ಬೀದರ – ಜನರ ಕಣ್ಣಿಗೆ ಇದು ಬಿಯರ್ ಬಾಟಲ್ ನಲ್ಲಿ ತಂಪು ಪಾನೀಯ ಕಾಣುತ್ತದೆ ಆದರೆ ಒಳಗೆ ಸೇಂದಿ ಸೇರಿಸಿ ಮಾರಾಟ ಮಾಡುತ್ತಿದ್ದ ತಂಡದ ಮೇಲೆ ಬೀದರ್ ಅಬಕಾರಿ ದಾಳಿ ಮಾಡಿ ಖದೀಮರನ್ನು ಜೈಲು ಕಂಬಿ ಹಿಂದೆ ತಳಿದ್ದಾರೆ ಬೀದರ್ ಅಬಕಾರಿ ಪೊಲೀಸರು.
ಖಚಿತ ಮಾಹಿತಿ ಮೇರೆಗೆ ನಗರದ ಪ್ರತ್ಯೇಕ ಸ್ಥಳಗಳಲ್ಲಿ ಅಕ್ರಮವಾಗಿ ಸೇಂದಿ ತಯಾರಿಸಿ ಬೀಯರ್ ಬಾಟಲಿಗಳಲ್ಲಿ ತುಂಬಿ ತಂಪು ಪಾನೀಯ ರೂಪದಲ್ಲಿ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದ ಮೂವರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ ನಾರಾಯಣ ಖೇಡದ ಕೃಷ್ಣಗೌಡ ಸತ್ಯಗೌಡ, ಜಹೀರಾಬಾದ್‍ನ ಪ್ರಕಾಶಗೌಡ ವೆಂಕಟರಮಣ ಗೌಡ ಹಾಗೂ ಶ್ರೀನಿವಾಸ ಗೌಡ ಅನಂತರಾಮ ಗೌಡ ಬಂಧಿತರು.
ಬಂಧಿತರಿಂದ 432 ಬೀಯರ್ ಬಾಟಲಿಗಳಲ್ಲಿ ತುಂಬಿದ್ದ 283.400 ಲೀಟರ್ ಸೇಂದಿ, ಸೇಂದಿ ತಯಾರಿಕೆಗೆ ಬಳಸುತ್ತಿದ್ದ ಮುಚ್ಚಳಿಕೆ ಪಂಚಿಂಗ್ ಯಂತ್ರ, ಬಾಟಲಿ ಮುಚ್ಚಳಿಕೆ, ಕೂಲ್ ಡ್ರಿಂಕ್ಸ್ ಲೇಬಲ್, ಖಾಲಿ ಬಾಟಲಿಗಳು, ರೆಫ್ರಿಜಿರೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೈಲೂರಿನ ಗಾಂಧಿನಗರ ಕಾಲೊನಿಯ ಪಂಚಮುಖಿ ಶಿವಾನಿ ಕೂಲ್‍ಡ್ರಿಂಕ್ಸ್ ಸೆಂಟರ್ ಹಾಗೂ ನೌಬಾದ್‍ನ ಕೈಗಾರಿಕಾ ಪ್ರದೇಶದ ಲಕ್ಷ್ಮಿ ನರಸಿಂಹ ಸಾಫ್ಟ್ ಡ್ರಿಂಕ್ಸ್ ಘಟಕದಲ್ಲಿ ಶೋಧನೆ ನಡೆಸಿದಾಗ ಸೇಂದಿ ತಯಾರಿಸಿ ಗ್ರಾಹಕರಿಗೆ ಪೂರೈಸುತ್ತಿರುವುದು ಪತ್ತೆಯಾಗಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.
ಅಬಕಾರಿ ಮೇಲಾಧಿಕಾರಿ ಮತ್ತು ಡಿವೈಎಸ್‍ಪಿ ಆನಂದ ಉಕ್ಕಲಿ ನೇತೃತ್ವದಲ್ಲಿ ದಾಳಿ ಮಾಡಿದ್ದು ಸೇಂದಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ