ಮೂಡಲಗಿ ( ಪ್ರೊ. ಕೆ ಜಿ ಕುಂದಣಗಾರ ವೇದಿಕೆ ) – ಕನ್ನಡದ ಕುರಿತಾದ ಆತಂಕ ಇಂದಿನದಲ್ಲ. ಒಂದು ಕಾಲಕ್ಕೆ ಮಹಾರಾಷ್ಟ್ರದ ನೆಲ ಕೂಡ ಕರ್ನಾಟಕದ್ದೇ ಆಗಿತ್ತು. ಅತ್ತ ಸ್ವಾತಂತ್ರ್ಯ ಚಳವಳಿ ಇತ್ತ ಏಕೀಕರಣ ಚಳವಳಿ ಏಕಕಾಲಕ್ಕೆ ನಡೆದಿವೆ. ಶಿಕ್ಷಣ ಮಾಧ್ಯಮ ಕನ್ನಡವಾಗಬೇಕು ಎಂಬ ಕೂಗು ಅಂದು ಇದ್ದದ್ದು ಇನ್ನೂ ಇದೆ ಎಂದರೆ ವಿಷಾದನೀಯ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ ಹೇಳಿದರು.
ಮೂಡಲಗಿಯ ಆರ್ ಡಿಎಸ್ ಕಾಲೇಜಿನ ಆವರಣದಲ್ಲಿ ಪ್ರೊ. ಕೆ ಜಿ ಕುಂದಣಗಾರ ವೇದಿಕೆಯಲ್ಲಿ ನಡೆದ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.
ಕನ್ನಡ ಯಾಕೆ ಕೊರಗುತ್ತಿದೆ ಎಂಬ ಆತಂಕ ಎಲ್ಲರಲ್ಲಿಯೂ ಇದೆ. ಅದು ನಿವಾರಣೆಯಾಗಬೇಕಾದರೆ ಒಂದರಿಂದ ಐದನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯ ಮಾಡಬೇಕು. ೧೯೮೦ ರಿಂದ ಸರೋಜಿನಿ ಮಹಿಷಿ ವರದಿ ಇನ್ನೂ ಜಾರಿಗೆ ಬಂದಿಲ್ಲ ಕನ್ನಡ ಕುರಿತಾದ ಸರ್ಕಾರದ ಯಾವ ಆಯೋಗಗಳ ವರದಿಗಳೂ ಜಾರಿಗೆ ಬಂದಿಲ್ಲ ಎಲ್ಲವೂ ಕಸದ ಬುಟ್ಡಿಗೆ ಬಿದ್ದಿವೆ ಹಾಗಾದರೆ ಆಯೋಗ ಯಾಕೆ ರಚನೆ ಮಾಡಬೇಕು ? ಎಂದು ಪ್ರಶ್ನೆ ಮಾಡಿದರು
ಇದೇ ಸಂದರ್ಭದಲ್ಲಿ ಕೆಲವು ಹಕ್ಕೊತ್ತಾಯಗಳನ್ನು ಮಂಡಿಸಿದ ಅಕ್ಕಿಯವರು, ಕಾವೇರಿ ಕುರಿತಾಗಿ ಇರುವ ಆಸಕ್ತಿ ಮಹಾದಾಯಿ ಹಾಗೂ ಕೃಷ್ಣಾ ನದಿ ಕುರಿತೂ ಆಸಕ್ತಿ ಇರಬೇಕು. ಗೋಕಾಕ ಮತ್ತು ಮೂಡಲಗಿ ಭಾಗದಲ್ಲಿ ಇರುವ ಪ್ರವಾಸಿ ತಾಣಗಳ ಅಭಿವೃದ್ಧಿ ಆಗಬೇಕು. ಪ್ರತಿಯೊಂದು ತಾಲೂಕಿನಲ್ಲಿ ಕನ್ನಡ ಭವನ ಕಟ್ಟಬೇಕು. ಕೌಜಲಗಿ ನಿಂಗಮ್ಮ ಹೆಸರಿನಲ್ಲಿ ಒಂದು ರಂಗ ತರಬೇತಿ ಕೇಂದ್ರ ಸ್ಥಾಪಿಸಿ ಜಾನಪದ, ಬಯಲಾಟ ಕಲೆಗಳನ್ನು ಉಳಿಸಬೇಕು, ಬಯಲಾಟದ ಕಲಾವಿದನಿಗೆ ಪ್ರಶಸ್ತಿ ಸಿಗಬೇಕು ಎಂದು ಒತ್ತಾಯ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವುದರಿಂದ ಕನ್ನಡ ಉಳಿಸಿ ಬೆಳೆಸಲು ಸಹಾಯವಾಗುತ್ತದೆ. ತಾಲೂಕಿನಲ್ಲಿ ಸಾಹಿತ್ಯ ಅಭಿವೃದ್ಧಿ ಗೆ ಕನ್ನಡ ಭವನ ಕಟ್ಟಲು ಪ್ರಯತ್ನಿಸಲಾಗುವುದು. ಈಗಾಗಲೆ ನಾಲ್ಕು ಗುಂಟೆ ಜಾಗವನ್ನು ದಾನಿಗಳು ಕೊಡುವುದಾಗಿ ಒಪ್ಪಿದ್ದಾರೆ ಅಲ್ಲಿಯೇ ಭವನವನ್ನು ಕಟ್ಟಲಾಗುವುದು. ಹಿಂದಿನ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಕನ್ನಡದ ರಥವನ್ನು ಮುಂದಕ್ಕೆ ಎಳೆಯೋಣ ನಾನು ಕೂಡ ಸಾಕಷ್ಟು ಪ್ರಯತ್ನ ಮಾಡುತ್ತೇನೆ. ರಾಜಕಾರಣಿಗಳನ್ನು ಬಿಟ್ಟು ಸಾಹಿತ್ಯ ಸಮ್ಮೇಳನ ಮಾಡಲಾಗುವುದಿಲ್ಲ ಯಾಕೆಂದರೆ ರಾಜಕಾರಣಿಗಳಲ್ಲೂ ಕನ್ನಡ ಪ್ರೇಮಿಗಳು ಇರುತ್ತಾರೆ ಆದ್ದರಿಂದ ಯಾರ ಮಾತೂ ಕೇಳದೆ ನಾವೆಲ್ಲರೂ ಸೇರಿ ಕನ್ನಡದ ಕೈಂಕರ್ಯ ಮಾಡೋಣ ಎಂದರು
ಪ್ರಾಸ್ತಾವಿಕವಾಗಿ ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಮಾತನಾಡಿ, ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮುಂದಿನ ದಿನಗಳಲ್ಲಿಯೂ ಕೂಡ ಮೂಡಲಗಿ ತಾಲೂಕು, ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಉಳಿಸಿ ಬೆಳಸುವ ಕಾಯಕವನ್ನು ಮುಂದುವರೆಸಲಾಗುವುದು. ಕನ್ನಡವನ್ನು ಉಳಿಸಿ ಬೆಳಸುವ ಕಾರ್ಯದಲ್ಲಿ ಎಲ್ಲ ಕನ್ನಡ ಅಭಿಮಾನಿಗಳು ಕೈ ಜೋಡಿಸಬೇಕು ಎಂದರು
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ,ಜಗತ್ತಿನ ಎಂಟೇ ಎಂಟು ಸುಂದರ ಲಿಪಿಗಳಲ್ಲಿ ಕನ್ನಡವೂ ಒಂದು ಆದ್ದರಿಂದ ಕನ್ನಡವನ್ನು ಉಳಿಸುವ ಕೆಲಸವಾಗಬೇಕು. ಕನ್ನಡ ಅಂಕಿಗಳನ್ನು ಸರ್ಕಾರಿ ದಾಖಲೆಗಳಲ್ಲಿ ಬಳಸಬೇಕು. ಶೇ ೭೫ ಹುದ್ದೆಗಳು ಕನ್ನಡಿಗರಿಗೆ ಇರಬೇಕು. ನ್ಯಾಯಾಂಗದ ವ್ಯವಹಾರ ಕನ್ನಡದಲ್ಲಿ ಇರಬೇಕು, ತಾಂತ್ರಿಕ ಕಾಲೇಜುಗಳು ಪ್ರತಿ ಜಿಲ್ಲೆಗೂ ಒಂದು ಕನ್ನಡ ಮಾಧ್ಯಮದಲ್ಲಿ ಆಗಬೇಕು, ಗ್ರಾಮೀಣ ಜನರಿಗೆ ಅನುಕೂಲವಾಗುವ ಉದ್ಯೋಗಾವಕಾಶಗಳು ಮೂಡಲಗಿ ಭಾಗದಲ್ಲಿ ಹೆಚ್ಚಬೇಕು ಎಂದರು.
ಕನ್ನಡ ಧ್ವಜವನ್ನು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ಅಕ್ಕಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನೀವೂ ಶತಾಯುಷಿಗಳಾಗಿ, ಬಣ್ಣದ ಹಕ್ಕಿಗಳ ಮಾತು, ಹತ್ತು ಸುತ್ತು ಒಂದು ಮುತ್ತು, ಮೊಗ್ಗು, ಮುಂತಾದ ಕೃತಿಗಳ ಬಿಡುಗಡೆ ಮಾಡಲಾಯಿತು.
ಸಂಸತ್ ಸದಸ್ಯ ಜಗದೀಶ ಶೆಟ್ಟರ ಮಾತನಾಡಿ, ಮೂಡಲಗಿಗೆ ತನ್ನದೇ ಆದ ವೈಶಿಷ್ಟ್ಯ ವಿದೆ, ಇತಿಹಾಸವಿದೆ ಇಂಥ ನೆಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷಕರ ಸಂಗತಿ. ನಮ್ಮ ಭಾಷೆಯ ಬಗ್ಗೆ ಅಭಿಮಾನವಿರಬೇಕು, ಉಳಿದ ಭಾಷೆಗಳನ್ನು ಕಲಿಯಬಾರದು ಅಂತಲ್ಲ ಆದರೆ ಮಾತೃಭಾಷೆಗೇ ಹೆಚ್ಚು ಪ್ರಾಶಸ್ತ್ಯ ಕೊಡಬೇಕು. ನಮ್ಮ ರಾಜ್ಯದಲ್ಲಿ ಎಲ್ಲ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯಬೇಕು. ನ್ಯಾಯಾಂಗದಲ್ಲಿ ಕನ್ನಡ ಬರಬೇಕು ಎಂದರು.
ಡಾ. ಬಾಳಾಸಾಹೇಬ ಲೋಕಾಪೂರ ಮಾತನಾಡಿ, ಕನ್ನಡ ಭಾಷೆ ಅನೇಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶಬ್ದಗಳು, ನುಡಿಗಟ್ಟುಗಳು ಮರೆಯಾಗುತ್ತಿವೆ, ಕನ್ನಡವು ಕನ್ನಡವ ಕನ್ನಡಿಸಬೇಕು ಎಂದು ಬೇಂದ್ರೆ ಹೇಳಿದಂತೆ ಕನ್ನಡವನ್ನು ಉಳಿಸುವ ಕೆಲಸವಾಗಬೇಕು. ಕನ್ನಡದಲ್ಲಿ ನುಸುಳುವ ಪ್ರಕ್ರಿಯೆ ಹೆಚ್ಷಾಗಿದೆ. ಕೃಷಿ ಸಲಕರಣೆಗಳ ಹೆಸರುಗಳು ಇಂದಿನ ಪೀಳಿಗೆಗೆ ಗೊತ್ತೇ ಇಲ್ಲ. ಅಡಿಗೆ ಮನೆಗೂ ಬೇರೆ ಭಾಷೆಗಳು ನುಗ್ಗಿವೆ, ಸೌಟು, ಸುವ್ವಾಲೆ, ಒಳ್ಳು, ಒಣಕೆ, ಸಾರು, ಕಾರಬ್ಯಾಳಿ, ರೊಟ್ಟಿ, ತಾಲಿಪಟ್ಟಿ, ಮುಂತಾದ ಶಬ್ದಗಳು ಮರೆಯಾಗಿವೆ ಎಂದು ವಿಷಾದ ವ್ಯಕ್ತಪಡಿಸಿ ಕನ್ನಡ ಹಾಳಾಗುವ ಆತಂಕ ಕಾಡುತ್ತಿದೆ ಎಂದರು.
ವೇದಿಕೆಯ ಮೇಲೆ ಹಲವು ಗಣ್ಯ ಮಾನ್ಯರು ಉಪಸ್ಥಿತರಿದ್ದರು. ಎಮ್ ವೈ ಮೆಣಸಿನಕಾಯಿ ವಂದನಾರ್ಪಣೆ ಮಾಡಿದರು.