ಬೆಂಗಳೂರು – ನಗರದ ಮಲ್ಲೇಶ್ವರದ ಸಂಪಿಗೆ ರಸ್ತೆಯ ಶ್ರೀ ಯದುಗಿರಿ ಯತಿರಾಜ ಮಠದಲ್ಲಿ ಶ್ರೀಮಠದ ಯತಿರಾಜ ಜೀಯರ್ ಸ್ವಾಮಿಗಳ ಹತ್ತನೇ ಚಾತುರ್ಮಾಸ್ಯ ಹಾಗೂ 75ನೇ ವರ್ಧಂತಿಯ ಅಂಗವಾಗಿ ಡಾ ಬಾಬು ಕೃಷ್ಣಮೂರ್ತಿ ವಿರಚಿತ ಶ್ರೀ ರಾಮಾನುಜಾಚಾರ್ಯರ ಜೀವನಾಧಾರಿತ ಕಾದಂಬರಿಯ ಕುರಿತು ವಿಚಾರ ಸಂಕಿರಣವನ್ನು ಶ್ರೀಮಠದ ಆವರಣದಲ್ಲಿರುವ ರಾಮಾನುಜ ಸಂಸ್ಕೃತಿ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಾಜಿ ಅಡ್ವಕೇಟ್ ಜನರಲ್ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಉದ್ಘಾಟಿಸಿ ಮಾತನಾಡುತ್ತಾ, ಸಹಸ್ರ ವರ್ಷಗಳ ಹಿಂದೆಯೇ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿ ಸಮಾನತೆಯ ತತ್ವವನ್ನು ಪ್ರತಿಪಾದಿಸಿದವರು ಆಚಾರ್ಯ ರಾಮಾನುಜರು ಎಂದು ಅಭಿಪ್ರಾಯಪಟ್ಟರು.
ವಿಚಾರ ಸಂಕಿರಣದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ. ಮಲ್ಲೇಪುರಂ ಜಿ ವೆಂಕಟೇಶ್ ಮಾತನಾಡಿ, ಆಚಾರ್ಯತ್ರಯರ ಕುರಿತು ಅನೇಕ ಶಾಸ್ತ್ರ ಗ್ರಂಥಗಳು ಬಂದಿರುತ್ತದೆ, ಸಾಹಿತ್ಯಿಕ ದೃಷ್ಟಿಯಿಂದ ದಾರ್ಶನಿಕರ ಒಬ್ಬರ ಕುರಿತಾದ ಕಾದಂಬರಿ ಬಂದಿರುವುದು ಇದೆ ಮೊದಲು, ಆಚಾರ್ಯರ ಭವ್ಯ ವ್ಯಕ್ತಿತ್ವವನ್ನು ಕಟ್ಟುಕೊಡುವಲ್ಲಿ ಲೇಖಕ ಬಾಬು ಕೃಷ್ಣಮೂರ್ತಿ ರವರ ಬರವಣಿಗೆಯಲ್ಲಿ ಬಹಳ ಸೊಗಸಾಗಿ ನಿರೂಪಿಸಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸಕ ಡಾ ಎನ್ಕೆ ರಾಮಶೇಷನ್, ಇತಿಹಾಸಕಾರ ಡಾ ಜಿ ಬಿ ಹರೀಶ, ಚಿಂತಕ ಡಾ ಬೆಳವಾಡಿ ಮಂಜುನಾಥ್ ಕಾದಂಬರಿಯ ವಿವಿಧ ಮಜಲಗಳನ್ನು ಕುರಿತು ಮಾತನಾಡಿದರು. ಖ್ಯಾತ ವಾಗ್ಮಿ ವಿದ್ಯಾ ವಾಚಸ್ಪತಿ ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಸಮಾರೋಪ ನುಡಿಗಳನ್ನಾಡಿದರು.
ಡಾ. ಗಣಪತಿ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಡಾ. ನಂಜುಂಡ ರಾವ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮಠದ ಪಿ ಆರ್ ಓ ರಾಮಪ್ರಸಾದ್ ಸ್ವಾಗತಿಸಿದರು.