spot_img
spot_img

ಸವದತ್ತಿ ಕೋಟೆಯಲ್ಲೊಂದು ಸುತ್ತು

Must Read

- Advertisement -

ಕಳೆದ ಎರಡು ವರ್ಷಗಳಿಂದ ಕೋವಿಡ್ ಸಲುವಾಗಿ ಎಲ್ಲಿಯೂ ಪ್ರವಾಸ ಕೈಗೊಂಡಿಲ್ಲ. ಈಗ ಸ್ವಲ್ಪ ಕೋವಿಡ್ ಚೇತರಿಕೆ ಆಗುತ್ತಿದೆ ಎನಿಸಿದರೂ ೩ನೇ ಅಲೆಯ ಎಚ್ಚರಿಕೆಯ ನಡುವೆಯೇ ಬದುಕನ್ನು ಕಳೆಯುವಂತಾಗಿದೆ. ಗುರುವಾರ ಆಫೀಸಿನಲ್ಲಿ ಊಟ ಮಾಡಿದ ನಂತರ ಕಂಪ್ಯೂಟರ್ ಪ್ರೋಗ್ರಾಮರ್ ವಿನೋದ ಹೊಂಗಲ, ಡಾಟಾ ಎಂಟ್ರಿ ಆಪರೇಟರ್ ಮಲ್ಲಿಕಾರ್ಜುನ ಹೂಲಿ, ಪ್ರೌಢ ವಿಭಾಗದ ಬಿ.ಆರ್.ಪಿ ರಾಜು ಭಜಂತ್ರಿ, ಬಿ.ಐ.ಇ.ಆರ್.ಟಿ ಸಿ.ವ್ಹಿ.ಬಾರ್ಕಿ ಪ್ರವಾಸದ ವಿಚಾರ ಮಾತನಾಡುತ್ತ ಇವತ್ತು ಆಫೀಸ್ ಅವಧಿ ಮುಗಿದ ನಂತರ ಸವದತ್ತಿ ಕೋಟೆಯನ್ನಾದರೂ ನೋಡೋಣವೇ.? ಎಂದು ಕೇಳಿದರು.

ಪ್ರತಿ ನಿತ್ಯವೂ ಕೋಟೆಯ ದಾರಿಯಲ್ಲಿ ಸಾಗಿಯೇ ಬರುವ ನನಗೆ ಕಳೆದ ವರ್ಷ ಮಳೆಗಾಲದಲ್ಲಿ ಕೋಟೆಯ ಹಲವು ಗೋಡೆಗಳು ಮಳೆಯಿಂದ ಹಾನಿಗೊಂಡ ವರದಿಯನ್ನು ಪತ್ರಿಕೆಯಲ್ಲಿ ಓದಿದ ನೆನಪು ಬಹುತೇಕ ಒಳಗಿನ ಆ ಅವಶೇಷಗಳನ್ನು ನೋಡಿದರಾಯಿತು ಎಂದುಕೊಂಡು ಆಗಲಿ ಸಂಜೆ ಆಫೀಸ ಅವಧಿಯ ನಂತರ ಹೋಗೋಣ ಎಂದು ತೀರ್ಮಾನಿಸಿದೆವು.

ಆಫೀಸಿನ ಕೆಲಸದ ಅವಧಿ ಮುಗಿಯಿತು. ನಮ್ಮ ನಮ್ಮ ಬೈಕ್‌ಗಳಲ್ಲಿ ಎಲ್ಲರೂ ಕೋಟೆಯತ್ತ ಪ್ರಯಾಣ ಬೆಳೆಸಿದೆವು. ನಾನು ಹಾಗೂ ಚಿದಾನಂದ ಬಾರ್ಕಿಯವರಿಗೆ ಈ ಕೋಟೆ ಚಿರಪರಿಚಿತ. ಕಾರಣ ನಾವಿಬ್ಬರೂ ಇದೇ ತಾಲೂಕಿನವರು. ರಾಜು ಭಜಂತ್ರಿ, ಮಲ್ಲಿಕಾರ್ಜುನ ಹೂಲಿ ಹೊಸಬರು. ವಿನೋದ ಕೂಡ ಯಕ್ಕುಂಡಿಯವನು. ಆದರೂ ಆತನೂ ಈ ಕೋಟೆಯೊಳಕ್ಕೆ ಬಂದಿರಲಿಲ್ಲವಂತೆ. ಹೀಗೆ ತಮ್ಮ ತಮ್ಮ ಅನಿಸಿಕೆ ಅವರು ತಿಳಿಸುತ್ತಲೇ ಕೋಟೆಯ ಮಹಾದ್ವಾರದ ಅಂಚಿನಲ್ಲಿ ನಾವೆಲ್ಲ ಬಂದಿದ್ದೆವು. ಅಲ್ಲಿನ ಅಚ್ಚ ಬಿಳುಪಿನ ಕಲ್ಲು, ಇನ್ನೂ ಗಟ್ಟಿಮುಟ್ಟಾದ ಅವುಗಳ ನೋಟ ಕಂಡು ಬೆರಗಾಗಿ ಆಶ್ಚರ್ಯದಿಂದ ನೋಡತೊಡಗಿದರು.

- Advertisement -

ಕೋಟೆಯು ರಕ್ಷಣಾ ಆವರಣವನ್ನು ಹೊಂದಿದ ಪ್ರದೇಶ, ದಿಬ್ಬ ಗುಡ್ಡಗಳ ಅಗ್ರ ಭಾಗಗಳಲ್ಲಿ ಕೋಟೆಗಳನ್ನು ಕಟ್ಟುವುದು ವಾಡಿಕೆ. ಅದೇ ರೀತಿ ಸವದತ್ತಿ ಕೋಟೆ ದಿಬ್ಬದ ಮೇಲಿರುವುದು. ಇದು ಎತ್ತರದ ಸ್ಥಳದಲ್ಲಿರುವುದರಿಂದ ಸುತ್ತಲೂ ವ್ಯಾಪಿಸಿರುವ ವಿಸ್ತಾರವನ್ನು ಸುಲಭವಾಗಿ ಕಾಣಬಹುದಾಗಿದೆ. ಇಂದಿಗೂ ಕೂಡ ಕೋಟೆಯ ಬುರುಜುಗಳ ಮೇಲೆ ನಿಂತು ಸುತ್ತಲೂ ಕಣ್ಣಾಯಸಿದರೆ ಸವದತ್ತಿಯ ಎಲ್ಲ ಸ್ಥಳಗಳು ಕಣ್ಣಿಗೆ ಗೋಚರಿಸುತ್ತವೆ. ಇದು ಶತ್ರುಗಳ ಆಕ್ರಮಣವನ್ನು ಸುಲಭವಾಗಿ ಗ್ರಹಿಸಲು ಅನುಕೂಲ ಎಂದೇ ನಮ್ಮ ಪೂರ್ವಜರು ಎತ್ತರದ ಸ್ಥಳದಲ್ಲಿ ಕೋಟೆಗಳನ್ನು ಕಟ್ಟುತ್ತಿದ್ದರು ಎಂಬುದಕ್ಕೆ ನಿದರ್ಶನ.

ಸವದತ್ತಿ ಇತಿಹಾಸ ಕಾಲದಿಂದಲೂ ತನ್ನದೇ ಆದ ಖ್ಯಾತಿ ಹೊಂದಿದೆ. ಸುಗಂಧವರ್ತಿ ಎಂದು ೧೨ ಹಳ್ಳಿಗಳ ಆಡಳಿತ ಕೇಂದ್ರವಾಗಿ ರಟ್ಟರ ಆಳ್ವಿಕೆಗೆ ಒಳಪಟ್ಟಿತ್ತು. ಈ ಕುರಿತಂತೆ” ಕಂಪಣ ಹನ್ನೆರಡರ ಮೊದಲ ಬಾಡ ರಾಜಧಾನಿ ಸುಗಂಧವರ್ತಿ” ಎಂದು ರಟ್ಟರ ಶಾಸನದಲ್ಲಿ ಉಲ್ಲೇಖವಿದೆ. ಕ್ರಿ,ಶ,೧೦೪೮ ರಿಂದ ೧೧೮೪ ರ ಅವಧಿ ಸವದತ್ತಿ ಸುಗಂಧವರ್ತಿ ಎಂದು ರಟ್ಟರ ರಾಜಧಾನಿಯಾಗಿತ್ತು.

- Advertisement -

ಡಾ.ಶಿ,ಬಾ,ಪಾಟೀಲರ ಪಿ.ಎಚ್.ಡಿ ಅಧ್ಯಯನ ಗ್ರಂಥ ಸವದತ್ತಿಯ ರಟ್ಟರು ಇದರ ಪುಟ ೧೦ ರಲ್ಲಿ ಸವದತ್ತಿ ಕುರಿತು “ಸವದತ್ತಿ ಬೆಟ್ಟದ ಕೊಳ್ಳದೊಳಗಿನ ವರ್ತಿ(ಝರಿ)ಗಳ ನೀರು ಸುಂಗಂಧ ವಾಸನೆ ಇದ್ದರಬಹುದು ಅದಕ್ಕೆ ಇದನ್ನು ಸುಗಂಧವರ್ತಿ ಎಂದು ಕರೆದಿರಬಹುದೆಂದು ಅಭಿಪ್ರಾಯ ವ್ಯಕ್ತವಾಗಿದೆ.

ಈ ಹಿಂದೆ ಈ ಊರನ್ನು ಶ್ರವಣದತ್ತಿ ಎಂದೂ ಕರೆಯುತ್ತಿದ್ದರು. ಅಂದರೆ ಶ್ರವಣರಿಗೆ ದತ್ತಿ ಬಿಟ್ಟಿದ್ದಕ್ಕಾಗಿ ಶ್ರವಣದತ್ತಿ ಎಂದಾಗಿತ್ತು. ಸವದತ್ತಿ ಪ್ರವೇಶವಾಗುತ್ತಿದಂತೆ ಕೋಟೆಯೊಂದು ಕಾಣತೊಡಗುತ್ತದೆ. ಇದು ಎರಡನೇ ಜಾಯಗೊಂಡ ದೇಸಾಯಿ ನಿರ್ಮಿಸಿದ ಕೋಟೆ.ಸರಕಾರ ಹಾಗೂ ಸ್ಥಳೀಯ ಪುರಸಭೆ ಈ ಕೋಟೆಯನ್ನು ಅಭಿವೃದ್ದಿ ಪಡಿಸಿದ ಕಾರಣ ಇದೊಂದು ಐತಿಹಾಸಿಕ ಪ್ರವಾಸೀ ತಾಣವಾಗಿದೆ.

ಈ ಕೊಟೆಯೊಳಗಡೆ ಸ್ಥಳೀಯ ರಂಗ ಕಲಾವಿದರ ಸಂಘಟನೆಗಳು ಪ್ರತಿವರ್ಷವೂ ನೀನಾಸಂ, ರಂಗಾಯಣದಂಥ ರಾಜ್ಯದ ಖ್ಯಾತ ನಾಟಕಸಂಘಟನೆಗಳ ನಾಟಕಗಳನ್ನೊಳಗೊಂಡ ನಾಟಕೋತ್ಸವ ನಡೆಯುತ್ತದೆ ಇದನ್ನು ಪರಸಗಡ ನಾಟಕೋತ್ಸವ ಎಂದೂ ಕರೆಯುವರು. ಸವದತ್ತಿ ಕೋಟೆ ಅನೇಕ ಚಲನಚಿತ್ರಗಳಲ್ಲಿ ಚಿತ್ರೀಕರಣವಾಗುವ ಮೂಲಕ ಬೆಳ್ಳಿ ಪರದೆ ಹಾಗೂ ಕಿರುತೆಯಲ್ಲೂ ರಾರಾಜಿಸಿದೆ ಅದರಲ್ಲೂ ಕಿತ್ತೂರ ಚೆನ್ನಮ್ಮ,ವೀರ ಸಿಂಧೂರ ಲಕ್ಷ್ಮಣ, ನೀಲಾ, ಸ್ವಾಮಿ, ಶುಕ್ಲಾಂಬರಧರಂ, ಶ್ರೀರಾಮ್ ಮೊದಲಾದ ಅನೇಕ ಚಲನಚಿತ್ರಗಳು ಕಿರುತೆರೆಯಲ್ಲಿ ಪ್ರಸಾರವಾದ ಐತಿಹಾಸಿಕ ಧಾರಾವಾಹಿ ಸಂಗೊಳ್ಳಿ ರಾಯಣ್ಣದ ಬಹುತೇಕ ಭಾಗಗಳು ಈ ಕೋಟೆಯಲ್ಲಿ ಚಿತ್ರೀಕರಣವಾಗಿವೆ.

ಈ ಎಲ್ಲ ಸಂಗತಿಗಳನ್ನು ಚರ್ಚಿಸುತ್ತ ಕೋಟೆಯೊಳಗೆ ಬಂದೆವು.ಅಲ್ಲಿ ಕಾಡಸಿದ್ದೇಶ್ವರ ದೇವಾಲಯವನ್ನು ಮೊದಲು ನೋಡೋಣ ಎನ್ನುತ್ತ ಮೆಟ್ಟಿಲುಗಳನ್ನೇರತೊಡಗಿದೆವು. ಅಷ್ಟರಲ್ಲಿ ಚಿದಾನಂದ ಬಾರ್ಕಿ ಎರಡು ಮೂರು ವರ್ಷ ಆಗಿತ್ತು ನಾಟಕ ನೋಡಲು ಬಂದಿದ್ದೆ,ದೇವಸ್ಥಾನಕ್ಕೆ ಹೋಗಿರಲಿಲ್ಲ ಎನ್ನುತ್ತ ಮೆಟ್ಟಿಲು ಹತ್ತುತ್ತ ಹಳೆಯ ಕೋಟೆಯಲ್ಲಿನ ನೆನಪುಗಳನ್ನು ಬಿಚ್ಚಿದರು.ಸವದತ್ತಿಯನ್ನು ಮೊದಲು ಸುಗಂಧವರ್ತಿ ಎಂದು ಕರೆಯುತ್ತಿದ್ದರು ಎನ್ನುವ ಸಂಗತಿ ಶಿ.ಬಾ.ಪಾಟೀಲರ ಸವದತ್ತಿ ರಟ್ಟರು ಒಂದು ಅಧ್ಯಯನ ಪಿ.ಎಚ್.ಡಿ.ಪ್ರಬಂಧದಲ್ಲಿ ಓದಿದ ನೆನಪನ್ನು ತಿಳಿಸುತ್ತ ಕ್ರಿ.ಶ.೯೮೦-೧೨೨೯ ರ ವರೆಗೆ ರಟ್ಟರ ರಾಜಧಾನಿಯಾಗಿ.ಕ್ರಿ.ಶ.೧೫೬೫-೧೫೭೩ ರ ವರೆಗೆ ಅವರಾದಿಯ ವಿಠ್ಠಪ್ಪಗೌಡನ ಅಧೀನ.ಕ್ರಿ.ಶ.೧೬೨೦-೩೮ ರ ವರೆಗೆ ನವಲಗುಂದವನ್ನಾಳಿದ ಹನ್ನೆರಡೆಯ ದೇಸಾಯಿ ಜಾಯಗೊಂಡನ ಕೈಯಲ್ಲಿತ್ತು.ಕ್ರಿ.ಶ ೧೭೩೦ ರಲ್ಲಿ ನವಲಗುಂದ ದೇಸಾಯಿಗೆ ಸವಣೂರ ನವಾಬನು ಸವದತ್ತಿ ಹಂಚಿನಾಳ ಗುರ್ಲಹೊಸೂರ ಕರೀಕಟ್ಟಿ ಹಾಗೂ ಧಾರವಾಡದ ಕೆಲವು ಹಳ್ಳಿಗಳನ್ನು ಬಿಟ್ಟುಕೊಟ್ಟನು ಎಂಬ ಸಂಗತಿಯನ್ನು ಸವದತ್ತಿ ಕೋಟೆಯ ಇತಿಹಾಸವನ್ನು ಕುರಿತಂತೆ ಸಂಗತಿಗಳನ್ನು ಇತಿಹಾಸದಿಂದ ತಿಳಿಯಬಹುದು.

ಸವದತ್ತಿಯವರೇ ಆದ ಯ.ರು.ಪಾಟೀಲರು ಸವದತ್ತಿ ಉಕ್ಕಿನ ಕೋಟೆ ಕೃತಿ ರಚಿಸಿದ ನಂತರ ಈ ಕೋಟೆಗೆ ಒಂದು ಹೊಸ ಕಾಯಕಲ್ಪವನ್ನು ಅಂದಿನ ವಿಧಾನಸಭಾ ಉಪಸಭಾಪತಿ ದಿವಂಗತ ಚಂದ್ರಶೇಖರ ಮಾಮನಿಯವರು ಒದಗಿಸಿದ ಸಂಗತಿಯನ್ನು ಇಲ್ಲಿ ನೆನಪಿಸಲೇಬೇಕು. ಅದರ ಹಿಂದೆ ಯ.ರು.ಪಾಟೀಲರ ಒಕ್ಕೊರಲ ಕೂಗು ಕೆಲಸ ಮಾಡಿತ್ತು.

ಕ್ರಿ.ಶ.೧೭೩೪ ರಲ್ಲಿ ರಾಜನಾದ ಜಾಯಗೊಂಡ ದೇಸಾಯಿ (ದ್ವಿತೀಯ) ಈ ಕೋಟೆಯ ನಿರ್ಮಾಣಕ್ಕೆ ಕಾರಣಕರ್ತರಾದನು. ಕ್ರಿ.ಶ.೧೮೮೧ ರಲ್ಲಿ ಬ್ರಿಟಿಷರು ಈ ಕೋಟೆಯನ್ನು ಕಲೆಕ್ಟರ್ ಬಂಗ್ಲೆಯನ್ನಾಗಿ ಮಾಡಿಕೊಂಡಿದ್ದರು.

ಬಿಳಿಯ ಕಲ್ಲಿನಿಂದ ಕಟ್ಟಿದ ಈ ಕೋಟೆಯ ಒಳಗೆ ಶಾಲೆಯೊಂದು ನಡೆಯುತ್ತಿದ್ದ ಸಂಗತಿಯನ್ನು ಕೂಡ ನಾವು ಯ.ರು.ಪಾಟೀಲರ ಸವದತ್ತಿ ಉಕ್ಕಿನ ಕೋಟೆ ಕೃತಿಯಲ್ಲಿ ಗಮನಿಸಬಹುದು.ಅಂದು ಆ ಶಾಲೆಯಲ್ಲಿ ಕಲಿತ ಹಿರಿಯರ ಅನುಭವವನ್ನು ಯ.ರು.ಪಾಟೀಲರು ದಾಖಲಿಸಿದ್ದಾರೆ. ಅಂದ ಹಾಗೆ ಅಂದು ಈ ಕೋಟೆಗೆ ತಗಲಿದ ವೆಚ್ಚ ಸುಮಾರು ಎರಡೂವರೆ ಲಕ್ಷ ರೂಪಾಯಿಗಳು. ಹತ್ತು ಎಕರೆಯಷ್ಟು ವಿಶಾಲ. ಅರವತ್ತು ಪೂಟ ಎತ್ತರ. ಜೊತೆಗೆ ಮೂರು ಹಂತಗಳಲ್ಲಿ ಇಲ್ಲಿನ ವಿನ್ಯಾಸ. ಆರಂಭದ ಮೂರು ವಿಭಿನ್ನ ದ್ವಾರಗಳು ನಂತರ ಕೆಳಗಿನ ಕೋಟೆ ಮೇಲಿನ ಕೋಟೆಯ ವಿಸ್ತಾರ. ಮೆಟ್ಟಿಲುಗಳನ್ನು ಏರುವ ಮುಂಚೆ ಸುತ್ತಲಿನ ವಿಸ್ತಾರ ಗಮನಿಸಿದರೆ ಅಲ್ಲೊಂದು ಹೊಂಡವಿದೆ. ಅದರಾಚೆ ವಿಸ್ತಾರವಾದ ಆವರಣವಿದೆ. ಮತ್ತೊಂದು ಬದಿ ಅರಮನೆ ಇತ್ತೆಂದು ಹೇಳುವ ಕುರುಹುಗಳನ್ನು ಗಮನಿಸಬಹುದು. ಮೆಟ್ಟಿಲುಗಳನ್ನೇರಿ ಬಂದರೆ ಪ್ರಾಂಗಣ ಹೊಂದಿದ ಛಾವಣಿಗಳು. ಅವುಗಳಲ್ಲಿ ಕಂಬಗಳು.ನಟ್ಟ ನಡುವೆ ಕಾಡ ಸಿದ್ದೇಶ್ವರ ದೇವಾಲಯ. ಛಾವಣಿ ಹೊಂದಿದ ಭಾಗದ ಪ್ರತಿಯೊಂದು ಮೂಲೆಗಳಲ್ಲಿ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದರೆ ಇಡೀ ಸವದತ್ತಿಯ ವಿಹಂಗಮ ನೋಟವನ್ನು ಸವಿಯಬಹುದು. ಇದು ವೈರಿಗಳ ಪಡೆ ಬರುವುದನ್ನು ಖಾತರಿಪಡಿಸಿಕೊಳ್ಳಲು ಮಾಡಿಕೊಂಡ ವ್ಯವಸ್ಥೆ ಎನ್ನಬಹುದು. ಜೊತೆಗೆ ಕೋಟೆಯ ಆರಂಭದ ದ್ವಾರದಲ್ಲಿ ಒಳಗೆ ಬಂದರೆ ತೋಪುಗಳನ್ನು ಇಡುವ ಸ್ಥಳವನ್ನು ಗಮನಿಸಬಹುದು.

ಅಂದ ಹಾಗೆ ಇಲ್ಲಿ ಉದ್ಯಾನವನ್ನು ನಿರ್ಮಿಸಲಾಗಿದೆ. ಪುರಸಭೆಯವರ ಈ ಕಾರ್ಯದಿಂದ ಇಂದಿಗೂ ಇದೊಂದು ಪ್ರವಾಸೀತಾಣವಾಗಿದೆ. ಮಕ್ಕಳಿಗೆ ಜಾರುಬಂಡಿಗಳಿವೆ, ಜೋಕಾಲಿಗಳಿವೆ, ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳಿವೆ. ಸುಂದರ ಹೂವುಗಳು ಆಕರ್ಷಿಸುವ ಗಿಡಮರಗಳ ಹಚ್ಚ ಹಸಿರು ಮನಸೆಳೆಯುತ್ತಿದೆ. ಈಗ ಸವದತ್ತಿಯ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡಲೆಂದು ಬಂದಿರುತ್ತಾರೆ. ಸಂಜೆಯವರೆಗೂ ತಮ್ಮ ಅಭ್ಯಾಸ ಮಾಡಿ ಮನೆಗೆ ತೆರಳುವರು. ಅಂದರೆ ಇದೊಂದು ಪ್ರಶಾಂತ ವಾತಾವರಣ ಹೊಂದಿರುವುದರಿಂದ ಏಕಾಗ್ರತೆಯಿಂದ ಅಧ್ಯಯನಗೈಯುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ಹೀಗೆ ಎಲ್ಲವನ್ನು ವೀಕ್ಷಿಸಿ ಕತ್ತಲಾವರಿಸುವ ಮುನ್ನ ವಿನೋದ ಹೊಂಗಲ ಯಕ್ಕುಂಡಿಗೆ ತೆರಳಬೇಕು.ರಾಜು ಭಜಂತ್ರಿ ಧಾರವಾಡಕ್ಕೆ ತೆರಳಬೇಕು. ಮಲ್ಲಿಕಾರ್ಜುನ ಹೂಲಿ ಮಮದಾಪೂರ ಮಾರ್ಗವಾಗಿ ಮರಡಿ ಶಿವಾಪೂರಕ್ಕೆ ತೆರಳಬೇಕು.ನಾನು ಮುನವಳ್ಳಿಗೆ ತೆರಳುವುದು.ಸ್ನೇಹಿತ ಚಿದಾನಂದ ಬಾರ್ಕಿ ಸವದತ್ತಿಯಲ್ಲಿ ಇರುವ ಕಾರಣ ಅವರಿಗೇನೂ ಅವಸರವಿರಲಿಲ್ಲ. ಸಂಜೆಯ ಆಫೀಸ ಅವಧಿಯ ನಂತರ ಕೋರೋನಾ ಸಮಯದಲ್ಲಿ ನಾವು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಪುಟ್ಟ ಪಿಕ್‌ನಿಕ್ ಮಾಡಿದೆವು.ನಂತರ ಎಸ್.ಎಲ್.ಓ ಕ್ರಾಸ್ ಹೊಟೇಲಿನಲ್ಲಿ ಅಲ್ಪೋಪಹಾರ ಸೇವಿಸಿ ನಮ್ಮ ನಮ್ಮ ಸ್ಥಳಗಳತ್ತ ತೆರಳಿದೆವು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

- Advertisement -

1 COMMENT

  1. ಚೆನ್ನಾಗಿ ವಿವರಣೆಯನ್ನು ಕೊಟ್ಟಿದ್ದೀರಿ.ತುಂಬಾ ತುಂಬಾ ಧನ್ಯವಾದಗಳು. ಶ್ರೀಯುತ ಯ.ರು.ಪಾಟೀಲರಂತೆ ಶ್ರೀಯುತ ವಿರುಪಾಕ್ಷ.ಬಾ.ಬಡಿಗೇರ. ಸವದತ್ತಿಯ ಶ್ರೀ ಕಾಡಸಿದ್ದೇಶ್ವರ ಹೈಸ್ಕೂಲಿನ ಪ್ರಾಧ್ಯಾಪಕರು ಕೂಡ ಈ ಅಷ್ಟ ಕೋನಾಕೃತಿಯ ಕೋಟೆಯ ಬಗ್ಗೆ ಪುಸ್ತಕವನ್ನು ರಚಿಸಿ ಪಿ.ಎಚ್.ಡಿ.ಯನ್ನು ಪಡೆದಿದ್ದಾರೆ.
    ಸವದತ್ತಿಯ ವಿದ್ಯಾರ್ಥಿಗಳು ಇಲ್ಲಿಯ ಶಾಂತ ವಾತಾವರಣದಲ್ಲಿ ಮೊದಲಿನಿಂದಲೂ ಅಭ್ಯಾಸ ಮಾಡಲು ಉಪಯೋಗಿಸುತ್ತಾರೆ. ಅದರಲ್ಲಿ ನಾನೂ ಒಬ್ಬ.
    ಶ್ರೀ ಕಾಡಸಿದ್ದೇಶ್ವರ ಮಂದಿರದ ಆವರಣದಲ್ಲಿ ಶಾಲೆಯನ್ನು ನಡಿಸಿದ ಮತ್ತು ಶ್ರೀ ಕಾಡಸಿದ್ದೇಶ್ವರ ಹಾಸ್ಟೆಲ್ ಬೊರ್ಡಿಂಗನ್ನು ಸವದತ್ತಿಗೆ ಪರಸ್ತಳದಿಂದ ವಿದ್ಯಾಭ್ಯಾಕ್ಕಾಗಿ ಬಂದವರಿಗೆ (ಈಗ ಸವದತ್ತಿಯ ನಾಗರಿಕರಿಂದ ಮಂಗ ಮಾಯವಾಗಿದೆ.) ಸಂಸ್ಥಾಪಿಸಿದ ಹಾಗೂ ಶ್ರೀ ಕಾಡಸಿದ್ದೇಶ್ವರ ಹೈಸ್ಕೂಲಿನಲ್ಲಿ ಮುಖ್ಯಾದ್ಯಾಪಕರಾಗಿದ್ದ ಶ್ರೀಯುತ ವಿರುಪಾಕ್ಷ. ಮಳ್ಳಿಮಠರವರ ಶಿಷ್ಯರಲ್ಲಿ ನಾನೂ ಒಬ್ಬ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ.
    ಅಲ್ಲಿನ ಅರಮನೆಯ ಅವಶೇಷಗಳ ಬಗ್ಗೆ ಕೂಡ ಬರೆದಿದ್ದು ಓದಿ ತುಂಬಾ ನೋವಿನ ಕಥೆಯೊಂದು ಸವದತ್ತಿಯ ಹಳೆಯ ಹಿರಿಯ ನಾಗರಿಕರ ಬಾಯಿಯಿಂದ ಕೇಳಿದ ನೆನಪು ಬರುತ್ತದೆ.
    ಸುಮಾರು 1950ರ ದಶಕದಲ್ಲಿ ಸವದತ್ತಿಯಲ್ಲಿಯ ನಾಯಕ ಮತ್ತು ಶ್ರೀಮಂತ ಮನೆತನದ ಒಬ್ಬ ಮಂದ ಬುದ್ಧಿಯ ಹಿರಿಯ ನಾಗರಿಕನೊಬ್ಬ ಬುಧವಾರ ಸಂತೆಯ ದಿನ ಏನೋ ಭ್ರಮಿತಗೊಂಡು ಬೆಂಕಿ ಹಚ್ಚಿದ್ದರಂತೆ.
    ಹಳೆಯ ಕಥೆಗಳು ಏನೇ ಆಗಲಿ ಈಗ ಸವದತ್ತಿಯ ಪ್ರತಿಯೊಬ್ಬರ ಆದ್ಯ ಕರ್ತವ್ಯ ಕೋಟಿಯನ್ನು ಸುವ್ಯವಸ್ತಿತವಾಗಿ ಇಡುವದು.

Comments are closed.

- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group