spot_img
spot_img

ಕವಿಮನೆಯ ನೆನಪುಗಳು

Must Read

ಕುಪ್ಪಳಿ ಎಂದೊಡನೆ ನೆನಪಾಗುವುದು ಕುಪ್ಪಳಿಯ ಕವಿಮನೆ. ಕುವೆಂಪು ಅಧ್ಯಯನ ಕೇಂದ್ರ ಕುಪ್ಪಳಿ ಇವರು ೨೧-೩-೨೦೦೬ ರಿಂದ ೨೬-೩-೨೦೦೬ ರವರೆಗೆ ನಡೆಸಿದ ಸಂಶೋಧನೆ ಮತ್ತು ಸಾಂಸ್ಕೃತಿಕ ಅಧ್ಯಯನ ಸಾಧ್ಯತೆಗಳು ಮತ್ತು ಸವಾಲುಗಳು ಕುರಿತು ಅಧ್ಯಯನ ಶಿಬಿರವನ್ನು ಸಂಘಟಿಸಿದ್ದರು.

ನಂತರ ೨೦೦೭ ರಲ್ಲಿ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಮತ್ತೊಂದು ಕಮ್ಮಟ ಇಲ್ಲಿ ಏರ್ಪಾಟಾಗಿತ್ತು. ಈ ಎರಡೂ ಕಮ್ಮಟಕ್ಕೆ \ ನನಗೆ ಹೋಗಲು ಅವಕಾಶ ದೊರಕಿತ್ತು. ೨೦೦೭ ರ ಕಮ್ಮಟ ಕುವೆಂಪು ಜನ್ಮದಿನದ ಸಂದರ್ಭದಲ್ಲಿ ಇದ್ದದ್ದರಿಂದ ಹಲವಾರು ಹಿರಿಯ ಸಾಹಿತಿಗಳನ್ನು ಹತ್ತಿರದಿಂದ ನೋಡುವ ಮಾತನಾಡುವ ಅವಕಾಶ. ಈ ಸಂದರ್ಭದಲ್ಲಿ ನಾನೂ ಕೂಡ ಭಾಗವಹಿಸುವ ಅವಕಾಶವನ್ನು ನನಗೆ ಅಂದು ನಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಶರಣಬಸವ ಗುಡ್ಲಾನೂರ ನನಗೆ ಅನ್ಯ ಕಾರ್ಯನಿಮಿತ್ತ ರಜೆ ಅನುಕೂಲ ಮಾಡಿದ್ದರು.

ನಾನು ನಮ್ಮ ಊರಿನಿಂದ ಹುಬ್ಬಳ್ಳಿಗೆ ಬಂದು ಅಲ್ಲಿಂದ ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಬೆಂಗಳೂರು ಕುಪ್ಪಳಿ ಬಸ್ ಹಿಡಿದು ಬೆಳಗ್ಗೆ ಕುಪ್ಪಳ್ಳಿ ತಲುಪಿದ್ದೆ. ದಾರಿಯುದ್ದಕ್ಕೂ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಿದ್ದ ನನಗೆ ಬೇಸಿಗೆ ಇದ್ದರೂ ಚಳಿಯ ವಾತಾವರಣ ಇಬ್ಬನಿ ಬಿದ್ದ ಇಳೆ ಮನಸೂರೆಗೊಂಡವು. ಅಲ್ಲಿಂದ ಅನಿಕೇತನ ಕಟ್ಟಡದಲ್ಲಿ ನಮಗೆ ವಾಸ್ತವ್ಯ ಕೊಟ್ಟಿದ್ದರು. ಅಲ್ಲಿಗೆ ಹೋಗಿ ನನ್ನ ನೋಂದಣಿ ಮಾಡಿಕೊಂಡೆ.

ಸ್ನಾನಾದಿ ಕರ್ಮಗಳನ್ನು ಮುಗಿಸುವಷ್ಟರಲ್ಲಿ ನನ್ನ ಜಿಲ್ಲೆಯ ಗೋಕಾಕದಿಂದ ಸಾಹಿತಿ ಎಲ್.ಎಸ್.ಚೌರಿ. ಮಹಾಲಿಂಗಪುರದಿಂದ ಡಾ.ಅಶೋಕ ನರೋಡೆ. ಡಾ.ಗುಂಡಣ್ಣ ಕಲಬುರ್ಗಿ.ಡಾ.ಸಣ್ಣವೀರಣ್ಣ ದೊಡಮನಿ(ಆಗ ಪಿ.ಎಚ್.ಡಿ ಅಧ್ಯಯನ ಸಾಗಿತ್ತು) ಮೊದಲಾದವರು ಅನಿಕೇತನಕ್ಕೆ ಆಗಮಿಸಿದ್ದರು; ಅಕ್ಕ ಪಕ್ಕದ ಜಿಲ್ಲೆಗಳವರು ಅಂದಾಗ ನಮ್ಮೆಲ್ಲರ ಪರಿಚಯ ಒಬ್ಬರಿಗೊಬ್ಬರು ಮಾಡಿಕೊಂಡೆವು;

ಕಾರ್ಯಕ್ರಮ ಉದ್ಘಾಟನೆ ಅನಿಕೇತನ ಕಟ್ಟಡದಲ್ಲಿ ಜರುಗಿತು. ಬೆಳಗಿನ ಉಪಹಾರದಿಂದ ಹಿಡಿದು ರಾತ್ರಿಯ ವೇಳೆಯವರೆಗಿನ ತರಗತಿ ಉಪನ್ಯಾಸ ಹಿಡಿದು ಊಟ ಚಹಾ ಎಲ್ಲ ರೀತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು.

ನಮಗಲ್ಲಿ ಕಮ್ಮಟದ ಉಸ್ತುವಾರಿ ವಹಿಸಿದ್ದ ಡಾ.ಕೆ.ಶಿವಾರಡ್ಡಿಯವರ ಪರಿಚಯವಾಯಿತು.ಶಿವಾರಡ್ಡಿಯವರು ನಮಗೆ ಕುವೆಂಪು ಅವರ ಕೃತಿಗಳ ಓದನ್ನು ಅಲ್ಲಿ ರಾತ್ರಿ ಮಾಡಿಸುವ ಜೊತೆಗೆ ಕುವೆಂಪು ಅವರ ಬದುಕಿನ ಘಟನೆಗಳನ್ನು ನಮಗೆ ಹೇಳುತ್ತಿದ್ದರು. ಶಿವಾರಡ್ಡಿಯವರು ಕುವೆಂಪು ಅವರ ಬಗ್ಗೆ ಹೇಳತೊಡಗಿದರೆ ಸಾಕು ಅವರೊಡನೆ ನಾವೂ ಇದ್ದೇವೆಯೇನೋ ಎಂಬಂತೆ ಮಹತ್ವದ ಸಂಗತಿಗಳನ್ನು ಡಾ.ಶಿವಾರಡ್ಡಿಯವರು ಹೇಳುತ್ತಿದ್ದರು.ನಿಜಕ್ಕೂ ಶಿವಾರಡ್ಡಿ ಅವರ ನಿರೂಪಣೆ ಶೈಲಿ ಎಂತವರಿಗೂ ಮನಸೂರೆಗೊಳ್ಳುತ್ತಿತ್ತು. ಒಂದೆರಡು ದಿನಗಳಾಗುವಷ್ಟರಲ್ಲಿ ಶಿವಾರಡ್ಡಿ ಅವರು ನಮ್ಮವರಾಗಿದ್ದು. ಕುವೆಂಪುಅವರ ಬಗೆಗಿನ ಮಾಹಿತಿಗಳನ್ನು ಶಿವಾರಡ್ಡಿ ಅವರು ನಮಗೆ ತಿಳಿಸಿದ್ದ ರೀತಿಯೇ ಅಂತದ್ದು.ಅನಿಕೇತನದಲ್ಲಿ ನಮ್ಮ ವಾಸ್ತವ್ಯದ ಜೊತೆಗೆ ಕುಪ್ಪಳ್ಳಿಯ ಕವಿಮನೆಯಲ್ಲಿ ರಾತ್ರಿ ಸುಗಮ ಸಂಗೀತದ ಆಯೋಜನೆ ಜರುಗುತ್ತಿತ್ತು.

ಅಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಿಂದ ಕುವೆಂಪು ಭಾವಗೀತೆಗಳು ಜರುಗುತ್ತಿದ್ದವು. ಒಂದು ದಿನ ನಮಗ ಶಿವಾರಡ್ಡಿಯವರು ಬೆಳಿಗಿನ ಜಾವ ಮೂರು ಗಂಟೆಗೆ ಯಾರಾದರೂ ಬೆಟ್ಟಕ್ಕೆ ಚಾರಣ ಬರ್ತಿರಾ ಅಂತ ಕೇಳಿದರು. ಆ ದಿನ ರಾತ್ರಿ ಅವರು ನಮಗೆ ಮಲೆಗಳಲ್ಲಿ ಮದುಮಗಳು ಕಾದಂಬರಿ ಕುರಿತು ಹೇಳುತ್ತಿದ್ದರು.

ಬೆಟ್ಟದ ಮೇಲೆ ಹೋದರೆ ಆ ಕಾದಂಬರಿಯ ಹಲವು ದೃಶ್ಯಗಳ ಕುರಿತು ಓದು ಜೊತೆಗೆ ಕುವೆಂಪು ಅವರ ದೇವರು ರುಜು ಮಾಡಿದನು ಕವನದ ಓದು.ಹೀಗೆ ಹಲವು ಸಂಗತಿಗಳನ್ನು ನಮಗೆ ತಿಳಿಸುವುದಾಗಿ ಹೇಳಿದಾಗ ನಾವು ಅವರೊಡನೆ ಬೆಟ್ಟದ ಚಾರಣಕ್ಕೆ ಹೋಗಲು ತಯಾರಾದೆವು.

ಬೆಳಗಿನ ಮೂರು ಗಂಟೆ ತಂಪಾದ ವಾತಾವರಣ ದಟ್ಟ ಕಾಡು. ಮುಖ ಮೇಲೆತ್ತಿದರೆ ಗಾಢವಾದ ಕತ್ತಲೆ. ಶಿವಾರಡ್ಡಿಯವರ ಕೈಯಲ್ಲಿ ಪುಟ್ಟ ಬ್ಯಾಟರಿ. ಅವರ ಹಿಂದೆ ಅವರ ವೇಗಕ್ಕೆ ತಕ್ಕಂತೆ ನಡೆಯಬೇಕು.ಅದು ನಡುಗೆಯಲ್ಲ ಒಂದು ರೀತಿಯ ಓಟವೇ.? ಅವರು ಅಕ್ಕಪಕ್ಕ ನೋಡಬೇಡಿರಿ ಏನೂ ಸದ್ದು ಮಾಡಬೇಡಿ ಎನ್ನುತ್ತ ಮುಂದೆ ಸಾಗಿದರು. ಭಯದ ವಾತಾವರಣವದು. ಗುಯ್ ಗುಟ್ಟುವ ಕೀಟಗಳ ಸದ್ದು. ನಮ್ಮ ಕಾಲಲ್ಲಿ ಬಿದ್ದಿದ್ದ ಎಲೆಗಳ ಸದ್ದು ಅಲ್ಲಿ ಸರಸರನೆ ಸರಿದು ಹೋಗುವ ಹಾವುಗಳು. ವಿವಿಧ ಪಕ್ಷಿಗಳ ಕೂಗು.

ಇವುಗಳನ್ನು ಕಾಣುತ್ತ ಬೆಟ್ಟದ ಹಾದಿಯಲ್ಲಿ ಸಾಗುತ್ತಿರುವಾಗ ಯಾಕಾದರೂ ಹೊರಟೆವೋ ಅನ್ನುವಂತಿದ್ದರು ಶಿವಾರಡ್ಡಿಯವರ ಉತ್ಸಾಹ ನಮಗೆ ಹೊಸತೇನನ್ನೋ ತೋರಿಸುತ್ತದೆ ಎಂದು ನಂಬಿ ಅವರೊಡನೆ ಸಾಗಿದ್ದೆವು.ಪೂರ್ಣ ಬೆಳಕಾದರೂ ಸಹಿತ ಆಕಾಶದಲ್ಲಿ ಸೂರ್ಯ ಕಾಣದಷ್ಟು ಇಬ್ಬನಿ ತುಂಬಿದ ವಾತಾವರಣವದು.

ಆ ಬೆಟ್ಟದ ತುದಿಗೆ ಬಂದಾಗ ಎಲ್ಲರಿಗೂ ಸುತ್ತಲಿನ ಪ್ರಕೃತಿ ನೋಡಲು ಹೇಳಿದರು. ಆಕಾಶವೇ ಬೆಟ್ಟವನ್ನು ಆಕ್ರಮಿಸದಂತೆ ಸುತ್ತಲಿನ ಕಾಡಿನ ಮೇಲೆ ಕಾಣುತ್ತಿತ್ತು. ದೂರದ ಮರಗಿಡಗಳ ಮೇಲೆ ಸೂರ್ಯರಶ್ಮಿ ಅಲ್ಲಿ ಸೂರ್ಯನಿದ್ದಾನೆ ಎನ್ನುವಂತೆ ತೋರುತ್ತಿತ್ತು. ಎಲ್ಲರೂ ತಮ್ಮ ಭಾವಚಿತ್ರಗಳನ್ನು ತಗೆದುಕೊಳ್ಳತೊಡಗಿದರು.

ಸ್ವಲ್ಪ ಹೊತ್ತು ಅಲ್ಲಿನ ಬಂಡೆಗಳ ಮೇಲೆ ಮಲಗಿ ಮೇಲೆ ಆಕಾಶ ದಿಟ್ಟಿಸಿದೆ. ಅಬ್ಬಾ ಎಷ್ಟೊಂದು ನೀಲಿ.ಅಲ್ಲಲ್ಲಿ ಚದುರಿ ಬರುತ್ತಿರುವ ಮೋಡಗಳ ಸಾಲು. ಮಲಗಿದರೆ ನಿದ್ರೆ ಆವರಿಸಬಹುದು.ಬೆಳಗಿನ ಮೂರು ಗಂಟೆಗೆ ಎದ್ದಿದ್ದರೂ ಕೂಡ ಶಿವಾರಡ್ಡಿಯವರೊಡನೆ ನಡೆಯುವ ಬದಲು ಓಡುತ್ತ ಬಂದ ಆಯಾಸವೆಲ್ಲ ಅಲ್ಲಿನ ಪ್ರಕೃತಿ ಕಂಡು ಯಾವುದೇ ಆಯಾಸವಿರದಷ್ಟು ಮೈಮರೆಸಿತ್ತು.

ಅಷ್ಟರಲ್ಲಿ ಶಿವಾರಡ್ಡಿಯವರು ಎಲ್ಲರನ್ನು ಒಂದೆಡೆ ಕುಳಿತುಕೊಳ್ಳುವಂತೆ ಹೇಳಿದರು.ನಾವೆಲ್ಲ ಅವರ ಸುತ್ತುವರೆದೆವು. ಆಗ ಅವರು ನಮ್ಮೆಲ್ಲರನ್ನು ಸೇರಿಸಿ

ದೇವರು ರುಜು ಮಾಡಿದನು.
ರಸವಶನಾಗುತ ಕವಿ ಅದ ನೋಡಿದನು.
ಬಿತ್ತರದಾಗಸ ಹಿನ್ನಲೆಯಾಗಿರೆ

ಪರ್ವತದೆತ್ತರ ಸಾಲಾಗೆಸೆದಿರೆ
ಕಿಕ್ಕಿರದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು
ರಸವಶನಾಗುತ ಕವಿ ಅದ ನೋಡಿದನು

ಹೀಗೆ ಇಡೀ ಕವನ ಓದುತ್ತಿದ್ದಂತೆ ಸುತ್ತಲಿನ ಪ್ರಕೃತಿ ಅದನ್ನು ಕಂಡ ಕವಿಯ ವರ್ಣನೆ,ಇಂತಹ ಪ್ರಕೃತಿಯ ನಡುವೆ ಅಲೆದಾಡುತ್ತ ಕವಿಯು ಒಂದು ಸುಂದರವಾದ ಪಕ್ಷಿಗಳ ಸಮುಃವನ್ನು ನೋಡಿ ರೋಮಾಂಚಗೊಳ್ಳುತ ಅವು ಆಕಾಶದಲ್ಲಿ ಹಾರಿ ಬರುತ್ತಿದ್ದ ರೀತಿಯು ದೇವರು ರುಜು ಮಾಡಿದಂತೆ ಕಂಡಿತು ಎನ್ನುವಲ್ಲಿ ಕುವೆಂಪುರವರ ಮನೋಹರ ಚಿತ್ರಣ ವಿಶಿಷ್ಟ ಚಿಂತನೆಯ ನಿದರ್ಶನವಾಗಿದೆ.

ನಂತರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಓದು.ಈ ಕಾದಂಬರಿ ಸಿಂಭಾವಿ ಗುತ್ತಿಯಿಂದ ಶುರುವಾಗುತ್ತದೆ. ಬೆಟ್ಟಳ್ಳಿಯಲ್ಲಿರುವ ತನ್ನ ಅತ್ತೆಯ ಮಗಳು ತಿಮ್ಮಿಯನ್ನು ಪ್ರೀತಿಸುತ್ತಿದ್ದ ಗುತ್ತಿ. ತಿಮ್ಮಿಯ ತಂದೆ ಅವಳನ್ನು ಅದೇ ಊರಿನ ಬಚ್ಚನಿಗೆ ಮದುವೆ ಮಾಡಿಕೊಡಲು ಮುಂದಾದಾಗ ಅವಳನ್ನು ಓಡಿಸಿಕೊಂಡು ಬರುವ ಯೋಜನೆ ಹಾಕಿಕೊಂಡು ಸಿಂಭಾವಿಯಿಂದ ಬೆಟ್ಟಳ್ಳಿಗೆ ಪಯಣ ಬೆಳೆಸಿದಾಗ ಈ ಬೆಟ್ಟದ ಸುತ್ತಮುತ್ತಲೂ ಅಲೆದಾಡಿದ ಘಟನೆಗಳ ಓದು ಕೂಡ ನಮಗೆ ಮಲೆನಾಡಿನ ದಟ್ಟ ಕಾಡಿಸ ಸೊಗಡನ್ನು ಕಣ್ಮುಂದೆ ತಂದು ನಿಲ್ಲಿಸಿತು.ಗುತ್ತಿಯ ಜೊತೆಗೆ ನಾಯಿ ಕೂಡ ಅವರೊಂದಿಗೆ ಸಂಚರಿಸಿದ ರೀತಿಯನ್ನು ಬಹಳ ಸೊಗಸಾಗಿ ಕುವೆಂಪು ಚಿತ್ರಿಸಿದ್ದಾರೆ.

ಶಿವಾರಡ್ಡಿ ಸರ್ ನಮಗೆ ಕುವೆಂಪು ಬದುಕಿನ ಪುಟಗಳನ್ನು ಅವರ ಕಾದಂಬರಿ ಕವನಗಳ ಮೂಲಕ ಹೇಳತೊಡಗಿದರೆ ಕುವೆಂಪು ನಮ್ಮ ಕಣ್ಣ ಮುಂದೆ ಇದ್ದಾರೇನೋ ಎಂಬಂತೆ ಭಾಸವಾಗುತ್ತಿತ್ತು. ನಂತರ ನಮ್ಮ ಪಯಣ ಅನಿಕೇತನ ಕಟ್ಟಡದ ಕಡೆಗೆ ಕುಪ್ಪಳ್ಳಿಯ ಕವಿಮನೆಗೆ ಬರಬೇಕಾದರೆ ಮಾರ್ಗ ಮಧ್ಯದಲ್ಲಿ ಅಂದರೆ, ಮನೆ ತಲುಪುವ ಮುಂಚೆ ೧ ಕಿ.ಮೀ ಅಂತರದಲ್ಲಿ ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನವಿದೆ. ಇದು ಅನಿಕೇತನ. ನಮಗೆ ವಾತ್ಸವ್ಯಕ್ಕೆ ಇಲ್ಲಿ ಕೊಠಡಿಯನ್ನು ನೀಡಲಾಗಿತ್ತು. ಎಲ್ಲರೂ ನಮ್ಮ ನಮ್ಮ ಕೊಠಡಿಗಳನ್ನು ಸೇರಿ ಸ್ನಾನ ಮುಗಿಸಿ ಮಲೆನಾಡಿನ ತಿಂಡಿ ತಿಂದು ಚಹಾ/ಕಾಫಿ ಕುಡಿದೆವು.

ಈ ಅನಿಕೇತನ ಕಟ್ಟಡದ ಬಗ್ಗೆ ಹೇಳಲೇಬೇಕು. ಇದು ಮಲೆನಾಡಿನ ಹಳ್ಳಿ ಮನೆಗಳ ಸಾಂಪ್ರದಾಯಿಕ ಶೈಲಿಯಿಂದ ನಿರ್ಮಿಸಲಾಗಿರುವ ಈ ಮನೆಯ ಹೊದಿಕೆ ಹೆಂಚಿನದು. ಇಲ್ಲಿ ಬಾಗಿಲ ಮೇಲೆ “ಓ ನನ್ನ ಚೇತನ ಆಗು ನೀ ಅನಿಕೇತನ” ಎಂಬ ಕೆತ್ತನೆ ಇದೆ. ಈ ಭವನದಲ್ಲಿ ಕುವೆಂಪುರವರ ಪತ್ನಿ ಹೇಮಾವತಿಯವರ ಹೆಸರು ಹೊತ್ತ “ಹೇಮಾಂಗಣ” ವಿದೆ.

ಇದು ಸಭೆ, ಸಮಾರಂಭ, ಗೋಷ್ಠಿಗಳು ಇತ್ಯಾದಿ ನಡೆಸಲು ಅನುಕೂಲವಾಗಿದೆ. ಇಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಕೊಠಡಿಗಳು ಇದ್ದು, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಸಾಹಿತ್ಯ ಅಧ್ಯಯನ ಕೇಂದ್ರದ ಕಛೇರಿ, ಗ್ರಂಥಾಲಯ ಕಾರ್ಯನಿರ್ವಹಿಸುತ್ತಿವೆ.ನಮಗೆ ಇಡೀ ದಿನ ಕುವೆಂಪು ಕುರಿತು ಉಪನ್ಯಾಸ ಜರುಗಿದ್ದು ಈ ಸಭಾಂಗಣದಲ್ಲಿ. ಸಂಜೆಯಾದ ಕೂಡಲೇ ಬಿಸಿ ಬಿಸಿ ವಡೆ ಮತ್ತು ಚಹಾ ನೀಡಿದರು. ೫ ಗಂಟೆಯ ನಂತರ ಕವಿಮನೆಗೆ ನಮ್ಮ ನಡಿಗೆ.

ಕುಪ್ಪಳ್ಳಿ ಕುವೆಂಪುರವರ ಮನೆಯ ಹೊಂದಿದ ಮಲೆನಾಡಿನ ರಮ್ಯಪ್ರಕೃತಿ ತಾಣ.

“ತೆರೆದಿದೆ ಮನೆ ಓ ಬಾ ಅತಿಥಿ ಹೊಸ ಬೆಳಕಿನ ಹೊಸ ಧಾರೆಯಾ ಹೊಸ ಬಾಳನು ತಾ ಅತಿಥಿ” ಕುವೆಂಪುರವರ ಪದ್ಯದ ಈ ಸಾಲನ್ನು ಜ್ಞಾಪಿಸಿಕೊಂಡು ಬನ್ನಿ ಕುಪ್ಪಳ್ಳಿಯ ಕವಿಮನೆಗೆ. ಇದು ದಟ್ಟ ಕಾನನದಲ್ಲಿ ತೀರ್ಥಹಳ್ಳಿಯಿಂದ ೧೬ ಕಿ.ಮೀ.ದೂರದಲ್ಲಿದೆ. ರಾಷ್ಟ್ರೀಯ ಸ್ಮಾರಕವೆಂದು “೧೯೯೨” ರಲ್ಲಿ ಮೈದಳೆದು ಪುನರ್ ನಿರ್ಮಾಣಗೊಂಡು ೨೦೦೦ ರಲ್ಲಿ ರಾಷ್ಟ್ರಕ್ಕೆ ಅರ್ಪಿತವಾದ ಈ ಕವಿಮನೆ, ಬರಿಯ ಕವಿಮನೆಯಾಗದೇ ನಮಗಿಂದು ಕುವೆಂಪು ರಾಷ್ಟ್ರಕವಿಯಾಗಿ ನಮ್ಮೊಡನಿರುವರೇನೋ ಎಂಬಂತೆ ಭಾಸವಾಗುತ್ತದೆ.

ಕುಪ್ಪಳ್ಳಿ ಕವಿಮನೆಗೆ ಹೋಗಲು ೫ ರೂ.(ಆಗಿನ ಶುಲ್ಕ.ಈಗ ಎಷ್ಟಿದೆ ಗೊತ್ತಿಲ್ಲ) ಪ್ರವೇಶ ಶುಲ್ಕ ನೀಡಿದರೆ ಕವಿ ಭಾವಚಿತ್ರ, ವಿಶ್ವಮತ ಸಂದೇಶ ಸಾರುವ ಚೀಟಿ ನೀಡುತ್ತಾರೆ. ಅದು ನಿಜಕ್ಕೂ ಸ್ಮರಣೀಯ. ಮನೆ ಪ್ರವೇಶಿಸಿದೊಡನೆ ನಟ್ಟ ನಡುವೆ ಪ್ರಾಚೀನ ಕಾಲದಿಂದಲೂ ಪೂಜೆಗೊಳ್ಳುತ್ತಿರುವ ತುಳಸಿ ವೃಂದಾವನವಿದೆ. ಸುಮಾರು ಎರಡು ನೂರು ವರ್ಷಗಳ ಹಿಂದಿನ ಕುಸುರಿ ಕಲೆಯಿಂದ ಕೆತ್ತನೆಗೊಂಡ ಮನೆಯ ಉಪ್ಪರಿಗೆಗಳು ಇಲ್ಲಿವೆ.

ಬಾಣಂತಿ ಕೋಣೆ, ಐಗಳ ಶಾಲೆಯಂತೆ ಇದ್ದ ಕೊಠಡಿ ವಿಶಾಲವಾದ ಅಡುಗೆ ಮನೆ, ಹಳೆಯ ಕಾಲದ ಸ್ನಾನದ ಮನೆ ಇತ್ಯಾದಿಗಳು ಕುವೆಂಪುರವರ ಬದುಕಿನ ಪುಟ ತೆರೆದಿಡುವ ವೈವಿಧ್ಯತೆಗಳೊಂದಿಗೆ ಗಮನ ಸೆಳೆಯುತ್ತವೆ. ಇಂಥ ಮನೆಯಲ್ಲಿ ಕುವೆಂಪುರವರು ನಿತ್ಯ ಬರವಣಿಗೆಗೆ ಬಳಸುತ್ತಿದ್ದ ಎಲ್ಲ ವಸ್ತುಗಳು, ಎಲ್ಲ ಪುಸ್ತಕಗಳು, ಬಾಳಿನ ರಸಘಟ್ಟಗಳನ್ನು ನೆನಪಿಸುವ ಛಾಯಾಚಿತ್ರಗಳು, ಅಲ್ಲದೇ ಮಲೆನಾಡಿನ ಜನಜೀವನವನ್ನು ಬಿಂಬಿಸುವ ಮನೆ ಬಳಕೆಯ ಮತ್ತು ಬೇಸಾಯದ ವಸ್ತುಗಳು ಇವೆಲ್ಲವುಗಳ ಸಂಗ್ರಹಾಲಯವಾಗಿ ಕುಪ್ಪಳ್ಳಿಯ ಅವರ ಮನೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕುವೆಂಪುರವರು ತಮ್ಮ ಕುಪ್ಪಳ್ಳಿಯ ಕುರಿತು ಬರೆದ ಪದ್ಯ ಈ ಮನೆ ನೋಡುವಾಗ ಸ್ಮೃತಿ ಪಟಲದಲ್ಲಿ ಮೂಡಿಬಂದಿತು.

“ತೀರ್ಥಹಳ್ಳಿಯ ಕಳೆದು ತಾಯಿ ತುಂಗೆಯ ದಾಟಿ ಒಂಬತ್ತು ಮೈಲಿಗಳ ದೂರದಲಿ ನಮ್ಮೂರು ಕುಪ್ಪಳ್ಳಿ ಊರಲ್ಲ ನಮ್ಮ ಮನೆ, ನಮ್ಮ ಕಡೆ ಊರೆಂದರೊಂದೆ ಮನೆ ಪಡುವೆಟ್ಟಗಳ ನಾಡು ದಡ್ಡವಾದಡವಿಗಳು ಕಿಕ್ಕಿರಿದ ಮಲೆನಾಡು ಸುತ್ತಲೂ ಎತ್ತರದ ಬೆಟ್ಟಗಳು, ಕಾಡುಗಳು ಎತ್ತ ನೋಡಿದರತ್ತ ಸಿರಿ ಹಸಿರು ಕಣ್ಣುಗಳಿಗಾನಂದ ಮೇಣಾತ್ಮ ಕೊಂದೊಸೆಗೆ.”

ನಿಜಕ್ಕೂ ಈ ಮನೆ ನೋಡಿ ಹೊರ ಬಂದವರು ಈ ಪದ್ಯ ನೆನಪಿಸಿದರೆ ಸಾಕು ಅರ್ಥಪೂರ್ಣವಾಗಿ ಆ ಮನೆ ಸಾರ್ಥಕವೆನಿಸುತ್ತದೆ. ಎದುರಿಗೆ ಅಡಿಕೆ ತೋಟ, ಅಲ್ಲಿಯೇ ಕೆರೆಯೊಂದಿದೆ. ಮನೆ ಮುಂದೆ ಕುವೆಂಪುರವರ ಸಂದೇಶಗಳನ್ನು ಅಲ್ಲಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ. ಮನೆ ಎದುರಿನ ತೋಟದವಿದೆ. ಅಡಿಕೆ ಮರಗಳು ಆಕರ್ಷೀಸುತ್ತವೆ. ಕತ್ತಲಾಗುತ್ತಲೇ ದೂರದರ್ಶನ/ಆಕಾಶವಾಣಿ ಕಲಾವಿದರ ಆಗಮನವಾಯಿತು.

ಅಲ್ಲಿ ನಮಗೆ ಸುಗಮ ಸಂಗೀತದ ಸುಧೆ ಸುಮಾರು ಒಂದು ತಾಸಿನವರೆಗೆ ಜರುಗಿತು. ಮತ್ತೆ ನಮ್ಮ ಪಯಣ ಅನಿಕೇತನದತ್ತ ಅಲ್ಲಿ ಊಟ ಮಾಡಿ ರಾತ್ರಿ ನಮ್ಮ ನಮ್ಮ ಕೊಠಡಿಗಳಿಗೆ ತೆರಳಿ ವಿಶ್ರಮಿಸುವ ಮುಂಚೆ ನಾನು ಸ್ನೇಹಿತ ಎಲ್.ಎಸ್.ಚೌರಿಯವರಿಗೆ ಬೆಳಿಗ್ಗೆ ವಾಕಿಂಗ್ ಹೋಗೋಣ ಎಂದು ಹೇಳಿ ಮಲಗಿದೆ. ನಸುಕಿನಲ್ಲಿ ಎದ್ದು ಚೌರಿಯವರನ್ನು ಎಚ್ಚರಿಸಿದೆ. ಇಬ್ಬರೂ ಸೇರಿ ಗಡಿಗಲ್ಲು ಎಂಬ ಸ್ಥಳಕ್ಕೆ ಕತ್ತಲಲ್ಲಿ ಸಾಗತೊಡಗಿದೆವು.ಬೆಳಗಿನ ೫ ಗಂಟೆಗೆ ನಾವು ರಸ್ತೆಯಲ್ಲಿ ಸಾಗುತ್ತಿರಬೇಕಾದರೆ ಸ್ವಲ್ಪ ಭಯ.

ಏಕೆಂದರೆ ಆಗ ಈ ಭಾಗದಲ್ಲಿ ನಕ್ಸಲ್ ಹಾವಳಿ ಕೂಡ ಇತ್ತು. ಅದನ್ನು ಒಮ್ಮೆ ಚೌರಿಯವರು ನೆನಪಿಸಿದರು.ಹಿಂದೆ ನೋಡದೇ ಲಗುಬಗೆಯಿಂದ ಹೆಜ್ಜೆ ಹಾಕಿದೆವು. ಅಲ್ಲೊಂದು ದಾಬಾಶೈಲಿ ಹೊಟೇಲ್ ಇತ್ತು ಅಲ್ಲಿ ಬಿಸಿನೀರು ಪಡೆದು ಮುಖ ತೊಳೆದು ಚಹಾ ಮಾಡಿಸಿ ಕುಡಿದು ಸ್ವಲ್ಪ ಹೊತ್ತು ಅಲ್ಲಿನ ದಿನಪತ್ರಿಕೆಗಳನ್ನು ನೋಡಿದೆವು. ಮತ್ತೆ ಸ್ವಲ್ಪ ಬೆಳಕಾಗತೊಡಗಿದನ್ನು ಕಂಡು ಮರಳಿ ಅನಿಕೇತನದತ್ತ ಹೆಜ್ಜೆ ಹಾಕಿದೆವು. ಆಗ ನಮಗೆ ಶಿವಾರಡ್ಡಿ ಸರ್. ಇವತ್ತು ಕವಿಶೈಲಕ್ಕೆ ಹೋಗೋಣ ಎಂದರು.

ಕವಿಶೈಲ:

ಕವಿಮನೆಯ ದಕ್ಷಿಣ ದಿಕ್ಕಿನಲ್ಲಿ ಕವಿಮನೆಗೆ ಹೊಂದಿಕೊಂಡು ಇರುವ ಬೆಟ್ಟವೇ ಕವಿಶೈಲ. ಇದು ಕವಿ ಸ್ಪೂರ್ತಿಯ ತಾಣ. ಹತ್ತು ನಿಮಿಷಗಳಲ್ಲಿ ಬೆಟ್ಟ ಏರಿ ಬಂದರೆ, ಎಲ್ಲ ಕಡೆ ವಿಶಾಲವಾದ ಬಂಡೆಗಳು ಇಲ್ಲಿವೆ. ಕವಿ ಚಿಕ್ಕವಯಸ್ಸಿನಲ್ಲಿ ಇದಕ್ಕೆ ಅಷ್ಟೇ ಅಲ್ಲ ಕುವೆಂಪು ಕವಿಶೈಲದಲ್ಲಿ ಕಂಡ ಹಲವಾರು ದೃಶ್ಯಗಳನ್ನು ಕವನಗಳಲ್ಲಿ, ಕಾದಂಬರಿಗಳಲ್ಲೂ ತೆರೆದಿಟ್ಟಿದ್ದಾರೆ. ೧೯೩೬ರಲ್ಲಿ ಕವಿಶೈಲದ ಬಂಡೆಯ ಮೇಲೆ ಕುವೆಂಪು, ಬಿ.ಎಂ.ಶ್ರೀ, ಟಿ.ಎಸ್.ವೆಂ.ರವರು ಕೆತ್ತಿದ ಅಕ್ಷರಗಳು ಇಂದಿಗೂ ಚಿರಸ್ಥಾಯಿಯಾಗಿವೆ. ಇಲ್ಲಿ ಸೂರ್ಯಾಸ್ತವನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ.

ಅಂದ ಹಾಗೆ ಕವಿಶೈಲವನ್ನು ಚಿತ್ತಾಕರ್ಷಕವಾಗಿ ರೂಪುಗೊಳಿಸಿದ ಬೃಹತ್ ಗಾತ್ರದ ಕಲ್ಲುಗಳು ಕಾಫಿ ಪೇಯವನ್ನು ವಿಶ್ವಕ್ಕೆ ಪರಿಚಯಿಸಿದ ಉದ್ಯಮಿ ವಿ.ಜಿ.ಸಿದ್ದಾರ್ಥ ಹೆಗ್ಡೆಯವರದು. ತೇಜಸ್ವಿ ಕುಪ್ಪಳ್ಳಿಗೆ ವಿಶ್ವಮಟ್ಟದಲ್ಲಿ ಮೆರಗು ನೀಡಬೇಕು ಎಂದು ಬಯಸಿದಾಗ ಸಿದ್ದಾರ್ಥ ಅದಕ್ಕೆ ಸಾಥ್ ನೀಡಿದ್ದರು.ಕಾಡಿನ ಜೀವ ಸಂಕುಲಕ್ಕೆ ಹಾನಿಯಾಗದ ರೀತಿಯಲ್ಲಿ ಕುವೆಂಪು ಸ್ಮಾರಕವನ್ನು ನಿರ್ಮಿಸಬೇಕು ಎಂಬ ಪೂರ್ಣಚಂದ್ರ ತೇಜಸ್ವಿಯವರ ಕನಸಿಕೆ ಕೈ ಜೋಡಿಸಿದ್ದ ಸಿದ್ಧಾರ್ಥ ಅವರು ಲಕ್ಷಾಂತರ ಮೌಲ್ಯದ ಗ್ರಾನೈಟ್ ಕಲ್ಲುಗಳನ್ನು ನೀಡಿಕಲಾವಿದ ಕೆ.ಟಿ.ಶಿವಪ್ರಸಾದ್ ಅವರ ಸಲಹೆಯಂತೆ ಕವಿಶೈಲ ನಿರ್ಮಿಸಲು ನೆರವಾಗಿದ್ದು ಈಗ ಇಲ್ಲಿ ಕವಿಶೈಲಕ್ಕೆ ಸಾಕ್ಷಿ.

ಮೂರನೆಯ ದಿನ ನಾವೆಲ್ಲ ಸೇರಿ ಕುವೆಂಪು ಅವರಿಗೆ ಸಂಬಂಧಿಸಿದ ಹತ್ತಿರದ ಸ್ಥಳಗಳನ್ನು ತೋರಿಸಿ ಎಂದು ಶಿವಾರಡ್ಡಿಯವರಿಗೆ ವಿನಂತಿಸಿದೆವು. ಅದರಂತೆ ಅವರು ಎಲ್ಲರ ಒಪ್ಪಿಗೆ ಇದೆಯೇ ಎಂದು ಕೇಳಿದರು.? ಆಗ ಎಲ್ಲರೂ ಒಪ್ಪಿಗೆ ಸೂಚಿಸಿದರು. ಹೀಗಾಗಿ ನಮಗೆ ಈ ಕೆಳಕಂಡ ಸ್ಥಳಗಳ ದರ್ಶನ ಭಾಗ್ಯ ಒದಗಿ ಬಂದಿದ್ದನ್ನು ಮರೆಯದಂತಾಗಿದೆ.

ಕುವೆಂಪು ಸ್ಮಾರಕಭವನ:

ಕುಪ್ಪಳ್ಳಿಯ ಕವಿಮನೆಗೆ ಬರಬೇಕಾದರೆ ಮಾರ್ಗ ಮಧ್ಯದಲ್ಲಿ ಅಂದರೆ, ಮನೆ ತಲುಪುವ ಮುಂಚೆ ೧ ಕಿ.ಮೀ ಅಂತರದಲ್ಲಿ ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನವಿದೆ. ಮಲೆನಾಡಿನ ಹಳ್ಳಿ ಮನೆಗಳ ಸಾಂಪ್ರದಾಯಿಕ ಶೈಲಿಯಿಂದ ನಿರ್ಮಿಸಲಾಗಿರುವ ಈ ಮನೆಯ ಹೊದಿಕೆ ಹೆಂಚಿನದು. ಇಲ್ಲಿ ಬಾಗಿಲ ಮೇಲೆ “ಓ ನನ್ನ ಚೇತನ ಆಗು ನೀ ಅನಿಕೇತನ” ಎಂಬ ಕೆತ್ತನೆ ಇದೆ. ಈ ಭವನದಲ್ಲಿ ಕುವೆಂಪುರವರ ಪತ್ನಿ ಹೇಮಾವತಿಯವರ ಹೆಸರು ಹೊತ್ತ “ಹೇಮಾಂಗಣ” ವಿದೆ. ಇದು ಸಭೆ, ಸಮಾರಂಭ, ಗೋಷ್ಠಿಗಳು ಇತ್ಯಾದಿ ನಡೆಸಲು ಅನುಕೂಲವಾಗಿದೆ. ಇಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಕೊಠಡಿಗಳು, ಗ್ರಂಥಾಲಯ ಕಾರ್ಯನಿರ್ವಹಿಸುತ್ತಿವೆ.

ಕುವೆಂಪು ಜೈವಿಕಧಾಮ:

ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಅರಣ್ಯದ ಭಾಗವಾದ ಕವಿಮನೆ. ಸುತ್ತಲಿನ ಪರಿಸರವು ಅನೇಕ ಬಗೆಯ ಗಿಡ-ಮರಗಳು ಅಪರೂಪದ ಪ್ರಾಣಿ-ಪಕ್ಷಿಗಳು, ಗಿಡಮೂಲಿಕೆಗಳನ್ನು ಒಳಗೊಂಡಿದ್ದು, ರಾಜ್ಯ ಸರಕಾರ ಇವುಗಳ ಸಂರಕ್ಷಣೆಗಾಗಿ ಕ್ರಮ ಕೈಗೊಂಡು “ಜೈವಿಕ ಧಾಮ”ವಾಗಿ ಘೋಷಿಸಿದ್ದು ಇಲ್ಲಿ ಚಾರಣ ಶಿಬಿರಗಳನ್ನು ಕೂಡ ಸಂಘಟಿಸಲಾಗುತ್ತಿದೆ.

ಜೈವಿಕಧಾಮದ ಮಧ್ಯದಲ್ಲಿ ಅರಣ್ಯ ಇಲಾಖೆ ಮೂರು ಕುಟೀರಗಳನ್ನು ನಿರ್ಮಿಸಿದ್ದು, ಚಿಟ್ಟೆ ವನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. “ಕುವೆಂಪು ಸಂದೇಶವನ” ಎಂಬ ಹೆಸರಿನೊಂದಿಗೆ ಇದು ಕಂಗೊಳಿಸುತ್ತಿದೆ. ದಾರಿಯುದ್ದಕ್ಕೂ ಕುವೆಂಪುರವರ ಪದ್ಯದ ಹಾಗೂ ಚಿಂತನೆಯ ವಾಕ್ಯಗಳನ್ನು ಫಲಕಗಳಲ್ಲಿ ಬರೆದಿದ್ದು ಓದುತ್ತಾ ಅರಣ್ಯದಲ್ಲಿ ಸುತ್ತಾಡಲು ಅನುಕೂಲವಾಗಿದೆ.

ರಾಷ್ಟ್ರಕವಿ ಕುವೆಂಪು ಅವರ ನೆನಪು ಸದಾಕಾಲ ಉಳಿಯಬೇಕೆಂಬ ಉದ್ದೇಶದಿಂದ ಕರ್ನಾಟಕ ಸರಕಾರ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಚಿರಸ್ಥಾಯಿಯಾಗಿ ಉಳಿಯುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಸ್ವತಃ ಇಲ್ಲಿಗೆ ಬಂದು ನೋಡುವವರಿಗೆ ಇದರ ಅನುಭವವಾಗದೇ ಇರದು. ಬಹುಶಃ ತೀರ್ಥಹಳ್ಳಿಯಲ್ಲಿ ವಾಸ್ತವ್ಯ ಮಾಡಿ ಕುಪ್ಪಳ್ಳಿ ನೋಡಬೇಕೆನ್ನುವವರಿಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶ ಉಂಟು.

ಅಂಬುತೀರ್ಥ:

ತೀರ್ಥಹಳ್ಳಿಯಿಂದ ಹೊಸನಗರ ಮಾರ್ಗವಾಗಿ ೧೦ ಕಿ.ಮೀ ಪ್ರಯಾಣಿಸಿದರೆ ಶರಾವತಿ ನದಿ ಉಗಮಸ್ಥಾನವಾದ ಅಂಬುತೀರ್ಥ ಸಿಗುತ್ತದೆ. ಶ್ರೀರಾಮನು ಬಿಟ್ಟ ಅಂಬಿನಿಂದ ಉದ್ಭವಿಸಿದ ತೀರ್ಥ ಇದೆಂದು ಅದಕ್ಕಾಗಿ “ಅಂಬುತೀರ್ಥ”ಹೆಸರು ಬಂದಿತೆಂದು ಹೇಳುವ ತಾಣ ನಿಸರ್ಗ ರಮಣೀಯವಾಗಿದೆ.

ಆಗುಂಬೆ:

ತೀರ್ಥಹಳ್ಳಿಯಿಂದ ಕುಪ್ಪಳ್ಳಿಗೆ ಹೋಗುವ ಮಾರ್ಗದಲ್ಲೇ ಮುಂದೆ ಇರುವುದು ಆಗುಂಬೆ. ಇದು ಕುಪ್ಪಳ್ಳಿಯಿಂದ ೨೫ ಕಿ.ಮೀ ಅಂತರದಲ್ಲಿ ತೀರ್ಥಹಳ್ಳಿಯಿಂದ ೪೦ ಕಿ.ಮೀ ಅಂತರದಲ್ಲಿದೆ. ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಖ್ಯಾತವಾದ ಇಲ್ಲಿ ಅತ್ಯಂತ ಹೆಚ್ಚು ಮಳೆಯಾಗುತ್ತದೆ. ಸಮುದ್ರಮಟ್ಟದಿಂದ ೨೭೨೫ ಅಡಿ ಎತ್ತರವಿರುವ ಈ ಸ್ಥಳ ಸರ‍್ಯಾಸ್ತ ವೀಕ್ಷಣೆಗೆ ಅನುಕೂಲ.

ಕವಲೇದುರ್ಗ:

ತೀರ್ಥಹಳ್ಳಿಯಿಂದ ೧೫ ಕಿ.ಮೀ ದೂರದಲ್ಲಿ ದಟ್ಟ ಕಾಡಿನ ನಡುವೆ ಇರುವ ಏಳು ಸುತ್ತನ ಕೋಟೆ ಇರುವುದು ಇಲ್ಲಿನ ವಿಶೇಷ. ಸಮುದ್ರಮಟ್ಟದಿಂದ ೫೦೫೬ ಅಡಿ ಎತ್ತರದಲ್ಲಿ ಈ ತಾಣವಿದೆ.

ನವಿಲು ಕಲ್ಲು:

ಇದು ಕುಪ್ಪಳ್ಳಿಯಿಂದ ೧೪ ಕಿ.ಮೀ ದೂರದಲ್ಲಿದೆ. ಸುತ್ತ ಮುತ್ತಲು ಕಾಡಿನಲ್ಲಿ ನವಿಲುಗಳು ಈ ಶಿಲಾಶಿಖರದಲ್ಲಿ ವಿಹರಿಸುತ್ತಿರುವುದು, ಅವುಗಳ ನರ್ತನ ಸೊಬಗು ನೋಡಲು ಈ ಸ್ಥಳ ಅದ್ಭುತ. ಕುವೆಂಪುರವರಿಗೆ ನೆಚ್ಚಿನ ತಾಣ. ಸೂರ್ಯೋದಯ, ಸೂರ್ಯಾಸ್ತಗಳೆರಡನ್ನೂ ಈ ಪ್ರಕೃತಿಯಲ್ಲಿ ವೀಕ್ಷಿಸುವುದೇ ಒಂದು ಸುಂದರ ಅನುಭವ.

ಸಿಬ್ಬಲುಗುಡ್ಡ:

ಕುಪ್ಪಳ್ಳಿಯಿಂದ ೧೪ ಕಿ.ಮೀ ಅಂತರದಲ್ಲಿ ತುಂಗಾ ನದಿತೀರದ ಈ ಸ್ಥಳ ಗಣೇಶನ ದೇವಾಲಯದ ಹಿಂದಿರುವ ತುಂಗಾನದಿ, ಅಲ್ಲಿಯ ಜಲರಾಶಿಯ ನಡುವೆ ಮೀನುಗಳ ವೈಭವ ಪ್ರಕೃತಿ ಸೊಬಗು ಕುವೆಂಪುರವರಿಗೆ ಸ್ಪೂರ್ತಿ ನೀಡಿದೆ.

ಹಿರೇ ಕೂಡಿಗೆ:

ಕುವೆಂಪು ಅವರ ತಾಯಿಯ ತವರು ಮನೆ ಹಾಗೂ ಕುವೆಂಪು ಭೂಸ್ಪರ್ಶ ಪಡೆದ ಹಳ್ಳಿ.ಕುಪ್ಪಳ್ಳಿಗೆ ಕೇವಲ ಆರು ಕಿ.ಮೀ ದೂರದಲ್ಲಿದೆ.ಇಲ್ಲಿ ಸರ್ಕಾರ “ಸಂದೇಶ ಭವನ” ಎಂಬ ಸುಂದರವಾದ ಕಟ್ಟಡ ನಿರ್ಮಿಸಿದ್ದು. ಇದರಲ್ಲಿ ಅಮೃತ ಶಿಲೆಯಲ್ಲಿ ಕುವೆಂಪು ಸೂಕ್ತಿಗಳನ್ನು ಅವರ ವಿಶ್ವ ಮಾನವ ಸಂದೇಶವನ್ನು ಕೆತ್ತಲಾಗಿದೆ. ಕುವೆಂಪು ಅವರ ಒಂದು ಪ್ರತಿಮೆಯನ್ನೂ ಇಲ್ಲಿ ನಿರ್ಮಿಸಲಾಗಿದೆ. ಕಾನೂರು ಕುಪ್ಪಳಿಗಳಂತಯೇ ಹಿರೆಕೂಡಿಗೆ ಇರುವುದು ಕೊಪ್ಪ ತಾಲೂಕಿನಲ್ಲಿಯೇ.

ಅಂಚೆ ಮನೆಯ ಅರೆಕಲ್ಲು:

ಕುಳಿತಿರುವೆನೇಕಾಂಗಿ ಹಾಸು ಬಂಡೆಯ ಮೇಲೆ
ನೆತ್ತಿಯಡೆ ತಿಳಿಬಾನು ಸುತ್ತಲೂ ವನಧಾತ್ರಿ
ಮೊರೆಯುತಿಹುದೆನ್ನ ಕರೆಯುತೆ ಅನವರತ ಯಾತ್ರಿ
ಮಂಜುಲ ತರಂಗಿಣಿಯ ಜಲಶಿಲಾ ಕುಲಲೀಲೆ

ಈ ರೀತಿ ಬೇಸರದ ಕಾಲವನ್ನು ಕಳೆಯಲು ಕುವೆಂಪುರವರ ಪ್ರಮುಖ ತಾಣ ಅಂಚೆ ಮನೆಯ ಅರೆಕಲ್ಲು.ಇದು ಕುಪ್ಪಳ್ಳಿಯಿಂದ ಒಂದೂವರೆ ಮೈಲು ದೂರದಲ್ಲಿ ಕಾಡು ದಾರಿಯ ನಡುವೆ ಇರುವ ಹಳ್ಳದ ಹಾಸು ಬಂಡೆಗಳನ್ನು ಹೊಂದಿದ ಸ್ಥಳ. ಈ ಹಾಸು ಬಂಡೆಗಳ ಮೇಲೆ ಹಾಯಾಗಿ ಕುಳಿತೋ ಮಲಗಿಯೋ ಒಮ್ಮೆ ನೀಲಿಬಾನಿನ ಕಡೆ ಕಣ್ಣ ತಿರುಗಿಸುತ್ತ ಇನ್ನೊಮ್ಮೆ ಹಸಿರು ಕಾನನದ ಕಡೆ ದೃಷ್ಟಿ ನೋಡುತ್ತ ತೊರೆಯ ಜುಳು ಜುಳು ನಿನಾದಕ್ಕೆ ಕಿವಿಗೊಟ್ಟು ನಿಶ್ಚಿಂತೆಯಾಗಿ ಕಾಲ ಕಳೆಯಬಹುದಾದ ತಾಣವಿದು.

ಕುಪ್ಪಳ್ಳಿ ತಲುಪುವ ಮಾರ್ಗ:

ರಸ್ತೆ ಮಾರ್ಗ: ಬೆಂಗಳೂರಿನಿಂದ ೨೭೫ ಕಿ.ಮೀ ಶಿವಮೊಗ್ಗ, ಶಿವಮೊಗ್ಗದಿಂದ ಕುಪ್ಪಳ್ಳಿಯ ಕವಿಮನೆ ೭೬ ಕಿ.ಮೀ ಅಂತರದಲ್ಲದೆ. ತೀರ್ಥಹಳ್ಳಿಯಿಂದ ಹೋಗುವುದಾದರೆ ೧೬ ಕಿ.ಮೀ. ಅಂತರ, ಬೆಂಗಳೂರಿನಿಂದ ಕುಪ್ಪಳ್ಳಿಗೆ ನೇರವಾಗಿ ಬರುವವರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ್ ಬಸ್ ವ್ಯವಸ್ಥೆ ಇದೆ.

ರೈಲು ಮಾರ್ಗ: ಶಿವಮೊಗ್ಗದವರೆಗೆ ರೈಲು ಮಾರ್ಗವಿದ್ದು, ಅಲ್ಲಿಂದ ಬಸ್ ಪ್ರಯಾಣವೇ ಅನುಕೂಲ.

ವಸತಿ ವ್ಯವಸ್ಥೆ: ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲಿ ವಸತಿಗೃಹಗಳಿದ್ದು, ಕುಪ್ಪಳ್ಳಿಯಲ್ಲೂ ಕುವೆಂಪು ಪ್ರತಿಷ್ಠಾನದ “ಅನಿಕೇತನ” ಕಟ್ಟಡವಿದ್ದು, ಪ್ರತಿಷ್ಠಾನವನ್ನು ಸಂಪರ್ಕಿಸಿ ವಸತಿ ವ್ಯವಸ್ಥೆ ಪಡೆಯಬಹುದು.

ಕವಿ ಮನೆ ತೆರೆದಿರುವ ಸಮಯ: ಕವಿ ಮನೆಯು ವರ್ಷದ ೩೬೫ ದಿನಗಳೂ ವೀಕ್ಷಣೆಗೆ ಲಭ್ಯ. ಬೆಳಗ್ಗೆ ೯ರಿಂದ ಸಂಜೆ ೭ರವರೆಗೆ ಅವಕಾಶ.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೮೯೭೧೧೧೭೪೪೨ ೯೪೪೯೫೧೮೪೦೦

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!