ಬೀದರ – ಕಳೆದ ೩೮ ವರ್ಷಗಳಿಂದ ಬೀದರ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ ಒಂದೇ ಆಡಳಿತ ಮಂಡಳಿ ಸರ್ವಾಧಿಕಾರ ಮಾಡುತ್ತ ಬಂದಿದೆ. ಇಲ್ಲಿ ಬದಲಾವಣೆ ಆಗಬಾರದಾ ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರಶ್ನೆ ಮಾಡಿದರು.
ಸಹಕಾರ ಚುನಾವಣೆ ಹೋಗಿ ಸಾಹುಕಾರ ಚುನಾವಣೆ ಆಗಿದೆ ಎಂಬ ಕೇಂದ್ರ ಸಚಿವ ಖೂಬಾ ಹೇಳಿಕೆ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ೩೮ ವರ್ಷಗಳಿಂದ ಬ್ಯಾಂಕ್ ಗೆ ಒಮ್ಮೆಯಾದರೂ ಚುನಾವಣೆ ನಡೆದಿದೆಯಾ. ತಮಗೆ ತಾವೇ ಸರ್ವಾಧಿಕಾರದಂತೆ ಆಯ್ಕೆ ಆಗುತ್ತ ಬಂದಿದ್ದಾರೆ. ನಾವು ಯಾರೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ.
ಈ ಸಲ ಡಿಸಿಸಿ ಬ್ಯಾಂಕ್‌ನ ಮತದಾರರು ಯಾರಿಗೆ ಮತ ಹಾಕಬೇಕು ಅನ್ನೋದನ್ನ ತೀರ್ಮಾನ ಮಾಡಿದ್ದಾರೆ. ಖಂಡಿತವಾಗಿ ಈ ಬಾರಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗುತ್ತದೆ ಎಂದರು.
ಕೈಲಾಗದವನು ಮೈ-ಕೈ ಪರಚಿಕೊಂಡಂತೆ ಆಗಿದೆ ಭಗವಂತ ಖೂಬಾ ಅವರ ಪರಿಸ್ಥಿತಿ. ಸಕ್ಕರೆ ಕಾರ್ಖಾನೆಗಳು ಬಂದ್ ಆಗಲಿಕ್ಕೆ ಭಗವಂತ ಖೂಬಾನೇ ಕಾರಣ. ಸುಳ್ಳು ಹೇಳುವುದರಲ್ಲಿ ಖೂಬಾ ನಿಸ್ಸೀಮರು ಎಂದು ಸಚಿವ ಖಂಡ್ರೆ ವ್ಯಂಗ್ಯವಾಡಿದರು.
ಪಾಟೀಲ ಕುಟುಂಬದಲ್ಲಿ ಒಡಕು ಮೂಡಿಸಿದ್ದಾರೆ ಎಂದೆಲ್ಲ ಖೂಬಾ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಕಿಂಚಿತ್ತಾದರೂ ಸತ್ಯ ಹೇಳುವ ನೈತಿಕತೆ ಇದ್ದರೆ ಅದನ್ನು ಸಾಬೀತು ಪಡಿಸಬೇಕು. ದಿನಬೆಳಗಾದ್ರೆ ಅವರ ವಿರುದ್ದ ಸ್ವಪಕ್ಷದವರೇ ಆರೋಪ ಮಾಡ್ತಾರೆ. ಭಗವಂತ ಖೂಬಾನಂತಹ ನಿರ್ಲಜ್ಜ ವ್ಯಕ್ತಿಯನ್ನು ನಾನು ನೋಡೆ ಇಲ್ಲಾ. ಭಗವಂತ ಖೂಬಾಗೆ ವಿನಾಶ ಕಾಲೇ ವಿಪರೀತ ಬುದ್ದಿ ಬಂದಿದೆ. ಅವರ ನೇತ್ರತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನೆಡೆ ಆಗ್ತಿದೆ, ಹಾಗಾಗಿ ಈ ರೀತಿ ಹೇಳ್ತಿದ್ದಾರೆ. ಜಿಲ್ಲೆಯ ಅಭಿವೃದ್ದಿಗಾಗಿ ಎಲ್ಲರು ಒಮ್ಮತದ ನಿರ್ಧಾರ ಮಾಡಿ ಚುನಾವಣೆಗೆ ಹೋಗಿದ್ದೇವೆ.
ವಿಮಾ ಕಂಪನಿಯೊಂದಿಗೆ ನಾನು ಶಾಮೀಲಾಗದ್ದೇನೆ ಅಂತಾ ಖೂಬಾ ಒಪ್ಪಿಕೊಳ್ಳಲಿ. ಸಂಸದರಾಗಿ ಒಮ್ಮೆಯಾದರೂ ರೈತರ ಬೆಳೆ ವಿಮೆ ಬಗ್ಗೆ ಅವರು ಮಾತನಾಡಿದ್ದಾರಾ ? ೧೫ ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಬರಬೇಕಾದ ಅನುದಾನ ಬಂದಿಲ್ಲಾ. ಅದರ ಬಗ್ಗೆ ಒಮ್ಮೆಯಾದರೂ ಮಾತನಾಡಿದ್ದಾರಾ..?ಸಂಸದರಾಗಲು ಭಗವಂತ ಖೂಬಾ ಯೋಗ್ಯರಾಗಿದ್ದಾರಾ..? ಎಂದು ತೀವ್ರ ವಾಗ್ದಾಳಿ ನಡೆಸಿದರು.
ಖೂಬಾ ಅವರು ಬರ, ಕೋರೊನಾ, ಬಂದಾಗ ಬಾಯಿ ಬಿಚ್ಚಿಲ್ಲಾ. ನೀವು ಸಂಸದರಿದ್ದೀರಾ ಅಥವಾ ಮೋದಿ ಮುಂದೆ ಹೋಗಿ ಸೆಲ್ಯೂಟ್ ಮಾಡಿ ಬರ್ತಿರಾ ಎಂದು ಖಂಡ್ರೆ ಕಿಡಿನುಡಿದರು
ನಾನು ರಾಜಶೇಖರ ಪಾಟೀಲ್, ರಹೀಂ ಖಾನ್ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದ ಖಂಡ್ರೆ, ಡಿಸಿಸಿ ಬ್ಯಾಂಕ್ ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ನಾಗಮಾರಪಳ್ಳಿ ಕುಟುಂಬದ ಜೊತೆ ಆತ್ಮೀಯತೆ ಇರುವ ಹಾಗೆ ಖೂಬಾ ಮಾತಾಡ್ತಿದಾರೆ. ಆದ್ರೆ ವಿಧಾನಸಭೆ ಚುನಾವಣೆಯಲ್ಲಿ ನಾಗಮಾರಪಳ್ಳಿ ಕುಟುಂಬಕ್ಕೆ ಟಿಕೆಟ್ ತಪ್ಪಿಸಿದ್ದು ಯಾರು.?ಎಂದು ಕೇಳಿದರು.
ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಈ ರೀತಿ ವರ್ತಿಸುತ್ತಿದಾರೆ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದರು.
ವರದಿ: ನಂದಕುಮಾರ ಕರಂಜೆ, ಬೀದರ