spot_img
spot_img

ಶಾಸ್ತ್ರಿಗಳ ಸಾಹಿತ್ಯ ಕಾಲ

Must Read

- Advertisement -

ಕವಿ – ಕಾವ್ಯ ಲಕ್ಷಣಗಳು
( ಸರಳ ಕಾವ್ಯ ಮೀಮಾಂಸೆ)
ರಸಾನುಭವ

ಕಾವ್ಯವಿರಲಿ, ನಾಟಕ ಮುಂತಾದ ಕಲೆಗಳಿರಲಿ, ಅಲ್ಲಿ ಪ್ರಮುಖವಾಗಿ ಕೇಳಿ ಬರುವ ಒಂದು ಶಬ್ದ ” ರಸ”. ರಸಸ್ಪರ್ಶವಾಗದೆ ಕಾವ್ಯ, ಕಲೆ ಯಾವುದರ ಸೃಷ್ಟಿಯೂ ಆಗಲಾರದು. ಆದರೂ ಅದು ಶುಷ್ಕ ಅಥವಾ ಬರಡು ಸ್ವರೂಪದ್ದಾಗುತ್ತದೆ. ಆದ್ದರಿಂದ ರಸ ಎಂದರೆ ಏನು, ಕಲೆ ಅಥವಾ ಕಾವ್ಯದಲ್ಲಿ ಅದರ ಪಾತ್ರ ಎಷ್ಟು ಮಹತ್ವದ್ದು ಎನ್ನುವುದನ್ನು ತಿಳಿದುಕೊಳ್ಳದೆ ನಾವು ಮುಂದೆ ಹೆಜ್ಜೆ ಇಡಲು ಸಾಧ್ಯವಾಗುವುದಿಲ್ಲ.

‘ರಸ’ ಎನ್ನುವುದು ನಮ್ಮ ಅನುಭವಕ್ಕೆ ಸಿಗುವ ಸಂಗತಿ ಹೊರತು ನೇರವಾಗಿ ಕಣ್ಣೆದುರು ಬರುವಂತಹದಲ್ಲ. ಸಾಮಾನ್ಯವಾಗಿ ನಾವು ನವರಸಗಳ ಬಗ್ಗೆ ಕೇಳಿಯೇ ಇರುತ್ತೇವೆ. ಶೃಂಗಾರ, ಹಾಸ್ಯ, ಕರುಣೆ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಈ ಎಂಟುರಸಗಳು ಭರತನ ನಾಟ್ಯಶಾಸ್ತ್ರದಲ್ಲಿ ಮೊದಲು ಹೇಳಲ್ಪಟ್ಟಿವೆ. ಶಾಂತ ರಸ ಒಂಬತ್ತನೆಯದಾಗಿ ನಂತರ ಸೇರಿಕೊಂಡಿದ್ದು.

- Advertisement -

ಯಾವುದೇ ನಾಟಕವನ್ನು ನೋಡಿದಾಗ, ಸಂಗೀತವನ್ನು ಕೇಳಿದಾಗ, ಅಥವಾ ಬದುಕಿನ ಯಾವುದೋ ಒಂದು ಸನ್ನಿವೇಶವನ್ನು ನೋಡಿದಾಗ ನಮ್ಮಲ್ಲಿ ಉಂಟಾಗುವ ಭಾವ ವಿಶೇಷವೇ ‘ರಸ’. ದುಃಖದ ಸನ್ನಿವೇಶ ನೋಡಿದಾಗ ನಮ್ಮ ಕಣ್ಣಲ್ಲಿ ನೀರು ಬರಬಹುದು. ಯಾರೋ ಕೆಟ್ಟದ್ದನ್ನು ಮಾಡಿದಾಗ ನಮಗೆ ಕ್ರೋಧ ಬರಬಹುದು. ಯಾರೋ ಹಾಸ್ಯದ ಮಾತನಾಡಿದರೆ ನಗೆ ಬರಬಹುದು. ಇವೆಲ್ಲ ರಸಾನುಭವಗಳಾಗಿ ನಮಗೆ ವಿಶೇಷ ಅನುಭವವನ್ನು ನೀಡುತ್ತವೆ. ಹಾಗೆಯೇ ಪ್ರೇಮ, ಉತ್ಸಾಹ, ಭಯ, ಆಶ್ಚರ್ಯ , ದುಃಖ ಮೊದಲಾದ ನಮ್ಮ ಚಿತ್ತವೃತ್ತಿಗಳು ನಮ್ಮಲ್ಲಿ ಹುಟ್ಟಿಸುವ ಬಗೆಬಗೆಯ ಭಾವಗಳೇ ರಸಸ್ಪರ್ಶಿಯಾಗಿ ನಮ್ಮನ್ನು ಸ್ಪಂದಿಸಿದಾಗ ನಾವು ಅದರ ಪರಿಣಾಮವನ್ನು ಒಂದಲ್ಲ ಒಂದು ರೀತಿ ಆಸ್ವಾದಿಸುತ್ತೇವೆ. ಅದರ ರುಚಿ ಪಡೆಯುತ್ತೇವೆ. ಈ ಭಾವ ಎನ್ನುವುದು ಮಾನಸಿಕ ವ್ಯಾಪಾರವಾದ್ದರಿಂದ ಅದು ಇಂದ್ರಿಯಗೋಚರವಾಗುವುದಿಲ್ಲ. ಕಾವ್ಯ ನಾಟಕಾದಿಗಳಿಗೂ ಇದೇ ಮಾತು ಅನ್ವಯಿಸುತ್ತದೆ.

ಸಿಹಿ ರಸವಿಲ್ಲದ ಕಬ್ಬಿನ ಜಲ್ಲೆಯನ್ನು ನಾವು ಹೇಗೆ ಬದಿಗೆಸೆಯುತ್ತೇವೋ ಹಾಗೆ ರಸವಿಲ್ಲದ ಕಾವ್ಯವೂ ತಿರಸ್ಕಾರಕ್ಕೆ ಯೋಗ್ಯವಾಗಿರುತ್ತದೆ. ಏಕೆಂದರೆ ರಸವಿಹೀನ ಕಾವ್ಯ ನಮ್ಮಲ್ಲಿ ಯಾವ ಭಾವವನ್ನೂ ಉಂಟುಮಾಡುವುದಿಲ್ಲ. ಕಾವ್ಯವನ್ನು ಓದಿದಾಗ ನಾವು ನವರಸಗಳಲ್ಲಿ ಒಂದು ರಸವನ್ನಾದರೂ ಅನುಭವವೇದ್ಯವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಆ ಕಾವ್ಯ ನಮಗೆ ಮಾನಸಿಕ ಸುಖವನ್ನು ನೀಡಲಾರದು. ಅಂದಾಗ ಅಂತಹ ಬರಡು ಕಾವ್ಯದ ಸಾರ್ಥಕತೆಯೇನು? ಆದ್ದರಿಂದ ರಸಾಸ್ವಾದನೆಗೆ ಅವಕಾಶ ಮಾಡಿಕೊಡದೇ ಇರುವ ಕಾವ್ಯ ವ್ಯರ್ಥ ಎನ್ನುವುದು ಸ್ಪಷ್ಟ.
ಅಂದರೆ ರಸಸ್ಪರ್ಶಿಯಾದ ಉತ್ತಮ ಕಾವ್ಯವನ್ನು ರಚಿಸುವ ಶಕ್ತಿಯನ್ನು ಕವಿ ಪಡೆದುಕೊಳ್ಳಬೇಕಾದರೆ ಮೊದಲು ರಸವೆಂದರೇನು, ಕಾವ್ಯಕ್ಕೆ ಅದರ ಅಗತ್ಯವೇನು, ರಸೋತ್ಪತ್ತಿಯಾಗಬೇಕಾದರೆ ಕವಿ ಮಾಡಬೇಕಾದ್ದೇನು ಎನ್ನುವುದನ್ನೆಲ್ಲ ತಿಳಿದಿರಬೇಕಾಗುತ್ತದೆ. ಈ ಹಿಂದೆ ಹೇಳಿದಂತೆ ನಮ್ಮಲ್ಲಿ ಪ್ರತಿಭೆಯೆಂಬ ಮೂಲಶಕ್ತಿಯಿದ್ದರೂ ಸಹ ಅದು ಹೊರಹೊಮ್ಮುವಂತಾಗಬೇಕಿದ್ದರೆ ಅದಕ್ಕೆ ಪೂರಕವಾದ ಇತರ ಅಂಶಗಳ ಕುರಿತಾಗಿಯೂ ನಾವು ಅರಿತುಕೊಂಡು ಆ ಪರಿಕರಗಳನ್ನು ಬಳಸುವ ಮೂಲಕ ಕಾವ್ಯ ರಚನಾ ಶಕ್ತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ರಸದ ಕುರಿತು ಹಲವು ಬಗೆಯ ವ್ಯಾಖ್ಯೆಗಳಿವೆ. ಲಕ್ಷಣ ಗ್ರಂಥಕಾರರೆಲ್ಲರೂ ರಸದ ವಿವಿಧ ಸ್ವರೂಪಗಳನ್ನು, ವಿವಿಧ ಲಕ್ಷಣಗಳನ್ನು , ಅದರ ಬಗೆಬಗೆಯ ಪರಿಣಾಮಗಳನ್ನು ತಮ್ಮ ತಮ್ಮ ದೃಷ್ಟಿಯಲ್ಲಿ ತಮ್ಮ ತಮ್ಮ ವಿಚಾರದ ಒರೆಗಲ್ಲಿಗೆ ಹಚ್ಚಿ ನೋಡಿ ವ್ಯಾಖ್ಯಾನಿಸಿದ್ದಾರೆ. ಭರತ ಮುನಿಯ ಪ್ರಕಾರ ” ವಿಭಾವಗಳು, ಅನುಭಾವಗಳು ಮತ್ತು ಸಂಚಾರಿ ಭಾವಗಳು ಒಂದಾಗುವದರಿಂದ ರಸನಿಷ್ಪತ್ತಿಯಾಗುತ್ತದೆ”. ಅವನು ಅದಕ್ಕೆ ಅತ್ಯಂತ ಸರಳವಾದ ಉದಾಹರಣೆಗಳನ್ನು ನೀಡುತ್ತಾನೆ.

- Advertisement -

” ಬೆಲ್ಲ ಮೊದಲಾದ ದ್ರವ್ಯಗಳು, ಮಸಾಲೆ , ವನಸ್ಪತಿಗಳು ಇವುಗಳಿಂದ ಹೇಗೆ “ಷಾಡವ” ( ಪಾನಕ/ ಶರಬತ್ತು ಇ. ) ಮೊದಲಾದ ರಸಗಳುಂಟಾಗುವವೋ ಹಾಗೆಯೇ ಅನೇಕ ಭಾವಗಳಿಂದ ಕೂಡಿದ ಸ್ಥಾಯೀಭಾವಗಳು ರಸತ್ವವನ್ನು ಹೊಂದುತ್ತವೆ. ಇಲ್ಲಿ ರಸ ಎಂಬ ಶಬ್ದಕ್ಕೆ ” ಆಸ್ವಾದ್ಯ” ಎಂಬ ಅರ್ಥವಾಗುತ್ತದೆ. ರಸದ ಆಸ್ವಾದನೆ ಎಂದರೇನು? ನಾವು ಹೇಗೆ ಬಗೆಬಗೆಯ ಪದಾರ್ಥಗಳನ್ನು ಅನ್ನದೊಡನೆ ಕಲಸಿಕೊಂಡು ಊಟ ಮಾಡುತ್ತ ಅದರ ಸವಿಯನ್ನು ಅನುಭವಿಸುತ್ತೇವೋ ಹಾಗೆ ಬಗೆಬಗೆಯ ಭಾವಾಭಿವ್ಯಕ್ತಿಗಳೆಂಬ ವ್ಯಂಜನಗಳಿಂದ ಕೂಡಿ, ವಾಚಿಕಾಭಿನಯ, ಆಂಗಿಕಾಭಿನಯ, ಸಾತ್ವಿಕಾಭಿನಯಗಳಿಂದ ಒಡಗೂಡಿದ ಸ್ಥಾಯಿ ಭಾವಗಳನ್ನು ಪ್ರೇಕ್ಷಕರು ಪ್ರಸನ್ನಮನಸ್ಸಿನಿಂದ ಆಸ್ವಾದಿಸಿ ಮಾನಸಿಕ ಸುಖಾನುಭವ ಹೊಂದುತ್ತಾರೆ. ಸುಂದರವಾದ ರಸಭರಿತ ಕಾವ್ಯಗಳ ಓದೂ ಹಾಗೆಯೇ ಮನಸ್ಸಿಗೆ ಸುಖಾನುಭವ ನೀಡುತ್ತದೆ.
ರಸಾಲಂಕಾರ , ವ್ಯುತ್ಪತ್ತಿ ಮೊದಲಾದವುಗಳ ಕುರಿತಾಗಿ ಲಾಕ್ಷಣಿಕರು ನೀಡಿದ ವಿವರಣೆಗಳನ್ನೆಲ್ಲ ನಮಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ನಾವು ನಮ್ಮ ನಮ್ಮ ಬೌದ್ಧಿಕ ಮತ್ತು ವೈಚಾರಿಕ ಶಕ್ತಿಗನುಗುಣವಾಗಿ ಅವುಗಳಿಗೆ ಅರ್ಥ ಕಂಡುಕೊಳ್ಳಬೇಕಾಗುತ್ತದೆ. ಅವರ ನಡುವಿನ ಚರ್ಚೆಗಳು ಪಂಡಿತರ ಮಟ್ಟದ್ದು. ಅದನ್ನು ನಾವು ಸರಳೀಕರಿಸಿಕೊಳ್ಳಬೇಕಾದ್ದಗತ್ಯ. ನಾವು ನಮ್ಮ ದಿನನಿತ್ಯದ ಲೌಕಿಕ ವ್ಯವಹಾರಗಳ ಆಗುಹೋಗುಗಳ ಹಿನ್ನೆಲೆಯಲ್ಲಿಯೇ ಇವುಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ.

ನಾಟಕ ಅಥವಾ ಯಾವುದೇ ದೃಶ್ಯಕಲೆಯನ್ನು ನೋಡುವಾಗ ಅಥವಾ ಸಂಗೀತವನ್ನು ಕೇಳುವಾಗ ಪ್ರೇಕ್ಷಕ/ ಶ್ರೋತೃವಿನಲ್ಲಿ ರಸಭಾವಗಳನ್ನು ಆಸ್ವಾದಿಸಬಲ್ಲ ಶಕ್ತಿಯೂ ಬೇಕಾಗುತ್ತದೆ. ಅಂತಹ ಅರ್ಹತೆಯುಳ್ಳವರನ್ನೇ “ರಸಿಕರು” ಎಂದು ಕರೆಯುವುದು. ರಸಿಕರೆಲ್ಲರೂ ರಸದ ಬಗ್ಗೆ ವ್ಯಾಖ್ಯೆ ನೀಡಬಲ್ಲವರಾಗಿರಲಿಕ್ಕಿಲ್ಲ. ಆದರೆ ನಾಟಕ ಅಥವಾ ಸಂಗೀತದಿಂದ ಸಿಗುವ ಸಂತೋಷವನ್ನು ಅವರು ಅನುಭವಿಸಬಲ್ಲವರಾಗಿರುತ್ತಾರೆ. ಇದೇ ಮಾತು ಒಳ್ಳೆಯ ಕಾವ್ಯವನ್ನು / ಸಾಹಿತ್ಯವನ್ನು ಓದುವವರಿಗೂ ಅನ್ವಯಿಸುತ್ತದೆ. ಅದಕ್ಕೇ ” ಕಾವ್ಯಾಸ್ವಾದನೆ” ಎಂಬ ಶಬ್ದ ಬಳಸುವುದು. ಆದ್ದರಿಂದ ಕವಿಯಲ್ಲಿ ಕಾವ್ಯರಚನೆಯ ಶಕ್ತಿ ಇರುವಂತೆ ಕೇಳುಗ ಅಥವಾ ಓದುಗರಲ್ಲೂ ಅದರ ರುಚಿ ( ರಸ) ಸವಿಯುವ/ ಅನುಭವಿಸುವ ಶಕ್ತಿ ಇದ್ದಾಗ ಅದು ಪರಸ್ಪರ ಪೂರಕವಾದ ಸಂಗತಿಯಾಗಿ ಕಾವ್ಯ ರಚನೆಯ ಪ್ರಕ್ರಿಯೆ ಅರ್ಥ ಪಡೆದುಕೊಳ್ಳುತ್ತದೆ.

  1. ಎಲ್. ಎಸ್. ಶಾಸ್ತ್ರಿ
- Advertisement -
- Advertisement -

Latest News

ಕವನ : ಹೀಗೇ ಒಮ್ಮೆ

ಹೀಗೇ ಒಮ್ಮೆ ____________ ಹೀಗೇ ಒಮ್ಮೆ ನಾನು ನೀನು ಅದೇ ಮರದ ನೆರಳಲಿ ಕುಳಿತು ಮಾತಾಡಬೇಕಿದೆ ನೆನಪಿಸಿಕೊಳ್ಳಬೇಕಿದೆ ಮತ್ತೆ ಹಳೆಯ ಕ್ಷಣಗಳ ಹಂಚಿಕೊಂಡ ಕಥೆ ಕವನ ಮಾತು ಚರ್ಚೆ ಸಂವಾದ ನಗೆ ಪ್ರೀತಿಯ ಸವಿಯ ಸವಿಯಬೇಕಿದೆ. ಆಗ ನಮ್ಮಿಬ್ಬರ ಮಧ್ಯೆ ಮೆರೆದ ಆದರ್ಶಗಳ ಮೆಲುಕು ಹಾಕಬೇಕಿದೆ ಅಂದು ಮಳೆಯಲ್ಲಿ ತಪ್ಪನೆ...
- Advertisement -

More Articles Like This

- Advertisement -
close
error: Content is protected !!
Join WhatsApp Group