ಮೂಡಲಗಿ – ತಾಲೂಕಿನ ನಾಗನೂರಿನ ಸಮರ್ಥ ಕನ್ನಡ ಮತ್ತು ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಅಧ್ಯಕ್ಷ ಹಾಸ್ಟೆಲ್ ಮಕ್ಕಳಿಂದ ರಸ್ತೆ ರಿಪೇರಿ ಮಾಡಿಸಿದ ವರದಿ ಹಾಗೂ ದೂರು ಕುರಿತಂತೆ ವಿಚಾರಣೆಗೆ ಹಾಜರಾಗಲು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸಮನ್ಸ್ ಜಾರಿ ಮಾಡಿದೆ.
ಶಾಲೆಯ ಅಧ್ಯಕ್ಷ, ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐ ಯವರಿಗೆ ಸಮನ್ಸ್ ಜಾರಿ ಮಾಡಿರುವ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ದಿ. ೪ ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶ ನೀಡಿದೆ.
ಕಳೆದ ಜುಲೈ ೨೯ ರಂದು ಮೊಹರಂ ಹಬ್ಬದ ರಜೆಯ ದಿನದಂದು ಶಾಲೆಯ ಅಧ್ಯಕ್ಷ ಖುದ್ದಾಗಿ ನಿಂತು ಹಾಸ್ಟೆಲ್ ಮಕ್ಕಳಿಂದ ಮಳೆಯಿಂದ ಹದಗೆಟ್ಟ ಕೆನಾಲ್ ರಸ್ತೆ ರಿಪೇರಿ ಮಾಡಿಸುತ್ತಿರುವ ಬಗ್ಗೆ ಪತ್ರಕರ್ತ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಉಮೇಶ ಬೆಳಕೂಡ ಅವರು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಶಾಲೆ ಕಲಿಯಲು ಬರುವ ಮಕ್ಕಳಿಂದ ರಸ್ತೆ ರಿಪೇರಿ ಮಾಡಿಸಿರುವ ಅಧ್ಯಕ್ಷನ ಕ್ರಮದ ಬಗ್ಗೆ ವರದಿ ಬರೆದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಚಿಕ್ಕೋಡಿಯ ಡಿಡಿಪಿಐಯವರ ಗಮನಕ್ಕೆ ತಂದಿದ್ದರೂ ಶಾಲೆಯ ವಿರುದ್ಧ ಈ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಅದಕ್ಕಾಗಿ ಮಕ್ಕಳ ಹಕ್ಕು ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ವಿಚಾರಣೆ ನಡೆಸಲಿದೆ. ದೂರುದಾರರಿಗೂ ಈ ವಿಚಾರಣೆಗೆ ಹಾಜರಾಗಲು ಆಯೋಗ ತಿಳಿಸಿದೆ.
ಮೂಡಲಗಿ ಶಿಕ್ಷಣ ವಲಯದ ಅಧಿಕಾರಿಗಳು ಕೆನಾಲ್ ರಸ್ತೆಯ ಪಕ್ಕದಲ್ಲಿ ಸಮರ್ಥ ಶಾಲೆಗೆ ಪರವಾನಿಗೆ ನೀಡಿದ್ದು ಪ್ರತಿದಿನ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಬರಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿಯಂತೂ ಕೆನಾಲ್ ರಸ್ತೆ ಸಂಪೂರ್ಣ ಹದಗೆಡುತ್ತದೆ. ಶಾಲಾ ವಾಹನ ಹೊಯ್ದಾಡುತ್ತ ಹೋಗುತ್ತವೆ. ಶಾಲೆಯ ಗೇಟ್ ಪಕ್ಕದಲ್ಲಿಯೇ ವಿದ್ಯುತ್ ಟ್ರಾನ್ಸ್ ಫಾರ್ಮರ್ (ಟಿಸಿ) ಇರುತ್ತದೆ. ಪಕ್ಕದಲ್ಲಿಯೇ ದೊಡ್ಡ ತಗ್ಗು ತೆಗೆಯಲಾಗಿದೆ. ಶಾಲಾ ನಿವೇಶನದ ಒಂದು ಭಾಗದಲ್ಲಿ ಕಬ್ಬು ಬೆಳೆಯಲಾಗಿದೆ. ಸುತ್ತಮುತ್ತಲೂ ಬೆಳೆ ಇರುತ್ತದೆ ಇಂಥ ಜಾಗದಿಂದ ಅಪಾಯಕಾರಿ ಪ್ರಾಣಿಗಳು ಮಕ್ಕಳ ಮೇಲೆ ಎರಗುವ ಸಂಭವವೂ ಇರುತ್ತದೆ. ಇಂಥ ಅಪಾಯಕಾರಿ ಜಾಗದಲ್ಲಿ ಶಾಲೆ ಇದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳ ರಕ್ಷಣೆಯ ಬಗ್ಗೆ ಯಾಕೆ ಕಿಂಚಿತ್ತೂ ಗಮನವಿಲ್ಲದಂತೆ ಇದ್ದಾರೆ ಎಂಬುದೇ ಒಂದು ಯಕ್ಷ ಪ್ರಶ್ನೆಯಾಗಿದೆ.