ಸಿಂದಗಿ: ತಾಲೂಕಿನ ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ (ಡಿ.ಎ.ಪಿ) ಹಾಗೂ ಬಿತ್ತನೆ ಬೀಜ ಅಲಭ್ಯ ಹಾಗೂ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮಂಜುನಾಥ ಬಿರಾದಾರ ಮಾತನಾಡಿ, ತಾಲೂಕಿನ ಕೆಲವು ಭಾಗಗಳಲ್ಲಿ ಮುಂಗಾರು ಮಳೆಯಾಗಿದ್ದು ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ತಾಲೂಕಿನ ಯಾವೊಂದು ರಸಗೊಬ್ಬರ ಅಂಗಡಿಗಳಲ್ಲಿ (ಡಿ.ಎ.ಪಿ) ರಸಗೊಬ್ಬರ ಸಿಗದೆ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ಅಲ್ಲದೆ ಬಿತ್ತನೆ ಬೀಜಗಳು ಕೂಡಾ ಸರಿಯಾಗಿ ಸಿಗುತ್ತಿಲ್ಲ. ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಕೂಡಾ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳು ಸರಿಯಾಗಿ ದೊರೆಯುತ್ತಿಲ್ಲ, ದೊರೆತರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿರುತ್ತವೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಂಡು ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಪೀರಪ್ಪ ಕೆರೂರ, ತಾಲೂಕು ಉಪಾಧ್ಯಕ್ಷ ಶಂಕರ ದಶವಂತ, ರೇಣುಕಾ ಮಣೂರ, ಶಿವಲಿಂಗಮ್ಮ ಪೂಜಾರಿ, ಸಂತೋಓಷ ಯಲಗೋಡ, ನಿಂಗಪ್ಪ ಕಂಡೋಳಿ, ಬಲಚಂದ್ರ ಹಲಕನವರ ಸೇರಿದಂತೆ ಹಲವರು ಇದ್ದರು.