ಸಿಂದಗಿ: ಪಟ್ಟಣದ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರಕಾರಿ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಮಾಡಲಾಯಿತು.
ಶಾಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ 10ನೇ ವರ್ಗದ ವಿದ್ಯಾರ್ಥಿಗಳಾದ ಕುಮಾರ ಶರಣು ನರಸಲಕ್ಕ ಮತ್ತು ಬೀರಪ್ಪ ಪೂಜಾರಿ, ನಾಗರಾಜ ಕರಿಗಾರ, ದಾನಮ್ಮ ಚೌಹಾಣ , ಹುಚ್ಚಮ್ಮ ಪಾರಣವರ ಸ್ಪರ್ಧಿಸಿ ಚುನಾವಣೆಯಲ್ಲಿ ವಿಜಯಶಾಲಿಯಾದ ಮೇಲೆ ನಾವುಗಳು ಈ ಶಾಲೆಯ ಹೆಸರನ್ನು ಬೆಳಗಿಸಲು ತನುಮನದಿಂದ ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಅದೇ ರೀತಿಯಲ್ಲಿ 8,9 ಮತ್ತು 10ನೇ ತರಗತಿಯ ವರ್ಗ ಪ್ರತಿನಿಧಿ ಹುದ್ದೆಗೆ ಸ್ಪರ್ಧಿಸಿದ ವಿದ್ಯಾರ್ಥಿಗಳು ನಾವು ಜಯಶಾಲಿಯಾದ ಮೇಲೆ ಶಿಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿ ಕೊಂಡರು.
ಸಮಾಜ ವಿಜ್ಞಾನ ಶಿಕ್ಷಕ ಬಿ.ಎಸ್.ಉಪ್ಪಾರ್ ಅವರು ಇಡೀ ಚುನಾವಣೆಯ ಉಸ್ತುವಾರಿಯನ್ನು ವಹಿಸಿದ್ದರು.
ಚುನಾವಣೆಯಲ್ಲಿ ಅಧ್ಯಕ್ಷಾಧಿಕಾರಿಯಾಗಿ ಪ್ರೌಢಶಾಲೆಯ ಮುಖ್ಯಗುರು ಶಿವಾನಂದ ಶಹಪುರ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿ ಶಾಲೆಯ ಶಿಕ್ಷಕರಾದ ಭೀಮಾಶಂಕರ ಉಪ್ಪಾರ, ಎಸ್ ಎಸ್ ಅವಟಿ, ಶ್ರೀಮತಿ ಗೀತಾ ಅಥಣಿ, ಶ್ರೀಮತಿ ಶೋಭಾ ಕೊಳೆಕರ್, ಶರಣಪ್ಪ ಕೇಸರಿ ಮತ್ತು ಅತಿಥಿ ಶಿಕ್ಷಕ ತೋಟಪ್ಪ ಪೂಜಾರಿ ಅವರು ಕಾರ್ಯನಿರ್ವಹಿಸಿದರು.
ಚುನಾವಣೆ ಮುಗಿದ ನಂತರ ಭದ್ರತಾ ಕೊಠಡಿಯಲ್ಲಿ ಮತಪೆಟ್ಟಿಗೆ ಇಡಲಾಯಿತು. ವೇಳಾಪಟ್ಟಿಯಂತೆ ನಾಳೆ ಪಲಿತಾಂಶ ಘೋಷಣೆ ಮಾಡಲಾಗುವುದು ಎಂದು ತಿಳಿಸಲಾಯಿತು.
ನಮ್ಮ ತಂದೆ-ತಾಯಿಗಳು ಚುನಾವಣೆಯಲ್ಲಿ ಹೇಗೆ ಮತ ಚಲಾಯಿಸುತ್ತಾರೆ ಎಂಬುದನ್ನು ನಮ್ಮ ಶಾಲಾ ಚುನಾವಣೆಯಲ್ಲಿ ನಮ್ಮ ಗುರುಗಳು ನಮಗೆ ಕಲಿಸಿಕೊಟ್ಟರು. – ಕುಮಾರ್ ಪ್ರಜ್ವಲ್ ತಂದಲ್ವಾಡಿ ಹೇಳಿಕೊಂಡನು.
ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವ ರೀತಿ ವೋಟ್ ಹಾಕುತ್ತಾರೆ ಎಂಬುದನ್ನು ತೋರಿಸಿಕೊಟ್ಟ ನನ್ನ ಶಿಕ್ಷಕ ವೃಂದದವರಿಗೆ ಧನ್ಯವಾದಗಳು ಎಂದು ಚೈತ್ರ ಇಳಗೇರ ಹೇಳಿದಳು.
ನಿಜವಾಗಿಯೂ ಶಾಲೆಯ ಗುರುಗಳು ನೈಜವಾಗಿ ನಡೆಯುವ ಚುನಾವಣೆಯ ಸಂಪೂರ್ಣ ಕಾರ್ಯವೈಖರಿಯ ಬಗ್ಗೆ ತಿಳಿಸಿಕೊಟ್ಟರು. ನಾವು ಮುಂದೆ 18 ವರ್ಷ ಪೂರ್ಣಗೊಳಿಸಿದ ನಂತರ ನಿರ್ಭಯವಾಗಿ ಮತ ಚಲಾಯಿಸುತ್ತೇವೆ- ಪ್ರಕಾಶ್ ಪಾಟೀಲ್ .
ಸರ್ ನೈಜ ಚುನಾವಣೆಗಳು ಹೀಗೆ ನಡೆಯುತ್ತವೆಯೇ? ಎಂದು ಕೇಳುವ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಚುನಾವಣೆ ಮಾಡಿ ನೈಜತೆಯನ್ನು ತೋರಿಸಿಕೊಟ್ಟಿದ್ದೇವೆ. ಈ ಚುನಾವಣೆಯಲ್ಲಿ ಟೀಮ್ ವರ್ಕ್ ಮಾಡಿದ ಎಲ್ಲಾ ಸಿಬ್ಬಂದಿವರ್ಗದವರಿಗೆ ಧನ್ಯವಾದಗಳನ್ನು ಅರ್ಪಿಸಿದರು.