ಸಿಂದಗಿ – ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಗುತ್ತಿಗೆದಾರ ಚೆಲುವರಾಜು ಎಂಬುವರ ಜೊತೆ ದೂರವಾಣಿ ಸಂಭಾಷಣೆಯಲ್ಲಿ ದಲಿತರಿಗೆ ಅತ್ಯಂತ ಕನಿಷ್ಠ ಪದಗಳನ್ನು ಬಳಕೆ ಮಾಡಿ ಜಾತಿನಿಂದನೆ, ಹೆಣ್ಣು ಮಕ್ಕಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಜೀವ ಬೆದರಿಕೆ ಹಾಕಿದ್ದಾರೆ. ದಲಿತ ವಿರೋಧಿ ಶಾಸಕರ ವಿರುದ್ಧ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಜಯಪುರ ಜಿಲ್ಲಾ ಸಂಘಟನಾ ಸಂಚಾಲಕ ಶರಣು ಸಿಂಧೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಕುರಿತು ಅವರು ಮಾತನಾಡಿ, ಶಾಸಕ ಮುನಿರತ್ನ ಅವರು ದಲಿತರ ವಿರೋಧಿಯಾಗಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಬ್ಬ ಜನಪ್ರತಿನಿಧಿಯಾಗಿ ಸಂವಿಧಾನದ ನಿಲುವಿನಲ್ಲಿ ಪ್ರಮಾಣವಚನವನ್ನ ಸ್ವೀಕರಿಸಿ ದಲಿತರ ಕುರಿತಾಗಿ ಅವಹೇಳನವಾಗಿ ಮಾತನಾಡಿದ್ದು ತೀವ್ರವಾಗಿ ಖಂಡಿಸುತ್ತೇವೆ. ಅವರು ಇನ್ನೂ ಅಸ್ಪೃಶ್ಯತೆಯನ್ನು ಜೀವಂತವಾಗಿ ಇಟ್ಟುಕೊಂಡಿದ್ದಾರೆ ಎನ್ನುವುದು ಅವರ ದೂರವಾಣಿ ಸಂಭಾಷಣೆಯಲ್ಲಿ ತಿಳಿದು ಬರುತ್ತದೆ. ಅವರ ದೃಷ್ಟಿಯಲ್ಲಿ ದಲಿತರು ಮುಂದೆ ಬರಬಾರದು , ಸಾಮಾಜಿಕ ವ್ಯವಸ್ಥೆಯಿಂದ ದಲಿತರು ದೂರ ಇರಬೇಕು ಎನ್ನುವುದು ಅವರ ನಿಲುವಾಗಿದೆ ಅವರ ವಿರುದ್ಧ ದಲಿತ ಸಂಘರ್ಷ ಸಮಿತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.