ಶ್ರೀಗಳಿಗೆ ಸರ್ಪಭೂಷಣ ಹೆಸರು ಹೇಗೆ ಬಂದಿತು ಮತ್ತು ನಿಜಗುಣ ಶಿವಯೋಗಿಗಳ ” ಕೈವಲ್ಯ ಪದ್ಧತಿ ” ಪುಸ್ತಕವೆಂಬ ಕಲ್ಪವೃಕ್ಷಕ್ಕೆ ತಾವು ಈ ಕೃತಿಯ ಮೂಲಕ ವಲ್ಲರಿಯನ್ನು ಹೊಂದಿಸಿದ್ದೇವೆ ಎನ್ನುವ ಶ್ರೀಗಳ ವಿನೀತವಾದ ಭಾವವನ್ನು ಉಲ್ಲೇಖಿಸುತ್ತಾ, ಶರಣ ಶ್ರೀಧರ ಮುರಾಳೆ ತಮ್ಮ ಉಪನ್ಯಾಸವನ್ನು ಗೂಗಲ್ ಮೀಟ್ ನಲ್ಲಿ ಆರಂಭಿಸಿದರು.
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ 16 ನೆಯ ದಿವಸ ಅವರು ಮಾತನಾಡಿದರು.
ಕೃತಿಯಲ್ಲಿ ಒಟ್ಟು ಐದು ಸ್ಥಲಗಳಿವೆ ಎಂದು ಅವುಗಳ ಹೆಸರುಗಳನ್ನು ಉದಾಹರಿಸುತ್ತಾ,ಶಿವಯೋಗ ಸಾಧನೆಯಲ್ಲಿ ಬರುವ ಮಂತ್ರಯೋಗದ ಬಗೆಗೆ ವಿವರಿಸುತ್ತಾ ಹೋದರು.
ಬರಿದೇ ಬೆರಳು ಎಣಿಸುತ್ತ, ಮಂತ್ರ ಜಪಿಸುವುದಲ್ಲ, ಬಾಹ್ಯ ಭ್ರಾoತಿಯಳಿದು ಅಂತರಂಗದಲ್ಲಿ ಜಪಿಸಿದರೆ ಮುಕ್ತಿ ಸಿಗುವುದು. ಗುರುಬೋಧೆಯ ಉಪದೇಶಕ್ಕಿಂತ ಅತಿಶಯವಾದುದು ಯಾವೂದೂ ಇಲ್ಲ. ಮೂಲಾಧಾರ ಚಕ್ರದಿಂದ ಆಜ್ಞಾಚಕ್ರದವರೆಗೆ ಷಡಕ್ಷರಿ ಮಂತ್ರದಿಂದ ಅದನ್ನು ಹೇಗೆ ಸಾಧಿಸಬೇಕು ಎಂದು ಹೇಳುತ್ತಾ ಸಾಧನೆಯ ಹಂತಗಳನ್ನು ವಿವರಿಸುತ್ತಾ ಹೋದರು.
ದೇವರನ್ನು ಏನಾದರೂ ನೋಡುವುದಿದ್ದರೆ ಬ್ರಹ್ಮರಂದ್ರದಲ್ಲಿ ಮೆರೆವ ಜ್ಯೋತಿಯ ಮೂಲಕ ನೋಡು,
ಅದೇ ಮಂಗಳದ ಮಹಾಬೆಳಕು ಭ್ರೂಮಧ್ಯದ ಒಳಗಿನ ರಂಗಮಂಟಪದಲ್ಲಿ ಪ್ರಣವಮಂತ್ರ, ನಾದ-ನಿನಾದದೊಂದಿಗೆ ಗುರುಸಿದ್ದೇಶ್ವರನಿದ್ದಾನೆ. ನಾದ -ಬಿಂದು -ಕಳಾತೀತವಾಗಿ ಒಂದೊಂದೇ ಚಕ್ರದ ಒಳಹೊಕ್ಕು, ಇಡಾ -ಪಿಂಗಳ -ಸುಷುಮ್ನ ನಾಡಿಗಳನ್ನು ಹಿಡಿದು ನಮ್ಮ ಇಡೀ ಶರೀರವನ್ನೇ ತೀರ್ಥಯಾತ್ರೆಯನ್ನಾಗಿ ಮಾಡಿಕೊಳ್ಳಬೇಕು. ಯಾವುದೇ ಸಂಗಮಕ್ಕೆ, ಗುಡಿ -ಗುಂಡಾರಗಳಿಗೆ, ತೀರ್ಥಸ್ಥಳಗಳಿಗೆ ಹೋಗುವುದು ಬೇಡ. ಇಲ್ಲಿಯೇ ನಮ್ಮ ತ್ರಿಮಲ ನಾಶಪಡಿಸಿಕೊಳ್ಳಬೇಕು. ಗುರುಸಿದ್ಧನೇ ತಾನಾಗಬೇಕು, ತನ್ನ ಮನವೇ ದೇವಸ್ಥಾನ ತನುವೇ ಪಂಪಾಕ್ಷೇತ್ರ. ಪೂರಕ ರೇಚಕದೊಂದಿಗೆ ಜಪವ ಮಾಡಿದರೆ ಬೇರೆ ಏನೂ ಬೇಡ ಎನ್ನುವ ಕೃತಿಯ ಒಳಗಣ ಹೂರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಆರು ಬೆಟ್ಟವ ದಾಟಿ ನಡೆದು ಮೂರು ಕೊಳ್ಳದ ಮೂಲಕಿಳಿದು ಏರಿದೆನು ಕೈಲಾಸ ದ್ವಾರವ, ಓಂ ಗುರು ಸಿದ್ಧ ಬಡಗಲ ಗುಡಿ ನೋಡಿದೆ ಎಂದು ಹೇಳುತ್ತಾ, ಏಳು ಸುತ್ತಿನ ಕೋಟೆಯೊಳಗೆ ನೀಲದುಪ್ಪರಿಗೆಗಳ ನಡುವೆ, ನೀಲ ಜ್ಯೋತಿ ಪ್ರಕಟವಾಗುತ್ತದೆ. ತಾಳ -ಮದ್ದಳೆ -ಘಂಟೆಗಳು ವೇಳೆ ವೇಳೆಗೆ ತಾವೇ ನುಡಿಯುತ್ತವೆ. ಒಂಬತ್ತು ಬಾಗಿಲು, ನಾಲ್ಕು ಬೀದಿ, ತುಂಬಿ ಸೂಸುವ ಏಳು ಕೊಳಗಳು, ಎರಡು ಸ್ಥoಬಗಳು ಇವೆ. ಹಾಗೆಯೇ ಶಿಖರವ ಹತ್ತುತ್ತಾ ಹೋದರೆ ಒಳಗಿನ ಬೆಳಕು ಕರೆಯದೆ ಕಾಣಿಸಿತು, ನಂತರ ಮದ -ಮತ್ಸರ -ಕಾಮಾದಿಗಳನ್ನು ಜಯಿಸಿ, ಸಪ್ತನದಿಯ ದಾಟಿ ಗುಪ್ತ ಕದಳಿಯ ಹೊಕ್ಕೆನು ಎಂದು ಆಧ್ಯಾತ್ಮದ ಅಲ್ಪ ಸ್ವಲ್ಪ ಹೊಳಹುಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳುತ್ತಾ, ಮುಂದುವರೆದ ಭಾಗವಾಗಿ ಇನ್ನೊಮ್ಮೆ ಮಾತಾಡುವ ಭರವಸೆಯನ್ನು ಕೊಟ್ಟು, ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.
ಶರಣ ವಿಜಯಕುಮಾರ ತೇಲಿ ಅವರು ಹಾಲು -ಸಕ್ಕರೆ ಕೂಡಿದಾಗ ಸೌಗಂಧ ಉಂಟಾಗುವ ಹಾಗೆ ಉಪನ್ಯಾಸಕರ ಮಾತುಗಳಿದ್ದವು ಎಂದು ಹೇಳುತ್ತಾ, ಶೂನ್ಯ -ನಿಶ್ಯೂನ್ಯದ ಬಗೆಗೆ, ಉಸಿರಿನ ಶಕ್ತಿಯ ಕುರಿತು, ತಪೋವನದ ಕುಮಾರಸ್ವಾಮಿಗಳು ನಾದಯೋಗಿಗಳಾಗಿದ್ದರು ಎನ್ನುವುದನ್ನು ಸ್ಮರಿಸುತ್ತಾ, ಸ್ವರ ವಿಜ್ಞಾನ -ಸ್ವರಯೋಗದ ಬಗೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಡಾ. ಶಶಿಕಾಂತ ಪಟ್ಟಣ ಅವರು ಸೋಹಮ್ ಎನಿಸದೆ ದಾಸೋಹಮ್ ಎನಿಸು, ಲೋಕಾಂಗಿಯಾಗು, ಎಲ್ಲರನ್ನೂ ಬೆಳೆಸು ಎನ್ನುವ ಶರಣರ ತತ್ವವನ್ನು ಉಲ್ಲೇಖಿಸುತ್ತಾ ಗಜೇಶ ಮಸಣಯ್ಯ, ಆದಯ್ಯ್, ಸಿದ್ಧರಾಮರು, ಚೆನ್ನಬಸವಣ್ಣ ಆದಿಯಾಗಿ ಬಹಳಷ್ಟು ಶರಣರು ಶಿವಯೋಗ ಸಾಧಕರಾಗಿದ್ದರು ಎಂದು ಹೇಳುತ್ತಾ ಅಕ್ಕಮಹಾದೇವಿಯ ಕದಳಿಯ ವ್ಯಾಪಕತೆಯನ್ನು ಬಣ್ಣಿಸಿದರು.
ಮಾಡಿ ಮಾಡದಂತಿರಬೇಕು, ಇದ್ದೂ ಇಲ್ಲದಂತಿರಬೇಕು, ಎಂದು ಹೇಳುತ್ತಾ ಶಿಶುನಾಳ ಶರೀಫರ ಸುಗ್ಗಿಯ ನೋಡೋಣ ಬಾರವ್ವ ಎನ್ನುವ ತತ್ವಪದದ ಅರ್ಥವನ್ನು ಎಲ್ಲರಿಗೂ ತಿಳಿಯುವಂತೆ ಅರ್ಥೈಸಿದರು.
ಶರಣೆ ಲಲಿತಾ ಅಂಗಡಿ ಅವರ ಪ್ರಾರ್ಥನೆ, ಶರಣೆ ಪ್ರಿಯoವದಾ ಹುಲಗಬಾಳಿ ಅವರ ಸ್ವಾಗತ, ಪ್ರಾಸ್ತಾವಿಕ, ಪರಿಚಯ, ಶರಣೆ ವಿಜಯಾ ಗೌಡ ಅವರ ಶರಣು ಸಮರ್ಪಣೆ, ಶರಣೆ ತ್ರಿವೇಣಿ ವಾರದ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಡಾ. ವೀರಾಕ್ಷಿ ವಿವೇಕಿ ಅವರು ಕಾರ್ಯಕ್ರಮವನ್ನು ಸಾಂಗವಾಗಿ ನಡೆಸಿಕೊಟ್ಟರು
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ