ಮೂಡಲಗಿ – ಸರ್ಕಾರ ಕೊಟ್ಟ ಮಾತನ್ನು ನೆನಪಿಸೊಣ ಮೀಸಲಾತಿ ಪಡೆಯೋಣ ಎಂಬ ಘೋಷಣೆಯಡಿ ಪಂಚಮಸಾಲಿ ಸಮಯದಾಯಕ್ಕೆ ೨ಎ ಮೀಸಲಾತಿಯ ಸಲುವಾಗಿ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
೨೦೨೧ ಸೆಪ್ಟೆಂಬರ್ ೧೫ ರ ಒಳಗಾಗಿ ಪಂಚಮಸಾಲಿಗಳಿಗೆ ೨ ಎ ಮೀಸಲಾತಿಯನ್ನು ಅನುಷ್ಠಾನಗೊಳಿಸುತ್ತೇವೆ ಎಂದು ವಿಧಾನಸೌಧದ ಅಧಿವೇಶನದಲ್ಲಿ ಕೊಟ್ಟ ಮಾತಿನಂತೆ ಸರ್ಕಾರ ನಡೆಯಲಿ ಎಂದು ನೆನಪಿಸಲು ಮೂಡಲಗಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ಮಾತನಾಡಿದ ITBT ರಾಷ್ಟ್ರೀಯ ಅಧ್ಯಕ್ಷ ದಿಲೀಪ ಜುಂಜರವಾಡ ಅವರು, ಲಿಂಗಾಯತ ಪಂಚಮಸಾಲಿ ಹಾಗೂ ಉಪನಾಮಗಳಾದ ಗೌಡಲಿಂಗಾಯತ, ಮಲೆ ಗೌಡ,ದೀಕ್ಷಾ ಪಂಚಮಸಾಲಿಗಳಿಗೆ 2A ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದಿಂದ ಬೆಂಗಳೂರಿನ ಆಡಳಿತ ಪೀಠದವರೆಗೆ ಪ್ರಥಮ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಐತಿಹಾಸಿಕ ದಾಖಲೆಯ ಪಾದಯಾತ್ರೆ , ಜಗತ್ತಿಗೆ ಪಂಚಮಸಾಲಿಗಳನ್ನು ಪ್ರಥಮ ಬಾರಿಗೆ ಶಕ್ತಿ ಪ್ರದರ್ಶನ ಮೂಲಕ ಪರಿಚಯಿಸುವ ಬೆಂಗಳೂರಿನ ಮಹಾ ರ್ಯಾಲಿ ಹಾಗೂ ೨೩ ದಿನಗಳ ನಿರಂತರ ಧರಣಿ ಸತ್ಯಾಗ್ರಹ ಮಾಡಿದ ಮೇಲೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳರವರು ಸದನದ ಒಳಗೆ ನಿರಂತರ ಹಕ್ಕೊತ್ತಾಯ ಮಾಡಿದ ಪರಿಣಾಮ ರಾಜ್ಯದ ಮುಖ್ಯಮಂತ್ರಿಗಳು ಮಾರ್ಚ ೧೫ ರಂದು ಆರು ತಿಂಗಳೊಳಗೆ ಅಂದರೆ ಸೆಪ್ಟೆಂಬರ್ ೧೫ ರ ಒಳಗಾಗಿ ಮೀಸಲಾತಿ ಸೌಲಭ್ಯ ಕಲ್ಪಿಸುತ್ತೇವೆ ಎಂದು ಅಧಿವೇಶನದಲ್ಲಿ ಕೊಟ್ಟ ಮಾತು ಕಡತಗಳಲ್ಲಿ ದಾಖಲಾಗಿದೆ.
ಸರ್ಕಾರ ಕೇಳಿದ ಕಾಲವಾಕಾಶ ಸೆಪ್ಟೆಂಬರ್ ೧೫ ಕ್ಕೆ ಮುಕ್ತಾಯವಾಗಲಿದೆ. ಆದ್ದರಿಂದ ಸರ್ಕಾರ ಕೊಟ್ಟ ಮಾತಿನಂತೆ ಮಾನ್ಯ ಮುಖ್ಯಮಂತ್ರಿ ಗಳು ಮೀಸಲಾತಿಯನ್ನು ನೀಡಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಇದಕ್ಕೂ ವಿಳಂಬವಾದಲ್ಲಿ ಅಕ್ಟೋಬರ್ ೧ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದೂ ಕೂಡ ಮನವಿಯ ಮೂಲಕ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿಯ ತಾಲೂಕಾ ಅಧ್ಯಕ್ಷ ಬಸವರಾಜ ಪಾಟೀಲ, ಬಸಪ್ರಭು ನಿಡಗುಂದಿ, ಈಶ್ವರ ಢವಳೇಶ್ವರ, ಹಣಂಮತ ಶಿವಾಪೂರ, ಮಲ್ಲು ಗೋಡಿಗೌಡರ, ಸದಾಶಿವ ನಿಡಗುಂದಿ ಹಾಗೂ ಇತರರು ಇದ್ದರು.