spot_img
spot_img

ಸಿಂದೋಗಿ ಮುನವಳ್ಳಿ: ಗೂಗಲ್ ಮೀಟ್ ನಲ್ಲಿ ಸತ್ಸಂಗ

Must Read

- Advertisement -

ಮೇ 22 2021 ಸಿಂದೋಗಿ ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಪರಮಪೂಜ್ಯರು ಶ್ರೀಮಠಕ್ಕೆ ಸತ್ಸಂಗ ನಿಮಿತ್ತ ಆಗಮಿಸುವ ಸದ್ಭಕ್ತರಿಗೆ ಕೋರೋನಾ ಲಾಕ್‍ಡೌನ್ ಸಲುವಾಗಿ ಮನೆಮನೆಯಲ್ಲಿ ಅಂತರ್ಜಾಲ ಬಳಸಿ ಸತ್ಸಂಗ ನಡೆಸುವ ಯೋಜನೆಯನ್ನು ರೂಪಿಸಿದರು.

ಈ ಕಾರ್ಯದಲ್ಲಿ ಗೂಗಲ್ ಮೀಟ್ ಮೂಲಕ ಸತ್ಸಂಗ ನಡೆಸುವ ಸಿದ್ಧತೆಯನ್ನು ಪ್ರೌಢಶಾಲಾ ಶಿಕ್ಷಕರಾದ ಕಂಕಣವಾಡಿ ಮತ್ತು ವೀರಣ್ಣ ಕೊಳಕಿಯವರು ಸಿದ್ಧತೆ ನಡೆಸಿದರು. ಜೊತೆಗೆ ಶ್ರೀ ಮಠಕ್ಕೆ ಆಗಮಿಸಿ ಸತ್ಸಂಗದಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತ ಬಂದಿದ್ದ ಸಿಂದೋಗಿ ಮುನವಳ್ಳಿಯ ಭಕ್ತರ ಮೋಬೈಲ್ ಸಂಪರ್ಕ ಸಂಖ್ಯೆಯನ್ನು ಕಲೆ ಹಾಕಿ ಅನುರಾಧ ಬೆಟಗೇರಿ ಮತ್ತು ಹೊನ್ನಳ್ಳಿ.ವೀರಣ್ಣ ಕೊಳಕಿ ಪರಮಪೂಜ್ಯ ಶ್ರೋ.ಬ್ರ.ನಿ.ಮುಕ್ತಾನಂದ ಸ್ವಾಮೀಜಿಯವರು ಸೇರಿ ವ್ಯಾಟ್ಸಪ್ ಗ್ರುಪ್ ಒಂದನ್ನು ರಚಿಸಿ ಅದರಲ್ಲಿ ಲಿಂಕ್ ಕಳಿಸಲು ಅನುಕೂಲವಾಗಲೆಂದು ಎಲ್ಲ ಸತ್ಸಂಗ ಸದಸ್ಯರ ಪೋನ್ ಸಂಖ್ಯೆಗಳನ್ನು ಸೇರ್ಪಡೆಗೊಳಿಸಿದರು.

74 ಸದಸ್ಯರ ಈ ಗ್ರುಪ್‍ನಲ್ಲಿ ಇದ್ದವರು ತಮಗೆ ಆಪ್ತರೆನಿಸಿದವರಿಗೆ ತಾವು ವೈಯುಕ್ತಿಕವಾಗಿ ಲಿಂಕ್ ಕಳಿಸಲು ಅನುಕೂಲವಾಯಿತು. ಹೀಗಾಗಿ ಅದೊಂದು ವಿನೂತನ ಯೋಜನೆ ಜಾರಿಗೊಂಡು ಮೇ 22 ಸಂಜೆ 4.30 ಕ್ಕೆ ಸತ್ಸಂಗವನ್ನು ಪರಮಪೂಜ್ಯ ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದ ಪೂಜ್ಯರು “ಬದುಕಲು ಬೇಕು ಮೌಲ್ಯಗಳು.”ಎಂಬ ವಿಷಯ ಕುರಿತು ಅಂತರ್ಜಾಲದ ಮೂಲಕ ಸತ್ಸಂಗವನ್ನು ನಡೆಸಿಕೊಟ್ಟರು.

- Advertisement -

ಅದು ಎಷ್ಠರಮಟ್ಟಿಗೆ ಭಕ್ತ ಜನರ ಮನಸೂರೆಗೊಂಡಿತೆಂದರೆ. ಸತ್ಸಂಗ 6 ಗಂಟೆಗೆ ಕೊನೆಗೊಂಡ ತಕ್ಷಣ ಆಲಿಸಿದ ಸದ್ಭಕ್ತರು ಪೂಜ್ಯರಿಗೆ ಕರೆ ಮಾಡಿ ತಮ್ಮ ತಮ್ಮ ಮನೆಯಲ್ಲಿ ಮನೆಮಂದಿಯೆಲ್ಲ ಕುಳಿತು ಆ ಸಮಯದ ಸದುಪಯೋಗವನ್ನು ಮಾಡಿಕೊಂಡೆವು.ಇದು ಸತ್ಸಂಗಕ್ಕೆ ಬರುವ ಒಂದು ಕುಟುಂಬದ ಒಬ್ಬ ಸದಸ್ಯನಿಂದ ಇಡೀ ಕುಟುಂಬದವರೆಲ್ಲ ಆಲಿಸುವಂತಾಯಿತು ಎಂದು ಸವಿತಾ ಕೆಂದೂರ ಅಭಿಪ್ರಾಯ ವ್ಯಕ್ತಪಡಿಸಿದರು.

ದೂರದ ಬಾಗಲಕೋಟೆಯಿಂದ ನಿವೃತ್ತ ಆಂಗ್ಲಭಾಷಾ ಉಪನ್ಯಾಸಕ ಎಸ್.ವ್ಹಿ.ಚವಡಾಪೂರವರು ‘ನಿಜಕ್ಕೂ ಇದೊಂದು ಉತ್ತಮ ಯೋಜನೆ.ಕೋರೋನಾ ಮಹಾಮಾರಿಯಿಂದ ಜನ ಬದುಕಿನಲ್ಲಿ ಸೋತು ಸುಣ್ಣವಾದಾಗ ಬದುಕಲು ಬೇಕು ನವಚೈತನ್ಯ ಎಂಬಂತೆ ಪೂಜ್ಯರ ವಾಣಿ ಜೀವನ ಪಾಠವನ್ನು ಕಲಿಸಿತು’ಎಂದು ತಮ್ಮ ಅನಿಸಿಕೆ ಹಂಚಿಕೊಂಡರು. ಜಕಬಾಳ ಗ್ರಾಮದ ಗುರುಮಾತೆ ಜಯಶ್ರೀ ಕುಲಕರ್ಣಿಯವರು ತಮ್ಮ ಪತಿಯ ನಿಧನದ ದುಃಖದಲ್ಲಿದ್ದರು.

- Advertisement -

ಅವರು ಈ ಸತ್ಸಂಗ ಕೇಳಿ. ‘ಪೂಜ್ಯರು ಈ ದುಃಖದ ಸಂದರ್ಭದಲ್ಲಿ ಸಾಂತ್ವನದ ಮಾತುಗಳನ್ನು ಹೇಳುವ ಮೂಲಕ ನನಗೆ ಮತ್ತೆ ನವಚೈತನ್ಯ ತುಂಬಿದಿರಿ, ತಮ್ಮ ಈ ಚೈತನ್ಯದ ನುಡಿಗಳಿಂದ ಮನಸ್ಸು ಹಗುರವಾಯಿತು’ಎಂದು ತಿಳಿಸಿದರು. ಹಿರಿಯ ವಕೀಲರಾದ ಯಕ್ಕುಂಡಿಯವರು “ ಮನೆಯಲ್ಲಿ ಹಲವು ಪುಸ್ತಕ ಓದುತ್ತಿದ್ದ ನನಗೆ ಇಂದು ತಮ್ಮ ಸತ್ಸಂಗ ಮನಸ್ಸಿಗೆ ಪರಿಣಾಮ ಬೀರಿತು.ಮನೆಯವರೆಲ್ಲ ಈ ಸತ್ಸಂಗದಲ್ಲಿ ಪಾಲ್ಗೊಂಡೆವು ಪೂಜ್ಯರಿಗೆ ಪ್ರಣಾಮಗಳು’ಎಂದರು.

ಹೀಗೆ ಮೊದಲ ದಿನದ ಸತ್ಸಂಗ ಫಲಪ್ರದವಾಯಿತು. ಮತ್ತೆ 23 ರಂದು ರವಿವಾರ 4.30ಕ್ಕೆ ಸತ್ಸಂಗ ಜರುಗಿತು.ಇಲ್ಲಿಯೂ 60 ಕ್ಕೂ ಹೆಚ್ಚು ಸದ್ಭಕ್ತ ಕುಟುಂಬಗಳು ಪಾಲ್ಗೊಂಡವು. ಈಗ ನಿನ್ನೆಗಿಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮುನವಳ್ಳಿ ಸಿಂದೋಗಿ ಆಚೆಗೂ ಈ ಲಿಂಕ್‍ನ್ನು ಸಹೃದಯ ¸ಸದ್ಭಕ್ತರು ಕಳಿಸುವ ಮೂಲಕ ಅದರ ವ್ಯಾಪ್ತಿ ಹೆಚ್ಚಿತ್ತು.

ಚಿಕ್ಕುಂಬಿಯ ವಿಕಲಚೇತನ ಸಂಪನ್ಮೂಲ ಶಿಕ್ಷಕರಾದ ಚಿದಾನಂದ ಬಾರ್ಕಿಯವರು ಈ ಸತ್ಸಂಗ ಆಲಿಸುವ ಮೂಲಕ “ನಿಜಕ್ಕೂ ಇದೊಂದು ಸಮಯದ ಸದುಪಯೋಗ.ಇಲ್ಲಿ ಪೂಜ್ಯರು ಪ್ರತಿ ವಾರಕ್ಕೊಂದು ಹೊಸ ವಿಷಯಗಳನ್ನು ತಿಳಿಸುವ ಮೂಲಕ ನಮ್ಮಲ್ಲಿ ಧೈರ್ಯ ತುಂಬಿದರು.ಇದು ನಿರಂತರವಾಗಿ ಮುಂದುವರೆಯಲಿ ನಮಗೆ ಮುನವಳ್ಳಿಯವರೆಗೂ ಬಂದು ಕೇಳಲು ಆಗುತ್ತಿದ್ದಿಲ್ಲ.ನಮ್ಮ ಮನೆಯಲ್ಲಿ ಕುಳಿತು ಮನೆಯವರೆಲ್ಲರೂ ಕೇಳಲು ಒಂದು ಉತ್ತಮ ಅವಕಾಶವನ್ನು ಕಲ್ಪಿಸಿದಿರಿ ಧನ್ಯವಾದಗಳು’ಎಂದು ಹೇಳಿದರೆ.

ದೇವರಹುಬ್ಬಳ್ಳಿಯ ಹಾಸ್ಯ ಕಲಾವಿದ ಮೋಬೈಲ್ ಮಲ್ಲ. ‘ ಈ ಕೋರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜಿಡ್ಡುಗಟ್ಟಿದ ಮನಸುಗಳಿಗೆ ಚೇತನದ ಮಾತುಗಳ ಮೂಲಕ ಟಾನಿಕ್ ನೀಡಿದಿರಿ’ಎಂದು ಶ್ರೀಗಳಿಗೆ ಶ್ಲಾಘಿಸಿದರು. ಬೆಂಗಳೂರಿನ ಅಜವಾನ್ ದಂಪತಿಗಳು ಇಂದಿಗೂ ತಮ್ಮ ಮನೆಯಲ್ಲಿ ಸತ್ಸಂಗ ನಡೆಸುತ್ತಿದ್ದು ಪ್ರತಿ ವರ್ಷಕ್ಕೊಮ್ಮೆ ಪೂಜ್ಯರನ್ನು ಬೆಂಗಳೂರಿಗೆ ಬರಮಾಡಿಕೊಂಡು ಒಂದು ದಿನ ಸತ್ಸಂಗ ನಡೆಸುವ ಪರಿಪಾಠ ಹೊಂದಿದ್ದರು.

ಈ ಲಾಕ್ ಡೌನ್ ಅವರ ಮನೆಯ ಸತ್ಸಂಗಕ್ಕೂ ಕೂಡ ಲಾಕ್ ಮಾಡಿತ್ತು. ಅವರು ಮಾತನಾಡಿ ‘ಬೆಂಗಳೂರಿನ ನಮ್ಮ ಸತ್ಸಂಗದ ಸದಸ್ಯರಿಗೆ ನಾವು ಲಿಂಕ್ ಕಳಿಸಿದೆವು.ಅವರೂ ನಮ್ಮೊಂದಿಗೆ ಸತ್ಸಂಗದಲ್ಲಿ ಪಾಲ್ಗೊಳ್ಳುವಂತಾಯಿತು.ಪೂಜ್ಯರು ಅಂತರ್ಜಾಲದ ಮೂಲಕ ಸತ್ಸಂಗ ನಡೆಸಿದ್ದು ಬಹಳ ಸಂತಸ ತಂದಿತು’ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಈ ಸತ್ಸಂಗ ಪ್ರತಿ ಶನಿವಾರ ಮತ್ತು ರವಿವಾರ ಸಂಜೆ 4.30 ರಿಂದ 6 ಗಂಟೆಯವರೆಗೆ ಜರುಗಿದರೆ. ಸೋಮವಾರ ಮತ್ತು ಶುಕ್ರವಾರ ರಾತ್ರಿ 7.30 ರಿಂದ 9 ರ ವರೆಗೆ ನಿರಂತರವಾಗಿ ಲಾಕ್‍ಡೌನ್ ಸಂದರ್ಭದಲ್ಲಿ ಜರುಗತೊಡಗಿತು. ಮೊದಲು ಧ್ವನಿ ಹವಾಮಾನದ ವೈಪರಿತ್ಯದಿಂದಾಗಿ ಅಡೆತಡೆ ಉಂಟುಮಾಡುವುದನ್ನು ಹಲವು ಭಕ್ತರು ಕರೆ ಮಾಡಿ ತಿಳಿಸಿದಾಗ ತಂತ್ರಜ್ಞಾನದ ಸದುಪಯೋಗ ಬ್ಲೂಟೂಥ ಸ್ಪೀಕರ ಹೆಡ್‍ಸೆಟ್ ಬಳಸುವ ಮೂಲಕ ಸತ್ಸಂಗದ ಪ್ರವಚನ ಆರಂಭಿಸಲಾಯಿತು. ಅದರ ಪರಿಣಾಮ ಎಷ್ಟೇ ದೂರದಲ್ಲಿದ್ದ ಭಕ್ತರಿಗೂ ಅದು ಮನಸಿಗೆ ಪರಿಣಾಮ ಬೀರತೊಡಗಿತು. ಶನಿವಾರ ಮತ್ತು ರವಿವಾರ ಬದುಕಲು ಕಲಿಯಿರಿ ಎಂಬ ಸಂದೇಶವುಳ್ಳ ಮೌಲ್ಯಗಳ ಕುರಿತು ಸತ್ಸಂಗ ಜರುಗಿದರೆ ಪ್ರತಿ ಸೋಮವಾರ ಭಾಗವತ ವಿಚಾರಧಾರೆ ಶುಕ್ರವಾರ ಸತ್ಸಂಗಿಗಳಾದ ಯಶವಂತ ಗೌಡರ ನೇತೃತ್ವದಲ್ಲಿ ಮತ್ತು ಚನಬಸು ನಲವಡೆ. ಹಲಗತ್ತಿ ಇವರಿಂದ ನಿಜಗುಣ ಶಿವಯೋಗಿಗಳ ತತ್ವಧಾರೆಗಳನ್ನು ಸೋತ್ರಗಳನ್ನು ಬಿಡಿಸುವ ಸತ್ಸಂಗ ಜರುಗತೊಡಗಿತು.

ಈಗ ಸತ್ಸಂಗ ಭಕ್ತರ ಕುಟುಂಬಗಳು ತುಮಕೂರು ಮೈಸೂರು ಮಹಾರಾಷ್ಟ್ರದ ಪುಣೆ, ಅಕ್ಕಲಕೋಟ, ಗಂಗಾವತಿ, ದೇವರಹುಬ್ಬಳ್ಳಿ, ಕವಲಗೇರಿ, ಬೈಲಹೊಂಗಲ ಹೀಗೆ ಮುನವಳ್ಳಿ ಸಿಂದೋಗಿ ಗ್ರಾಮಗಳ ಆಚೆಗೂ ಒಬ್ಬರಿಂದ ಮತ್ತೊಬ್ಬರಿಗೆ ಲಿಂಕ್ ಕಳಿಸುವ ಮೂಲಕ ನಾಡಿನೆಲ್ಲೆಡೆ ಪಸರಿಸಿತು. ದಿನದಿನಕ್ಕೆ ಸತ್ಸಂಗದಲ್ಲಿ ವಿನೂತನ ಪ್ರಯೋಗಗಳಿಗೆ ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದ ಪರಮಪೂಜ್ಯರು ತೊಡಗಿದರು.

ಮೊದಲು ಪ್ರಾರ್ಥನೆಯನ್ನು ಸತ್ಸಂಗದ ಸದಸ್ಯರು ಒಬ್ಬರು ಹೇಳುವುದು. ನಂತರ ಮಕ್ಕಳಿಂದ ವಚನ,ಚಿಂತನಪರ ನುಡಿಗಳನ್ನು ಹೇಳಿಸುವುದು. ನಂತರ ಪೂಜ್ಯರ ಉಪನ್ಯಾಸ. ಓಂಕಾರ ಮಂತ್ರ. ಧ್ಯಾನ. ನಂತರ ಆಯುರ್ವೇದದ ಮೂಲಕ ಮನೆಮದ್ದು.ವಿಶಿಷ್ಟ ದಿನಗಳು ಬಂದರೆ ಅವುಗಳ ಮಹತ್ವ ಉದಾಹರಣೆಗೆ ಯೋಗದಿನ.ಯೋಗದ ಮಹತ್ವವನ್ನು ಸತ್ಸಂಗದ ಕೊನೆಯಲ್ಲಿ ಹೇಳುವ ಮೂಲಕ ಅದನ್ನು ಅಳವಡಿಸಿಕೊಳ್ಳುವ ಬಗೆಯನ್ನು ತಿಳಿಸಿಕೊಡುವ ಪ್ರಯತ್ನ.ನಂತರ ಮಂಗಲ.ಪಾಲ್ಗೊಂಡ ಭಕ್ತರು ಕರೆ ಮಾಡಿ ತಮ್ಮ ಅನಿಸಿಕೆ ಹಂಚಿಕೊಳ್ಳಲು ಅವಕಾಶ.ಹೀಗೆ ಭಕ್ತರ ಮನೆಮನದಲ್ಲಿ ಸತ್ಸಂಗ ಜರುಗತೊಡಗಿತು.

ದಿನಾಂಕ 20-6-2021 ರ ರವಿವಾರ ಸತ್ಸಂಗದ ಒಂದು ನಿದರ್ಶನ ಇಲ್ಲಿ ನೀಡುವೆನು. ಈ ದಿನ ‘ಅವನೇ ಗುರು ಅವನೇ ದೇವ ಲೋಕದೊಡೆಯನು’ ಎಂಬ ಪ್ರಾಥನೆ ಕವಿತಾ ಕಲ್ಲೇದ ಇವರಿಂದ ಜರುಗಿತು. ಚೇತನಾ ಹೊನ್ನಳ್ಳಿ ವಿದ್ಯಾರ್ಥಿನಿಯಿಂದ ವಚನ ಪಠಣ.ಅದರ ಮಹತ್ವ ಹೇಳಿದಳು.

ನಂತರ ಶ್ರೋ.ಬ್ರ.ನಿ. ಸದ್ಗುರು ಮುಕ್ತಾನಂದ ಪೂಜ್ಯರು “ದೋಷಗಳ ನಿವಾರಣೆ, ಗುಣಗಳ ವೃದ್ಧಿ ಸಂಸ್ಕಾರ’ ಎಂಬ ವಿಷಯದ ಕುರಿತು ಹೇಳುತ್ತ ‘ಭತ್ತದ ಮೇಲಿನ ಪದರ ತಗೆಯುವುದು ದೋಷಗಳ ನಿವಾರಣೆಯಿದ್ದಂತೆ, ಬಿಳಿ ಅಕ್ಕಿಯನ್ನು ತಗೆದುಕೊಳ್ಳುವುದು ಗುಣವನ್ನು ತೋರ್ಪಡಿಸುವ ಪ್ರಕ್ರಿಯೆ, ಅಕ್ಕಿಯನ್ನು ತೊಳೆದು ನೀರನ್ನು ಸೇರಿಸಿ ಅನ್ನ ಮಾಡಿಕೊಂಡು ಊಟ ಮಾಡುವುದು ಗುಣವನ್ನು ವೃದ್ಧಿಸುವ ಪ್ರಕ್ರಿಯೆ. ಇದನ್ನು ಮನೆಯವರೆಲ್ಲ ಒಂದುಗೂಡಿ ಊಟ ಮಾಡುವುದು ಸಂಸ್ಕಾರ.

ಹೀಗೆ ನಮ್ಮ ನಿತ್ಯ ಬದುಕಿನಲ್ಲಿ ಸದ್ವಿಚಾರದ ನಡೆ ನುಡಿಗಳನ್ನು ಪ್ರತಿ ಕುಟುಂಬದ ಎಲ್ಲ ಸದಸ್ಯರು ಮಾಡುತ್ತ ಸಾಗಿದಾಗ ಅದಕ್ಕೊಂದು ವಿಶಿಷ್ಟತೆ ಬರುತ್ತದೆ. ಶಿಕ್ಷಣ ನಮಗೆ ಜ್ಞಾನವನ್ನು ನೀಡಿದರೆ ಸಂಸ್ಕಾರ ಬದುಕುವ ರೀತಿಯನ್ನು ಕಲಿಸಿಕೊಡುತ್ತದೆ. ಮಕ್ಕಳಿಗೆ ಶಿಕ್ಷಣ ಕೊಡುವ ಜೊತೆಗೆ ಇಂದು ಸಂಸ್ಕಾರದ ಅಗತ್ಯತೆ ಇದೆ.ಶಿಕ್ಷಣ ನಮಗೆ ಹಕ್ಕನ್ನು ಹೇಳಿದರೆ ಸಂಸ್ಕಾರ ನಮಗೆ ಕರ್ತವ್ಯವನ್ನು ಹೇಳುತ್ತದೆ.

ಎಂಬುದನ್ನು ಕುಡುಕ ತಂದೆಯೊಬ್ಬ ಮನೆಗೆ ಬರುವ ಸಂದರ್ಭ ಅವನ ಮಗನಿಗೆ ಶಾಲೆಯ ಗುರುಗಳು ಪ್ರತಿದಿನ ತಂದೆ ತಾಯಿಯ ಸೇವೆ ಮಾಡುವ ಜೊತೆಗೆ ಅವರ ಪಾದಕ್ಕೆ ನಮಸ್ಕರಿಸಬೇಕು ಎಂದು ಹೇಳಿದ್ದರು. ಆ ದಿನ ಮಗು ತನ್ನ ತಂದೆ ತಾಯಿಯ ಪಾದಕ್ಕೆ ನಮಸ್ಕರಿಸಿ ಊಟ ಮಾಡಬೇಕು ಎಂದುಕೊಂಡು ತಂದೆಯ ಬರುವಿಕೆಯನ್ನು ಕಾಯುತ್ತ ಕುಳಿತಿದ್ದ. ತಾಯಿ ಎಷ್ಟು ಹೇಳಿದರೂ ಊಟ ಮಾಡಿರಲಿಲ್ಲ.

ದುರ್ವ್ಯಸನದ ತಂದೆ ಕಂಠಪೂರ್ತಿ ಕುಡಿದು ಮನೆಗೆ ಬರುವಷ್ಟರಲ್ಲಿ ತಡರಾತ್ರಿಯಾಗಿತ್ತು. ಮಗು ನಿದ್ರೆಗೆ ಜಾರುವ ಸಮಯ ಆದರೂ ತಂದೆಯ ಕಾಲಿಗೆ ನಮಸ್ಕರಿಸಬೇಕು ಎಂದು ನಿದ್ರೆಯ ತಡೆದುಕೊಂಡ ಕುಳಿತ ಮಗುವಿಗೆ ತಂದೆ ಆ ಸಂದರ್ಭ ತನ್ನ ನಿಶೆಯಲ್ಲಿ ನಿರ್ಲಕ್ಷ್ಯ ತೋರಿದಾಗ ಊಟ ಮಾಡದೇ ಮಗು ಮಲಗಿತು.

ಮರುದಿನ ಎದ್ದಾಗ ತಾಯಿಯಿಂದ ವಿಷಯ ತಿಳಿದ ತಂದೆ ಮಗುವಿನ ಆ ಕ್ಷಣದ ವಿಚಾರ ಅರಿತು. ಇಂದಿನಿಂದ ತಾನು ಕುಡಿಯುವುದನ್ನು ಬಿಡುವೆನು ಎಂದುಕೊಂಡು ಮಗುವಿನ ಸಂಸ್ಕಾರಕ್ಕೆ ಮೊರೆ ಹೋಗುತ್ತಾನೆ. ಇಲ್ಲಿ ಗುರುಗಳೂ ಕೂಡ ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರದ ಪಾಠ ಹೇಳಬೇಕು.ಜೊತೆಗೆ ಕುಟುಂಬದವರೂ ಕೂಡ ಅದಕ್ಕೆ ಸ್ಪಂದಿಸಿದರೆ ಆ ಕುಟುಂಬ ಸಂಸ್ಕಾರವಂತ ಕುಟುಂಬವಾಗಲು ಸಾಧ್ಯ.

ಇದೇ ರೀತಿ ಸಮಾಜ,ಗ್ರಾಮ,ದೇಶ ಸಂಸ್ಕಾರ ಪಥದಲ್ಲಿ ಸಾಗಲು ಅನುಕೂಲ.ನಮ್ಮ ದೇಶದ ಈ ಹಿಂದಿನ ಗುರುಕುಲ ಪದ್ಧತಿ ಶಿಕ್ಷಣ ಹೇಗೆ ಸಾಗುತ್ತಿತ್ತು. ಎಂಬುದನ್ನು ಸಂಸ್ಕಾರ ಮತ್ತು ಶಿಕ್ಷಣ ಕುರಿತಂತೆ ಉಪನ್ಯಾಸ ನೀಡಿದರು. ನಂತರ ಯೋಗ ದಿನದ ಮಹತ್ವವನ್ನು ತುಳಸಿ ಗಿಡದ ಪವಿತ್ರತೆ ಮತ್ತು ತುಳಸಿಯ ಪ್ರಯೋಜನಗಳನ್ನು ಹೇಳುವ ಮೂಲಕ ಮಂಗಲಾರತಿ ಮಾಡಲಾಯಿತು.

ಇದು ಒಂದು ದಿನದ 4.30 ರಿಂದ 6 ಗಂಟೆಯವರೆಗೆ ಜರುಗಿದ ಸತ್ಸಂಗದ ಒಂದು ನಿದರ್ಶನ. ಈ ರೀತಿ ಲಾಕ್ ಡೌನ್ ಸಂದರ್ಭದಲ್ಲಿ ವಿವಿಧ ಮೌಲ್ಯಗಳನ್ನು ಕುರಿತಂತೆ ಸತ್ಸಂಗ ಜರುಗುತ್ತಿರುವುದು ಮಹತ್ವದ ಸಂಗತಿ.

ಶ್ರೀಮಠದಲ್ಲಿ ಸತ್ಸಂಗ ನಡೆದು ಬಂದ ದಾರಿ

ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ವಿಜಯಾನಂದ ಮಹಾಸ್ವಾಮಿಗಳು 24-6-1989 ರಿಂದ ಮುನವಳ್ಳಿಯಲ್ಲಿ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮ ವತಿಯಿಂದ ಹೆಣ್ಣು ಮಕ್ಕಳಿಗಾಗಿ ಪ್ರತಿ ಶನಿವಾರ ಸಾಯಂಕಾಲ 4-30 ರಿಂದ 6 ಗಂಟೆಯವರೆಗೆ ಸತ್ಸಂಗವನ್ನು ಪ್ರಾರಂಭಿಸಿದರು. ಇದು ಗಂಡು ಮಕ್ಕಳಿಗಾಗಿಯೂ ಕೂಡ 1987 ರಿಂದ ಪ್ರಾರಂಭವಿತ್ತು.

ಸತ್ಸಂಗದಲ್ಲಿ ಮಹಿಳಾ ಜಾಗೃತಿಗಾಗಿ ಶರಣರ ಜೀವನ ಚರಿತ್ರೆ. ವಚನಗಳನ್ನು ಉಪದೇಶಿಸುವ ಮೂಲಕ ಮಹಿಳೆಯರ ಬದುಕಿನಲ್ಲಿಯೂ ಕೂಡ ಸತ್ಸಂಗದ ಪ್ರಭಾವ ಸಾಮಾಜಿಕ. ಆರ್ಥಿಕ.ಶೈಕ್ಷಣಿಕ.ಧಾರ್ಮಿಕ ಹೀಗೆ ಎಲ್ಲ ರಂಗಗಳಲ್ಲಿಯೂ ಜಾಗೃತಿಯ ಅರಿವು ಅವರಿಗೆ ಮೌಢ್ಯದಿಂದ ಹೊರಬಂದು ಹೊಸ ದಿಕ್ಕಿನತ್ತ ಸಾಗಲಿ ಎಂಬ ಸದುದ್ದೇಶ ಹೊಂದಿತ್ತು.

ಇದು ಯಶಸ್ವಿಯಾಯಿತು ಕಾರಣ ಮಹಿಳೆಯರೆಲ್ಲ ಒಂದೆಡೆ ಸೇರಿ ಈ ಸತ್ಸಂಗದ ಅರಿವಿನ ವಿಚಾರದ ಜೊತೆಗೆ ಪ್ರತಿ ದಿನ ಪ್ರಾರ್ಥನೆ. ಶಾಸ್ತ್ರ ಶ್ರವಣ ಭಜನೆ.ಜಪ.ಧ್ಯಾನ.ಆರತಿ ಇತ್ಯಾದಿ ಮಾಡತೊಡಗಿದರು. ಶ್ರೀಗಳಲ್ಲಿ ವಾರದಲ್ಲಿ ಇದೇ ಸತ್ಸಂಗವನ್ನು ಎರಡು ದಿನ ಮಾಡುವಂತೆ ಮನವಿ ಕೂಡ ಮಾಡಿದರು.27-9-1998 ರಿಂದ ವಾರಕ್ಕೆ ಎರಡು ದಿನ ಅಂದರೆ ಶನಿವಾರ ಮತ್ತು ರವಿವಾರ ನಡೆಸಲು ಪ್ರಾರಂಭಿಸಿದರು.

ಈ ಸತ್ಸಂಗದ ಮೂಲಕ ವಿಶೇಷ ದಿನಗಳಲ್ಲಿ ಅಂದರೆ ಗುರುಪೌರ್ಣಮಿ, ಮಹಾಶಿವರಾತ್ರಿ, ಶ್ರೀ ಅಕ್ಕಮಹಾದೇವಿ ಜಯಂತಿ, ಬಸವಜಯಂತಿ, ಮುಂತಾದ ಪರ್ವ ದಿನಗಳಂದು ವಿಶೇಷ ಸತ್ಸಂಗಗಳನ್ನು ಪುರುಷ ಸ್ತ್ರೀಯರ ಸಂಯುಕ್ತ ಸತ್ಸಂಗಗಳು ಜರುಗುವ ಮೂಲಕ ಸತ್ಸಂಗಕ್ಕೆ ವಿಶೇಷ ಆದ್ಯತೆ ಜರುಗುವಂತಾಯಿತು.

2010 ರಲ್ಲಿ(17-10-2010)ರಲ್ಲಿ ಪೂಜ್ಯ ಶ್ರೀ ವಿಜಯಾನಂದ ಶ್ರೀಗಳು ಲಿಂಗೈಕ್ಯರಾದ ನಂತರ ಈಗ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ಮುಕ್ತಾನಂದ ಮಹಾಸ್ವಾಮಿಗಳು ಇದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು ಶಿಂದೋಗಿ ಗ್ರಾಮದ ಹತ್ತಿರದಲ್ಲಿರುವ ಮಠದಲ್ಲಿ ಶ್ರೀ ವಿಜಯಾನಂದ ಶ್ರೀಗಳ ಕರ್ತೃ ಗದ್ದುಗೆಯನ್ನು ನಿರ್ಮಿಸಲಾಗಿದ್ದು ಅಲ್ಲಿ ಧ್ಯಾನಮಂಟಪವಿದೆ.

ಅಲ್ಲಿಯೇ ಇಂಥ ಅನೇಕ ಕಾರ್ಯಗಳು ಜರುಗುವ ಜೊತೆಗೆ ಚಿಕ್ಕಮಕ್ಕಳಿಗೆ ಯೋಗಾಭ್ಯಾಸವನ್ನು ಕೂಡ ಮುಕ್ತಾನಂದ ಮಹಾಸ್ವಾಮಿಗಳು ಉಚಿತವಾಗಿ ನಡೆಸುತ್ತಿರುವುದು ಶ್ಲಾಘನೀಯ.

ಕೋರೋನಾ ಸಂದರ್ಭದಲ್ಲಿ ಕೋವಿಡ್‍ಗೆ ಯಾರಾದರೂ ತುತ್ತಾಗಿದ್ದರೆ. ಅವರಿಗೆ ಕರೆ ಮಾಡಿ ಧೈರ್ಯದಿಂದ ಅದನ್ನು ಎದುರಿಸುವ ಬಗೆಯನ್ನು ತಮ್ಮ ಸಾಂತ್ವನದ ನುಡಿಗಳ ಮೂಲಕ ಹೇಳುತ್ತಿರುವ ಪೂಜ್ಯರು. ಭಕ್ತರಿಗೆ ದೈರ್ಯ ತುಂಬುತ್ತಿರುವರು.ಇಂತಹ ಚಟುವಟಿಕೆಗಳ ಮೂಲಕ ಬದುಕನ್ನು ಮೌಲ್ಯಯುತವಾಗಿ ರೂಢಿಸಿಕೊಳ್ಳಲು ಸತ್ಸಂಗ ಕೋವಿಡ್ಸಂ ದರ್ಭದಲ್ಲಿಯೂ ಕೂಡ ಮನೆಮನೆಗಳಲ್ಲಿ ಅಂತರ್ಜಾಲದ ಮೂಲಕ ಸಾಗಿದ್ದು ಮಹತ್ವದ ಸಂಗತಿ.ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

- Advertisement -
- Advertisement -

Latest News

Shahid Kapoor Birthday: ಈ ಬಾಲಿವುಡ್ ಹೀರೊ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group