“ವಿಶ್ವವ್ಯಾಪಿಯಾಗಿ ಹರಡಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿ ವ್ಯಕ್ಯಿಯಲ್ಲಿ ಶಿಸ್ತನ್ನು ಬೆಳೆಸಿ ಸಮಾಜಮುಖಿ ಕಾರ್ಯ ಮಾಡಲು ಸೇವಾ ಮನೋಭಾವನೆ ಬೆಳೆಸಿ ಸಮಾಜದ ಪ್ರಗತಿಗೆ ಕಾರಣವಾಗುತ್ತದೆ” ಎಂದು ರಾಜ್ಯಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರದ ರೋವರ್ ವಿಭಾಗದ ಮುಖ್ಯ ಪರೀಕ್ಷಕರು ಹಾಗೂ ತರಬೇತಿ ನಾಯಕರಾದ ಪ್ರತೀಮಕುಮಾರ ಕೆ. ಹೇಳಿದರು.
ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ 2022-23 ನೇ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಾರ್ಥಿಗಳ ರಾಜ್ಯಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರವು ನವೆಂಬರ್ ತಿಂಗಳು ದಿನಾಂಕ 4, 5 ಮತ್ತು 6 ರಂದು ನಡೆಯುತ್ತಿದ್ದು ವಿವಿಧ ಕಾಲೇಜಿನಿಂದ ಆಗಮಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಾರ್ಥಿಗಳ ರಾಜ್ಯಮಟ್ಟದ ಪುರಸ್ಕಾರ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, “ಶಿಬಿರಾರ್ಥಿಗಳು ದೇಶ ಕಟ್ಟುವ ಸಮರ್ಥ ನಾಯಕರಾಗಬೇಕು. ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸಬೇಕು. ಸಾಧನೆ ಮಾಡಿದ ಸಾಧಕರ ಬದುಕನ್ನು ಅವಲೋಕನ ಮಾಡಬೇಕು. ವಿಶೇಷವಾಗಿ ಇದರಲ್ಲಿ ಸಮಾಜದ ಕೊಡುಗೆಯಿಂದ ಬದುಕುವ ನಾವು ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡಬೇಕೆಂಬ ಸಂಕಲ್ಪ ಮಾಡಬೇಕು. ಹೊಸ ಹೊಸ ಸವಾಲುಗಳನ್ನು ಎದುರಿಸಲು ಸಿಧ್ಧರಾಗಬೇಕು. ಪ್ರತಿಯೊಬ್ಬ ಶಿಬಿರಾರ್ಥಿಯು ವಿಶೇಷವಾದ ವ್ಯಕ್ತಿಯಾಗಿ ಹೊರಹೊಮ್ಮಿ ಸಮಾಜಕ್ಕೆ ಸುಮಧುರ ಪುಷ್ಪಗಳಾಗಿ ಕಂಪನ್ನು ಸೂಸಿ ಕೀರ್ತಿ ತರಬೇಕು ” ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಮಹೇಶ ವಾಯ್ ಕಂಬಾರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ “ಮಹಾವಿದ್ಯಾಲಯವು ಪ್ರಪ್ರಥಮವಾಗಿ ನಿಮ್ಮೆಲ್ಲರ ಸಹಕಾರದಿಂದ ಮೊದಲ ಬಾರಿಗೆ ನಮ್ಮ ಮೂಡಲಗಿ ಪಟ್ಟಣದಲ್ಲಿ ರಾಜ್ಯಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರವನ್ನು ಆಯೋಜಿಸಿದೆ. ವಿವಿಧ ಕಾಲೇಜುಗಳಿಂದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಆಗಮಿಸಿದ್ದೀರಿ. ಈ ಪರೀಕ್ಷಾ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ಮುನ್ನೆಡಿಸಿ, ಅದಕ್ಕೆ ಬೇಕಾದ ಸಹಾಯ ಸಹಕಾರವನ್ನು ಮಹಾವಿದ್ಯಾಲಯ ನೀಡುತ್ತದೆ. ಶಿಬಿರಾರ್ಥಿಗಳೆಲ್ಲಾ ಸ್ವಯಂ ಶಿಸ್ತನ್ನು ಅಳವಡಿಸಿಕೊಂಡು ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಗಳಾಗಿ ಒಳ್ಳೆಯ ಪ್ರಜೆಗಳಾಗಿ” ಎಂದರು.
ಕಾರ್ಯಕ್ರಮದಲ್ಲಿ ರೇಂಜರ್ ವಿಬಾಗದ ಮುಖ್ಯ ಪರೀಕ್ಷಕರಾದ ಅನ್ನಪೂರ್ಣ ಕುರುಬೇಟ್ ಪರೀಕ್ಷಾ ಸಂಯೋಜಕರಾದ ಹೊನ್ನಮ್ಮ ಎ.ಎಸ್.ಓ.ಸಿ ಬೆಂಗಳೂರು ಉತ್ತರ ವಿಭಾಗ, ಬೆಳಗಾವಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಎ.ಎಸ್.ಓ.ಸಿ ಡಿ.ಬಿ ಅತ್ತಾರ ಮತ್ತು ವಿಠ್ಠಲ ಎಸ್.ಬಿ, ನಟರಾಜ್ ಎಚ್ ಹಾಗೂ ವಿವಿಧ ಕಾಲೇಜಿನಿಂದ ಆಗಮಿಸಿದ ರೋವರ್ಸ್ ಲೀಡರ್ಸ್ ಮತ್ತು ರೇಂಜರ್ಸ್ ಲೀಡರ್ಸ್ ಗಳು ಭಾಗವಹಿಸಿದ್ದರು. ಡಾ. ರವಿ ಗಡದನ್ನವರ ವಂದಿಸಿದರು. ಡಿ.ಬಿ.ಅತ್ತಾರ ಎಲ್ಲರನ್ನೂ ಸ್ವಾಗತಿಸಿ ನಿರೂಪಿಸಿದರು.