‘ಮಗುವಿನ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಅವಶ್ಯ’
ಗೋಕಾಕ: ‘ಮಗುವಿನ ಸರ್ವತೋಮುಖ ಬೆಳವಣಿಗೆಯ ಮೂಲಕ ಶ್ರೇಷ್ಠ ವ್ಯಕ್ತಿಯನ್ನಾಗಿಸುವ ಶಕ್ತಿ ಶಿಕ್ಷಣದಲ್ಲಿದೆ’ ಎಂದು ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಹೇಳಿದರು.
ಹಿಂದು ಮುಸ್ಲಿಂ ಸೌಹಾರ್ದತೆಯ ಸುಕ್ಷೇತ್ರ ಸಾವಳಗಿಯ ಸಿದ್ಧ ಸಂಸ್ಥಾನ ಪೀಠದಲ್ಲಿ ದಸರಾ ಮಹೋತ್ಸವ ನಿಮಿತ್ತವಾಗಿ ಏರ್ಪಡಿಸಿದ್ದ ಶ್ರೀದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮ ಮತ್ತು ಸಾಹಿತ್ಯ, ಸಂಸ್ಕೃತಿ ಸೌರಭ ಕಾರ್ಯಕ್ರಮದಲ್ಲಿ ‘ಮಕ್ಕಳ ಭವಿಷ್ಯದಲ್ಲಿ ಶಿಕ್ಷಣದ ಮಹತ್ವ’ ವಿಷಯ ಕುರಿತು ಮಾತನಾಡಿದ ಅವರು ವ್ಯಕ್ತಿಯ ಸಾರ್ಥಕ ಬದುಕು ಆಗಬೇಕಾದರೆ ಶಿಕ್ಷಣವು ಅವಶ್ಯವಿದೆ ಎಂದರು.
ಗೋಕಾಕದ ಎಸ್‍ಎಲ್‍ಜೆ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಪ್ರೊ. ಮಹಾನಂದಾ ಪಾಟೀಲ ‘ಮಹಿಳೆ ಮತ್ತು ಜಾನಪದ ಸಂಸ್ಕೃತಿ ಕುರಿತು ಮಾತನಾಡಿದ ಅವರು, ನಾಡಿನ ಸಂಪ್ರದಾಯ, ಹಬ್ಬ, ಆಚರಣೆಗಳಲ್ಲಿ ಮಹಿಳೆ ಪ್ರಾಮುಖ್ಯಳಾಗಿದ್ದಾಳೆ. ಹೀಗಾಗಿ ಜಾನಪದ ಸಾಹಿತ್ಯದಲ್ಲಿಯೂ ಮಹಿಳೆಯು ಪ್ರಾಧಾನ್ಯವಾಗಿ ಹಾಸು ಹೊಕ್ಕಿದ್ದಾಳೆ ಎಂದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿ ಅವರು ಮಾತನಾಡಿ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡಬೇಕು. ಉತ್ತಮ ನಡೆ, ನುಡಿ, ಸತ್ಯ, ಪ್ರಾಮಾಣಿಕತೆ ಇವು ಮಕ್ಕಳಿಗೆ ಕಲಿಸುವ ಮೂಲಕ ನಾಡು ಸುಸಂಸ್ಕೃತವಾಗಬೇಕು ಎಂದರು.
ಕಾರಡಗಿಯ ರೇವಣಸಿದ್ದಯ್ಯ ಹಿರೇಮಠ ಶಾಸ್ತ್ರೀಗಳು ಶ್ರೀ ದೇವಿ ಪುರಾಣವನ್ನು ಹೇಳಿದರು. ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ತತ್ವಪದ ರಸಾನುಭವ: ಮುನ್ಯಾಳ ಗ್ರಾಮದ ಯುವ ಗಾಯಕ ಶಿವಾನಂದ ಬಿದರಿ ತತ್ವ ಪದ ಹಾಗೂ ಜಾನಪದ ಹಾಡುಗಳನ್ನು ಹಾಡಿ ಸೇರಿದ ಜನರನ್ನು ರಂಜಿಸಿದರು. ಪಂಡಿತ ಮಲ್ಲಿಕಾರ್ಜುನ ವಕ್ಕುಂದ ಹಾಮೋನಿಯಂ ಹಾಗೂ ಅಪ್ಪಣ್ಣ ಮುಗಳಖೋಡ ತಬಲಾ ಸಾಥ್ ನೀಡಿದರು.