ಸಂಕೀರ್ಣ ವಚನ ಸಂಪುಟ – 10

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಮೂಲತಃ ವಚನನಿಧಿ ಜನರಿಂದ, ಜನರಿಗಾಗಿ ಹುಟ್ಟಿ, ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯವಾಗಿದೆ. ಹೀಗಾಗಿ ಹನ್ನೆರಡರಿಂದ ಹದಿನೈದನೆಯ ಶತಮಾನಕ್ಕೆ ಬರುವಷ್ಟರಲ್ಲಿ ಅದಕ್ಕೆ ವಿಪುಲ ಭಿನ್ನ ಪಾಠಗಳು ಹುಟ್ಟಿಕೊಂಡವು. ಆಮೇಲೆ ಸಂಕಲನ-ಸಂಪಾದನ ಕಾರ್ಯದಿಂದಾಗಿ ಕೆಲವೊಮ್ಮೆ ಪ್ರಕ್ಷಿಪ್ತ ವಚನಗಳೂ ತಲೆಯೆತ್ತಿದವು.

ಈ ಗೊಂದಲ ಕಾರಣವಾಗಿ ಕವಿ ಸಾಹಿತ್ಯಕ್ಕಿಂತ ವಚನಸಾಹಿತ್ಯದ ಸಂಪಾದನಕಾರ್ಯ ತುಂಬ ಜಟಿಲಸ್ವರೂಪದ್ದಾಗಿದೆ. ಈ ಜಟಿಲತೆಯನ್ನು ಬಿಡಿಸಿ ಸರಳ ಸುಂದರವಾಗಿ, ಶಾಸ್ತ್ರೀಯ ನೆಲೆಯಲ್ಲಿ ಶುದ್ದ ಪಾಠಾಂತರಗಳಿಂದ ಸಂಪಾದಿಸಿದ ಕೃತಿ ಸಂಕೀರ್ಣ ವಚನ ಸಂಪುಟ-10. ಇದನ್ನು ಸಂಪಾದಿಸಿದವರು ಡಾ. ವೀರಣ್ಣ ರಾಜೂರ ಅವರು. ಬಸವೋತ್ತರ ಯುಗದ ಮೊದಲ ಸಂಪುಟವಾದ ಇದರಲ್ಲಿ 11 ಜನ ವಚನಕಾರರ 1636 ವಚನಗಳು ಅಳವಟ್ಟಿವೆ. ಇದು 2001ರಲ್ಲಿ ದ್ವಿತೀಯ ಪರಿಷ್ಕøತ ಆವೃತ್ತಿಯಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನಿಂದ ಬೆಳಕುಕಂಡಿದೆ. 744 ಪುಟಗಳ ವಿಸ್ತಾರದಲ್ಲಿ ಅರಳಿದೆ.

ಡಾ. ವೀರಣ್ಣ ರಾಜೂರ ಅವರು ಪ್ರಸ್ತಾವನೆಯಲ್ಲಿ ಬಸವೋತ್ತರ ಯುಗದ ವಚನಸಾಹಿತ್ಯ ಕುರಿತಂತೆ ಚರ್ಚಿಸಿ; 35 ಜನ ವಚನಕಾರರ ಹೆಸರು ಹಾಗೂ ಅವರ ಅಂಕಿತಗಳ ಪಟ್ಟಿ ನೀಡಿದ್ದಾರೆ. ಅವರ ಬದುಕು-ಸಾಹಿತ್ಯ ಕುರಿತು ನಿರೂಪಿಸಿದ್ದಾರೆ.

- Advertisement -

ಈ ಯುಗದ ಕೆಲವು ವಿಶಿಷ್ಟ ಲಕ್ಷಣಗಳನ್ನು ಶೋಧಿಸಿ ಕಟ್ಟಿಕೊಟ್ಟಿರುವದು ಹೀಗಿದೆ: 

 • ಹೆಚ್ಚಾಗಿ ವಿರಕ್ತ ಪರಂಪರೆಗೆ ಸೇರಿದ ಅನುಭಾವಿಗಳಿಂದ ಈ ಸಾಹಿತ್ಯ ಸೃಷ್ಟಿಯಾಗಿದೆ.
 • ಹನ್ನೆರಡನೆಯ ಶತಮಾನದ ಶರಣರಂತೆ ಪರಿಸರ ಪ್ರೇರಿತ ತೀವ್ರಾನುಭವದ ಅಭಿವ್ಯಕ್ತಿಗಳಾಗಿ ಈ ವಚನಗಳು ಮೂಡಿಬರದೆ, ಕುಳಿತು ವಿಚಾರಿಸಿ ಬರೆದ ರಚನೆಗಳಾಗಿ ತೋರುತ್ತವೆ.
 • ಆ ಯುಗದಲ್ಲಿಯಂತೆ ಬಹು ಸಂಖ್ಯೆಯ ಶರಣರು ಏಕಕಾಲಕ್ಕೆ ಒಂದೆಡೆ ಸಂಘಟಿತರಾಗಿ, ಒಂದೇ ವೇದಿಕೆಯ ಮೇಲೆ ಸಮಸ್ಯೆಗಳಿಗೆ ಮುಖಾ ಮುಖಿಯಾಗಿ ಸ್ಪಂದಿಸಿ ಪ್ರತಿಕ್ರಿಯಾರೂಪದಲ್ಲಿ ಆತ್ಮಸಾಕ್ಷಿಯಾಗಿ ನುಡಿದ ನುಡಿಯಾಗಿರದೆ, ಬೇರೆ ಬೇರೆ ಕಾಲ-ಸ್ಥಳ-ಪರಿಸರಗಳಲ್ಲಿ ನಿಂತು ಅಧ್ಯಯನ, ಮನನ, ಚಿಂತನೆಗಳ ಮೂಲಕ ಶಾಸ್ತ್ರ ಸಾಕ್ಷಿಯಾಗಿ ರಚಿಸಿದ ಬರಹಗಳಾಗಿವೆ.
 • ಇವುಗಳಲ್ಲಿ ಸಾಮಾಜಿಕ ಕಾಳಜಿ-ಕಳಕಳಿಗಿಂತ ತತ್ವ, ಶಾಸ್ತ್ರ ಜಿಜ್ಞಾಸೆ ಅಧಿಕವಾಗಿ ಕಂಡುಬರುತ್ತದೆ.
 • ಬಸವಾದಿಗಳಲ್ಲಿ ಕಂಡುಬರುವ ಸಾಧಕನ ಆಂತರಿಕ ತೊಳಲಾಟ, ಆತ್ಮ ನಿರೀಕ್ಷಣೆ ಇವುಗಳಲ್ಲಿ ಕಡಿಮೆ. ಇದ್ದರೂ ಅದು ಸಹಜ ನೋವಿನಿಂದ ಮೂಡಿಬಂದಂತೆ ತೋರುವುದಿಲ್ಲ.
 • ಹನ್ನೆರಡನೆಯ ಶತಮಾನದ ಭಕ್ತಿ ಜ್ಞಾನ, ಕ್ರಿಯೆಗಳೆಂಬ ಮೌಲ್ಯಗಳಲ್ಲಿ ಈ ಕಾಲಕ್ಕೆ ಮೊದಲಿನ ಎರಡಕ್ಕೆ ಹೆಚ್ಚು ಒತ್ತು ಬಿದ್ದು ಕ್ರಿಯೆಗೆ ಬದಲಾಗಿ ವೈರಾಗ್ಯಕ್ಕೆ ಮಹತ್ವ ಲಭಿಸಿತು.
 • ತತ್ವ ನಿರೂಪಣೆ, ಪಾರಿಭಾಷಿಕತೆಗಳನ್ನು ಚೆನ್ನಬಸವಾದಿಗಳ ಮುಂದುವರಿಕೆ ತೋರಿದರೂ ಕೆಲವು ಹೊಸ ಪಾರಿಭಾಷಿಕ ಪದಗಳ ಸೃಷ್ಟಿಯೂ ಈ ಕಾಲದಲ್ಲಿ ನಡೆಯಿತು. ತತ್ವ ಜಡತೆ, ಹೇರಳವಾದ ಪಾರಿಭಾಷಿಕ ಪದಗಳ ಬಳಕೆಯಿಂದ ಹೆಚ್ಚಿನ ವಚನಗಳು ಶಾಸ್ತ್ರ ಲಕ್ಷಣಕ್ಕೆ ಹೊರಳಿದವು. ವಚನ ಎಂಬುದು ಒಂದು ಶಾಸ್ತ್ರ ಎಂಬ ಅಭಿಪ್ರಾಯಕ್ಕೆ ಅಧಿಕ ಪುಷ್ಠಿ ಲಭಿಸಿತು.
 • ನೈತಿಕ, ತಾತ್ವಿಕ ವಿಷಯ ಪ್ರತಿಪಾದನೆಯೇ ಮುಖ್ಯ ಉದ್ದೇಶವಾದುದರಿಂದ ಮುಕ್ತಕಗಳಿಗಿಂತ, ವಿವರಣಾತ್ಮಕ ಗದ್ಯ ಲಕ್ಷಣಗಳನ್ನೊಳಗೊಂಡ ರಚನೆಗಳೇ ಹೆಚ್ಚಾಗಿ ಕಂಡು ಬರುತ್ತವೆ. ಹೀಗಾಗಿ ಶಿಲ್ಪ ಬಂಧುರತೆ, ರಚನಾ ಸುಲಭತೆಗಳು ಇಲ್ಲವಾಗಿ, ಶಿಥಿಲತೆ ಕೃತಕತೆಗಳು ಎದ್ದು ತೋರುತ್ತವೆ.
 • ಅನುಭವ ತೀವ್ರತೆ, ಭಾವ-ಭಾಷೆಗಳ ಸಹಜ ಬೆಸುಗೆ, ಲಯಾತ್ಮಕತೆ, ನೂತನ ಅಲಂಕಾರ, ಪ್ರತಿಮೆ, ಸಂಕೇತ, ಉಕ್ತಿ ವೈಚಿತ್ರ್ಯ, ಕಲ್ಪನಾ ರಮ್ಯತೆಗಳು ಕಂಡುಬರದ ಕಾರಣ ಈ ಯುಗದ ವಚನಗಳಲ್ಲಿ ಕಾವ್ಯಗುಣ ಗೌಣ.
 • ಆದರೂ ಕೆಲವರಲ್ಲಿ ಕ್ವಚಿತ್ತಾಗಿ 12ನೆಯ ಶತಮಾನದ ಶರಣರನ್ನು ಸಮೀಪಿಸಿರುವ ಭಾವೋತ್ಕಟತೆ, ಅಭಿವ್ಯಕ್ತಿ ಸಹಜತೆಗಳು ಕಾಣುತ್ತವೆ. (ತೋಂಟದ ಸಿದ್ಧಲಿಂಗ, ಷಣ್ಮುಖ ಶಿವಯೋಗಿ, ಹೇಮಗಲ್ಲ ಹಂಪ, ದೇಶಿಕೇಂದ್ರ ಸಂಗನಬಸವ).
 • ಭಾಷೆಯ ಬಳಕೆಯಲ್ಲಿ ಮಿತವ್ಯಯಕ್ಕಿಂತ ಧಾರಾಳತೆ, ಧ್ವನಿಪೂರ್ಣತೆಗಿಂತ ವಾಚ್ಯತೆ ಹೆಚ್ಚು. ಶಿಷ್ಠತೆಗಿಂತ ಆಯಾ ಪರಿಸರದ ಪ್ರಾದೇಶಿಕ ದೇಶೀ ಭಾಷೆಯನ್ನು ತೀರಸಹಜವಾಗಿ ಬಳಸಿಕೊಂಡುದು ಇವರಲ್ಲಿ ತೆರೆದುಕಾಣುವ ವೈಶಿಷ್ಟ್ಯವೆನಿಸಿದೆ.
 • ಸಿದ್ಧತಾತ್ವಿಕ ಚೌಕಟ್ಟಿನ ಜೊತೆಗೆ ಹಲವು ಹತ್ತು ನೂತನ ಸ್ಥಲಯೋಜನೆ ರೂಪಿಸಿಕೊಂಡು, ಸ್ವತಃ ಕರ್ತವೇ ಆ ಸ್ಥಲಗಳಿಗನುಗುಣವಾಗಿ ವಚನ ರಚಿಸಿದ್ದಾರೆ. ಕೆಲವರು ತಮ್ಮ ವಚನಗಳಿಗೆ ತಾವೇ ಟೀಕೆ ಬರೆದರೆ, ಮತ್ತೆ ಕೆಲವರು ಬೇರೆಯವರ ವಚನಗಳನ್ನು ಸ್ಥಲಾನುಗುಣವಾಗಿ ಸಂಕಲಿಸಿ, ಅಲ್ಲಿ ತನ್ನ ವಚನಗಳನ್ನು ಅಳವಡಿಸಿದುದು ಈ ಯುಗದ ಎದ್ದುಕಾಣುವ ಅಂಶವಾಗಿದೆ.
 • ಬೆಡಗಿನ ತಂತ್ರವನ್ನು ಹೆಚ್ಚಾಗಿ ಅಳವಡಿಸಿಕೊಂಡುದು. ಹೇರಳವಾಗಿ ಸಂಸ್ಕøತ ಪ್ರಮಾಣಗಳನ್ನು ವಚನಗಳಲ್ಲಿ ಸೇರಿಸಿಕೊಂಡುದು ಈ ಯುಗದ ವಚನಗಳಲ್ಲಿ ಕಣ್ಣುಕುಕ್ಕುವ ಅಂಶವಾಗಿದೆ.
 • ವಚನಗಳ ಜೊತೆ ಸ್ವರವಚನ, ತ್ರಿಪದಿ, ಕಂದ, ಶತಕ, ತಾರಾವಳಿ, ಷಟ್ಪದಿ ಇತ್ಯಾದಿ ಲಘ ಸಾಹಿತ್ಯ ಪ್ರಕಾರಗಳ ರಚನೆಮಾಡಿದ್ದು ಈ ಯುಗದ ವಚನಕಾರರ ಮತ್ತೊಂದಿ ವಿಶೇಷ.
 • ಒಟ್ಟಿನಲ್ಲಿ ಪಾರಂಪರಿಕ ಪ್ರಕಾರವೊಂದರಲ್ಲಿ ಧರ್ಮತತ್ವಗಳನ್ನು ಅಳವಡಿಸುವ, ಅವುಗಳನ್ನು ಪ್ರಚುರಪಡಿಸುವ, ಆ ಮೂಲಕ ವಚನ ಪ್ರಕಾರವನ್ನು ಮುಂದುವರಿಸಿಕೊಂಡು ಸಾಗುವ ಕಾರ್ಯವನ್ನು ಈ ಯುಗದ ವಚನಕಾರರು ನಿಷ್ಠೆಯಿಂದ ನೆರವೇರಿಸಿದ್ದಾರೆ.
 • ಹೀಗೆ ಡಾ. ರಾಜೂರ ಅವರು ಈ ಯುಗದ ವಚನಕಾರರ ವಚನಗಳ ವೈಶಿಷ್ಟ್ಯವನ್ನು, ಅದರ ಲಕ್ಷಣಗಳನ್ನು ತೆರೆದು ತೋರಿರುವದು ಅರ್ಥಪೂರ್ಣ ವಿಚಾರ. ಈ ಕಷ್ಟದ ಕಾರ್ಯ ಮಾಡುವಲ್ಲಿ ಶ್ರಮ, ಸಂಯಮ. ಪಾಂಡಿತ್ಯ ಬೇಕಾಗುತ್ತದೆ. ಅದು ಇದ್ದರೆ ಮಾತ್ರ ಗ್ರಂಥ ಸಂಪಾದನೆ ಕಾರ್ಯ ಸುರಳಿತವಾಗಿ ಸಾಗಿ ಸುಂದರ ಕೃತಿ ಹೊರಬರಲು ಸಾಧ್ಯ.
 • ಈ ಎಲ್ಲ ಅಂಶಗಳು ಸಂಪಾದಕರಲ್ಲಿ ಇರುವದರಿಂದ ಈ ಕಾರ್ಯಕ್ಕೆ ಅರ್ಥಬಂದು ಅಂದ ಹೆಚ್ಚಿ ನಾಡಿನ ತುಂಬ ವಚನದ ಪರಿಮಳ ಶ್ರೀ ಸಾಮಾನ್ಯನಿಗೂ ತಿಳಿದು ವೈಚಾರಿಕ ಅಂಶಗಳು ತಕ್ಕಮಟ್ಟಿಗಾದರು ಸಮಾಜದಲ್ಲಿ ನೆಲೆನಿಂತಿರುವದನ್ನು ವರ್ತಮಾನದಲ್ಲಿ ಕಾಣುತ್ತೇವೆ.

ಈ ಸಂಪುಟವನ್ನು ಹೆಚ್ಚಿಗೆ ದೊರೆತ ಆಕರಗಳು ಹಾಗೂ ವಿದ್ವಾಂಸರು ಸೂಚಿಸಿದ ತಿದ್ದುಪಡಿಗಳ ಹಿನ್ನೆಲೆಯಲ್ಲಿ ಮರುಪರಿಷ್ಕರಣಗೊಳಿಸಿದ್ದಾರೆ. ಅದರಿಂದಾದ ಬದಲಾವಣೆಗಳನ್ನು ಹೀಗೆ ಗ್ರಹಿಸಬಹುದು:

 • ಮೊದಲ ಆವೃತ್ತಿಯಲ್ಲಿ ಈ ಸಂಪುಟದಲ್ಲಿ 9 ಜನ ವಚನಕಾರರ 1614 ವಚನಗಳು ಅಳವಟ್ಟಿದ್ದವು. ಈಗ ವಚನಕಾರರ ಸಂಖ್ಯೆ 11ಕ್ಕೆ ಏರಿದ್ದರೆ. ವಚನಗಳ ಸಂಖ್ಯೆ 1636ಕ್ಕೆ ಏರಿದೆ.
 • ಕೂಡಲಸಂಗಮೇಶ್ವರ ಮತ್ತು ಘನಲಿಂಗÀಯ್ಯ ಎಂಬ ಇಬ್ಬರು ವಚನಕಾರರು ಇಲ್ಲಿ ಹೆಚ್ಚಿಗೆ ಪ್ರವೇಶ ಪಡೆದಿದ್ದಾರೆ. ಅವರ 20 (19+1) ವಚನಗಳು ಹೆಚ್ಚಿಗೆ ಸೇರಿಕೊಂಡಿವೆ. ಈ ಮೊದಲೇ ಪ್ರವೇಶ ಪಡೆದಿದ್ದ ಗಣದಾಸಿ ವೀರಣ್ಣನ 3 ವಚನಗಳು ಹೆಚ್ಚಿಗೆ ದೊರೆತಿವೆ. ಹೀಗಾಗಿ ಒಟ್ಟು 23 ವಚನಗಳು ಈ ಸಂಪುಟದಲ್ಲಿ ಅಧಿಕವಾಗಿ ಸೇರ್ಪಡೆಯಾದಂತಾಗಿದೆ.
 • ಮಹೇಶ್ವರಯ್ಯನ ವಚನಗಳಲ್ಲಿ ಪ್ರಥಮ ಆವೃತ್ತಿ ಕ್ರಮಾಂಕ 777 ಮತ್ತು 778ನೆಯ ವಚನಗಳು ಪ್ರಭುದೇವರ ವಚನಗಳಾಗಿರುವುದರಿಂದ (ನೋಡಿ ಪ್ರಭುದೇವರ ವಚನ ಸಂಪುಟ-ವಚನ ಕ್ರಮಾಂಕ 640 ಮತ್ತು 1440) ಅವುಗಳನ್ನು ಇಲ್ಲಿ ಕೈಬಿಡಲಾಗಿದೆ. ಇವನ 755 ಮತ್ತು 757ನೆಯ ವಚನಗಳು ಎರಡೆರಡು ಸೇರಿ ಒಂದಾಗಿದ್ದುದನ್ನು ಗಮನಿಸಿ ಅವನ್ನು ಎರಡಾಗಿ ಬಿಡಿಸಲಾಗಿದೆ. ಹೀಗಾಗಿ ಇವನ ವಚನ ಸಂಖ್ಯೆ ಮೊದಲು 43 ಇದ್ದದ್ದು ಎರಡು ಕಳೆಯಲು 41 ಆಗಿ, ಎರಡನ್ನು ಬಿಡಿಸಿ ಸೇರಿಸಲು ಮತ್ತೆ 43 ಆಗಿ ಯಥಾಸ್ಥಿತಿ ಉಳಿದಂತಾಗಿದೆ.
 • ಚೆನ್ನಯ್ಯನ 813ನೆಯ ವಚನ (ಪ್ರ.ಅ.) ಬಸವಣ್ಣನವರದಾಗಿರುವುದರಿಂದ (ನೋಡಿ-ಬಸವಣ್ಣನವರ ವಚನ ಸಂಪುಟ-ವ.ಸಂ.196) ಅದನ್ನು ಇಲ್ಲಿ ಕೈಬಿಡಲಾಗಿದೆ. ಅದರಿಂದ ಈತನ ವಚನ ಸಂಖ್ಯೆ 143 ಇದ್ದದ್ದು 142ಕ್ಕೆ ಇಳಿದಿದೆ.
 • ಗಣದಾಸಿ ವೀರಣ್ಣನ 3 ವಚನಗಳು ಹೆಚ್ಚಿಗೆ ದೊರೆತುದರಿಂದ ಈತನ ವಚನ ಸಂಖ್ಯೆ 40ಕ್ಕೆ (37+3) ಏರಿದೆ. ಈತನ 609, 638ನೆಯ ವಚನಗಳಲ್ಲಿ (ಪ್ರ.ಅ.) ಬಿಟ್ಟು ಹೋಗಿದ್ದ ಭಾಗವನ್ನು ಹೊಸದಾಗಿ ದೊರೆತ ಹಸ್ತಪ್ರತಿಯ ಸಹಾಯದಿಂದ ಸೇರಿಸಿ ಪೂರ್ಣಗೊಳಿಸಿದ್ದಾರೆ.
 • ಕುಷ್ಟಗಿ ಕರಿಬಸವೇಶ್ವರರ ವಚನಗಳಲ್ಲಿ 509ನೆಯ ವಚನದ ನಾಲ್ಕು ಸಾಲು ತೋಂಟದ ಸಿದ್ಧಲಿಂಗರ ವಚನ (161)ದಲ್ಲಿನವಾಗಿವೆ. 552ನೆಯ ವಚನ ಕೊನೆಯ ಮೂರು ಸಾಲನ್ನು ಬಿಟ್ಟು ಉಳಿದುದೆಲ್ಲ ತೋಂಟದ ಸಿದ್ಧಲಿಂಗರ ವಚನವಾಗಿದೆ.
 • (646), 549, 551, 553, ಇವು ತೋಂಟದ ಸಿದ್ಧಲಿಂಗರ ವಚನದಲ್ಲಿಯೂ ಇವೆ. (ಕ್ರಮವಾಗಿ ತೋಂ. ಸಿ.ವ.643, 645, 142), ಅಂಕಿತ ಮಾತ್ರ ಭಿನ್ನವಾಗಿದೆ. ಈ ವಚನಕಾರ ಒಂದು ತಾತ್ವಿಕ ಹಿನ್ನೆಲೆಯಲ್ಲಿ ಈ ಕೃತಿಯನ್ನು ಸಂಯೋಜಿಸಿರುವದರಿಂದ ಆ ವಚನಗಳನ್ನು ತೆಗೆದು ಹಾಕದೆ ಹಾಗೇ ಉಳಿಸಿಕೊಳ್ಳಲಾಗಿದೆ ಮತ್ತು ಈ ಸಂಗತಿಯನ್ನು ಆಯಾ ವಚನದ ಅಡಿಯಲ್ಲಿ ಸೂಚಿಸಿರುವರು.
 • ಅನುಬಂಧದಲ್ಲಿ ಇದ್ದ ಕರಸ್ಥಲ ಮಲ್ಲಿಕಾರ್ಜುನ ದೇವರ 3 ವಚನಗಳನ್ನು ಆತನ ಹೆಸರಿನಡಿಯಲ್ಲಿ ಸೇರಿಸಿಕೊಳ್ಳಲಾಗಿದೆ.
  ಅನುಬಂಧದ ತಿದ್ದಪಡಿಗಳನ್ನು ಸರಿಪಡಿಸಿಕೊಳ್ಳುವುದರ ಜೊತೆಗೆ ಆ ಮೂಲಾಗ್ರವಾಗಿ ಎಲ್ಲ ವಚನಗಳನ್ನು ಮತ್ತೊಮ್ಮೆ ಪರಿಶೀಲಿಸಿ ಉಳಿದಿದ್ದ ಪಾಠದೋಷ. ಮುದ್ರಣ ದೋಷಗಳನ್ನು ತಿದ್ದಲಾಗಿದೆ.
 • ವಚನಗಳ ಒಡಲಲ್ಲಿ ಸೇರಿರುವ ಎಲ್ಲ ಸಂಸ್ಕøತ ಶ್ಲೋಕಗಳನ್ನು ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳಿಂದ ಮತ್ತೊಮ್ಮೆ ತಿದ್ದುಪಡಿ ಮಾಡಿರುವರು. ಹೀಗಿದ್ದೂ ತಿದ್ದುಪಡಿ ಸಾಧ್ಯವಿಲ್ಲದ ಹೆಚ್ಚು ವಿಕೃತವಾದ ಶ್ಲೋಕಗಳನ್ನು ಪ್ರಶ್ನಾರ್ಥಕ ಚಿಹ್ನೆ ಹಾಕಿ ಹಾಗೇ ಉಳಿಸಿಕೊಂಡಿದ್ದಾರೆ.
 • ಪ್ರಸ್ತಾವನೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಬಸವೋತ್ತರ ಯುಗದ ಎಲ್ಲ ಸಂಪುಟಗಳು ಸೇರಿ ತೋರುವ ಒಟ್ಟು ವಚನಕಾರರ ಸಂಖ್ಯೆ ಪ್ರಥಮ ಆವೃತ್ತಿಯಲ್ಲಿ 30 ಇದ್ದದು ದ್ವಿತೀಯ ಆವೃತ್ತಿಯಲ್ಲಿ 36 ಆಗಿದೆ;
 • ವಚನ ಸಂಖ್ಯೆ 6590 ಇದ್ದದು 7767 ಆಗಿದೆ; ಒಟ್ಟು ವಚನಕಾರರ ಪಟ್ಟಿಯಲ್ಲಿ ಕೂಡಲಸಂಗಮೇಶ್ವರ, ಘನಲಿಂಗದಯ್ಯ, ಬೊಮ್ಮಗೊಂಡೇಶ್ವರ, ಮೆಡ್ಲೇರಿ ಶಿವಲಿಂಗ ಮತ್ತು ವೀರಸಂಗಮೇಶ್ವರ ಹೆಸರುಗಳು ಹೆಚ್ಚಿಗೆ ಸೇರ್ಪಡೆಯಾಗಿವೆ.
 • ಮುಮ್ಮಡಿ ಕಾರ್ಯೇಂದ್ರನ ವಚನ ಸಂಖ್ಯೆ 109 ಇದ್ದದು 125 ಆಗಿದೆ. ಗಣದಾಸಿ ವೀರಣ್ಣನ ವಚನ ಸಂಖ್ಯೆ 37 ಇದ್ದದು 40 ಆಗಿದೆ.

ಹಾಗೆಯೇ ಈ ಸಂಪುಟದ ವಚನಕಾರರು ಎಂಬ ಪಟ್ಟಿಯಲ್ಲಿ ಕೂಡಲಸಂಗಮೇಶ್ವರ, ಘನಲಿಂಗದಯ್ಯನ ಹೆಸರುಗಳನ್ನು ಸೇರಿಸಲಾಗಿದೆ. 9 ಜನ ವಚನಕಾರರು ಇದ್ದದು 11 ಜನ ಆಗಿದೆ; ಒಟ್ಟು 1614 ವಚನಗಳಿದ್ದುದು 1636 ಆಗಿದೆ. ಇದಕ್ಕನುಗುಣವಾಗಿ ಆಯಾ ವಚನಕಾರರ ವಿಷಯದಲ್ಲಿಯೂ ಸೂಕ್ತ ಬದಲಾವಣೆ ಮಾಡಿಕೊಂಡಿದ್ದಾರೆ.

ಡಾ. ವೀರಣ್ಣ ರಾಜೂರ ಅವರು ಬಹು ಪರಿಶ್ರಮದಿಂದ ಈ ಸಂಪಾದನ ಕಾರ್ಯ ಮಾಡಿರುವದು ಅರ್ಥಪೂರ್ಣವೆನಿಸಿದೆ. ಇದರಿಂದ ಈ ವಚನಗಳನ್ನು ಸಾಮಾನ್ಯರು ಅಧ್ಯಯನಿಸಲು ಅನುಕೂಲವೆನಿಸಿದೆ.

ಯುವ ಬರಹಗಾರರಿಗೆ ದಾರಿದೀಪವಾಗಿ ಈ ಕೃತಿ ಮಾರ್ಗದರ್ಶನ ಮಾಡಿದೆ ಎಂದರೆ ತಪ್ಪಾಗಲಾರದು ಎನಿಸುವದು. ಈ ಬೆಲೆವುಳ್ಳ ಕಾರ್ಯ ಮಾಡಿದ ಸಂಪಾದಕರಿಗೆ ಸಾವಿರದ ಶರಣು.


ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!