spot_img
spot_img

ಸಮಸ್ತ ಕನ್ನಡಿಗರ ಸಾಕ್ಷಿಪ್ರಜ್ಞೆ: ಫಾಲನೇತ್ರ

Must Read

spot_img
- Advertisement -

ಬಾರಿಸು ಕನ್ನಡ ಡಿಂಡಿಮವ

ಓ ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು!

ಎಂಬ ಕುವೆಂಪು ಅವರ ಕವಿವಾಣಿಯಂತೆ ಬೆಂಗಳೂರು ಮಹಾನಗರವನ್ನು ಕೇಂದ್ರಭೂಮಿಕೆಯನ್ನಾಗಿ ಮಾಡಿಕೊಂಡು ಇಡೀ ರಾಜ್ಯದ ತುಂಬ ಸತ್ತಂತಿಹ ಕನ್ನಡಿಗರನ್ನು ಬಡಿದೆಚ್ಚರಿಸುವ ಕಾರ್ಯ ಮಾಡಿದ ಕನ್ನಡ ಪ್ರಗತಿಪರ ಚಳವಳಿಗಾರರಲ್ಲಿ ಎದ್ದು ಕಾಣುವ ಹೆಸರು ಫಾಲನೇತ್ರ ಅವರದು.

- Advertisement -

ಬೆಂಗಳೂರಿನಲ್ಲಿ ಯಾವುದೇ ಕನ್ನಡ ಕಾರ್ಯಕ್ರಮವಿರಲಿ, ಅದರ ಯಶಸ್ಸಿನಲ್ಲಿ ಫಾಲನೇತ್ರ ಅವರು ಇರುವುದು ಮುಖ್ಯವಾಗಿ ಗಮನಿಸುವ ಅಂಶವಾಗಿದೆ.

ಕನ್ನಡ ವಿಚಾರ ವೇದಿಕೆ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವ ಮೂಲಕ ಸದ್ದಿಲ್ಲದೆ ಕನ್ನಡ ಕಟ್ಟುವ ಮಹಾಮಣಿಹವನ್ನು ಫಾಲನೇತ್ರ ಅವರು ಪೂರೈಸುತ್ತಿರುವುದು ಕನ್ನಡಿಗರ ಸೌಭಾಗ್ಯವೆಂದು ಭಾವಿಸಿರುವೆ. ವಿ. ಸೋಮಣ್ಣ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾಗಿ ವಿಧಾಯಕ ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿರುವ ಫಾಲನೇತ್ರ ಅವರ ಕ್ರಿಯಾಶೀಲ ದುಡಿಮೆ ಬಗ್ಗೆ ಹೆಮ್ಮೆ ಎನಿಸುತ್ತದೆ.

- Advertisement -

ನಾನು ದಿನಾಂಕ ೧೦-೭-೨೦೨೨ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಜರುಗಿದ ನಾಡೋಜ ಡಾ. ಕೋ. ಚೆನ್ನಬಸಪ್ಪ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಫಾಲನೇತ್ರ ಅವರನ್ನು ಭೇಟಿಯಾಗುವ ಸುಯೋಗ ಒದಗಿ ಬಂದಿತು. ನಾನು ಈಗಾಗಲೇ ಮೇಲೆ ಹೇಳಿದಂತೆ, ಬೆಂಗಳೂರಿನಲ್ಲಿ ಯಾವುದೇ ಕನ್ನಡ ಕಾರ್ಯಕ್ರಮವಿರಲಿ ಅಲ್ಲಿ ಫಾಲನೇತ್ರ ಅವರು ಹಾಜರಿರುತ್ತಾರೆ. ಅವರನ್ನು ಭೇಟಿಯಾಗಿ ಮಾತನಾಡಿಸಿದೆ. ನಾನು ಬೆಳಗಾವಿಯಿಂದ ಬಂದ ಕಾರಣವಾಗಿ ಅವರು ಬೆಳಗಾವಿಯ ತಮ್ಮ ನಂಟಿನ ನೆನಪಿನ ಬುತ್ತಿ ಹಂಚಿಕೊಂಡರು.

ಬೆಂಗಳೂರಿನಲ್ಲಿರುವಷ್ಟು ಗೆಳೆಯರ ಬಳಗ ಅವರಿಗೆ ಬೆಳಗಾವಿಯಲ್ಲಿಯೂ ಇರುವುದು ಗಮನಿಸುವ ಅಂಶ. ಬೆಳಗಾವಿಯ ಹೋರಾಟಗಾರರಾದ ಡಾ. ಸಿದ್ಧನಗೌಡ ಪಾಟೀಲ, ರಾಘವೇಂದ್ರ ಜೋಶಿ, ಭೀಮಸೇನ ತೊರಗಲ್ಲ, ಅಶೋಕ ಚಂದರಗಿ, ಎಂ. ಎಸ್. ಟೋಪ್ಪಣ್ಣವರ, ಅರ್ಜುನ ಹಂಪಿಹೊಳಿ ಮೊದಲಾದವರು ಫಾಲನೇತ್ರ ಅವರ ಅತ್ಯಂತ ಆತ್ಮೀಯ ಬಳಗದವರು ಎಂದು ಹೇಳಿದಾಗ ನನಗೆ ತುಂಬ ಸಂತೋಷವೆನಿಸಿತು. ಕನ್ನಡದ ಪ್ರಶ್ನೆ ಬಂದಾಗಲೆಲ್ಲ ಮುಂಚೂಣಿಯಲ್ಲಿ ನಿಲ್ಲುವ ಫಾಲನೇತ್ರ ಅವರು ೧೯೮೬ರಲ್ಲಿ ಬೆಳಗಾವಿಗೆ ಬಂದ ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

೧೯೮೬ರಲ್ಲಿ ಬೆಳಗಾವಿಯಲ್ಲಿ ಎಂ.ಇ.ಎಸ್.ದವರ ಪುಂಡಾಟಿಕೆ ಜೋರಾಗಿದ್ದ ಸಂದರ್ಭ. ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಇ.ಎಸ್. ವಿರುದ್ಧ ಒಂದು ಬೃಹತ್ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಬೆಂಗಳೂರಿನಿಂದ ಆಗಮಿಸಿದ ಫಾಲನೇತ್ರ ಅವರು ಮರಾಠಿಗರ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ ಭಾಷಣ ಮಾಡಿದ್ದರು. ಆಗ ಎಂ. ಎಸ್. ಟೋಪಣ್ಣವರ ಅವರು ತಮ್ಮ ಕನ್ನಡಮ್ಮ ದಿನಪತ್ರಿಕೆಯಲ್ಲಿ ‘ಬೆಂಗಳೂರಿನಿಂದ ಬಂದು ಭಾಷಣ ಮಾಡಿದ ಫಾಲನೇತ್ರ ಅವರು ಮರಾಠಿಗರ ವಿರುದ್ಧ ಸಿಂಹಗರ್ಜನೆ ಮಾಡಿದರು’ ಎಂದು ಬರೆದಿದ್ದು ಇಂದು ಇತಿಹಾಸವಾಗಿ ಉಳಿದಿದೆ. ಅಂದಿನ ಪ್ರತಿಭಟನಾ ಸಭೆಯಲ್ಲಿ ನಾಡಿನ ಮೂಲೆ ಮೂಲೆಗಳಿಂದ ಜನರು ಆಗಮಿಸಿದ್ದರು. ಆದರೆ ಅಂದು ಫಾಲನೇತ್ರ ಅವರು ಮಾಡಿದ ಭಾಷಣ ಎಲ್ಲರ ಗಮನ ಸೆಳೆದಿತ್ತು ಎಂಬುದನ್ನು ಸ್ಮರಿಸಿಕೊಂಡಾಗ ರೋಮಾಂಚನವೆನಿಸುತ್ತದೆ.

ಫಾಲನೇತ್ರ ಅವರು ಕನ್ನಡದ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸುವ ಒಂದು ಮಹಾಕಾರ್ಯವನ್ನು ತಮ್ಮ ಬದುಕಿನುದ್ದಕ್ಕೂ ಮಾಡುತ್ತ ಬಂದಿದ್ದಾರೆ. ಉತ್ತರ ಕರ್ನಾಟಕದ ವಿದ್ವಜ್ಜನರ-ಮುತ್ಸದ್ಧಿಗಳ ಬಗ್ಗೆ ಫಾಲನೇತ್ರ ಅವರಿಗೆ ಬಹಳ ಪ್ರೀತಿ ಕಾಳಜಿ. ಅಂತೆಯೆ ಬೆಂಗಳೂರು ಮಹಾನಗರದಲ್ಲಿ ಉತ್ತರ ಕರ್ನಾಟಕದ ಅನೇಕ ಮಹನೀಯರ ಜನ್ಮಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿನ ಜನತೆಗೆ ಪರಿಚಯಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಕರ್ನಾಟಕ ಏಕೀಕರಣಕ್ಕಾಗಿ ಹಗಲಿರುಳು ದುಡಿದ ದೊಡಮೇಟಿ ಅಂದಾನೆಪ್ಪನವರ ಜನ್ಮ ಶತಮಾನೋತ್ಸವ, ಶರಣೆ ಜಯದೇವಿ ತಾಯಿ ಲಿಗಾಡೆ ಅವರ ಜನ್ಮಶತಮಾನೋತ್ಸವ, ಸಂ.ಶಿ.ಭೂಸನೂರಮಠ ಜನ್ಮಶತಮಾನೋತ್ಸವ ಮೊದಲಾದ ಮಹನೀಯರ ಕಾರ್ಯಕ್ರಮಗಳನ್ನು ಬೆಂಗಳೂರು ನಗರದಲ್ಲಿ ಆಯೋಜಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಜನ ‘ನೀವು ಕೇವಲ ಉತ್ತರ ಕರ್ನಾಟಕದವರ ಕಾರ್ಯಕ್ರಮಗಳನ್ನು ಆಯೋಜಿಸುತ್ತೀರಿ’ ಎಂದು ಆಕ್ಷೇಪಣೆ ಮಾಡಿದಾಗ, ಆಗ ಫಾಲನೇತ್ರ ಅವರು ‘ನಾನು ಸಮಗ್ರ ಕರ್ನಾಟಕದ ಪರವಾಗಿ ಇದ್ದವನು, ನನಗೆ ಉತ್ತರ-ದಕ್ಷಿಣ ಭೇದವಿಲ್ಲ’ ಎಂದು ನಿಷ್ಠುರವಾಗಿ ಹೇಳಿದವರು. ಇಂಥ ಚಿಂತನಪರ ಮನಸ್ಸುಗಳಿಂದಲೇ ಮಾನಸಿಕವಾಗಿ ಬೌದ್ಧಿಕವಾಗಿ ಕರ್ನಾಟಕ ಏಕೀಕರಣ ಸಾಧ್ಯವೆಂಬುದನ್ನು ತೋರಿಸಿಕೊಟ್ಟವರು.

ಫಾಲನೇತ್ರ ಅವರು ನಮ್ಮ ನಾಡಿನ ಬಹುತೇಕ ಮಠಾಧೀಶರೊಂದಿಗೆ ಅತ್ಯಂತ ಹಾರ್ದಿಕವಾದ ಬಾಂಧವ್ಯವನ್ನು ಹೊಂದಿದವರು. ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪರಮಾಪ್ತ ಶಿಷ್ಯರಾದವರು. ಗದಗ ತೋಂಟದಾರ್ಯಮಠ, ಬೆಳಗಾವಿ ನಾಗನೂರು ರುದ್ರಾಕ್ಷಿಮಠ, ತರಳಬಾಳು ಬೃಹನ್ಮಠ, ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠ ಮೊದಲಾದ ಪರಮಪೂಜ್ಯರೊಂದಿಗೆ ಅವರು ಆತ್ಮೀಯವಾದ ಒಡನಾಟವನ್ನು ಹೊಂದಿದ್ದಾರೆ. ರಂಭಾಪುರಿ, ಶ್ರೀಶೈಲ ಮೊದಲಾದ ಗುರುಪೀಠದ ಗುರುಗಳೊಂದಿಗೂ ಅವರು ಆತ್ಮೀಯರಾಗಿದ್ದಾರೆ.

ತಾತ್ವಿಕ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಮಾನವೀಯ ನೆಲೆಯಲ್ಲಿ ನಾವೆಲ್ಲ ಮನುಷ್ಯರೇ ನಾವೆಲ್ಲ ಒಂದಾಗಿಯೇ ಇರಬೇಕೆಂಬ ಭಾವನೆಯುಳ್ಳವರು ಫಾಲನೇತ್ರ ಅವರು. ಈ ಗುಣದಿಂದಾಗಿಯೇ ಅವರು ನಾಡಿನ ತುಂಬ ಜನಾದರಣೀಯರಾಗಿದ್ದಾರೆ.

ಫಾಲನೇತ್ರ ಅವರು ಈವರೆಗೆ ಮಾಡಿದ ಕನ್ನಡ ಸೇವೆಯನ್ನು ಮನಗಂಡು, ಅವರ ಅಭಿಮಾನಿಗಳು ‘ವೀರಗಂಗಾ’ ಎಂಬ ಅಪರೂಪದ ಅಭಿನಂದನ ಗ್ರಂಥವನ್ನು ಅರ್ಪಿಸಿ ಗೌರವಿಸಿದ್ದು ಅತ್ಯಂತ ಔಚಿತ್ಯಪೂರ್ಣವಾದುದು.

ಇಂಥ ಹುಟ್ಟು ಚಳವಳಿಗಾರರೊಬ್ಬರೊಂದಿಗೆ ಕೆಲವು ಕ್ಷಣಗಳನ್ನು ಕಳೆಯುವ ಭಾಗ್ಯ ನನಗೆ ದೊರತದ್ದು ನನ್ನ ಸೌಭಾಗ್ಯವೆಂದು ಭಾವಿಸಿರುವೆ. ನನ್ನ ಸಾಹಿತ್ಯಿಕ ಚಟುವಟಿಕೆಗಳ ಬಗ್ಗೆ ಸದಭಿಪ್ರಾಯವನ್ನು ವ್ಯಕ್ತಪಡಿಸಿದ ಅವರ ಗುಣಗ್ರಾಹಿ ವ್ಯಕ್ತಿತ್ವಕ್ಕೆ ನಮೋ ನಮಃ


ಪ್ರಕಾಶ ಗಿರಿಮಲ್ಲನವರ, ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group