ಸಿಂದಗಿ – ಬೇರೆ ಬೇರೆ ಬಣ್ಣಗಳು ಮಿಶ್ರಣವಾದಾಗ ಅವುಗಳನ್ನು ಬೇರ್ಪಡಿಸುವುದು ಹೇಗೆ, ಆಪ್ಟಿಕಲ್ ಫೈಬರ್ ಗಳ ಮೂಲಕ ಸಾವಿರಾರು ಸಿಗ್ನಲ್ ಗಳನ್ನು ಕಳಿಸಬಹುದಾದ, ಶೆಲ್ ಮೂಲಕ ಮೋಟಾರು ಚಾಲನೆ ಮಾಡುವುದು, ಮನೆ ಮದ್ದುಗಳನ್ನ ಬಳಕೆ ಮಾಡಿಕೊಂಡು ಆರೋಗ್ಯವಾಗಿರುವುದು.. ಹೀಗೆ ಹಲವು ವೈಜ್ಞಾನಿಕ ವಿಷಯಗಳ ಮೂಲಕ ವಿದ್ಯಾರ್ಥಿಗಳೇ ವಿವರಿಸುವುದು, ಜೊತೆಗೆ ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳು ಕುತೂಹಲದಿಂದ ಆಲಿಸುತ್ತಿರುವುದು ಇಂದಿನ ವಿಜ್ಞಾನ ಮೇಳದಲ್ಲಿ ಕಂಡುಬಂದಿತು.
ಇದು ಕಂಡು ಬಂದಿದ್ದು ಪಟ್ಟಣದ ಬಂದಾಳ ರಸ್ತೆಯ ವಿವೇಕ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ. ಪಟ್ಟಣದ ವಿವೇಕ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಮತ್ತು ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಇವುಗಳ ಸಹಯೋಗದಲ್ಲಿ ಸೋಮವಾರ ನಡೆದ ವಿಜ್ಞಾನ ಮೇಳದ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಮಕ್ಕಳ ಹಿರಿಯ ಸಾಹಿತಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹ. ಮ. ಪೂಜಾರ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಮೇಳಗಳು ಮಕ್ಕಳಲ್ಲಿ ಹುದುಗಿಕೊಂಡಿರುವ ಸೃಜನಾತ್ಮಕ ಶಕ್ತಿಯನ್ನು ಹೊರಗಡೆ ಹಾಕುವಲ್ಲಿ ಹೆಚ್ಚು ಉಪಯುಕ್ತವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಮಾಡಿದರೆ ಅವರಿಗೆ ಭವಿಷ್ಯ ರೂಪಿಸಿಕೊಡಲು ಸಹಕಾರಿಯಾಗಲಿದೆ ಶಾಲಾ ಕಾಲೇಜುಗಳು ಆ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರೆ ಮಕ್ಕಳ ಭವಿಷ್ಯವನ್ನು ರೂಪಿಸಬಹುದಾಗಿದೆ ಎಂದರು.
ಈ ವೇಳೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚಾಣಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಕುತೂಹಲ ಮೂಡಿಸುವಲ್ಲಿ ವಿಜ್ಞಾನ ಮೇಳಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಅಲ್ಲದೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಜಾಗೃತಗೊಳಿಸುವುದು, ಪ್ರಾಯೋಗಿಕ ಕಲಿಕೆ, ಉನ್ನತ ಶಿಕ್ಷಣ ಹಾಗೂ ಸಾಧನೆಗಳತ್ತ ಪ್ರೇರಣೆ ನೀಡುವುದು ಮೇಳದ ಮುಖ್ಯ ಉದ್ದೇಶವಾಗಬೇಕು ಎಂದರು.
ಸಂಸ್ಥೆಯ ಮಾರ್ಗದರ್ಶಕ ಪಟ್ಟಣದ ಎಚ್. ಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಳಿ ಕಲಿವುದಕ್ಕಿಂತ ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿಯುವುದು ಶಾಶ್ವತವಾಗಿ ಉಳಿಯುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಹೆಗ್ಗನದೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಚಾರ್ಯ ಶಾನಿಮೋಲ್ ರಾಬಿನ್ ಇದ್ದರು.
ಈ ಸಂದರ್ಭದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ನೀಡಿದ ಧರೆಗೆ ದೊಡ್ಡವರು ಪ್ರಶಸ್ತಿಗೆ ಭಾಜನರಾದ ಹ. ಮ.ಪೂಜಾರ ಮತ್ತು ಜಂಬುನಾಥ ಕಂಚಾಣಿ ಅವರಿಗೆ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಎಆರ್ ಹೆಗ್ಗನದೊಡ್ಡಿ ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ರಾಬಿನ್, ಶಿವಕುಮಾರ ಶಿವಶಂಪಿಗೆರ ಸೇರಿದಂತೆ ಪಾಲಕರು, ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಹಾಜರಿದ್ದರು.