ಸವದತ್ತಿ: ಇಂದು ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದೆ ಬರಲು ಹನ್ನೆರಡನೆಯ ಶತಮಾನದಲ್ಲಿ ಜರುಗಿದ ಸಾಮಾಜಿಕ ಕ್ರಾಂತಿಯೇ ಕಾರಣ. ಮಹಿಳೆಯ ಬಿಡುಗಡೆ ಇಲ್ಲದೆ ಈ ಸಮಾಜಕ್ಕೆ ಬಿಡುಗಡೆ ಸಾಧ್ಯವಿಲ್ಲ ಎಂದು ನಿವೃತ್ತ ಪತ್ರಕರ್ತರು, ಸಾಹಿತಿ, ಚಿಂತಕ ರಂಜಾನ್ ದರ್ಗಾ ನುಡಿದರು.
ಅವರು ಪಟ್ಟಣದ ಪಟ್ಟಣದ ಕೆ. ಎಲ್. ಇ. ಸಂಸ್ಥೆಯ ಎಸ್. ವಿ. ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘ ಮತ್ತು ಸವದತ್ತಿಯ ಶರಣ ಸಂಗಮದ ವತಿಯಿಂದ ೩೦ನೆಯ ಶರಣ ಸಂಗಮ ಅನುಭಾವ ಗೋಷ್ಠಿ ಮತ್ತು ವೈದ್ಯರ ದಿನಾಚರಣೆ ಹಾಗೂ ಪತ್ರಕರ್ತರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರನ್ನು ಪುರುಷ ಪ್ರಾಧಾನ್ಯ ಅಹಂನಿಂದ ನೋಡುವ ಕ್ರಮ ಬದಲಾಗಬೇಕು. ಜಗತ್ತಿನ ಯಾವ ಮೂಲೆಯಲ್ಲೂ ಸಾಹಿತ್ಯ ರಚನೆ ಮಾಡದ ಕಾಲಕ್ಕೆ ಸತ್ಯಕ್ಕನಂತಹ ಮಹಿಳೆ ವಚನ ರಚನೆ ಮಾಡಿದಳು ಎಂದರು.
ಲಿಂಗಾಯತವೆನ್ನುವುದು ಎಲ್ಲರನ್ನು ಒಳಗೊಳ್ಳುವ ಧರ್ಮ. ಅದು ಸಿದ್ದಾಂತವಾಗಿ, ದರ್ಶನವಾಗಿ, ಜೀವನ ವಿಧಾನವಾಗಿ ಬದಲಾಗಬೇಕು. ವಚನದಲ್ಲಿ ಸಹಚರ ಭಾವವಿದೆ. ಸಮ ಸುಖದ ಚಹರೆ ಇದೆ. ಕಾಯಕದ ಅನುಭವ ಇಲ್ಲದೆ ಅನುಭಾವವಿಲ್ಲ. ಅನುಭಾವವೇ ಲಿಂಗಾಯತ ಧರ್ಮದ ತಾತ್ವಿಕತೆಯಾಗಿದೆ ಎಂದರು.
ನಿಸರ್ಗದಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಗಾಳಿ, ನೀರು, ಪ್ರಾಣಿ, ಪಕ್ಷಿ, ಮರಗಳು, ಮನುಷ್ಯನನ್ನು ಹೊರತುಪಡಿಸಿದ ಎಲ್ಲ ಜೀವಿಗಳು ಕಾಯಕ ಮಾಡಿಯೇ ಬದುಕುತ್ತಿವೆ. ಇದಕ್ಕಾಗಿಯೇ ಬಸವಣ್ಣನವರು ನಿಸರ್ಗದ ಎಲ್ಲ ಅಂಶಗಳನ್ನು ಮನಗಂಡು ಜೀವ ಸಂಕುಲವೆಂದು ಕರೆದರು. ಈ ಜೀವ ಸಂಕುಲಕ್ಕೆ ಲೇಸನ್ನು ಬಯಸಿದರು. ಇಲ್ಲಿ ಸಂಕುಲ ಎಂದರೆ ಎಲ್ಲ ಪ್ರಾಣಿ, ಪಕ್ಷಿ ಇತ್ಯಾದಿಗಳನ್ನು ಒಳಗೊಂಡು ನೋಡುವ ಕ್ರಮವಾಗಿದೆ. ಕಲ್ಯಾಣದಲ್ಲಿ ಕೊಡುವವರಿದ್ದರು, ಬೇಡುವವರಿರಲಿಲ್ಲ. ಶರಣರು ದಾಸೋಹ ಸಂಸ್ಕೃತಿಯನ್ನು ಬೆಳೆಸುತ್ತಾ ಕೊಡುವ ಸಂಸ್ಕೃತಿಯನ್ನು ಪರಿಚಯಿಸಿದರು. ಆ ಮೂಲಕ ಸಮಾಜವನ್ನು ಪ್ರೀತಿಸಿದರು. ಸಮಾಜವನ್ನು ಪ್ರೀತಿಸದವನು ದೇವನಿಗೆ ಪ್ರಿಯನಾಗಲಾರ. ಮಾನವ ಸಂಕುಲವನ್ನು ಒಂದು ಮಾಡಿದ ಶ್ರೇಯಸ್ಸು ಬಸವಣ್ಣನವರದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರು ಮತ್ತು ನ್ಯಾಯವಾದಿಗಳಾದ ಬಿ.ವಿ.ಮಲಗೌಡರ ವಹಿಸಿದ್ದರು, ಶ್ರೀಮತಿ ಲಕ್ಷ್ಮೀ ಅರಿಬೆಂಚಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಡಾ.ಎ.ಎಫ್.ಬದಾಮಿ ಸ್ವಾಗತಿಸಿದರು, ಪ್ರೊ.ಕೆ.ರಾಮರೆಡ್ಡಿ ಅತಿಥಿಗಳನ್ನು ಪರಿಚಯಿಸಿದರು, ಬಿ.ಎಸ್.ಪುಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಈ ಸಂದರ್ಭದಲ್ಲಿ ವೈದ್ಯರಾದ ಡಾ.ಸಿ.ಬಿ.ನಾವದಗಿ, ಡಾ.ಕವಿತಾ, ಪತ್ರಕರ್ತರಾದ ಸುಧೀರ ದೊಡಮನಿ, ಪಿ.ಬಿ.ಬಾಳೋಜಿ, ಗಿರೀಶ ರೇವಡಿ, ಬಾಳಕೃಷ್ಣ ಮೀರಜಕರ ಅವರನ್ನು ಸತ್ಕರಿಸಲಾಯಿತು. ವೇದಿಕೆ ಮೇಲೆ ಪ್ರಾಚಾರ್ಯ ಡಾ.ಎನ್.ಆರ್.ಸವತೀಕರ, ರಾಜಶೇಖರ ನಿಡವಣಿ, ಬಸವರಾಜ ಕಪ್ಪಣ್ಣವರ ಉಪಸ್ಥಿತರಿದ್ದರು, ಪ್ರೊ.ಎಂ.ಸಿಹಾದಿಮನಿ ವಂದಿಸಿದರು, ಪ್ರೊ.ಮೋಹನ್ ಬಿ. ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ವಿವಿಧ ಸ್ಥಳಗಳಿಂದ ಆಗಮಿಸಿದ ಶರಣ ಬಂಧುಗಳು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.