ಮೂಡಲಗಿ: ಪಟ್ಟಣದ ಪುರಸಭೆಯಿಂದ ಗೋಕಾಕ ಕ್ರಾಸ್ ವರೆಗೆ ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳ ಹಿಂದೆ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನೆಟ್ಟಿರುವ ಗಿಡಗಳನ್ನು ಈಗ ಕಟ್ಟಡ ಹಾಗೂ ಆಂಗಡಿಕಾರರ ಮಾಲಿಕರು ಗಿಡಗಳನ್ನು ಕಡಿದು ವಾಹನ ನಿಲುಗಡೆ ಮಾಡುತ್ತಿದ್ದು. ವಾಣಿಜ್ಯ ಮಳಿಗೆದಾರರು ವ್ಯಾಪಾರ ವಸ್ತುಗಳನ್ನು ಇಡಲಿಕ್ಕೆ ಉಪಯೋಗ ಮಾಡುತ್ತಿದ್ದಾರೆ. ತಾಲೂಕಾ ಕೇಂದ್ರವಾದ ಮೂಡಲಗಿ ಪಟ್ಟಣದ ರಸ್ತೆಯ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪಟ್ಟಣದ ಸರಕಾರಿ ಆಸ್ಪತ್ರೆಯಿಂದ ಲಕ್ಷ್ಮೀನಗರದ ಹಳ್ಳದವರೆಗೆ ನಿರ್ಮಿಸಿರುವ ಚರಂಡಿ ಮೇಲೆಯು ಸಹ ಅಂಗಡಿಕಾರರು ಮಾರಾಟ ವಸ್ತುಗಳನ್ನು ಇಟ್ಟು ಹಾಗೂ ಗರಸು ಹಾಕಿ ಚರಂಡಿ ಹಾಳು ಮಾಡುವುದರೊಂದಿಗೆ ಜನ ಸಂಚಾರಕ್ಕೆ ಅಡಚಣೆ ಮಾಡುತ್ತಿರುವದನ್ನು ತೆರುವುಗೊಳಿಸಿ ತಪ್ಪಿತಸ್ತರಿಗೆ ದಂಡ ವಿಧಿಸ ಬೇಕೆಂದು ಆಗ್ರಹಿಸಿದರು.
ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕಾ ಅಧ್ಯಕ್ಷ ಸಚಿನ ಲಂಕೆನ್ನವರ ಮಾತನಾಡಿ, ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳನ್ನು ಹಾಳು ಮಾಡುತ್ತಿರುವರ ಮೇಲೆ ಕ್ರಮ ಜರುಗಿಸದಿದ್ದಲ್ಲಿ ಹಾಗೂ ಚರಂಡಿಯ ಮೇಲೆ ಇರುವ ಅಂಗಡಿಗಳನ್ನು ತೆರವುಗೋಳಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಮಯದಲ್ಲಿ ಯಲ್ಲಪ್ಪ ಮನಕಪ್ಪಗೋಳ, ರವಿ ಮಹಾಲಿಂಗಪೂರ, ಪ್ರಭು ತೇರದಾಳ, ಮಹಾಲಿಂಗಯ್ಯ ಹಿರೇಮಠ, ಚುಟುಕುಸಾಬ ಮಂಟೂರ, ಹೊಳೇಪ್ಪ ಶಿವಾಪೂರ, ಪಡದಪ್ಪ ಕೋತಿನ, ಸುಭಾಸ ಕಡಾಡಿ, ಅಬ್ದುಲ ಪೈಲವಾನ್ ಮತ್ತಿತರು ಇದ್ದರು.