spot_img
spot_img

ಬಸವ ಭಕ್ತರಲ್ಲಿ ವಿನಮ್ರ ಪ್ರಾರ್ಥನೆ

Must Read

spot_img
- Advertisement -

 ಇ ತ್ತೀಚೆಗೆ  ಪೇಜಾವರ ಶ್ರೀಗಳು ಮಂಗಳೂರಿನಲ್ಲಿ ಆಯೋಜಿಸಿದ ವಚನ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಅಧ್ಯಕ್ಷ ಡಾ ಅರವಿಂದಣ್ಣ ಜತ್ತಿ ಅವರು ಪಾಲ್ಗೊಂಡಿದ್ದು ದುರಂತದ ಸಂಗತಿ.

900 ವರ್ಷಗಳ ಮೇಲೆ ವೈದಿಕರು ಬಸವಣ್ಣವರನ್ನು ತಮ್ಮ ಸಭೆ ಸಮಾರಂಭದಲ್ಲಿ ತರುವ ಚಿಂತಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ, ಬಸವ ಭಕ್ತರು ಯಾವ ಆಚಾರ್ಯತ್ರಯರ ವಿರೋಧಿಗಳಲ್ಲ, ಆದರೆ ಅವರ ತತ್ವ ಸಿದ್ಧಾಂತಗಳನ್ನು ಒಪ್ಪುವುದಿಲ್ಲ. ಆದರೆ ಪೌರೋಹಿತ್ಯ ಪ್ರಧಾನವಾದ ವೈದಿಕರು ಬಸವಣ್ಣನವರನ್ನು ಒಪ್ಪುವದಿಲ್ಲ ಮತ್ತು ಶರಣರ ತತ್ವ ಸಿದ್ಧಾಂತಗಳನ್ನು ದ್ವೇಷಿಸುತ್ತಾರೆ ವಿರೋಧಿಸುತ್ತಾರೆ. ಹೀಗಿದ್ದಾಗ ವೇದಿಕೆಯ ಮೇಲೆ ಪೇಜಾವರ ಶ್ರೀಗಳು ವಚನಗಳು ವೇದ ಶಾಸ್ತ್ರಗಳ ಕನ್ನಡೀಕರಣವಾಗಿದೆ ಎಂದು ಹೇಳಿದಾಗ ತುಟಿ ಪಿಟಕ್ಕೆನ್ನದೆ ಮೌನವಾಗಿದ್ದ ಡಾ ಅರವಿಂದ ಜತ್ತಿ ಅವರ ನಡೆಯು ಅನೇಕರಲ್ಲಿ ಸಂಶಯ ಮೂಡಿಸಿದೆ.

ಪೂಜ್ಯ ಪೇಚಾವರ ಶ್ರೀಗಳೇ ಮಂಗಳೂರಿನಲ್ಲಿ ನಡದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಶರಣರು ಶಾಸ್ತ್ರಗಳಲ್ಲಿ ಇರುವುದನ್ನೇ ಕನ್ನಡದಲ್ಲಿ ಮನೆಮನೆಗೆ ತಲುಪಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

ಪೂಜ್ಯ ಶ್ರೀ ಪೇಜಾವರ ಶ್ರೀಗಳಿಗೆ ಕೆಲವು ವಚನಗಳ ಅರ್ಥ ಗೊತ್ತಾಗುತ್ತಿಲ್ಲ ಅಂತ ಕಾಣಿಸುತ್ತದೆ.
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ ವೇದ ನಾಡು ನಡುಗಿತ್ತು ಎಂಬ ಬಸವಣ್ಣನವರ ಆಶಯ ವಚನ ಅರ್ಥವಾಗುವದಿಲ್ಲವೇ ?

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಭಾರವನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.

ವೇದಂಗಳೆಲ್ಲ ಬ್ರಹ್ಮನೆಂಜಲು, ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು, ಆಗಮಂಗಳೆಲ್ಲ ರುದ್ರನೆಂಜಲು, ಪುರಾಣಂಗಳೆಲ್ಲ ವಿಷ್ಣುವಿನೆಂಜಲು, ನಾದಬಿಂದುಕಲೆಗಳೆಂಬವು ಅಕ್ಷರತ್ರಯದೆಂಜಲು, ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು ಇಂತಿವೆಲ್ಲವ ಹೇಳುವರು ಕೇಳುವರು ಪುಣ್ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ.

- Advertisement -

ನಾಲ್ಕು ವೇದವನೋದಿದನಂತರ ಮನೆಯ ಬೋನವ ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು. ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ ಮುಚ್ಚಿದರು. “ಶ್ವಾನೋ ಶ್ರೇಷ” ವೆಂದು ಇಕ್ಕಿದೆನು ಮುಂಡಿಗೆಯ. ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು. ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ ಮೋರೆಯ ಮೇಲೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.

ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು

ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು ಸಂಪಾದನೆ. ಪುರಾಣ ಘನವೆಂಬುದೊಂದು ಸಂಪಾದನೆ. ಆಗಮ ಘನವೆಂಬುದೊಂದು ಸಂಪಾದನೆ. ಅಹುದೆಂಬುದೊಂದು ಸಂಪಾದನೆ. ಅಲ್ಲವೆಂಬುದೊಂದು ಸಂಪಾದನೆ. ಗುಹೇಶ್ವರನೆಂಬ ಮಹಾಘನದ ನಿಜಾನುಭಾವಸಂಪಾದನೆಯ ಅರಿಯದ ಕಾರಣ ಹಲವು ಸಂಪಾದನೆಗಳಾದವು.

ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು

ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು, ಪುರಾಣ ಪೂರೈಸಲರಿಯದೆ ಕೆಟ್ಟವು. ಹಿರಿಯರು ತಮ್ಮ ತಮ್ಮ(ತಾವು ?) ಅರಿಯದೆ ಕೆಟ್ಟರು: ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು. ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ ?

ವೇದಂಗಳೆಂಬವು ಬ್ರಹ್ಮನ ಬೂಟಾಟ. ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ. ಆಗಮಗಳೆಂಬವು ಋಷಿಯ ಮರುಳಾಟ. ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ (ಒದ್ದಾಟ?) ಇಂತು ಇವನು ಅರಿದವರ ನೇತಿಗಳೆದು ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು !

ವೇದಂಗಳ ಹಿಂದೆ ಹರಿಯದಿರು ಹರಿಯದಿರು. ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು. ಪುರಾಣಂಗಳ ಹಿಂದೆ ಬಳಸದಿರು ಬಳಸದಿರು. ಆಗಮಂಗಳ ಹಿಂದೆ ತೊಳಲದಿರು ತೊಳಲದಿರು. ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.

ಶಾಸ್ತ್ರವೆಂಬುದು ಮನ್ಮಥಶಸ್ತ್ರವಯ್ಯಾ. ವೇದಾಂತವೆಂಬುದು ಮೂಲ ಮನೋವ್ಯಾಧಿಯಯ್ಯಾ. ಪುರಾಣವೆಂಬುದು ಮೃತವಾದವರ ಗಿರಾಣವಯ್ಯಾ. ತರ್ಕವೆಂಬುದು ಮರ್ಕಟಾಟವಯ್ಯಾ. ಆಗಮವೆಂಬುದು ಯೋಗದ ಘೋರವಯ್ಯಾ. ಇತಿಹಾಸವೆಂಬುದು ರಾಜರ ಕಥಾಭಾಗವಯ್ಯಾ. ಸ್ಮೃತಿಯೆಂಬುದು ಪಾಪಪುಣ್ಯ ವಿಚಾರವಯ್ಯಾ. ಆದ್ಯರ ವಚನವೆಂಬುದು ಬಹುವೇದ್ಯವಯ್ಯಾ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ತಿಳಿಯಕ್ಕೆ.

ನಮ್ಮ ನಡಾವಳಿಗೆ ನಮ್ಮ ಪುರಾತರ ನುಡಿಯೆ ಇಷ್ಟವಯ್ಯಾ. ಸ್ಮೃತಿಗಳು ಸಮುದ್ರದ ಪಾಲಾಗಲಿ; ಶ್ರುತಿಗಳು ವೈಕುಂಠವ ಸೇರಲಿ; ಪುರಾಣಗಳು ಅಗ್ನಿಯ ಸೇರಲಿ; ಆಗಮಗಳು ವಾಯುವ ಹೊಂದಲಿ. ಎಮ್ಮ ನುಡಿ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾಲಿಂಗದ ಹೃದಯದೊಳು ಗ್ರಂಥಿಯಾಗಿರಲಿ.

ಇಂಥ ಐದುನೂರಕ್ಕೂ ಅಧಿಕ ವಚನಗಳನ್ನು ನಾವು ಕಾಣುತ್ತೇವೆ ದಯವಿಟ್ಟು ನಿಮ್ಮ ನಿಮ್ಮ ವೈದಿಕ ಧರ್ಮದ ಪ್ರಸಾರ ಮಾಡಿ ವಚನಗಳು ವೇದಗಳು ಇಂದಿಗೂ ಒಟ್ಟಿಗೆ ಹೋಗುವದಿಲ್ಲ ಅವರೆಡರ ಮಾರ್ಗವೇ ಬೇರೆ ಬೇರೆ.

ಲಿಂಗಾಯತ ಮಠಗಳೂ ಇಂದು ವೈದಿಕ ವ್ಯವಸ್ಥೆಯ ಪ್ರಭಾವಕ್ಕೆ ಒಳಪಟ್ಟಿವೆ. ಯಾವೊಬ್ಬ ಬಸವ ಪ್ರಣೀತ ಸ್ವಾಮೀಜಿ ರಾಜಕಾರಣಿ ಇಂತಹ ನಡೆಯನ್ನು ಖಂಡಿಸಿಲ್ಲ, ಅರವಿಂದಣ್ಣವರ ಆರೋಗ್ಯ ಸುಧಾರಿಸಲಿ, ಬಸವ ಸಮಿತಿಯಲ್ಲಿ ಆಚಾರ್ಯರ ವೃಂದಾವನ ಸ್ಥಾಪಿಸ ಬಹುದು.
ಪೇಜಾವರ ಶ್ರೀಗಳು ಮೊದಲು ವಚನ ಸಾಹಿತ್ಯವನ್ನು ಗಂಭೀರವಾಗಿ ಓದಲಿ, ಅವರೂ ಪರಿವರ್ತನೆಗೊಂಡು ಎಲ್ಲ ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟು ಬಸವಣ್ಣನವರಂತೆ
ಅಸಮಾನತೆಯ ವಿರುದ್ಧ ಹೋರಾಡಲಿ, ತಮ್ಮ ಶ್ರೀ ಮಠದಲ್ಲಿ ವಚನಸಾಹಿತ್ಯ ಲೈಬ್ರರಿ ಮತ್ತು ಅಧ್ಯಯನ ಕೇಂದ್ರ ಆರಂಭಿಸಲಿ, ಸಾಧ್ಯವಾದರೆ ಬಸವಣ್ಣವರ ಪುತ್ಥಳಿ ಇಲ್ಲಾ ಭಾವ ಚಿತ್ರವನ್ನು ಗೌರವ ಪೂರ್ವಕ ಸ್ಥಾನದಲ್ಲಿಡಲು ಮನವಿ.

ಲಿಂಗಾಯತ ಇದು ಶ್ರಮಿಕರ, ದಲಿತರ, ಶೋಷಿತರ, ಕಾರ್ಮಿಕರ, ರೈತರ, ಮಹಿಳೆಯರ ಮೂಲ ನಿವಾಸಿಗಳ, ದಮನಿತರ ಚಳವಳಿ, ಬುದ್ಧ ಭಾರತ ಬಿಟ್ಟು ಹೋದಂತೆ ಮಹಾವೀರರನ್ನು ಆಪೋಶನಗೊಳಿಸಿದಂತೆ, ಬಸವಣ್ಣನವರನ್ನು ನೀವು ಯಾಮಾರಿಸಲಾರಿರಿ. ಬಸವಣ್ಣ ಜಗವು ಕಂಡ ಅಪ್ರತಿಮ ಬಂಡುಕೋರ ಮತ್ತು ಸಮಾಜವಾದಿ ಚಿಂತಕ.

ಬಂಧುಗಳೇ ವಚನದರ್ಶನ ಎಂಬ ಅತ್ಯಂತ ವಿವಾದಾಸ್ಪದ ಕೃತಿಯನ್ನು ಪ್ರಕಟ ಮಾಡಿದರು, ಯಾವ ಪರಿಣಾಮ ಬೀರಲಿಲ್ಲ, ಶರಣರ ಶಕ್ತಿ ಎಂಬ ಅತ್ಯಂತ ಕಳಪೆ ಚಲನ ಚಿತ್ರವನ್ನು ಇವೆ ಮನಸ್ಸುಗಳು ಸಿದ್ಧ ಪಡಿಸಿದವು, ಎಲ್ಲಾ ಪ್ರಯತ್ನಗಳು ಸೋತು ಸುಣ್ಣವಾದಾಗ ಈಗ ವೈದಿಕರ ಅಂಗಳದಲ್ಲಿ ವಚನ ಸಾಹಿತ್ಯ ಸಮ್ಮೇಳನ ಅದೂ ಬಸವ ಸಮಿತಿಯ ಅರವಿಂದ ಜತ್ತಿ ಅವರ ಸಮ್ಮುಖದಲ್ಲಿ ನಡೆಸುತ್ತಿರುವುದು ಅತ್ಯಂತ ನೋವಿನ ಸೂಕ್ಷ್ಮ ವಿಚಾರವಾಗಿದೆ.

ಬಸವ ಭಕ್ತರು ಅಂದು ಕಲ್ಯಾಣ ಕ್ರಾಂತಿಯಲ್ಲಿ ಶರಣರು ತಮ್ಮ ಜೀವದ ಹಂಗು ತೊರೆದು ವಚನಗಳನ್ನು ಸಂರಕ್ಷಿಸಿದಂತೆ ಇಂದು ಪ್ರತಿಯೊಬ್ಬರೂ ನಮ್ಮ ಶರಣರ ಸಂಸ್ಕೃತಿ ಬಸವಣ್ಣನವರನ್ನು ಉಳಿಸಿಕೊಳ್ಳಲು ಹೋರಾಡ ಬೇಕಿದೆ. ಬನ್ನಿ ಕೈ ಜೋಡಿಸಿ.

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group