spot_img
spot_img

ಸಹಕಾರ ಸಂಘಗಳಲ್ಲಿ ಅನರ್ಹತಾ ಹಗರಣ, ಆಡಳಿತ ಮಂಡಳಿಗಳ ಭ್ರಷ್ಟಾಚಾರ ತಡೆಯಬೇಕು

Must Read

spot_img
- Advertisement -

ಮೂಡಲಗಿ – ರಾಜ್ಯದಲ್ಲೀಗ ಕೋ ಆಪರೇಟಿವ್ ಸೊಸಾಯಿಟಿಗಳ, ಪತ್ತಿನ ಸಹಕಾರ ಸಂಘಗಳು ಚುನಾವಣಾ ಪರ್ವ ನಡೆದಿದೆ. ಈ ಚುನಾವಣೆಗಳಿಂದಾಗಿ ಸಹಕಾರ ಸಂಘಗಳು ಸ್ಥಾಪನೆಯಾಗುವಾಗ ಇದ್ದ ಪರಸ್ಪರ ಸಹಕಾರದ ಉದ್ದೇಶವೇ ಮಣ್ಣುಗೂಡಿದಂತಾಗಿದೆ. ಯಾಕೆಂದರೆ ಸಹಕಾರ ಸಂಘಗಳು ಈಗ ಒಂದೇ ಗುಂಪಿನ, ಒಂದೇ ಪರಿವಾರದ ಸಂಘಗಳಾಗಿ ಪರಿವರ್ತನೆ ಯಾಗಿವೆಯೆಂದರೆ ತಪ್ಪಲ್ಲ. ಇಲ್ಲಿ ನಡೆಯುತ್ತಿರುವಷ್ಟು ರಾಜಕಾರಣ ಬೇರೆಲ್ಲೂ ನಡೆಯುತ್ತಿಲ್ಲ. ಆಡಳಿತ ಮಂಡಳಿಗೆ ಸ್ಪರ್ಧೆ ಮಾಡಲು, ಚುನಾವಣೆಯಲ್ಲಿ ಗೆದ್ದು ಬರಲು ವಿಧಾನಸಭಾ ಚುನಾವಣೆಗಳಂತೆ ಇಲ್ಲಿಯೂ ಹಣದ ಹೊಳೆ ಹರಿಯಲಾರಂಭಿಸಿದೆ. ಸ್ವ ಪರಿವಾರ, ಸ್ವ ಹಿತಾಸಕ್ತಿ ಎಂಬ ಉದ್ದೇಶಗಳು ಸಹಕಾರ ಎಂಬ ಪದವನ್ನೂ ಹಿಂದೆ ಹಾಕಿ ಮೆರೆಯುತ್ತಿವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ತೆರೆಯಮರೆಯ ನಾಟಕಗಳು ಜೋರಾಗುತ್ತಿವೆ.

ಈ ಎಲ್ಲ ನಾಟಕಗಳಲ್ಲಿ ಇವರು ಆಡುವ ಇನ್ನೊಂದು ನಾಟಕವೆಂದರೆ ಸಹಕಾರ ಸಂಘದ ಶೇರುದಾರರನ್ನು ಅನರ್ಹಗೊಳಿಸುವುದು. ಅದರಲ್ಲೂ ತಮಗೆ ವಿರುದ್ಧವಾಗಿರುವ ಶೇರುದಾರರನ್ನು ಮತದಾನದಿಂದ ಹಾಗೂ  ಚುನಾವಣೆ ಗೆ ಸ್ಪರ್ಧೆ ಮಾಡುವುದರಿಂದ ಅನರ್ಹಗೊಳಿಸುವುದು. ಇದರಲ್ಲಿ ಸಹಕಾರ ಸಂಘಗಳ ಇಲಾಖೆಯ ಅಧಿಕಾರಿಗಳೂ ಶಾಮೀಲಾಗಿರುತ್ತಾರೆ.

ಈ ಸಲವಂತೂ ಈ ಅನರ್ಹತಾ ನಾಟಕ ಜೋರಾಗಿದೆ. ಇದಕ್ಕೆ ಅವರು ಕೊಡುವ ಕಾರಣ ಏನೆಂದರೆ, ಸಂಘದ ಸದಸ್ಯರು ಅಂದರೆ ಶೇರುದಾರರು ಸಂಘದ ವಾರ್ಷಿಕ ಸರ್ವ ಸಾಧಾರಣ ಐದು ಸಭೆಗಳಲ್ಲಿ ಕನಿಷ್ಠ ಎರಡು ಸಭೆಗಳಿಗೆ ಹಾಜರಾಗಿರಬೇಕು, ಸೊಸಾಯಿಟಿಯಲ್ಲಿ ಕನಿಷ್ಠ ಎರಡು ವ್ಯವಹಾರಗಳನ್ನು ಮಾಡಿರಬೇಕು ಅಂದಾಗ ಮಾತ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಾಗೂ ಮತ ಹಾಕುವ ಅರ್ಹತೆ ಬರುತ್ತದೆ.

- Advertisement -

ವಿಚಿತ್ರವೆಂದರೆ, ಕೆಲವು ಸೊಸಾಯಿಟಿಗಳಲ್ಲಿ ಸಂಘ ಸ್ಥಾಪನೆಯಾದಾಗಿನಿಂದಲೂ ಒಮ್ಮೆ ಕೂಡ ಸಭೆಗೆ ಹಾಜರಾಗದ ವಯಸ್ಸಾದ ಅಜ್ಜ ಅಜ್ಜಿಯರು ಕೂಡ ಈ ಸಲದ ಮತದಾನಕ್ಕೆ ಅರ್ಹರಾಗಿದ್ದಾರೆ ! ಇದು ಸಹಕಾರ ಇಲಾಖೆಯ ಅಧಿಕಾರಿಗಳಿಗೂ ಗೊತ್ತಿದೆ ಆದರೆ ಅವರು ಭ್ರಷ್ಟಾಚಾರದ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ! ಸರ್ವ ಸಾಧಾರಣ ಸಭೆ ಮುಗಿದ ನಂತರ ತಮಗೆ ಬೇಕಾದವರ ಮನೆ ಮನೆಗೆ ಹೋಗಿ ಸಭಾ ರಜಿಸ್ಟರ್ ನಲ್ಲಿ ಸದಸ್ಯರ ಸಹಿ ಮಾಡಿಸಿಕೊಂಡು ಬರಲಾಗುತ್ತದೆ. ತಮಗೆ ಬೇಡವಾದವರಿದ್ದರೆ ಅವರತ್ತ ತಿರುಗಿ ಕೂಡ ನೋಡುವುದಿಲ್ಲ. ಮೀಟಿಂಗ್ ಇದ್ದ ದಿನ ತಮಗೆ ಬೇಕಾದವರಿಗೆ ಕಾಲ್ ಮಾಡಿ ಅತ್ಯಂತ ಆತ್ಮೀಯತೆಯಿಂದ ಹಲ್ಲುಗಿಂಜುತ್ತ ಕರೆಯುತ್ತಾರೆ. ‘ ಮೀಟಿಂಗಕ್ಕ ಬಂದ್ ಹೋಗ್ರಿ, ಊಟಾ ಮಾಡಿಕೊಂಡ ಹೋಗಬೇಕ ಮತ್ತ…’ ಎಂದು ತಾವೇ ತಮ್ಮ ಮನೆಯಿಂದ ಖರ್ಚು ಮಾಡಿ ಊಟಕ್ಕೆ ಹಾಕಿಸಿದಂತೆ ಕರೆಯುತ್ತಾರೆ ! ಇದು ಯಾವ ರಾಜಕಾರಣಕ್ಕಿಂತ ಕಡಿಮೆಯಾದಂತಾಯಿತು ಹೇಳಿ…..

ಸೊಸಾಯಿಟಿಗಳ ಈ ಧೋರಣೆಯ ವಿರುದ್ಧ ಪ್ರಸಕ್ತ ಮೂಡಲಗಿಯ ಕುರುಹಿನಶೆಟ್ಟಿ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯ ವಿರುದ್ದ ರಾಜ್ಯ ಸಹಕಾರ ಸಂಘಗಳ ಚುನಾವಣಾ ಆಯುಕ್ತರು, ನಿಬಂಧಕರು ಹಾಗೂ ಉಪನಿಬಂಧಕರು ಸಹಕಾರ ಸಂಘಗಳ ಕಚೇರಿಯವರಿಗೆ ಹಾಗೂ ಸಹಕಾರ ಮಹಾಮಂಡಳಕ್ಕೆ ದೂರು ನೀಡಲಾಗಿದೆ.
ಬೆಳೆದು ನಿಂತ ಸೊಸಾಯಿಟಿಗಳಲ್ಲಿ ಕೋಟ್ಯಂತರ ರೂಪಾಯಿ ಹರಿದಾಡುತ್ತದೆ. ಆಡಳಿತ ಮಂಡಳಿಯವರಿಗೆ ಭ್ರಷ್ಟಾಚಾರ ಮಾಡಲು ನೂರೆಂಟು ದಾರಿಗಳು ಇರುತ್ತವೆ ಅದಕ್ಕಾಗಿಯೇ ಅವರು ಯಾವ ಸಮಾಜ, ಸಂಬಂಧ, ಕರುಳ ಬಳ್ಳಿಗಳನ್ನೂ ನೋಡದೇ ಗೂಟ ಬಡಿದುಕೊಂಡು ಕುಳಿತಂತೆ ಸೊಸಾಯಿಟಿಗಳಲ್ಲಿ ಕುಳಿತಿರುತ್ತಾರೆ. ಇಲ್ಲಿ ಅಂತೂ ಒಂದು ಪಲ್ಲಂಗವನ್ನೇ ಮಾಡಿಸಿಟ್ಟಿದ್ದಾರೆ ! ( ಕುರುಹಿನಶೆಟ್ಟಿ ಸೊಸಾಯಿಟಿಯ ನೂತನ ಕಟ್ಟಡದ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಗೋಲ್ ಮಾಲ್ ಆಗಿರುವ ಸಂದೇಹವಿದೆ. ಆ ಬಗ್ಗೆ ದೂರನ್ನೂ ನೀಡಲಾಗಿದೆ )

ಈ ವ್ಯವಸ್ಥೆ ಸಂಘದ ಆರೋಗ್ಯಕ್ಕೆ ಮಾರಕ. ಶೇರುದಾರರ ಹಣ ಭ್ರಷ್ಟರ ಪಾಲಾಗಿ ಎಷ್ಟೋ ಸೊಸಾಯಿಟಿಗಳು ಮುಚ್ಚಿಹೋಗಿವೆ. ಹಾಗಾಗದಂತೆ ಸಹಕಾರ ಇಲಾಖೆ ಸದಾ ಎಚ್ಚರವಾಗಿರಬೇಕು. ಅದಕ್ಕಾಗಿ ಕೆಲವು ಸಲಹೆಗಳನ್ನು ಸಹಕಾರ ಇಲಾಖೆಗೆ ನೀಡುವ ಹಾಗೂ ಕಾಯ್ದೆ ತಿದ್ದುಪಡಿ ಮಾಡುವ ಸಲುವಾಗಿ ಮನವಿ ನೀಡಲಾಗಿದೆ. ಸದ್ಯ ಮೂಡಲಗಿಯ ಕುರುಹಿನಶೆಟ್ಟಿ ಸೊಸಾಯಿಟಿ ವಿರುದ್ಧ ನೀಡಿರುವ ದೂರಿಗೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುವರೋ ಕಾದು ನೋಡಬೇಕು.

- Advertisement -

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group