ಸಿಂದಗಿ: ಪಟ್ಟಣದ ಹಿರಿಯ ಪತ್ರಕರ್ತ ಮುರಗೇಶ ಹಿಟ್ಟಿ (49) ನಿಧನರಾಗಿದ್ದಾರೆ. ಅವರು ತಂದೆ, ಅಣ್ಣ ಅತ್ತಿಗೆ, ಪತ್ನಿ ಹಾಗೂ ಮೂರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಸಿಂದಗಿ ಪಟ್ಟಣದ ಹಿರಿಯ ಪತ್ರಕರ್ತ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ವಿಶ್ವವಾಣಿ, ವಿಜಯ ಕರ್ನಾಟಕ ಹೀಗೆ ಹಲವಾರು ಪತ್ರಿಕೆಗಳ ವರದಿಗಾರರಾಗಿ, ಈ ಕ್ರಾಂತಿ ವಾರ ಪತ್ರಿಕೆಯ ಸಂಪಾದಕರಾಗಿ ಸುಮಾರು 25 ವರ್ಷಗಳ ಸುದೀರ್ಘ ಪತ್ರಿಕಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಆತ್ಮೀಯ ಮಿತ್ರ ಮುರುಗೇಶ ಹಿಟ್ಟಿಯವರ ಅಗಲಿಕೆ ಸಿಂದಗಿಯ ಪತ್ರಿಕಾರಂಗ ಹಾಗೂ ಬಂಧು ಬಳಗಕ್ಕೆ ಅಪಾರ ನೋವು ತಂದಿದೆ. ಈ ಕುಟುಂಬಕ್ಕೆ ತಾತ್ಕಾಲಿಕವಾಗಿ ಜಿಲ್ಲಾ ಸಂಘದಿಂದ ರೂ 5 ಸಾವಿರಗಳನ್ನು ಮುಖಂಡರಾದ ಶಿವಪ್ಪಗೌಡ ಬಿರಾದಾರ, ಸಿ.ಎಸ್.ನಾಗೂರ ಅವರ ಮೂಲಕ ನೀಡಲಾಗಿದ್ದು ಮುಂಬರುವ ದಿನಗಳಲ್ಲಿ ಸರಕಾರದಿಂದ ಅನುದಾನ ಕಲ್ಪಿಸಿಕೊಡಲು ಜಿಲ್ಲೆ ಹಾಗೂ ರಾಜ್ಯ ಸಂಘ ಕಾರ್ಯನಿರ್ವಹಿಸುತ್ತದೆ ಎಂದು ಭರವಸೆ ನೀಡಿದರು.
ಸಂತಾಪ: ಶಾಸಕ ರಮೇಶ ಭುಸನೂರ, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಟಿ.ಎಸ್.ಪಿ ಮಂಡಳಿ ನಿರ್ದೇಶಕ ಶಿವಪ್ಪಗೌಡ ಬಿರಾದಾರ, ಮಾಜಿ ಎಂಎಲ್ಸಿ ಅರುಣ ಶಹಾಪುರ, ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಡಾ. ಮುತ್ತು ಮನಗೂಳಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಅಂಜುಮನ್ ಸಂಸ್ಥೆಯ ಪ್ರ.ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ, ಅಬು ಶಿಕ್ಷಣ ಸಂಸ್ಥೆಯ ಚೇರಿಮನ್ ಎಂ.ಎ.ಖತೀಬ, ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.