ಸಿಂದಗಿ: ಪಟ್ಟಣದ ೨೧ ಹಾಗೂ ೨೨ನೇ ವಾರ್ಡಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ವಾರ್ಡ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿಗಳಿಗೆ ಹಾಗೂ ಪುರಸಭೆಯ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಕಿ ಮಾತನಾಡಿ, ವಾರ್ಡಿನ ಚರಂಡಿಗಳನ್ನು ಸ್ವಚ್ಚವಾಗಿಡದ ಹಿನ್ನೆಲೆ ದಿನಂಪ್ರತಿ ಸೊಳ್ಳೆಗಳ ಕಾಟ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿರುತ್ತದೆ. ೨೨ನೇ ವಾರ್ಡಿನ ಬೋರವೆಲ್ ಕೆಟ್ಟು ೩ ತಿಂಗಳು ಗತಿಸಿದೆ. ಪುರಸಭೆ ಅಧಿಕಾರಿಗಳಾಗಲಿ, ಸದಸ್ಯರಾಗಲಿ ಕ್ಯಾರೆ ಎನ್ನುತ್ತಿಲ್ಲ ಅಧಿಕಾರದ ನಶೆಯಲ್ಲಿ ತಿರುಗುತ್ತಿದ್ದಾರೆ. ಹಲವು ಬಾರಿ ಪುರಸಭೆ ಸದಸ್ಯರಿಗೆ ಕರೆ ಮಾಡಿದ್ದೇವೆ, ನೂತನ ಅಧ್ಯಕ್ಷರಿಗೆ ಕರೆ ಮಾಡಿದ್ದೇವೆ ಯಾರೂ ಕೂಡಾ ಸ್ಪಂದನೆ ಮಾಡಿರುವುದಿಲ್ಲ. ತುಂಬಿದ ಚರಂಡಿ ಸ್ವಚ್ಚವಾಗಿಲ್ಲ ಹಲವು ಕಡೆ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಈ ಸಮಸ್ಸೆಗಳಿಗೆ ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಕಾರಣ ಕರ್ತವ್ಯಲೋಪದ ಅಡಿಯಲ್ಲಿ ಸಂಬಂಧಪಟ್ಟ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು.
ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮಾತನಾಡಿ, ಆಯಾ ವಾರ್ಡುಗಳ ಸಮಸ್ಯೆಗಳನ್ನು ಆಲಿಸುವಂತೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು ಅಲ್ಲದೆ ಸಮಸ್ಯೆಗಳಿಗೆ ಸ್ಪಂದಿಸುವಂತೆ ದೂರವಾಣಿ ಸಂಖ್ಯೆಗಳನ್ನು ಬದಲಾವಣೆ ಮಾಡಲಾಗಿದ್ದು ಸಾರ್ವಜನಿಕರು ವಾರ್ಡಗಳ ಸಮಸ್ಯೆಗಳ ಕುರಿತು ದೂರುಗಳನ್ನು ಸ್ವೀಕರಿಸಿ ಕ್ರಮ ಜರುಗಿಸುವಂತೆ ತಿಳಿಸಲಾಗಿದ್ದು ಕೂಡಲೇ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಈ ವೇಳೆ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಸ್ಥಳೀಯ ನಿವಾಸಿಗಳಾದ ದೌಲತ ಬಳಗಾನೂರ, ರವಿ ವಾಲಿಕಾರ, ಉದಂಡ ಚಿಕ್ಕ ಸಿಂದಗಿ, ಸಿದ್ದು ಬಳಗಾನೂರ, ರಮೇಶ ಸರಸಂಬಿ, ದಾದಾಪೀರ ನಾಲತವಾಡ, ಕಮಲಾಭಾಯಿ ಭೂತಿ, ಶ್ವೇತಾ ಚಿಕ್ಕ ಸಿಂದಗಿ, ಶಿವಲಿಂಗಮ್ಮ ಬಳಗಾನೂರ ಸೇರಿದಂತೆ ಅನೇಕರು ಇದ್ದರು.