ಸಿಂದಗಿ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಖಾಸಗಿ ಆಸ್ಪತ್ರೆಗಳಲ್ಲಿ ನಕಲಿ ಸ್ಟಾಫ್ ನರ್ಸಗಳ ಹಾವಳಿ ಹೆಚ್ಚಾಗಿದ್ದು, ಕೂಡಲೆ ಇವರುಗಳಿಗೆ ಕಡಿವಾಣ ಹಾಕಬೇಕು ಎಂದು ಕುರಬ ಸಮಾಜದ ಕಾರ್ಯಾಧ್ಯಕ್ಷ ಸುದರ್ಶನ ಜಂಗಣ್ಣಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕೋವಿಡ್ ನಂಥ ಪರಿಸ್ಥಿತಿಯಲ್ಲಿ ತಾಲೂಕಿನಲ್ಲಿ ವೈದ್ಯರ ಸೇವೆ ಅನನ್ಯವಾಗಿದೆ. ಆದರೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ಜನರು ಯಾವುದೆ ರೀತಿಯ ಸ್ಟಾಫ್ ನರ್ಸ್ ಶಿಕ್ಷಣವನ್ನು ಮುಗಿಸದೆ ರಾಜಾರೋಷವಾಗಿ ಆಸ್ಪತ್ರೆಗಳಲ್ಲಿ ಅಲ್ಲದೆ ಕೆಲವು ರೋಗಿಗಳ ಮನೆ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿರುವುದು ಕಂಡುಬರುತ್ತಿದೆ, ಮೊದಲೇ ಪುನಿತ ರಾಜಕುಮಾರ ಸಾವಿನ ಬಳಿಕ ಜನತೆ ಭಯ ಭೀತರಾಗಿದ್ದು, ಸಣ್ಣ ಪುಟ್ಟ ಸಮಸ್ಯೆಗಳು ಕಾಣಿಸಿಕೊಂಡರು ವೈದ್ಯರ ಬಳಿ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಕೆಲವು ನಕಲಿ ವೈದ್ಯರು ಮತ್ತು ಕೆಲವು ನಕಲಿ ಸ್ಟಾಫ್ ನರ್ಸಗಳು ಜನರ ಹತ್ತಿರ ಸುಲಿಗೆಗೆ ಇಳಿದಿದ್ದಾರೆ. ಕೂಡಲೆ ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗಳು ಮತ್ತು ಸರ್ಕಾರ ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.