷಿಯಾಗಿರುತ್ತಾ, ಅನಂತವಾಸನಾ ಸಂಸ್ಕಾರಗಳಿಂದ ಬಂಧಿತನಾಗಿ, ಮೋಹಪಾಶವನ್ನು ಖಂಡಿಸಲು ಅಶಕ್ತನಾಗಿರುವನೋ, ಅಂಥವನು ಶಾಸ್ತ್ರಾಧ್ಯಾಯಗಳಿಂದ ಎಷ್ಟೇ ಪಾಂಡಿತ್ಯವನ್ನು ಪಡೆದವನಾದರೂ ಪರೋಕ್ಷ ಜ್ಞಾನ ಅವನಿಂದ ಸಿಗಲಾರದು. ನಿತ್ಯವಲ್ಲದ ಈ ದೇಹದಲ್ಲಿ ನಾನು, ನನ್ನದು ಎಂಬ ಭಾವನೆ ಯಾರಿಗೆ ಇರಲಾರದೋ, ಯಾವ ಗುರುಶಕ್ತಿಯ ಸಾಧನದಿಂದ ಆತ್ಮತತ್ವ ಸಂಪನ್ನನಾಗಿರುವನೋ ಆ ಗುರುವಿಗೂ ಈಶ್ವರನಿಗೂ ವಸ್ತುತ: ಭೇದವಿರಲಾರದು.
ಚಕ್ಕಡಿ(ಬಂಡಿ)ಗೆ ಎತ್ತುಗಳು ಎಷ್ಟು ಮುಖ್ಯವೋ, ಹಾಗೆಯೇ ಚಕ್ಕಡಿ ಓಡಿಸುವ ವ್ಯಕ್ತಿಯು ಬಹುಮುಖ್ಯ. ದೈವಾನುಗ್ರಹ ಎಷ್ಟೇ ಇರಲಿ, ಜತೆಗೆ ಗುರುಗಳ ಕರುಣಾಪೂರಿತ ಕಾರುಣ್ಯ ಇರಲೇ ಬೇಕು. ಹರ ಮುನಿದರೆ ಗುರು ಕಾಯ್ವ, ಗುರು ಮುನಿದರೆ ಕಾಯುವರಾರೋ ಎಂಬ ಮಾತಿದೆ.
ಗುರುಬಲವಿದ್ದರೆ ದೈವಬಲ ತಾನಾಗಿಯೇ ಬರುತ್ತದೆ, ಇಲ್ಲವೇ ಗುರುಗಳು ಬರಿಸುತ್ತಾರೆ. ಅದಕ್ಕಾಗಿಯೇ ಯಾವುದೇ ಶುಭಕಾರ್ಯದ ಆರಂಭದಲ್ಲಿ, ವೇದ ಪಾರಾಯಣ ಮತ್ತಿತರ ಸಮಯದಲ್ಲಿ ಶ್ರೀಗುರುಭ್ಯೋ ನಮಃ ಎನ್ನುತ್ತೇವೆ. ನಂತರ ಹರಿಃ ಓಂ ಎನ್ನುತ್ತೇವೆ. ಯಾವುದೇ ಧರ್ಮವಿರಲಿ, ಮತವಿರಲಿ, ಪಂಥವಿರಲಿ ಗುರು ವಿಗೆ ಅಗ್ರಸ್ಥಾನ. ಇಂತಹ ಗುರುವನ್ನು ಸದಾ ಸ್ಮರಿಸಬೇಕು. ಅದರಲ್ಲಿಯೂ ವಿಶೇಷವಾದ ಪರ್ವಕಾಲದಲ್ಲಿ ವಿಶೇಷವಾಗಿ ಸ್ಮರಣೆ ಮಾಡಬೇಕು.
ತಾಯಿ ತನ್ನ ಮಗುವಿಗೆ ಪ್ರೇಮ ನೀಡಬಲ್ಲಳು, ತಂದೆಯಂತೆ ಶಿಕ್ಷಿಸಿ ಸರಿದಾರಿಗೆ ತರಲಾರಳು. ತಂದೆ ಶಿಸ್ತು ಕಲಿಸಿ ಬೆಳೆಸಬಹುದು, ಆದರೆ ಮಾತೃ ಪ್ರೇಮ ನೀಡಲಾರ. ಉತ್ತಮ ಗುಣ ಸಂಪನ್ನರಾದ ಗುರುಗಳು ಮಾತೆಯಂತೆ ಮಾತೃ ಹೃದಯಿಯಾಗಿ ಪ್ರೀತಿಸುವುದರ ಜತೆ, ಪಿತೃವಿನಂತೆ ದಂಡಿಸಿ ತಿದ್ದಿ ತೀಡಿ ವಿದ್ಯೆ ಕಲಿಸಬಲ್ಲರು. ಉನ್ನತವಾದ ಗುರಿ ಮುಟ್ಟಲು ಹೆಗಲಿಗೆ ಹೆಗಲಾಗುವರು. ಶಿಷ್ಯ ಸಾಧಕನಾದರೆ, ಗುರುಗಳ ಹರ್ಷಕ್ಕೆ ಮಿಗಿಲಿಲ್ಲ.
ಹಾಗಾಗಿಯೇ ಮೂರು ರೀತಿಯ ಅನುಗ್ರಹ ತೋರುವ ಗುರುಗಳಿಗಿಂತ ಅಧಿಕ ಆಪ್ತರು ಇನ್ನಾರು ಎಮಗೆ ಎನ್ನುತ್ತೇವೆ. ಅಂತಹ ಗುರುಗಳ ಹೃತ್ಕಮಲದಲ್ಲಿ ನಿಂತು ನಮ್ಮನ್ನು ಸರಿದಾರಿಯಲ್ಲಿ ನಡೆಸಿ ಸತ್ಕುಲ ಪ್ರಸೂತರನ್ನಾಗಿಸುವ ಗುರುಗಳನ್ನು ಸ್ಮರಿಸೋಣ.
ಗುರು ವಾಣಿ

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ

ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ
ಧೀರನಾಗಿ ತಾ ಪೇಳಿದರಿಲ್ಲ

ಕೊರಳೊಳು ಮಾಲೆ ಧರಿಸಿದರಿಲ್ಲ,
ಬೆರಳೊಳು ಜಪಮಣಿ ಎಣಿಸಿದರಿಲ್ಲ
ಮರುಳನಾಗಿ ಶರೀರಕೆ ಬೂದಿ
ಒರೆಸಿಕೊಂಡು ತಾ ತಿರುಗಿದರಿಲ್ಲ

ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರ ವಿಠ್ಠಲನ
ಸೇರಿಕೊಂಡು ತಾ ಪಡೆಯುವ ತನಕ

1. ಅನುಗ್ರಹ ಆಗಬೇಕು ಎಂದರೆ….”ಸದ್ಗುರುಗಳ ಅನುಗ್ರಹ ಆಗಬೇಕು ಅಂದರ ಮೂರು ಗ್ರಹ ಬಿಡಬೇಕು .ಅವು ಯಾವ್ಯಾವು ಅಂದರೆ ಮೊದಲನೇದು” ಪೂರ್ವಗ್ರಹ” ಅಂದರೆ ನನಗೆ ಎಲ್ಲಾ ಗೊತ್ತಿದೆ ಅನ್ನೋದು, ಒನ್ನೊಬ್ಬರ ಹೀಂಗ ಅಂತ ಮೊದಲ ನಿರ್ಣಯ ಮಾಡೋದು.
ಎರಡನೇದು “ಆಗ್ರಹ”. ಈ ಕೆಲಸ ಹೀಂಗ ಆಗಬೇಕು. ಇವರು ಹೀಂಗ ಇರಬೇಕು, ಅದು ಹೀಂಗ ಆಗಬೇಕು ಅನ್ನೋದು. ಮೂರನೇಯದು “ಪ್ರತಿಗ್ರಹ”.ಅದು ನನಗ ಬೇಕು, ಇದು ಬೇಕು ಅನ್ನೋದು. ಈ ಮೂರು”ಗ್ರಹ” ಬಿಟ್ಟಾಗ “ಸದ್ಗುರುಗಳ ಅನುಗ್ರಹ” ಆಗುತ್ತದೆ.
2. ಒಬ್ಬನು ಬಹಳ ಕಷ್ಟಪಟ್ಟು ಹದಿನಾಲ್ಕು ವಿದ್ಯೆಗಳನ್ನು ಅಭ್ಯಾಸಮಾಡಿದನು. ಇಷ್ಟೇ ಅಲ್ಲದೆ ಈ ಹದಿನಾಲ್ಕು ವಿದ್ಯೆಗಳನ್ನು ಕರಗತ ಮಾಡಿಕೊಂಡನು. ಒಬ್ಬನು ಬಹಳ ಕಷ್ಟದಿಂದ ಯೋಗಸಾಧನೆ ಮಾಡಿಕೊಂಡು ಅದರಿಂದ ಕೆಲ ಕಾಲದ ಮೇಲೆ ರಿದ್ಧಿ, ಸಿದ್ಧಿ ಮೊದಲಾದ ಅಷ್ಟ ಸಾಧನೆಗಳನ್ನು ಅತೀಂದ್ರಿಯ ಶಕ್ತಿಗಳನ್ನು ಪ್ರಾಪ್ತ ಮಾಡಿಕೊಂಡನು.ಆದರೂ ಸಹ ಸದ್ಗುರು ಕೃಪೆ ಆಗದ ಹೊರತು ಅವನ ಆತ್ಮ ಹಿತ ಸಾಧ್ಯವಾಗುವುದಿಲ್ಲ ಸದ್ಗುರುವು ಕೃಪೆ ಮಾಡದ ಹೊರತು ಬ್ರಹ್ಮಜ್ಞಾನವಾಗುವುದು ಸರ್ವತ್ರ ಸಾಧ್ಯವಿಲ್ಲ.

( ಆಸಕ್ತರು ಹೆಚ್ಚಿನ ಮಾಹಿತಿಗೆ ಇದೇ ಲೇಖಕರ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪ್ರಕಟಿಸಿರುವ ‘ವಂದೇ ಗುರು ಪರಂಪರಾಂ’ ಪುಸ್ತಕ ನೋಡಬಹುದು )

ಡಾ.ಗುರುರಾಜ ಪೋಶೆಟ್ಟಿಹಳ್ಳಿ ಕಿರುಪರಿಚಯ :
ವೃತ್ತಿಯಿಂದ ಮಾಧ್ಯಮ ಸಮನ್ವಯಕಾರರು ; ಪ್ರವೃತ್ತಿಯಿಂದ ಬರಹಗಾರರು , ಎರಡು ದಶಕಗಳಿಂದ ಆಧ್ಯಾತ್ಮಿಕ ಬರವಣಿಗೆಯಿಂದ ಗುರುತಿಸಿಕೊಂಡವರು, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ರೂವಾರಿ, ವಂದೇ ಗುರು ಪರಂಪರಾಂ, ಸತ್ಸಂಗ ಸಂಪದ , ದಾಸ ಪಂಥ ಹೊತ್ತಗೆಗಳು ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ. ಸದ್ಯ ಬೆಂಗಳೂರು ನಿವಾಸಿ. ಹಲವು ಸಾಂಸ್ಕøತಿಕ ಮತ್ತು ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಬಿಎಸ್‍ಡಬ್ಲ್ಯೂ ಪದವಿ ತರಗತಿಯ ಪಠ್ಯಕ್ಕೆ ಇವರು ಬರೆದ ‘ಸಂತ ಶಿಶುನಾಳ ಷರೀಫ’ ಲೇಖನ ಆಯ್ಕೆಗೊಂಡಿದೆ. ‘ಶ್ರೀ ಕೃಷ್ಣಾರ್ಪಣ’ ಇತ್ತೀಚೆಗೆ ಪ್ರಕಟಗೊಂಡ ಕೃತಿ, ಟಿಟಿಡಿಯ ಪ್ರತಿಷ್ಠಿತ ‘ಪುರಂದರಾನುಗ್ರಹ’ ಪ್ರಶಸ್ತಿ, ‘ಟಿ.ವಿ.ಕಪಾಲಿ ಶಾಸ್ತ್ರಿ’ ಪುರಸ್ಕಾರಕ್ಕೆ ಭಾಜನರು.

ಸಂಪರ್ಕ: ಡಾ.ಗುರುರಾಜ ಪೋಶೆಟ್ಟಿಹಳ್ಳಿ #307, ವಿ2 ಸ್ನೇಹ ಅಪಾರ್ಟಮೆಂಟ್ , 14ನೇ ಕ್ರಾಸ್ , ಗಿರಿನಗರ ಮೂರನೇ ಹಂತ , ಆವಲಹಳ್ಳಿ ಬಿಡಿಎ ಬಡಾವಣೆ, ಬೆಂಗಳೂರು-560085 ಮೋ : 97393 69621 padmapranava@yahoo.com

 

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಶಿಬಿರ ಸಹಕಾರಿ: ಡಾ. ಸಂಜೀವ ತಳವಾರ

ಮೂಡಲಗಿ: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಎನ್‌.ಎಸ್‌.ಎಸ್‌ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದು ರಾಣಿ...
- Advertisement -

More Articles Like This

- Advertisement -
close
error: Content is protected !!
Join WhatsApp Group