ಕೆ.ಅರ್.ನಗರ -ಮೈಸೂರು ಮುಖ್ಯ ರಸ್ತೆಯಲ್ಲಿರುವ ಚೌಕಳ್ಳಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಸಹಾಯಕ ಮೆನೇಜರ್ ಅಶೀಶ್ ಕುಮಾರ್ ಶ್ರೀವಾಸ್ತವ್ ಅವರು ಸಾರ್ವಜನಿಕರೊಡನೆ ಕನ್ನಡದಲ್ಲಿ ವ್ಯವಹರಿಸುತ್ತಿಲ್ಲವೆಂದು ಸಾರ್ವಜನಿಕರು ಹಾಗೂ ಮಹಿಳಾ ಸಂಘಗಳಿಂದ ಅಪಾರ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ , ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಭೇರ್ಯ ರಾಮಕುಮಾರ್, ಮೈಸೂರು ನಗರಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎ.ಎಸ್.ನಾಗರಾಜ್ ಹಾಗೂ ಅರವಿಂದ ಶರ್ಮ ಇವರುಗಳ ತಂಡವು ಕೆನರಾ ಬ್ಯಾಂಕಿಗೆ ಭೇಟಿ ನೀಡಿ,ಬ್ಯಾಂಕ್ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಹಕ್ಕೊತ್ತಾಯ ಪತ್ರ ಸಲ್ಲಿಸಿತು.
ತಾವು ದೆಹಲಿ ಮೂಲದವರಾಗಿದ್ದು, ತಮಗೆ ಕನ್ನಡ ಕಲಿಯಲು ಆಸಕ್ತಿ ಇದೆ.ಬ್ಯಾಂಕ್ ನ ಮೆನೇಜರ್ ಮಾಲತಿ.ಕೆ.ಎಸ್.ಅವರು ತಮಗೆ ಪ್ರತಿದಿನವೂ ಎರಡೆರಡು ಕನ್ನಡ ಪದಗಳನ್ನು ಕಲಿಸುತ್ತಿದ್ದಾರೆ.
ತಾವು ಬ್ಯಾಂಕ್ ನ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸುವ ಉದ್ದೇಶದಿಂದ ಕನ್ನಡ ಕಲಿಯುತ್ತಿರುವುದಾಗಿ ಈ ಸಂದರ್ಭದಲ್ಲಿ ಅಶೀಶ್ ಕುಮಾರ್ ಕನ್ನಡ ಜಾಗೃತಿ ಸಮಿತಿ ಸದಸ್ಯರ ತಂಡಕ್ಕೆ ತಿಳಿಸಿದರು. ಆದಷ್ಟು ಬೇಗ ಕನ್ನಡ ಕಲಿತು ಗ್ರಾಹಕರಿಗೆ ಸ್ಪಂದಿಸುವಂತೆ ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ಸಮಿತಿ ತಂಡವು ಸೂಚಿಸಿತು