spot_img
spot_img

ಸ್ಮೃತಿ ಸ್ಪೂರ್ತಿಯಲ್ಲಿ ನಾಟ್ಯಭೂಷಣ ಏಣಗಿ ಬಾಳಪ್ಪಜ್ಜನ ನೆನಪು

Must Read

ನನ್ನ ಹಳೆಯ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲೆಂದು ಇಂದು ಬೆಳಿಗ್ಗೆ ನೋಡುತ್ತ ಕುಳಿತ ಸಂದರ್ಭದಲ್ಲಿ ೨೦೦೩ ರಲ್ಲಿ ಏಣಗಿ ಬಾಳಪ್ಪಜ್ಜನೊಡನೆ ನನ್ನ ಸಂದರ್ಶನದ ಮೇ ೨೦೦೩ ರ ಜೀವನಾಡಿ ಮಾಸಿಕದಲ್ಲಿ ಪ್ರಕಟಿತ ನನ್ನ ಬರಹ ದೊರೆಯಿತು., ಒಂದು ಕ್ಷಣ ಬಾಳಪ್ಪಜ್ಜನ ನೆನಪುಗಳು ಕಣ್ಮುಂದೆ ಮೂಡಿ ಬಂದವು. ನಂತರ ನಾನು ಬಾಳಪ್ಪಜ್ಜನ ಭೇಟಿ ಮಾಡಿದ್ದು ಪ್ರಜಾವಾಣಿ ದಿನಪತ್ರಿಕೆಯ ಕರ್ನಾಟಕ ದರ್ಶನ ಪುರವಣಿಗೆ ಸಂದರ್ಶನ ಅದು ಬಾಳಪ್ಪಜ್ಜನಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಗೌರವಕ್ಕೆ ಪಾತ್ರರಾದ ಸಂದರ್ಭದಲ್ಲಿ(2006) ಪ್ರಜಾವಾಣಿಯ ಹುಬ್ಬಳ್ಳಿ ಕಛೇರಿಯ ಗೋಪಾಲಕೃಷ್ಣ ಹೆಗಡೆ ಅವರ ಕರೆಯ ಮೇರೆಗೆ ಏಣಗಿಯ ಅವರ ಮನೆಯಲ್ಲಿ ಸಂದರ್ಶನ ಮಾಡಿದ್ದೆ.

ಆ ಹಳೆಯ ನೆನಪಿನೊಂದಿಗೆ ಅವರ ನಿಧನದ ನಂತರ ಏಣಗಿಗೆ ಭೇಟಿ ನೀಡಿದ ನೆನಪುಗಳನ್ನು ಸೇರಿಸಿ ಈ ಬರಹ ಸಿದ್ದಪಡಿಸಿರುವೆ.ನಾನು ಏಣಗಿಗೆ ಹೋದಾಗ ಅವರ ಮಗ ಅರವಿಂದ ಅವರು ಪ್ರೀತಿಯಿಂದ ಬರಮಾಡಿಕೊಂಡು ಅವರು ಸ್ಮೃತಿ ಸ್ಪೂರ್ತಿಯ ಮನೆಯಲ್ಲಿ ನನಗೆ ತಮ್ಮ ತಂದೆಯ ಸ್ಮರಣಿಕೆಗಳನ್ನು ಯಾವ ರೀತಿ ಜತನದಿಂದ ಕಾಪಾಡಿಕೊಂಡು ಬರುತ್ತಿದ್ದೇವೆ ಎಂಬ ರೀತಿಯನ್ನು ತೋರಿಸಿದರು.

ಇದೊಂದು ಮರೆಯಲಾಗದ ಅನುಭೂತಿ. ನಾನು ಕುವೆಂಪು, ಕಾರಂತ, ಬೇಂದ್ರೆಯಜ್ಜನ ಕವಿಮನೆಗಳನ್ನು ನೋಡಿರುವೆ. ಜೊತೆಗೆ ಪೂರ್ಣಚಂದ್ರ ತೇಜಸ್ವಿಯವರ ಮನೆಗೂ ಹೋಗಿ ಬಂದಿರುವೆ. ರಂಗಭೂಮಿಯ ಏಣಗಿ ಬಾಳಪ್ಪಜ್ಜನ ಜೊತೆಗೆ ಮಾತನಾಡಿರುವೆ.ಅವರ ಹತ್ತಿರದ ಒಡನಾಟ ಮರೆಯಲಾಗದ್ದು.

ರಂಗಭೂಮಿಯು ವಿನಾಶದತ್ತ ಸಾಗುತ್ತಿರುವಾಗ ಅವರ ಮಕ್ಕಳು ಅವರ ಮನೆಯಲ್ಲಿಯೇ ಸ್ಮೃತಿ ಸ್ಪೂರ್ತಿ ಎಂಬ ಹೆಸರಿನ ಕೊಠಡಿಯಲ್ಲಿ ಬಾಳಪ್ಪಜ್ಜನ ನೆನಪನ್ನು ಚಿರಸ್ಥಾಯಿಯಾಗಿರಿಸಿದ್ದಾರೆ.

ಸವದತ್ತಿ ತಾಲೂಕಿನ ಪುಟ್ಟ ಗ್ರಾಮ ಏಣಗಿ. ಸವದತ್ತಿಯಿಂದ ೨೦ ಕಿ.ಮೀ.ಕರೀಕಟ್ಟಿ, ಸುತಗಟ್ಟಿ ಗ್ರಾಮಗಳ ಮೂಲಕ ಏಣಗಿ ತಲುಪಬಹುದು.ಮಲಪ್ರಭಾ ನದಿಯ ದಡದಲ್ಲಿ ಈ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಅದರ ಎದುರಿಗೆ ದೇವಾಲಯ ದೇವಾಲಯದ ಮುಂದೆ ಏಣಗಿ ಬಾಳಪ್ಪನವರ ಮನೆ.

೧೮-೮-೨೦೧೭ ರಂದು ನಿಧನರಾದ ಏಣಗಿ ಬಾಳಪ್ಪಜ್ಜನ ಮನೆಯಿರುವ ಸ್ಥಳ ಏಣಗಿ ಗ್ರಾಮ. ಊರಿನ ಹೆಸರಿನಿಂದಲೇ ನಾಡಿನಾದ್ಯಂತ ಖ್ಯಾತಿ ಪಡೆದ “ನಾಟ್ಯಭೂಷಣ” ಏಣಗಿ ಬಾಳಪ್ಪನವರ ಮನೆಯನ್ನು ಅವರ ಮಕ್ಕಳು “ಸ್ಮೃತಿ ಸ್ಪೂರ್ತಿ” ಎಂಬ ಹೆಸರಿನ ಕೊಠಡಿಯೊಂದನ್ನು ಮೀಸಲಿರಿಸಿ ಅಲ್ಲಿ ಬಾಳಪ್ಪನವರ ಬದುಕಿನ ಮೇಲೆ ಬೆಳಕು ಚೆಲ್ಲುವ ಸ್ಮೃತಿಗಳನ್ನು ಜೋಡಿಸಿಟ್ಟಿರುವರು.

ಏಣಗಿ ಗ್ರಾಮಕ್ಕೆ ಬೆಳಗಾವಿಯಿಂದ ಬರುವವರು ಬೈಲಹೊಂಗಲ ಮಾರ್ಗವಾಗಿ ಬೆಳವಡಿಗೆ ಬಂದು ಉಡಿಕೇರಿ ತಲುಪಿ ಮೂಗಬಸವ ಮೂಲಕ ಏಣಗಿ ಧಾರವಾಡದಿಂದ ಬರುವವರು ಕೂಡ ಸವದತ್ತಿ ಅಥವ ಬೆಳವಡಿ ಮೂಲಕ ಏಣಗಿ ತಲುಪಬಹುದು.

ದೇಹವೆಂದರೆ ಓ ಮನುಜ

ಮೂಳೆ ಮಾಂಸಗಳ ತಡಿಕೆ ನಿಜ….

ಜನುಮದ ಜೋಡಿ ಚಿತ್ರದ ಈ ಹಾಡು ನೋಡಿದವರಿಗೆ ಬಿಳಿ ದೋತರ ಅಂಗಿ ಕೈಯಲ್ಲಿ ಗೆಜ್ಜೆ ನಿನಾದದೊಂದಿಗೆ ಹಾಡುತ್ತ ಶಿವರಾಜಕುಮಾರ್‌ಗೆ ಬದುಕಿನ ಪಾಠ ಹೇಳುವ ವ್ಯಕ್ತಿ ಇಡೀ ಚಿತ್ರವನ್ನೇ ಆವರಿಸಿತ್ತು. ಅವರನ್ನು ಆ ಚಿತ್ರದಲ್ಲಿ ಎಂದೂ ಮರೆಯಲಾಗದು.

ಬದುಕು

ಅಂತಹ ವ್ಯಕ್ತಿ ಏಣಗಿ ಬಾಳಪ್ಪ. ಸವದತ್ತಿ ತಾಲೂಕಿನ ಪುಟ್ಟ ಹಳ್ಳಿ ಏಣಗಿ. ಕರ್ನಾಟಕ ವೃತ್ತಿ ರಂಗಭೂಮಿ ಚರಿತ್ರೆಯಲ್ಲಿ ಏಣಗಿ ಬಾಳಪ್ಪನವರದು ದೊಡ್ಡ ಹೆಸರು. ಅದು ಇಪ್ಪತ್ತನೆಯ ಶತಮಾನದ ಮೂರನೆಯ ದಶಕ. ಆಗೆಲ್ಲ ನಮ್ಮ ಹಳ್ಳಿಗಳಲ್ಲಿ ಆಟ ಬಯಲಾಟಗಳು ನಡೆಯುತ್ತಿದ್ದು ಸಾಮಾನ್ಯ. ಇದಕ್ಕೆ ಏಣಗಿ ಗ್ರಾಮವೂ ಹೊರತಾಗಿರಲಿಲ್ಲ. ಊರಲ್ಲಿ ನಡೆಯುತ್ತಿದ್ದ ದೊಡ್ಡಾಟ ಸಣ್ಣಾಟ ತಾಲೀಮಿನ ನಿರಂತರ ನೋಟ ಈ ಬಾಳಪ್ಪನಲ್ಲಿ ಅಭಿನಯದ ಅರಿವನ್ನು ಮೂಡಿಸುವಲ್ಲಿ ಪ್ರಭಾವ ಬೀರಿತು. ಸವದತ್ತಿ ತಾಲೂಕಿನ ಏಣಗಿಯ ಲೋಕೂರ ಕರಿಬಸಮ್ಮ-ಬಾಳಮ್ಮ ಎಂಬ ದಂಪತಿಗಳ ಮಗನಾಗಿ ಬಾಳಪ್ಪ ಹುಟ್ಟಿದ್ದು ೧೯೧೪ ರಲ್ಲಿ. ಓದಿದ್ದು ನಾಲ್ಕನೆಯ ತರಗತಿಯವರೆಗೆ ಮಾತ್ರ.

ಮೂರು ವರ್ಷದವರಿದ್ದಾಗ ಇವರ ತಂದೆಯ ನಿಧನ ಜೀವನ ನೌಕೆಗೊಂದು ದೊಡ್ಡ ಪೆಟ್ಟಾಯಿತು. ನಾಟಕ ಹಾಡುಗಾರಿಕೆಯ ಗೀಳು ಹೆಚ್ಚಾಗಿದ್ದ ಇವರಿಗೆ ಸಹೋದರ ಬಸವಂತಪ್ಪ ಎಲ್ಲ ದೃಷ್ಟಿಯಿಂದಲೂ ಪ್ರೋತ್ಸಾಹಿಸಿದರು. ತಾಯಿ ಆಸರೆಯಾದರು. ಹೀಗಾಗಿ ಗ್ರಾಮದಲ್ಲಿ ಜಾತ್ರೆ ಹಬ್ಬ ಹರಿದಿನಗಳಂದು ಜರಗುವ ನಾಟಕಗಳಲ್ಲಿ ಬಾಳಪ್ಪನವರ ಪಾತ್ರವಿರುವುದು ಸಹಜವಾಯಿತು.

ರಂಗಭೂಮಿಯ ನೆನಪುಗಳು

ಸ್ವಾತಂತ್ರ್ಯಪೂರ್ವದಲ್ಲಿ “ರಂಗನಟ”ರಾಗಿ ಗುರುತಿಸಿಕೊಂಡ ಬಾಳಪ್ಪನವರನ್ನು ಎರಡು ಸಲ ಸಂದರ್ಶನ ಮಾಡುವ ಭಾಗ್ಯ ನನಗೆ ಸಿಕ್ಕಿದ್ದು ನನ್ನ ಪುಣ್ಯವೆಂದೇ ಹೇಳಬೇಕು. ೮ ನೇ ವರ್ಷಕ್ಕೆ ರಂಗ ಪ್ರವೇಶಿಸಿದ ಕಲಾವಿದನ ಚಟುವಟಿಕೆಗೆ  ಆಗ ಚಿಕ್ಕೋಡಿ ಶಿವಲಿಂಗಸ್ವಾಮಿಗಳು ತಮ್ಮ ನಾಟಕಗಳಿಂದ ಅಭಿನಯದಿಂದ ಜನಪ್ರೀತಿ ಗಳಿಸಿದ್ದರು.ನಟ, ನಾಟಕಕಾರ, ನಾಟ್ಯಾಚಾರ‍್ಯ,ಮಂಡಳಿಯ ಒಡೆಯರೆನಿಸಿದ್ದ ಶಿವಲಿಂಗಸ್ವಾಮಿಗಳ ಶಿಷ್ಯತ್ವ ಸಂಪಾದಿಸಿ ಬಾಳಪ್ಪ ಅವರ ಗರಡಿಯನ್ನು ಸೇರಿದ್ದು ೧೯೨೮ ರಲ್ಲಿ.ಅದೇ ಸಂದರ್ಭ ಅನಿರೀಕ್ಷಿತ ಘಟನೆ ಬಾಳಪ್ಪನವರ ಬದುಕಿಗೆ ತಿರುವು ನೀಡಿತು.

ಒಂದು ದಿನ ಗಣಪತಿಯ ಪಾತ್ರದಾರಿಯೊಬ್ಬ ನಾಟಕ ಸಂದರ್ಭ ಗೈರು ಹಾಜರಾದ ಗಳಿಗೆ ಇವರಿಗೆ ಆ ಅವಕಾಶ ದೊರೆಯಿತು. ಆ ಸಂದರ್ಭ ಬಳಸಿಕೊಂಡ ಬಾಳಪ್ಪನವರು ಮುಂಬರುವ ದಿನಗಳಲ್ಲಿ ಓರ್ವ ಖ್ಯಾತ ಕಲಾವಿದನಾಗುವ ಭರವಸೆ ಮೂಡಿಸಿಬಿಟ್ಟರು. ಮುಂದೆ ಶಿವಲಿಂಗಸ್ವಾಮಿಗಳ ಒಡನಾಟ ಅವರನ್ನು ಹೆಚ್ಚು ಹೆಚ್ಚು ನಾಟಕಗಳಲ್ಲಿ ಅಭಿನಯಿಸುವಂತೆ ಮಾಡಿದ್ದು ಈಗ ಇತಿಹಾಸ.

ತಮ್ಮ ೨೫ ನೆಯ ವಯಸ್ಸಿನಲ್ಲಿ “ಕಲಾವೈಭವ ನಾಟ್ಯ ಸಂಘ ಬೆಳಗಾವಿ” ಹೆಸರಿನಲ್ಲಿ ನಾಟಕ ಕಂಪನಿ ಸ್ಥಾಪನೆ ಮಾಡಿದರು. ಒಳ್ಳೆಯ ಸಂಗೀತಗಾರರೂ ಆಗಿದ್ದ ಇವರು ಗವಾಯಿಗಳ ಮೂಲಕ ಹೆಚ್ಚಿನ ಸಂಗೀತಾಭ್ಯಾಸ ಕೂಡ ಮಾಡಿದ್ದರು. ೧೯೩೦ ರಿಂದ ೧೯೮೩ ರ ವರೆಗೆ ಸುಮಾರು ೫೦ ವರ್ಷಕ್ಕೂ ಹೆಚ್ಚುಕಾಲ ಕರ್ನಾಟಕ-ಮಹಾರಾಷ್ಟ್ರದಲ್ಲಿ ಇವರ ನೂರಾರು ನಾಟಕಗಳು ಪ್ರದರ್ಶಿತಗೊಂಡು ಜನಮಾನಸದಲ್ಲಿ ಗೌರವಾನ್ವಿತ ಸ್ಥಾನ ಕಲ್ಪಿಸಿಕೊಟ್ಟವು.

ಸ್ಮೃತಿ ಸ್ಪೂರ್ತಿ

ಇಂಥ ಮಹಾನುಭವರ ಮನೆಯಲ್ಲಿ ಅವರ ಸ್ಮರಣಿಕೆಗಳು, ಪಡೆದ ಪ್ರಶಸ್ತಿಗಳು,ಅವರು ಧರಿಸುತ್ತಿದ್ದ ವೇಷ ಭೂಷಣಗಳು. ಮೇಕಪ್ ಮಾಡಿಕೊಳ್ಳಲು ಬಳಸುತ್ತಿದ್ದ ಉಪಕರಣಗಳು, ನಾಟಕಕ್ಕೆ ಬೇಕಾದ ಸಂಗೀತ ಪರಿಕರಗಳು, ಏಣಗಿ ಬಾಳಪ್ಪನವರು ಓದುತ್ತಿದ್ದ ಮತ್ತು ಇಷ್ಟಪಟ್ಟಿದ್ದ ಪುಸ್ತಕಗಳು, ಅವರ ಕುರಿತಾಗಿ ಪತ್ರಿಕೆಗಳಲ್ಲಿ ಪ್ರಕಟವಾದ ಬರಹಗಳಿಂದ ಹಿಡಿದು ಮುದ್ರಣಗೊಂಡ ಪುಸ್ತಕಗಳ ಸಂಗ್ರಹ ಒಂದೇ ಎರಡೇ ಎಲ್ಲವನ್ನು ಅವರ ಮಕ್ಕಳು ಊರಲ್ಲಿ ಸಂಗ್ರಹಿಸುವ ಮೂಲಕ “ಸ್ಮೃತಿ ಸ್ಪೂರ್ತಿ”ಯನ್ನು ತಂದೆಯ ನೆನಪಿನ ಪುಟಗಳನ್ನು ಒಂದೆಡೆ ದಾಖಲಿಸುವ ಪ್ರಯತ್ನ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಮತ್ತು ಸ್ಮರಣೀಯ.

ಇಲ್ಲಿ ಭೇಟಿ ಕೊಟ್ಟವರು ತಮ್ಮ ಹಸ್ತಾಕ್ಷರದ ಮೂಲಕ ತಮ್ಮ ನೆನಪುಗಳನ್ನು ದಾಖಲಿಸಲು ಕೂಡ ಪುಸ್ತಕವನ್ನು ಇಟ್ಟಿರುವರು. ನಾಡಿನ ಖ್ಯಾತ ಕಲಾವಿದರೊಂದಿಗೆ ಸಾಹಿತಿಗಳು ಬರಹಗಾರರು ಕಲಾವಿದರು ಎಲ್ಲ ವಿಧದ ಜನ ಇಲ್ಲಿಗೆ ಬೇಟಿ ನೀಡಿ ಹೋಗಿರುವುದು ಈ ಪುಸ್ತಕದಲ್ಲಿ ಅವರು ದಾಖಲಿಸಿದ ವಿವರಗಳ ಮೂಲಕ ತಿಳಿಯುವುದು.

ಮರೆಯಲಾಗದ ಪಾತ್ರಗಳು

ಏಣಗಿ ಬಾಳಪ್ಪನವರ ಅಭಿನಯದ ವಿಶೇಷತೆಯೆಂದರೆ ಸ್ತ್ರೀ ಪಾತ್ರಗಳು ಮತ್ತು ಬಸವಣ್ಣವರ ಪಾತ್ರ. ಬಹಳಷ್ಟು ನಾಟಕಗಳಲ್ಲಿ ಇವರದು ಸ್ತ್ರೀ ಪಾತ್ರ. ಅವುಗಳೆಂದರೆ ಹೇಮರಡ್ಡಿ ಮಲ್ಲಮ್ಮ, ವೀರರಾಣಿ ಕಿತ್ತೂರ ಚನ್ನಮ್ಮ, ರಾಣಿ ರುದ್ರಮ್ಮ, ಚಲೇಜಾವ್, ಸ್ತ್ರೀ ಮುಂತಾದ ನಾಟಕಗಳಲ್ಲಿ ಅವರ ಸ್ತ್ರೀ ಅಭಿನಯ ಅಮೋಘ ಅನನ್ಯ. ಅವರ ಬಸವೇಶ್ವರರ ಪಾತ್ರವಂತೂ ಅಪಾರ ಖ್ಯಾತಿ ಗಳಿಸಿತು.

”ಮಾವ ಬಂದ್ನಪೋ ಮಾವ” ದಲ್ಲಿ ಚನ್ನಪ್ಪಗೌಡನಾಗಿ, ದೇವರ ಮಗು ನಾಟಕದಲ್ಲಿ ಕೇಶವರಾವ ಆಗಿ,ಶಾಲಾ ಮಾಸ್ತರ ನಾಟಕದಲ್ಲಿ ನೀತಿವಂತ ಶಿಕ್ಷಕನಾಗಿ,ಗೋರಾ ಕುಂಬಾರದ ಗೋರಾ,ಕುಂಕುಮದಲ್ಲಿ ಅಶ್ವಿನಿಯಾಗಿ, ಶ್ರೀ ಪದ್ಮಾವತಿ ಮಾತಾ,ಷಾಹಜಾನ್ ದ ದಾರಾ, ಗೋಪಿಚಂದ್ ದ ಗೋಪಿಚಂದನಾಗಿ,ಅತ್ತಿಗೆ ನಾಟಕದ ಗುಂಡಪ್ಪನಾಗಿ, ರಾಜಯೋಗಿ ನಾಟಕದ ಸಾಗರನಾಗಿ, ಹಳ್ಳಿ ಹುಡುಗಿಯ ಭಗವಂತನಾಗಿ ಹೀಗೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಆರು ದಶಕಗಳ ಸುದೀರ್ಘವಾದ ನಟನ ಜೀವನದಲ್ಲಿ ಪೌರಾಣಿಕೈತಿಹಾಸಿಕ, ಸಾಮಾಜಿಕ ಹೀಗೆ ಎಲ್ಲ ಬಗೆಯ ನಾಟಕಗಳಲ್ಲಿ ನಾಯಕ, ನಾಯಕಿ, ಪೋಷಕ, ಹಾಸ್ಯ, ಮೊದಲಾಗಿ ಎಲ್ಲ ರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು.

ಗೌರವರ್ಣದ ಸಾಧಾರಣ ಮೈಕಟ್ಟು ಹೊಂದಿದ್ದ ಬಾಳಪ್ಪನವರು ಗಂಗಭೂಮಿಯ ಪಾವಿತ್ರ್ಯವನ್ನು ಜೀವನದುದ್ದಕ್ಕೂ ಕಾಯ್ದುಕೊಂಡವರು. ೧೯೫೫ ರಲ್ಲಿ ಎಸ್.ಎಂ.ಜೋಶಿ ಅವರಿಂದ ಸಂಕಲನಗೊಂಡ “ಜಗಜ್ಯೋತಿ ಬಸವೇಶ್ವರ” ನಾಟಕ ಅವರ ಜೀವನದ ಮೈಲುಗಲ್ಲು. ಆ ಪಾತ್ರದ ಅವರ ಅಭಿನಯ ಭಾವುಕತೆ ಪ್ರೇಕ್ಷಕರನ್ನು ಭಕ್ತಿ ತುಂದಿಲರನ್ನಾಗಿಸಿತು. ಅಂತೆಯೇ ಅವರಿಗೆ “ನಾಟ್ಯಭೂಷಣ” ಬಿರುದು.

ಪ್ರಮುಖ ಪ್ರಶಸ್ತಿಗಳು

ಇವರ ಕಲಾಪ್ರೌಢಿಮೆಗಾಗಿ ೧೯೭೩ ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ,೧೯೭೬ ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ,೧೯೫೬ ರಲ್ಲಿ ನವಲಗುಂದ ಸ್ವಾಮಿಗಳಿಂದ “ನಾಟ್ಯಭೂಷಣ”ಪ್ರಶಸ್ತಿ,೧೯೭೦ ರಿಂದ ೧೯೯೪ ರ ಅವಧಿಗಳಲ್ಲಿ ನಾಟಕ ಅಕಾಡಮಿ ಸದಸ್ಯತ್ವ. ೧೯೯೨-೯೪ ರಲ್ಲಿ ಭಾರತ ಸರ್ಕಾರದ ದಕ್ಷಿಣವಲಯ ಭಾರತ ಸಂಸ್ಕೃತಿ ಅಕಾಡಮಿ ಸದಸ್ಯತ್ವ.

೧೯೭೯ ರಲ್ಲಿ ಹುಬ್ಬಳ್ಳಿಯ ಮೂರುಸಾವಿರಮಠದ ಜಗದ್ಗುರುಗಳಿಂದ “ನಾಟ್ಯಗಂಧರ್ವ”,ಮಹಾರಾಷ್ಟ್ರದ ಬಸವತತ್ವ ಸಮಿತಿಯ ವತಿಯಿಂದ”ಬಸವತತ್ವಭೂಷಣ” ೧೯೯೫ ರಲ್ಲಿ ಕರ್ನಾಟಕ ಸರ್ಕಾರದ ಗುಬ್ಬೀ ವೀರಣ್ಣ ಪ್ರಶಸ್ತಿ. ಹಾಗೂ ೧೯೯೫ ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ೨೦೦೫ ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ನಾಡೋಜ ಗೌರವ ಪ್ರಶಸ್ತಿ, ೨೦೦೬ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ೨೦೦೭ ರಲ್ಲಿ ಆಳ್ವಾಸ್ ನುಡಿಸಿರಿ ಗೌರವ.

೨೦೦೭ ರಲ್ಲಿ ಝೀ ಕನ್ನಡ ವಾಹಿನಿಯ ಝೀ ಗೌರವ ಪ್ರಶಸ್ತಿ, ೨೦೧೦ ರಲ್ಲಿ ನಾಗನೂರು ರುದ್ರಾಕ್ಷಿಮಠದ ಬೆಳಗಾವಿಯ ಸಮಾಜಸೇವಾ ರತ್ನ ಪ್ರಶಸ್ತಿ, ೨೦೧೧ ಬಸವ ವೇದಿಕೆ ಬೆಂಗಳೂರಿನ ಬಸವಶ್ರೀ ಪ್ರಶಸ್ತಿ,೨೦೧೨ ರಲ್ಲಿ ಕರ್ನಾಟಕ ರಂಗತಂಡಗಳ ಒಕ್ಕೂಟ ಹಾಗೂ ರಂಗ ಜಾಗೃತಿ ಪರಿಷತ್ತು ಬೆಂಗಳೂರು ಇವರಿಂದ ರಂಗಭಂಡಾರಿ ಪ್ರಶಸ್ತಿ. ೨೦೧೨ ರ ಚಂದನ ದೂರದರ್ಶನದ ಚಂದನ ಪ್ರಶಸ್ತಿ. ೨೦೧೩ ರಲ್ಲಿ ವಿಶ್ವವಿಖ್ಯಾತ ಮೈಸೂರ ದಸರಾ ಉದ್ಘಾಟನೆ ಗೌರವ.೨೦೧೪ ೨೦೧೪ ರಲ್ಲಿ ಮುನವಳ್ಳಿ ಭಂಡಾರಹಳ್ಳಿ ಶ್ರೀ ಸೋಮಶೇಖರ ಮಠದ ಮುರುಘಶ್ರೀ ಪ್ರಶಸ್ತಿ ಗೌರವ.

ತೋಂಟದಾರ್ಯ ಸಂಸ್ಥಾನಮಠ ಗದಗ ಇವರಿಂದ ಜನ್ಮಶತಮಾನೋತ್ಸವ ಸನ್ಮಾನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದವರು ಇದೇ ವರ್ಷ ೯-೩-೨೦೧೭ ರಂದು ಏಣಗಿಗೆ ಬಂದು ಅವರ ಮನೆಯಲ್ಲಿಯೇ ಬಾಳಪ್ಪನವರಿಗೆ ಡಾಕ್ಟರ್ ಆಫ್ ಫರಪಾರ್ಮಿಂಗ ಆರ್ಟ್ಸ ರಂಗಭೂಮಿ(ನಾಟಕ) ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದರು. 

ಈ ಸಂದರ್ಭ ನಾನೂ ಕೂಡ ಅಲ್ಲಿಗೆ ಹೋಗಿದ್ದೆ. ಅವರ ಮಗ ಅರವಿಂದ ತಂದೆಯ ಹೆಸರಿನಲ್ಲಿ ಮನೆಯ ಆವರಣದಲ್ಲಿ ಕಟ್ಟಿರುವ ಕಲಾವೈಭವ ಡಾ ಏಣಗಿ ಬಾಳಪ್ಪ ಸ್ಮೃತಿ ಸ್ಪೂರ್ತಿ ಹೆಸರಿನ ಬಾಳಪ್ಪನವರ ಬದುಕಿನ ಚಿತ್ರಣ ತೆರೆದಿಡುವ ಕೊಠಡಿಯಲ್ಲಿ ಕರೆದೊಯ್ದು ನನಗೆ ಮಾಹಿತಿ ನೀಡಿ ಬೀಳ್ಕೊಡುವಾಗ “ನೂರು ಬಣ್ಣ ನೂರು ಬಿಂಬ” ಏಣಗಿ ಬಾಳಪ್ಪನವರ ಅಭಿನಂದನ ಸಂಪುಟ ನನ್ನ ಕೈಗಿಟ್ಟಿದ್ದರು. ಅಜ್ಜನನ್ನು ನೆನೆಯುತ್ತ ಮರಳಿದ್ದೆ.ಇಂದು ಅವರು ನಮ್ಮೊಡನಿಲ್ಲ. ಅವರ ಸ್ಮೃತಿಗಳು ಮಾತ್ರ ನಮ್ಮೊಂದಿಗೆ ಸದಾ ಅಜರಾಮರ. ಏಣಗಿ ಬಾಳಪ್ಪನವರ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆದು ಒಳ್ಳಯ ಹುದ್ದೆಯಲ್ಲಿರುವರು. ಬಸವರಾಜ ಖ್ಯಾತ ವೈದ್ಯರಾಗಿ.ಸುಭಾಷ ಇಂಜನೀಯರ್.ಮೋಹನ್ ನ್ಯಾಯವಾದಿಯಾಗಿದ್ದಲ್ಲದೇ  ಸವದತ್ತಿಯ ವಿವಿಧ ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವರು.

ಬಿ.ಎಸ್.ಸಿ ಪದವೀಧರರಾದರೂ ಕೂಡ ಊರಿನಲ್ಲಿಯ ಜಮೀನನ್ನು ನೋಡಿಕೊಳ್ಳುವ ಅರವಿಂದ ಕೃಷಿಕರಾಗಿರುವರು ಹೆಣ್ಣು ಮಕ್ಕಳು ಕೂಡ ವಿವಾಹಿತೆಯರಾಗಿದ್ದು. ಇವರ ಪುತ್ರ ದಿವಂಗತ ಏಣಗಿ ನಟರಾಜ ಕೂಡ ಮೇರು ಕಲಾವಿದರಾಗಿದ್ದರು.


ವೈ.ಬಿ.ಕಡಕೋಳ (ಶಿಕ್ಷಕರು)

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!