ಧಾರವಾಡ – ವಚನ ದರ್ಶನ ಎಂಬ ಕೃತಿಯನ್ನು ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಧಾರವಾಡದ ಬಸವಕೇಂದ್ರದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಗುರುವಾರ ಧಾರವಾಡ ದಲ್ಲಿ ಸೇರಿದ ಬಸವ ಕೇಂದ್ರದ ಸದಸ್ಯರು ಹಾಗೂ ಅಕ್ಕನ ಅರಿವು ಬಳಗದ ಸದಸ್ಯರು, ಬೆಳಗಾವಿ, ಗದಗ, ಧಾರವಾಡ ಹುಬ್ಬಳ್ಳಿಯ ಬಸವಭಕ್ತರು ಧಾರವಾಡ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪತ್ರದ ಸಾರಾಂಶ ಇಂತಿದೆ ;
ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು
ಮಾನ್ಯ ಮುಖ್ಯ ಮಂತ್ರಿಗಳು
ಕರ್ನಾಟಕ ಘನ ಸರಕಾರ
ಬೆಂಗಳೂರು
(ಸನ್ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ)
ವಿಷಯ – ವಿವಾದಿತ ವಚನ ದರ್ಶನ ಪುಸ್ತಕವನ್ನು ಮುಟ್ಟಗೋಲು ಹಾಕಲು ಮನವಿ
ಸನ್ಮಾನ್ಯರೇ
ಕೆಲ ಸಂಪ್ರದಾಯವಾದಿ ಶಕ್ತಿಗಳು ಇಂದು ವಚನ ಸಾಹಿತ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಖೋಟಾ ವಚನ ಪ್ರಕ್ಷಿಪ್ತ ವಚನ ಮತ್ತು ಸಂಸ್ಕೃತ ಉಕ್ತಿಗಳನ್ನು ಒಳಗೊಂಡ ಕೆಲ ದೋಷಪೂರಿತ ವಚನಗಳನ್ನು ಉಲ್ಲೇಖಿಸಿ ವಚನ ಚಳವಳಿಗೆ ಆಗಮ ವೇದ ಶಾಸ ಉಪನಿಷತ್ ಆದರ್ಶಪ್ರಾಯವಾಗಿದ್ದು ಲಿಂಗಾಯತ ಧರ್ಮ ಮತ್ತು ವಚನ ಸಾಹಿತ್ಯವು ವೇದ ಆಗಮ ಉಪನಿಷತ್ ಗಳ ವಿಕಾಸ ಎಂದು ನಿರೂಪಿಸುವ ಹುಸಿ ಪ್ರಯತ್ನವೆಂದು ಕಂಡು ಬರುತ್ತದೆ .
ಇಂದು ಬಸವ ತತ್ವವು ಜಗತ್ತಿನ ಪ್ರಗತಿಪರ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಮಾದರಿ ಎನಿಸಿದ ಶರಣರ ಅನುಭವ ಮಂಟಪ ಪರಿಕಲ್ಪನೆಯನ್ನು ಬುಡುಮೇಲು ಮಾಡುವ ರೀತಿಯಲ್ಲಿ ಕೆಲ ಸಂಪ್ರದಾಯವಾದಿಗಳು ವಚನ ದರ್ಶನ ಕೃತಿ ರಚಿಸಿದ್ದಾರೆ .
ಬಸವಣ್ಣನವರು ವರ್ಗ ವರ್ಣ ಲಿಂಗಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಬಂಡಾಯ ಧೋರಣೆ ಹೊಂದಿದ ಪುರೋಗಾಮಿ ವಿಚಾರಗಳಿಂದ ವಚನ ಚಳವಳಿಯನ್ನು ಹುಟ್ಟು ಹಾಕಿದರು. ಎಲ್ಲಾ ಕಾಯಕದ ವರ್ಗದವರು ಇಂತಹ ಅಪೂರ್ವ ವೈಚಾರಿಕ ಕ್ರಾಂತಿಗೆ ತಮ್ಮನ್ನು ತೊಡಗಿಸಿಕೊಂಡರು. ಕಂಬಾರ ಕುಂಬಾರ ಅಗಸ ಬೆಸ್ತ ಮಾದಿಗ ಮೇದಾರ ಹೀಗೆ ಬದುಕಿನಲ್ಲಿ ಅಗತ್ಯವಿರುವ ಶ್ರಮ ಸಂಸ್ಕೃತಿಯ ವಾರಸುದಾರರು ಶರಣರು.
ಶರಣರು ಹೊರಗಿನ ಭೌತಿಕ ದೇವರಗಳನ್ನು ಗುಡಿ ಸಂಸ್ಕೃತಿ ಕಂದಾಚಾರ ಬಹುದೇವೋಪಾಸನೆ ಸಾಂಪ್ರದಾಯಿಕ ಅಂಧ ಶೃದ್ಧೆಗಳ ವಿರುದ್ಧ ಬಂಡೆದ್ದರು ಶರಣರು.
ವಚನ ಚಳವಳಿಗೆ ತನ್ನದೇ ಆದ ಸ್ವಾನುಭಾವದ ನೆಲೆ ಇದೆ. ಅದು ವೇದ ಆಗಮ ಶಾಸ್ತ್ರ ಪುರಾಣಗಳಿಂದ ಪ್ರಭಾವಿತವಾಗದೆ ಅದಕ್ಕೆ ಭಿನ್ನವಾಗಿ ತನ್ನ ಕಾಯಕದ ಪಾರಿಭಾಷಿಕ ಪದಗಳಿಂದ ಸುಂದರ ಮುಕ್ತ ಶೈಲಿಯ ಗದ್ಯ ಪದ್ಯ ಮಿಶ್ರಿತ ಪುರೋಗಾಮಿ ಸಾಹಿತ್ಯ ಎನ್ನುವುದು ಹಲವು ಶತಕಗಳಿಂದ ದಾಖಲಾಗಿದೆ. ಇಂತಹ ಸುಂದರ ವಚನ ಸಾಹಿತ್ಯವೂ ಹನ್ನೆರಡನೆಯ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಸುಮಾರು 250 ವರ್ಷಗಳ ವರೆಗೆ ಕಾಲಗರ್ಭದಲ್ಲಿ ಹೂತು ಹೋಗಿತ್ತು.
ಹದಿನೈದನೆಯ ಶತಮಾನದ ಹಂಪಿಯ ಪ್ರೌಢದೇವರಾಯನ ಕಾಲದಲ್ಲಿ ಮತ್ತೆ ವಚನಗಳು ಸಂಕಲನಕ್ಕೆ ಮತ್ತು ಸಂಪಾದನೆಗೆ ಒಳಪಟ್ಟವು. ಶೂನ್ಯ ಸಂಪಾದನೆ ಕೃತಿಯೂ ಸಹಿತ ಅನ್ಯ ಧರ್ಮಿಯರ ಪೈಪೋಟಿಗೆ ಇಳಿದು ಕೆಲವು ಪವಾಡ ಪುರಾಣ ಕಲ್ಪಿತ ದೃಶ್ಯಗಳನ್ನು ಸೇರಿಸಿದರು. ಆಗ ಸಂಸ್ಕೃತ ಉಕ್ತಿಗಳ ಸೇರಿಕೆ ಪ್ರಕ್ಷಿಪ್ತತೆ ಮತ್ತು ಖೋಟಾ ವಚನಗಳ ಸೇರ್ಪಡೆಯಿಂದಾಗಿ ವಚನ ಚಳವಳಿಯಲ್ಲಿ ಸ್ವಲ್ಪ ಗೊಂದಲ ಉಂಟಾಗಿದ್ದು ಸಹಜ ಮತ್ತು ಸ್ವಾಭಾವಿಕ . ಇಂತಹ ಪ್ರಕ್ಷಿಪ್ತತೆ ಪರಿಷ್ಕರಣೆಯ ಬಗ್ಗೆ ಡಾ. ಫ ಗು ಹಳಕಟ್ಟಿ, ಪ್ರೊ. ಶಿ ಶಿ ಬಸವನಾಳ, ಡಾ. ಆರ್ ಸಿ ಹಿರೇಮಠ, ಡಾ ಎಂ ಎಂ ಕಲಬುರ್ಗಿ ಮುಂತಾದ ಅನೇಕ ಸಂಶೋಧಕರು ವಚನಗಳಲ್ಲಿನ ಪ್ರಕ್ಷಿಪ್ತತೆಯ ನಿವಾರಣೆ ಒಂದು ವೈಜ್ಞಾನಿಕ ಮತ್ತು ವೈಚಾರಿಕ ಶರಣರ ಆಶಯಗಳ ಮೇಲೆ ನಡೆಯಬೇಕು ಎಂದೆನ್ನುವ ಅಭಿಪ್ರಾಯಗಳು ದಾಖಲಾಗಿವೆ.
ಈಗ ಅಯೋಧ್ಯಾ ಪ್ರಕಾಶನದವರು ಶ್ರೀ ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಹೊರ ತಂದ ‘ವಚನ ದರ್ಶನ’ ಎಂಬ ಕೃತಿಯು ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ಕೃತಿಯಾಗಿದೆ.
ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರದಿಂದ ಬೇರೆ ಬೇರೆ ನಗರಗಳಲ್ಲಿ ವಚನ ದರ್ಶನ ಬಿಡುಗಡೆ ಮಾಡಿ ಪುಸ್ತಕವನ್ನು ಮಾರಾಟ ಮಾಡುತ್ತಿದ್ದಾರೆ. ವಚನ ಚಳವಳಿಗೆ ವೇದ ಶಾಸ್ತ್ರ ಆಗಮ ಮೂಲ ಎನ್ನುವ ರೀತಿಯಲ್ಲಿ ಬಿಂಬಿಸುವ ವಚನ ದರ್ಶನವು ಬಸವ ಭಕ್ತರ ಭಾವನೆಗೆ ಧಕ್ಕೆ ತರುವ ಕಾರ್ಯವಾಗಿದೆ. ಸಾರ್ವಕಾಲಿಕ ಸಮಾನತೆ ಶಾಂತಿ ಪ್ರೀತಿ ಸಮ ಬಾಳು ಸಮಪಾಲು ಎನ್ನುವ ಶ್ರೇಷ್ಠ ಧ್ಯೇಯ ಹೊಂದಿದ ಶರಣರ ಅಭಿವ್ಯಕ್ತಿಗೆ ಕಳಂಕ ತರುವ ವಚನ ದರ್ಶನವನ್ನು ಈ ಕೂಡಲೇ ಸರಕಾರ ಮುಟ್ಟುಗೋಲು ಹಾಕಬೇಕೆಂದು ಎಲ್ಲ ಬಸವ ಪರ ಸಂಘಟನೆಗಳ ಕಾರ್ಯಕರ್ತರು ಸನ್ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ ಇವರ ಮೂಲಕ ಸರಕಾರವನ್ನು ಒತ್ತಾಯಿಸುತ್ತೇವೆ . ಸರಕಾರವು ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಬಸವ ಪರ ಸಂಘಟನೆಗಳ ಜೊತೆಗೆ ನಮ್ಮ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಸರಕಾರವನ್ನು ಒತ್ತಾಯಿಸುತ್ತೇವೆ, ಅಧ್ಯಕ್ಷರು…. ಎಂಬುದಾಗಿ ಪತ್ರ ಬರೆದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ ಶಶಿಕಾಂತ ಪಟ್ಟಣ, ಸಿದ್ಧರಾಮ ನಡಕಟ್ಟಿ ಉಮೇಶ ಕಟಗಿ, ಸುಧಾ ಕಬ್ಬೂರ, ಜಯಶ್ರೀ ಪಾಟೀಲ, ಡಾ ಮೃತ್ಯುಂಜಯ ಶೆಟ್ಟರ್ ಮುಂತಾದ ಅನೇಕ ಬಸವ ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು