ಬೀದರ : ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದಲ್ಲಿ ಮಂಗಳವಾರ ರೇವಪ್ಪಯ್ಯ ಮುತ್ಯಾ ಬಿನ್ನಹ ( ಜಾತ್ರೆ ) ನಡೆಯಿತು.
ಭಾಲ್ಕಿ ತಾಲ್ಲೂಕಿನ ಮಾಜಿ ಶಾಸಕ ಪ್ರಕಾಶ ಖಂಡ್ರೆ ಜಾತ್ರೆಯಲ್ಲಿ ಭಾಗಿಯಾಗಿ ರೇವಪ್ಪಯ್ಯ ಮುತ್ಯಾನ ದರ್ಶನ ಪಡೆದರು.
ನಂತರ ಮಾತನಾಡಿದ ಅವರು
ರೇವಪ್ಪಯ್ಯ ಮುತ್ಯಾ ಎಂದರೆ ಹೋಳಿಗೆ ತುಪ್ಪದ ವಿಶೇಷ. ಕಲ್ಯಾಣ ಕರ್ನಾಟಕದಲ್ಲಿಯೇ ಸುಪ್ರಸಿದ್ಧವಾಗಿದೆ. ಅವರು ದಾಸೋಹ ಮಾಡುವ ಸಂದರ್ಭದಲ್ಲಿ ತುಪ್ಪ ಕಡಿಮೆ ಬಿದ್ದಾಗ ದೇವಸ್ಥಾನದ ಪರಿಸರದಲ್ಲಿನ ಗುಂಡದ ನೀರನ್ನು ತುಪ್ಪವಾಗಿಸಿರುವ ಸದ್ಗುರು ರೇವಪ್ಪಯ್ಯನವರು ಪವಾಡ ಪುರುಷರಾಗಿದ್ದರು ಎಂದು ನುಡಿದರು.
ರೇವಪ್ಪಯ್ಯನವರು ಬಸವಾದಿ ಶರಣರ ಕೊನೆಯ ಶರಣರಾಗಿದ್ದವರು. ಶರಣ ತತ್ವದಂತೆ ನಡೆ ನುಡಿ ಒಂದಾಗಿಸಿಕೊಂಡು ಜೀವನ ಸಾಗಿಸಿದವರು. ಅವರ ಕೊನೆಯ ಉಸಿರಿರುವರೆಗೂ ಪ್ರತಿನಿತ್ಯ ದಾಸೋಹ ಮಾಡಿದಂತವರು’ ಎಂದು ತಿಳಿಸಿದರು.
ಯುವ ಮುಖಂಡ ಪ್ರಸನ್ನ ಖಂಡ್ರೆ ಮಾತನಾಡಿ, ರೇವಪ್ಪಯ್ಯ ಮುತ್ಯಾ ಅಪ್ಪಟ ಕನ್ನಡಾಭಿಮಾನಿ ಆಗಿದ್ದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಪ್ರಥಮವಾಗಿ ಕನ್ನಡ ಶಾಲೆಯನ್ನು ಪ್ರಾರಂಭಿಸಿ ತಾವೇ ಸ್ವತಃ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಎಂದು ಹೇಳಿದರು.
ಜಾತ್ರೆಯಲ್ಲಿ ಭಾಗವಹಿಸಿದ ಸಾವಿರಾರು ಸದ್ಭಕ್ತರು ಪ್ರಸಾದವನ್ನ ಸ್ವೀಕರಿಸುತ್ತ ರೇವಪ್ಪಯ್ಯನ ಜೋಳಿಗಿ, ಜೋಳಿಗಿ ತುಂಬಾ ಹೋಳಿಗೆ ಎಂಬ ಜೈ ಘೋಷ ಕೂಗಿದ ಶಬ್ದಗಳು ದೇವಸ್ಥಾನದ ಸುತ್ತಮುತ್ತಲು ಕೇಳುವುದರ ಜೊತೆಗೆ ಮುತ್ಯಾ ಅವರ ಭಕ್ತಿ ಭಾವದ ಭಜನೆ ಕೀರ್ತನೇ ಭಕ್ತ ಸಮುದಾಯದ ಮನ ಹರ್ಷಿತ ಗೊಳಿಸಿತು.
ಆದರೆ ಎಲ್ಲಾ ಚನ್ನಾಗಿ ನಡೆಯುತ್ತಿದ್ದಾಗ ಕರೋನ ನಿಯಮಗಳನ್ನು ಯಾರು ಪಾಲನೆ ಮಾಡದೆ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.