ಗಣೇಶ ಬಂದ; ಕಿರುಕಥಾ ಸ್ಪರ್ಧೆಯ ಕಥೆಗಳು

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ವಿಶ್ವ ಕನ್ನಡ ಸಾಹಿತ್ಯ, ಶಿವಮೊಗ್ಗ ಇವರಿಂದ ಏರ್ಪಡಿಸಲಾಗಿದ್ದ ಕಿರುಕಥೆ ಸ್ಪರ್ಧೆಗೆ ಬಂದಿದ್ದ ಕೆಲವು ಕಥೆಗಳು ಇಲ್ಲಿವೆ.

ಸ್ಪರ್ಧೆಗಾಗಿ ನೀಡಿದ್ದ ವಿಷಯ ” ಗಣೇಶ ಬಂದ “
ವಿವಿಧ ಲೇಖಕರ ಕಥೆಗಳು…


ಚೌತಿ ಹಬ್ಬ

ಅಂದು ಭಾದ್ರಪದ ಶುದ್ಧ ಚೌತಿಯ ದಿನ. ನನ್ನೂರ ಮನೆ ಮನೆಗಳಲ್ಲೂ ಊರಿನ ಬೀದಿಗಳಲ್ಲೂ ಗಣೇಶನನ್ನು ಕೂರಿಸುವ ಸಡಗರ ಮಕ್ಕಳಿಗೆ. ಹಂದರದ ಸಾಮಾನುಗಳು, ಅಲಂಕಾರಿಕ ವಸ್ತುಗಳು, ಹೂವು, ಹಣ್ಣು, ಇತ್ಯಾದಿ ಪೂಜಾ ಸಾಮಗ್ರಿಗಳನ್ನು ತಂದು ಜೋಡಿಸುವ ಸಂಭ್ರಮವೋ ಸಂಭ್ರಮ. ಯಾವುದೋ ಜಾತ್ರೆ ಇರುವುದೋ ಎಂಬ ಸಂಶಯ ಪಕ್ಕದೂರಿನವರಿಗೆ. ಕಾಡಿ – ಬೇಡಿ ತಂದ ವಸ್ತುಗಳನ್ನು ಜೋಪಾನ ಮಾಡುವ ಹೊಣೆ ನನ್ನದಾಗಿತ್ತು.

- Advertisement -

ಹಬ್ಬದ ದಿನ ಬಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆ,ಪೂಜೆ, ನೈವೇದ್ಯಗಳೆಲ್ಲ ಕ್ರಮವಾಗಿ ನಡೆದ ಮೇಲೆ ನನ್ನ ಗೆಳತಿ ಕಾಣೆಯಾಗಿ ಅದೊಂದು ಹಗರಣವಾಗಿ, ಕೊನೆಗೆ ಕತ್ತಲೆಯಲ್ಲಿ ದಾರಿತಪ್ಪಿ ( ನಮ್ಮೂರಿನಲ್ಲಿ ವಿದ್ಯುತ್ಚಕ್ತಿ ಇರಲಿಲ್ಲ ) ತೋಟದಲ್ಲಿ ಹೆದರಿ ಕುಳಿತಿದ್ದ ಅವಳನ್ನು ಮನೆ ಸೇರಿಸಿದ್ದಾಯಿತು.

ಅಂದಿನ ಆ ಘಟನೆ ಇಂದೂ ಕೂಡಾ ಗಣೇಶ ಬಂದ ಎಂದರೆ ನೆನಪಾಗಿ ಮನ ಮರುಗುತ್ತದೆ. ಅದನ್ನು ನೆನೆದು ನಾವು ನಗುತ್ತಾ ಎಲ್ಲ ಒಳ್ಳೆಯದನ್ನು ಮಾಡಿದ ವಿನಾಯಕನಿಗೆ ಚೆನ್ನಾಗಿ ಪೂಜಿಸಿ, ಭಕ್ತಿಯಿಂದ ನಮಿಸುತ್ತೇವೆ.

ಕೆ. ಟಿ. ಶ್ರೀಮತಿ, ಮೈಸೂರು
9945225958


ಕಾಣೆಯಾದ ಗಣೇಶ

ಗಣಪತಿ ಹೆಗಡೆಯವರ ಮನೆಯಲ್ಲಿ ಪ್ರತಿ ವರ್ಷ ದಂತೆ ಈ ವರ್ಷವೂ ಸಹ ಗಣಪತಿ ಮೂರ್ತಿ ಯನ್ನು ಸ್ವತಃ ತಾವೇ ತಯಾರಿಸಿ ಬಣ್ಣ ಹಚ್ಚಿ, ಕಣ್ಣುಗಳನ್ನು ಬರೆದು ಮಹಡಿಯ ಮೇಲೆ ಕಾಗದದಿಂದ ಮುಚ್ಚಿ ಇಟ್ಟಿದ್ದರು. ನಾಳೆ ಗಣೇಶ ಚತುರ್ಥಿ ಹಬ್ಬದ ‌ಆಚರಣೆಗಾಗಿ ಮನೆಯ ಜಗುಲಿಯಲ್ಲಿ ‌ಒಂದು ಅಂಕಣ ಪೂರ್ತಿ ಬಣ್ಣ ಬಣ್ಣದ ಪೇಪರ್ ನಲ್ಲಿ ಕಂಬಗಳನ್ನು ಅಲಂಕರಿಸಿ ಮಂಟಪ ತಯಾರಿ ಮಾಡಿ ಮುಗಿಯಿತು ಎಂದು ಹೆಗಡೆಯವರು ತಮ್ಮ ದೊಡ್ಡ ಮಗನನ್ನು ಕರೆದು “ಜಾಗಟೆ  ಬಾರಿಸುತ್ತಾ ಬಾ.

ನಾನು ಗಣೇಶನ ಮೂರ್ತಿಯನ್ನು ಕೆಳಗೆ ತಂದು ಮಂಟಪದಲ್ಲಿ ಇಡುತ್ತೇನೆ” ಅಂದಾಗ, ಮಗ ದತ್ತಾತ್ರೇಯ ಹೆಗಡೆ ಜಾಗಟೆ ಬಾರಿಸುತ್ತಾ ಬಂದರೆ, ಅಪ್ಪ ಗಣಪತಿಯನ್ನು ಆರತಿ ಬೆಳಗಿ  ಎತ್ತಿಕೊಂಡು ಕೆಳಗೆ ಬಂದು ಮಂಟಪದ ಮಧ್ಯದಲ್ಲಿ ಇಟ್ಟು, ನಂತರ “ಈಗ ಊಟ ಮಾಡಿ ಮಲಗೋಣ.ಬೆಳಿಗ್ಗೆ ಭಟ್ಟರು ಪೂಜೆಗೆ ಬರ್ತಾರೆ.

ಹೂವು, ಗರಿಕೆ, ಬಿಲ್ವಪತ್ರೆ ಕೊಯ್ದು ಇಡು”ಅಂದವರು ಊಟ ಮಾಡಿ ಮಲಗಿದರು. ಬೆಳಿಗ್ಗೆ ಎಲ್ಲರೂ ಸ್ನಾನ ಸಂಧ್ಯಾವಂದನೆ ಮಾಡಿ ಪುರೋಹಿತರು ಬರುವ ಹೊತ್ತಿಗೆ ಎಲ್ಲಾ ತಯಾರಿ ಮಾಡಲು ಮಂಟಪದ ಬಳಿ ಹೋಗಿ ನೋಡಿದರೆ ಅಲ್ಲಿ ಗಣೇಶ ಕಾಣೆಯಾಗಿದ್ದ. “ಅರೇ ಏನಿದು? ಗಣಪತಿ ಕಾಣಿಸ್ತಾ ಇಲ್ಲ.ರಾತ್ರಿ ಇಲ್ಲೇ ಇಟ್ಟು ಮಲಗಿದ್ನಲ್ಲ? ದತ್ತು,ಎಲ್ಲಿ ಹೋಯಿತೋ” ಅಂತಾ ಜೋರಾಗಿ ಕೂಗಿದಾಗ ಮನೆ ಜನರೆಲ್ಲ ಓಡಿ ಬಂದು ಹುಡುಕಾಡತೊಡಗಿದರು.ಮನೆಯೆಲ್ಲಾ ಹುಡುಕಿದರೂ ಗಣಪತಿ ಎಲ್ಲೂ ಕಾಣಿಸಲಿಲ್ಲ.

ಅಷ್ಟರಲ್ಲಿ ತೋಟಕ್ಕೆ ಹೋಗಿದ್ದ ದತ್ತಾತ್ರೇಯ ಮನೆಗೆ ಬಂದ.ಆಗ ಹೆಗಡೆಯವರು ಅವನನ್ನು ದ್ದೇಶಿಸಿ”ಏ ದತ್ತು ಗಣಪತಿ ಮೂರ್ತಿ ಎಲ್ಲಿ ಹೋಯಿತು?”ಎಂದು ಗಾಬರಿಯಿಂದ ಕೇಳಿದಾಗ,”ಅಪ್ಪ, ನೀವೇನು ಗಾಬರಿ ಪಡುವುದು ಬೇಡ.ನಾನೇ ಮಂಟಪದ ಹಿಂದೆ ಅಡಗಿಸಿ ಇಟ್ಟಿದ್ದೇನೆ.ಯಾಕೆಂದರೆ,ಇಲಿ ಏನಾದರೂ ಬಂದು ಅಲುಗಾಡಿಸಿ ಬಿಟ್ಟರೆ, ಅಂತಾ ತೆಗೆದಿಟ್ಟೆ”ಎಂದು ಗಣಪತಿ ಮೂರ್ತಿ ಯನ್ನು ತಂದು ಕೊಟ್ಟ.ಅದನ್ನು ಮಂಟಪದಲ್ಲಿ ಇಟ್ಟು ಪೂಜೆ ಮಾಡಲುಸಿದ್ಧತೆಗಾಗಿ ಈಗ
ಮನೆಯವರೆಲ್ಲರೂ ಖುಷಿಯಿಂದ ಅಣಿಯಾದರು.

ಮಂಜುನಾಥ ಗಣಪತಿ ಹೆಗಡೆ
ಚಿಕ್ಕಬಳ್ಳಾಪುರ


ಉತ್ಸಾಹಿ ತಂಡ..

ಕೆಲವು ವರ್ಷಗಳಿಂದ ಆ ವಠಾರದ ಮಕ್ಕಳಲ್ಲಿ ಒಂದು ಮಹದಾಸೆ ಇತ್ತು. ನಾವು ಕೂಡಾ ಚೌತಿಯ ದಿನ ಗಣಪತಿ ವಿಗ್ರಹ ತಂದು ಪೂಜಿಸಬೇಕೆಂದು. ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿದ್ದ ಅಲ್ಲಿ ಅದಕ್ಕಾಗಿ ಹಣ ಹೊಂದಿಸುವುದು ಕೂಡಾ ಸಮಸ್ಯೆಯಾಗಿತ್ತು.

ಗಣೇಶ, ಮಹೇಶ, ದಿನೇಶ, ಸುಕನ್ಯಾ, ಸುಮತಿ, ಶೋಭಾ, ವಿನಯ, ಅನಂತು, ಅರುಣ, ಕಿರಣ ಹೀಗೆ ಎಲ್ಲರೂ ಒಂದೆಡೆ ಕೂತು ಯೋಚಿಸಿದರು, ಎಲ್ಲರೂ ತಮ್ಮಲ್ಲಿ ಕೂಡಿಟ್ಟ ಹಣವನ್ನು ಒಟ್ಟುಗೂಡಿಸಿ ಹೊಂದಿಸುವುದೆಂದು ಮಾತಾಡಿಕೊಂಡರು. ಅಕ್ಕ ಪಕ್ಕದ ಮನೆಯಲ್ಲಿ ವಂತಿಗೆ ಮಾಡಿದರು ಆ ಬೀದಿಯಲ್ಲಿ ಒಂದು ಪ್ರಶಸ್ತ ಸ್ಥಳ ಹುಡುಕಿ ಎಲ್ಲರೂ ಕೂಡಿ ನೆಲ ಹದಗೊಳಿಸಿ ನೀರು ಚಿಮುಕಿಸಿ ಗುಡಿಸಿ ಚೊಕ್ಕಟ ಗೊಳಿಸಿ ಅಗತ್ಯ ವಸ್ತುಗಳನ್ನು ತಂದು ಮಂಟಪ ಕಟ್ಟಿದರು.

ಮಕ್ಕಳ ಪರಿಶ್ರಮಕ್ಕೆ ಹಿರಿಯರು ಕೈ ಜೋಡಿಸಿದರು. ಮುಂಜಾನೆಯೇ ಶೂಚಿರ್ಭೂತರಾಗಿ ಎಲ್ಲರೂ ಕೂಡಿ ಜೈಕಾರದೊಂದಿಗೆ ಪುಟ್ಟದಾದ ಮಣ್ಣಿನ ಗಣಪನ ವಿಗ್ರಹ ತಂದು ಅಲಂಕರಿಸಿದ ಮಂಟಪದಲ್ಲಿ ಇರಿಸಿ ಪೂಜಿಸಿ ಗಣಪನ ಕೃಪೆಗೆ ಪಾತ್ರರಾದರು…

ಒಬ್ಬನ ತಾಯಿ ರಂಗೋಲಿ ಇಟ್ಟು ಪೂಜೆಯ ತಯ್ಯಾರಿ ಮಾಡಿಕೊಟ್ಟರು… ಒಬ್ಬರು ಹೂ ಪತ್ರೆಯ ಜವಾಬ್ದಾರಿ ನಿರ್ವಹಿಸಿದರು. ಇನ್ನೊಬ್ಬರು ಮಡಿಯಲ್ಲಿ ನೈವೇದ್ಯಕ್ಕೆ ಅಣಿಗೊಳಿಸಿದರು ಒಬ್ಬ ಮಗುವಿನ ತಂದೆ ಪೂಜೆಯ ಉಸ್ತುವಾರಿ ವಹಿಸಿಕೊಂಡರು. ಮಕ್ಕಳೆಲ್ಲರೂ ಸೇರಿ ಪ್ರಸಾದದ ಪೊಟ್ಟಣಗಳನ್ನು ಸಿದ್ಧಪಡಿಸಿದರು.

ಸಂಜೆ ಹೊತ್ತಿಗೆ ಭಕ್ತಿಗೀತೆ ಹಾಡು, ಮುಂತಾದ ಪ್ರತಿಭೆಯ ಪ್ರದರ್ಶನ ಮಾಡಿದರು. ರಾತ್ರಿ ಪೂಜೆ ಮಾಡಿ ವಿಘ್ನ ವಿನಾಯಕನನ್ನು ಭಕ್ತಿ ಭಾವದಿಂದ ಬೀಳ್ಕೊಟ್ಟರು ಅಂದು ಆ ಬೀದಿಯಲ್ಲಿ ಆರಂಭ ಗೊಂಡ ಗಣೇಶನ ಉತ್ಸವ ಈಗಲೂ ಮುಂದುವರೆದಿದೆ..

ಆ ಮಕ್ಕಳೆಲ್ಲರೂ ದೊಡ್ಡವರಾಗಿದ್ದರೂ ಈಗಿನ ಉತ್ಸಾಹಿ ತಂಡಕ್ಕೆ ಸಹಾಯ ಮಾಡುತ್ತಿದ್ದಾರೆ

ಉಷಾ ದಿನೇಶ್
ಶಿವಮೊಗ್ಗ


ಗಣಪತಿ ಹಬ್ಬ

ಗಣಪತಿ ಹಬ್ಬ ನನ್ನ ಬಾಲ್ಯದ ಸವಿನೆನಪುಗಳಲ್ಲಿ ಪ್ರಮುಖವಾದದ್ದು. ಹಿಂದಿನ ದಿನ ಗಣಪತಿ ಕೂರಿಸುವ ಸ್ಥಳವ ಸ್ವಚ್ಛಗೊಳಿಸಿ, ಚಪ್ಪರ ಹಾಕಿ, ಚಂಡುಹೊಗಳನ್ನು ಪೋಣಿಸುತ್ತಿದ್ದೆವು. ಎಲ್ಲರೂ ಸಂತಸದಿ ಹರಟೆ ಹೊಡೆಯುತ್ತಾ ರಾತ್ರಿ 11 ವರೆಗೂ ಕೆಲಸ ಮಾಡುತ್ತಿದ್ದೆವು. ಹಬ್ಬದ ದಿನ ಅಂಗಳಕ್ಕೆ ನೀರು ಹಾಕಿ, ಕಸಗೂಡಿಸಿ, ರಂಗೋಲಿ ಬಿಡುತ್ತಿದ್ದೆವು.

ಬೆಳಗ್ಗೆಯಿಂದ ಆಟ ಆಡುತ್ತಾ ಕುಣಿದು ಕುಪ್ಪಳಿಸಿದರೆ, ಸಂಜೆ ಪ್ರಸಾದ ಹಂಚಿದ ನಂತರ ಸಿನಿಮಾ ಹಾಡುಗಳಿಗೆ ನೃತ್ಯಮಾಡಿ, ದೊಡ್ಡ ಪರದೆಯ ಮೇಲೆ ಚಂದದ ಸಿನಿಮಾ ನೋಡುತ್ತಿದ್ದೆವು. ಆಗ ನಮ್ಮೂರಿನ ಎಲ್ಲರ ಮನೆಯಲ್ಲೂ TV ಇರಲಿಲ್ಲ. ಗಣೇಶನ ವಿಸರ್ಜಿಸುವ ದಿನ ಊರಿಗೆಲ್ಲಾ ಊಟ ಹಾಕಿಸಿ, ನೃತ್ಯ ಮಾಡಿದ ಮಕ್ಕಳಿಗೆ ಬಹುಮಾನ ಕೊಡುತ್ತಿದ್ದರು.ಅಂದು ಯಾರ ಮನೆಯಲ್ಲೂ ಒಲೆಗೆ ಬೆಂಕಿ ತೋರುತ್ತಿರಲಿಲ್ಲ…

ಹೀಗೆ ಒಮ್ಮೆ ಹಬ್ಬದ ಸಮಯದಲ್ಲಿ ನನ್ನ ಗೆಳತಿಯೊಂದಿಗೆ ದನ ನೀರು ಕುಡಿಯುವ ತೊಟ್ಟಿ ಕಟ್ಟೆಯ ಮೇಲೆ ಪ್ರದಕ್ಷಿಣೆ ಹಾಕುತ್ತಿದ್ದೆ.ನೀರು ತುಂಬಿದ್ದರಿಂದ ಜಾರಿ ತೊಟ್ಟಿಯೊಳಗೆ ಬಿದ್ದಿದ್ದೆ. ಗೆಳತಿಯ ಸಹಾಯದಿಂದ ಮೇಲೆ ಬಂದು ಬಟ್ಟೆ ಒಣಗುವವರೆಗೂ ಮನೆಕಡೆ ಮುಖಮಾಡಿರಲಿಲ್ಲ. ಅಮ್ಮನಿಗೆ ಗೊತ್ತಾಗಿದ್ದರೆ ಮಂಗಳಾರತಿ ಖಾಯಂ ಆಗಿರುತ್ತಿತ್ತು. ಆ ಘಟನೆಯನ್ನು ಎಂದಿಗೂ ಮರೆಯಲಾರೆ….

ಗೀತಾಂಜಲಿ


ಸವಿ ನೆನಪು

ಗಣೇಶ ಚತುರ್ಥಿ ಎಂದರೆ ಮನದಲ್ಲಿ ಖುಷಿಯ ಆಹ್ಲಾದ… ಸಂಭ್ರಮ, ಸಡಗರಗಳ ಮೇಳ…. ಆಹ್ಲಾದದ ಮೆರವಣಿಗೆ. ಬಾಲ್ಯದoಗಳದಲ್ಲಿ ಹಾಡಿ, ನಲಿದಾಡಿ, ಪಟಾಕಿ ಹಚ್ಚುತ್ತ, ವಿಧ ವಿಧ ಕಜ್ಜಾಯಗಳನ್ನು ಮೆಲ್ಲುತ್ತ ಸಂಭ್ರಮಿಸಿದ ದಿನಗಳಿನ್ನೂ ಹಸಿರು ಹಸಿರು…ನಮ್ಮೂರು ಮಲೆನಾಡ ಮಡಿಲಿನ ಪುಟ್ಟ ಹಳ್ಳಿ. ಗೌರಿ ಗಣೇಶ ಹಬ್ಬಕ್ಕೆ ನಾವು “ಚೌತಿ ಹಬ್ಬ” ಎಂದೇ ಕರೆಯುತ್ತಿದ್ದುದು. ಈ ಚೌತಿ ಹಬ್ಬದ ಸಂದರ್ಭದಲ್ಲಿ ಸವಿ ನೆನಪಿನ ಕಚಗುಳಿಯೊಂದು ಮೈಮನಗಳಲ್ಲಿ ಸುಳಿಯುತ್ತಿದೆ.

ನಮ್ಮೂರಿನಲ್ಲಿ ಹಬ್ಬದ ಇನ್ನೊಂದು ವಿಶೇಷವೆಂದರೆ ಗಣೇಶನ ಮಂಟಪದ ಮುಂದೆ ವಿವಿಧ ಹೂ, ಹಣ್ಣು, ತರಕಾರಿಗಳನ್ನು ತೋರಣದಂತೆ ಕಟ್ಟಿ ಅಲಂಕರಿಸುತ್ತಾರೆ. ಇದನ್ನು “ಫಲವಳಿಗೆ” ಎಂದು ಕರೆಯುತ್ತಾರೆ.ಗಣೇಶ ಪ್ರಕೃತಿ ಪ್ರಿಯ. ಆದಕಾರಣ ಗಜಮುಖನ ಪೂಜೆಯಲ್ಲೂ ಪ್ರಕೃತಿ ಜನ್ಯ ಹೂ ಹಣ್ಣುಗಳನ್ನು ಸಮರ್ಪಿಸುವುದು ಒಂದು ಸಂಪ್ರದಾಯ.ಈ ಫಲವಳಿಗೆಗಾಗಿ ಬೆಟ್ಟ ಗುಡ್ಡಗಳನ್ನು ತಿರುಗಾಡಿ ಕೆಲವು ವಿಶಿಷ್ಟ ಹೂ ಮತ್ತು ಪರ್ಣಗಳನ್ನು ಆಯ್ದು ತರುವುದು ವಾಡಿಕೆ.

ಆಗ ನಾನಿನ್ನೂ ಆರನೇ ತರಗತಿಯಲ್ಲಿ ಓದುತ್ತಿದ್ದೆ. ನಾವೆಲ್ಲ ಗೆಳತಿಯರು ಮನೆಯಲ್ಲಿ ಯಾರಿಗೂ ತಿಳಿಸದೇ ಈ ಫಲವಳಿಗೆಗಾಗಿ ಬೆಟ್ಟ ಗುಡ್ಡಗಳನ್ನು ತಿರುಗಾಡಲು ಹೊರಟೆವು. ಗೆಳತಿಯರೆಲ್ಲ ಸೇರಿದ ಮೇಲೆ ಕೇಳಬೇಕೇ! ಅದೂ ಇದೂ ಹರಟುತ್ತ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಸಾಗಿದೆವು.

ಚೌತಿಯ ಸಂದರ್ಭದಲ್ಲಿ ಮಾತ್ರ ಕಾಣಸಿಗುವ ಗೌರಿ ಹೂವು, ಗಂಗಮ್ಮನ ಹರಳು, ಕರಕೆ ಜಡ್ಡು, ಗೌರಿ ಮುತ್ತು…. ಹೀಗೆ ಇನ್ನೂ ಹಲವಾರು ಹೂವು, ಹಣ್ಣು, ಎಲೆಗಳನ್ನು ಆಯುತ್ತ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಇತ್ತ ಶಾಲೆಗೆ ಹೋದ ಮಕ್ಕಳು ಇನ್ನೂ ಮನೆಗೆ ಬಂದಿಲ್ಲವೆಂದು ನಮ್ಮೆಲ್ಲರ ಮನೆಯವರು ಗಾಬರಿಯಾಗಿದ್ದರು. ಶಾಲೆ ಹಾಗೂ ನಾವು ಹೋಗಬಹುದಾಗಿದ್ದ ಎಲ್ಲಾ ಸ್ಥಳಗಳನ್ನು ಹುಡುಕಿ ಸುಸ್ತಾಗಿದ್ದರು. ಅಂತೂ ಇಂತೂ ನಮ್ಮ ವನವಿಹಾರವನ್ನು ಮುಗಿಸಿ ಮನೆಗೆ ಹಾಜರಾದಾಗ ಮನೆಯವರಿಗೆ ಹೋದ ಜೀವ ಮರಳಿ ಬಂದಂತಾಯಿತು.

ಆದರೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಮಗೂ ಸಹ ವಿಶೇಷ ಮಂಗಳಾರತಿ, ಮಂತ್ರಾಕ್ಷತೆಗಳೂ ಆಯಿತೆನ್ನಿ! ನಂತರ ಹಬ್ಬ ಸಂಭ್ರಮದಿಂದಲೇ ನೆರವೇರಿತು. ಇಂದಿಗೂ ಗಣೇಶ ಚತುರ್ಥಿ ಬಂತೆಂದರೆ ಈ ಸವಿ ನೆನಪು ಮತ್ತೆ ಮತ್ತೆ ಮನಃಪಟಲದಲ್ಲಿ ಚಿತ್ತಾರವಾಗಿ ಮೂಡುತ್ತದೆ.

ಶ್ರೀಮತಿ ಯಶಸ್ವಿನಿ ಶ್ರೀಧರ ಮೂರ್ತಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!