ಘಟಪ್ರಭಾ: ಈ ನಾಡಿನಲ್ಲಿ ಎರಡು ಸಂಸ್ಕೃತಿಗಳಿಗೆ ನಾವು ಆದ್ಯತೆಯನ್ನು ನೀಡುತ್ತಿದ್ದೇವೆ. ಒಂದು ಋಷಿ ಸಂಸ್ಕೃತಿ ಇನ್ನೊಂದು ಕೃಷಿ ಸಂಸ್ಕೃತಿ ಈ ಎರಡು ಸಂಸ್ಕೃತಿಗಳು ಜೀವನದಲ್ಲಿ ಮಾರ್ಗದರ್ಶನ ನೀಡಲು ಅತ್ಯಂತ ಅಮೂಲ್ಯವಾದವು ಅದರಲ್ಲೂ ಗುರುವಿಗೆ ವಿಶೇಷ ಗೌರವ ಕೊಡುತ್ತೇವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ನ-19 ರಂದು ಅರಭಾವಿ ದುರದುಂಡೀಶ್ವರ ಸಿದ್ದಸಂಸ್ಥಾನ ಮಠದ ಪೂಜ್ಯ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳ ಪೀಠಾರೋಹಣ ಸಮಾರಂಭದ ಅಂಗವಾಗಿ ಆಯೋಜಿಸಿದ ಶೂನ್ಯ ಸಂಪಾದನೆ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮಠಗಳ ಮತ್ತು ಗುರುಗಳ ಪಾತ್ರ ದೊಡ್ಡದು. ಅನಾದಿಕಾಲದಿಂದಲೂ ಚಾಲುಕ್ಯರು, ಹಕ್ಕಬುಕ್ಕರ ಗುರುಗಳಾದ ವಿದ್ಯಾರಣ್ಯರು, ಛತ್ರಪತಿ ಶಿವಾಜಿ ಮಹಾರಾಜ ಗುರುಗಳಾದ ರಾಮದಾಸರು, ಸೂರ್ಯ ಮುಳುಗದ ಬ್ರಿಟಿಷ ಸಾಮ್ರಾಜ್ಯಕ್ಕೆ ಸವಾಲ ಹಾಕಿದ ಕಿತ್ತೂರು ರಾಣಿ ಚನ್ನಮ್ಮನ ಗುರುಗಳಾದ ಮಡಿವಾಳೇಶ್ವರ ಮಠದ ರಾಜಗುರುಗಳು ಬೆನ್ನಿಗೆ ನಿಂತಿದ್ದರು ಗುರು ಮತ್ತು ಶಿಷ್ಯರ ನಡುವಿನ ಸಂಬಂಧವು ಶಿಸ್ತು, ಸಮರ್ಪಣೆ ಮತ್ತು ಅತ್ಯಂತ ಗೌರವದಿಂದ ನಡೆಸಲ್ಪಡುವ ಜೀವಮಾನದ ಪ್ರಯಾಣವನ್ನು ಸೂಚಿಸುತ್ತದೆ ಎಂದರು.
ದುರದುಂಡಿಶ್ವರ ಮಠಕ್ಕೆ ಭಕ್ತರು ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಲಿಂಗೈಕ್ಯ ಪೂಜ್ಯಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಮಾತಿಗೆ ಗೌರವ ಕೊಡುತ್ತಿದ್ದರು, ಮುಂದೆ ಪಟ್ಟಾಧಿಕಾರ ಪಡೆಯುತ್ತಿರುವ ಪೂಜ್ಯಶ್ರೀ ಗುರುಬಸವಲಿಂಗ ಸ್ವಾಮೀಜಿ ಅವರ ಮಾರ್ಗದರ್ಶನಲ್ಲಿ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗೋಣ, ಮಠದ ಪರಂಪರೆಗೆ ಧಕ್ಕೆಯಾಗದ ಹಾಗೇ ನಮ್ಮ ನಮ್ಮ ಕರ್ತವ್ಯವನ್ನು ಮಾಡೊಣ ಎಂದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಡಾ. ತೊಂಟದ ಸಿದ್ದರಾಮ ಮಹಾಸ್ವಾಮೀಜಿಗಳು, ಹಾಗೂ ವಿವಿಧ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಮುಖಂಡರು, ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.