ಬೆಂಗಳೂರು: ನಗರದ ಬನಶಂಕರಿ 3 ನೆ ಹಂತ ದಲ್ಲಿರುವ ಜನತಾ ಬಜಾರ್ ನಲ್ಲಿರುವ ಶ್ರೀ ಲಕ್ಷ್ಮೀ ವರಾಹ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನೆಲೆಸಿರುವ ಶ್ರೀ ಶ್ರೀನಿವಾಸನ ಸನ್ನಿಧಿಯಲ್ಲಿ ಶುಭಕೃತ್ ನಾಮ ಸಂವತ್ಸರ ಯುಗಾದಿ ಸಂಭ್ರಮದಲ್ಲಿ ನೂರಾರು ಭಕ್ತರು ದೇವರಿಗೆ ವಿವಿಧ ಸೇವೆ ಸಲ್ಲಿಸಿದರು.
ಶ್ರೀ ಲಕ್ಷ್ಮೀ ವರಾಹ ವೆಂಕಟೇಶ್ವರ ಸ್ವಾಮಿ ಸನ್ನಿಧಿ ಯಲ್ಲಿ ನೆಲೆಸಿರುವ ಶ್ರೀನಿವಾಸನ ಸನ್ನಿಧಿ ಯಲ್ಲಿ ಏಪ್ರಿಲ್ 2 ರ ಶನಿವಾರ ಯುಗಾದಿಯ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳ್ಳಂಬೆಳಗ್ಗೆಯೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸರದಿ ಸಾಲಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂತು.
ಬೆಳಿಗ್ಗೆ ಸುಪ್ರಭಾತ,ನಿತ್ಯಗಟ್ಟಲೆ ಹವಿರ್ನಿವೇದನ ಮತ್ತು ದಿವ್ಯ ದರ್ಶನ, ಮಹಾ ಮಂಗಳಾರತಿ, ಭಗವಂತನ ಉತ್ಸವ, ಜೊತೆ ಜೊತೆಯಲ್ಲಿ ಅರ್ಚನೆ ಪೂಜೆ ಸಲ್ಲಿಸಿ, ರಾತ್ರಿ ಯವರೆಗೆ ಭಗವಂತನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ದೇವಸ್ಥಾನದ ಪ್ರಧಾನ ಅರ್ಚಕರಾದ ಅಗರಂ ರಮೇಶ್ ರವರು ಶ್ರೀ ಲಕ್ಷ್ಮೀ ವರಾಹಸ್ವಾಮಿ ಮತ್ತು ಶ್ರೀನಿವಾಸನಿಗೆ ವೈಭವಪೋತವಾಗಿ ಅಲಂಕಾರ ಮಾಡಿದ್ದರು. ಅವರ ಸುಪುತ್ರ ಕೃಷ್ಣ ಅವರು ಭಗವಂತನಿಗೆ ಮಹಾಮಂಗಳಾರತಿ ನೆರವೇರಿಸಿ ಬಂದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿದರು.
ಶ್ರೀ ಲಕ್ಷ್ಮೀ ವರಾಹ ವೆಂಕಟೇಶ್ವರ ಸ್ವಾಮಿ ಸನ್ನಿಧಿ ಬಗ್ಗೆ:
30-32 ವರುಷಗಳಿಂದ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಯುಗಾದಿಯನ್ನು ವೈಭವದಿಂದ ಆಚರಿಸಿ ಕೊಂಡು ಬರುತ್ತಿದ್ದು, ಬೆಂಗಳೂರು ನಗರದ ಬನಶಂಕರಿ 3 ನೆ ಹಂತದ ಜನತಾ ಬಜಾರ್ ನಲ್ಲಿ ಇರುವ ಶ್ರೀ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮೀ ವರಾಹ ಸ್ವಾಮಿ, ಶ್ರೀ ರಂಗನಾಥ ಸ್ವಾಮಿ, ಶ್ರೀ ಗೋದಾ ಲಕ್ಷ್ಮೀ ( ಅಂಡಾಳ) ಸನ್ನಿಧಿ, ಶ್ರೀ ವಿಖನಸಾಚಾರ್ಯರ ಸನ್ನಿಧಿ, ಶ್ರೀ ಗೋವಿಂದ ರಾಜರ ಸನ್ನಿಧಿ, ಗಣಪತಿ, ಅಂಜನೇಯ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮತ್ತು ನವಗ್ರಹ ಸನ್ನಿಧಾನವಿದೆ.
ಶುಭಕೃತ್ ನಾಮ ಸಂವತ್ಸರ ಯುಗಾದಿ:
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ, ಹಿಂದೂಗಳ(Hindus major festival) ಹೊಸ ವರ್ಷ ಶುಭಕೃತ್ ನಾಮ ಸಂವತ್ಸರ ಯುಗಾದಿ(Ugadi) ಇಂದು ನಾಡಿನಾದ್ಯಂತ ಸಂಭ್ರಮ ಮನೆ ಮಾಡಿತ್ತು . ಹಿಂದೂಗಳ ಪಾಲಿನ ಅತಿದೊಡ್ಡ ಹಬ್ಬದ ಕಳೆ ಕಟ್ಟಿದೆ, ಇಂದು ಮುಂಜಾನೆ ಕೂಡ ಮಾರುಕಟ್ಟೆಗಳಲ್ಲಿ ಜನರು ಹೂವು ಹಣ್ಣು, ತರಕಾರಿ, ಯುಗಾದಿ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುವುದು ಕಂಡುಬಂತು.
ಯುಗಾದಿಯನ್ನು ಮುಖ್ಯವಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಪೂಜೆ-ಪುನಸ್ಕಾರ, ದೇವರಿಗೆ ಅಲಂಕಾರ, ನೈವೇದ್ಯ, ರುಚಿಕರವಾದ ಊಟ-ತಿಂಡಿ ಯುಗಾದಿ ಹಬ್ಬದ ವಿಶೇಷತೆಗಳು. ಹಿಂದೂ ಚಾಂದ್ರಮಾನ ಕ್ಯಾಲೆಂಡರ್ನ ಪ್ರಕಾರ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಸಾಮಾನ್ಯ ಮಾರ್ಚ್ ತಿಂಗಳಾಂತ್ಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತೇವೆ ಎನ್ನುತ್ತಾರೆ ಅಗರಂ ರಮೇಶ್, ದೇವಸ್ಥಾನದ ಪ್ರಧಾನ ಅರ್ಚಕರು.
ಬರಹ – ತೀರ್ಥಹಳ್ಳಿ ಅನಂತ ಕಲ್ಲಾಪುರ
ಚಿತ್ರ ಕೃಪೆ – ಮಹೇಶ್ , ಮಂಜುನಾಥ ಸ್ಟುಡಿಯೋ