ಸಿಂದಗಿ: ಧಾರ್ಮಿಕ, ಆಧ್ಯಾತ್ಮಿಕ, ಪುರಾಣ ಪ್ರವಚನ, ಶರಣ-ಸತ್ಪುರುಷರ ಹಿತನುಡಿಗಳು ಕೇಳುವುದರಿಂದ ಮಾನವನ ಜೀವನ ಪಾವನವಾಗುತ್ತದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ದರಾಮಶ್ವರ ಜಾತ್ರಾ ನಿಮಿತ್ತವಾಗಿ ಪುರಾಣ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ಕಲ್ಯಾಣ ದರ್ಶನ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ನಾಡು ನುಡಿಗೆ ಸತ್ಯ ಶರಣರು ಕೊಟ್ಟಂತ ಕೊಡುಗೆ ಅಪಾರ. ಮನುಷ್ಯ ಹುಟ್ಟಿದ ಮೇಲೆ ಉಸಿರು ಬರುತ್ತೆ, ಅದೇ ಮನುಷ್ಯ ಸತ್ತಮೇಲೆ ಹೆಸರು ಇರುತ್ತೇ ಹೊರತಾಗಿ ಉಸಿರು ಇರಲ್ಲ. ಆ ಹೆಸರು ಉಳಿಸಿಕೊಳ್ಳಬೇಕು ಎಂದರೆ ಶರಣರ ತತ್ವ ಸಿದ್ಧಾಂತದ ಆಧಾರದ ಮೇಲೆ ಜೀವನ ಸಾಗಿಸಿದರೆ ಜೀವನ ಕಲ್ಯಾಣ ಆಗುತ್ತದೆ ಎಂದರು.
ಹುಟ್ಟು ಆಕಸ್ಮಿಕ, ಸಾವು ಖಚಿತ. ಮಾನವ ಎಷ್ಟು ದಿನ ಬದುಕುತ್ತಾನೆ ಎನ್ನುವುದು ಮುಖ್ಯವಲ್ಲ. ತಾನು ಬದುಕಿದ ದಿನಗಳಲ್ಲಿ ಏನು ಸಾಧನೆ ಮಾಡುತ್ತಾನೆ ಎನ್ನುವುದು ಮುಖ್ಯವಾಗಿರುತ್ತೆ. ಜೀವ ಚಿಕ್ಕದು ಜೀವನ ದೊಡ್ಡದು. ಅನ್ಯ ಸಮುದಾಯದ ಜನರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಧರ್ಮದ ಹಾದಿಯಲ್ಲಿ ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಬದುಕಬೇಕು ಎಂದರು.
ಕಡಕೋಳದ ಮಡಿವಾಳೇಶ್ವರ ಮಹಾಮಠದ ಅಂತರ ರುದ್ರಮುನಿ ಶಿವಾಚಾರ್ಯರು ಆಶಿರ್ವಚನ ನೀಡಿ, ಒಬ್ಬರ ಮನ ನೋಯಿಸಬೇಡ. ಇನ್ನೊಬ್ಬರ ಮನೆಘಾತ ಮಾಡಬೇಡ. ಅನ್ಯರನ್ನು ನೋಡಿ ಅಸೂಯೆ ಪಡಬೇಡ. ಎಷ್ಟಿದ್ದರೇನು ಇದು ಖಾಲಿ ಮನೆ ಒಂದಲ್ಲ. ಒಂದು ದಿನ ಎಲ್ಲವನ್ನು ಇಲ್ಲೇ ಬಿಟ್ಟು ಹೋಗುವುದು ಕಟ್ಟಿಟ್ಟ ಬುತ್ತಿ. ಬದುಕಿ ಇರುವಷ್ಟು ದಿನ ಮಹಾತ್ಮಾರ ಕೀರ್ತನೆ ಭಜನೆ ಪುರಾಣ ವಚನಗಳು ಕೇಳಿ ಅದರಲ್ಲಿರುವ ಸನ್ನಿವೇಶಗಳನ್ನು ನಿಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಹೋದಾಗ ಮಾತ್ರ ನಿಮ್ಮ ಜೀವನ ಕಲ್ಯಾಣವಾಗುತ್ತದೆ ಎಂದರು.
ಜೇರಟಗಿ ವಿರಕ್ತಮಠದ ಮಹಾಂತ ಸ್ವಾಮಿಗಳು, ಯಡ್ರಾಮಿ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಬಳಿಕ ಗ್ರಾಮ ಪಂಚಾಯತಿ ಸರ್ವ ಸದಸ್ಯರಿಗೆ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಕಮೀಟಿ ವತಿಯಿಂದ ಸನ್ಮಾನಿಸಿದರು.
ಈ ಸಂರ್ದಭದಲ್ಲಿ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಜೆಡಿಎಸ್ ಜಿಲ್ಲಾ ಪ್ರ.ಕಾರ್ಯದರ್ಶಿ ಅರವಿಂದ ಹಂಗರಗಿ, ಕಲ್ಪವೃಕ್ಷ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಗ್ರಾ.ಪಂ.ಅಧ್ಯಕ್ಷ ಬಿ.ಟಿ.ಬೋನಾಳ, ಕೃಷಿ ಅಧಿಕಾರಿ ಆನಂದ ಅವರಾದ, ಮುತ್ತು ಶಾಬಾದಿ, ಗ್ರಾ.ಪಂ.ಸದಸ್ಯರುಗಳಾದ ಇನಾಯತ್ ದೊಡಮನಿ, ಮಲ್ಲು ದುದ್ದಗಿ, ಸುಭಾಸ್ ನಗನೂರ, ಬಂದೇನವಾಜ ಕಣ್ಣಿ, ಕುಪೇಂದ್ರ ಆಹೆರಿ, ಈರಣ್ಣ ಬಡಿಗೇರ್ ಸೇರಿದಂತೆ ಅನೇಕ ಇದ್ದರು.