ಮೂಡಲಗಿ – ಕಳೆದ ಕೆಲವು ದಿನಗಳಿಂದ ಮೂಡಲಗಿ ಪುರಸಭೆಯ ಮುಖ್ಯಾಧಿಕಾರಿಗಳು ಅನಾರೋಗ್ಯದ ನಿಮಿತ್ತ ಕೆಲಸಕ್ಕೆ ಗೈರಾಗಿರುವುದರಿಂದ ಸಾರ್ವಜನಿಕರ ಯಾವುದೇ ಕೆಲಸಗಳು ಮುಂದೂಡಲ್ಪಡುತ್ತಿದ್ದು ಕೊರೋನಾ ಲಾಕ್ ಡೌನ್ ಸಮಯದಲ್ಲಿ ಜನರು ಪುರಸಭೆಗೆ ಎಡತಾಕುವಂಥ ಪರಿಸ್ಥಿತಿ ಉಂಟಾಗಿದೆ.
ಉತಾರ, NOC ಸೇರಿದಂತೆ ಯಾವುದೇ ಕೆಲಸಗಳಿಗೆ ಇಲ್ಲಿನ ಸಿಬ್ಬಂದಿ ಮುಖ್ಯಾಧಿಕಾರಿಗಳು ಇಲ್ಲದ್ದನ್ನೇ ಕಾರಣ ಹೇಳುತ್ತಿರುವುದರಿಂದ ಅನಿವಾರ್ಯವಾಗಿ ಕೆಲಸ ಕಾರ್ಯಗಳು ನಿಂತುಹೋಗಿವೆ.
ಸುಮಾರು ಎಂಟ್ಹತ್ತು ದಿನಗಳಿಂದ ಈ ವರದಿಗಾರ ಪುರಸಭೆಗೆ ಎಡತಾಕುತ್ತಿದ್ದರೂ ಒಂದು ಶೆಡ್ ಗೆ ಉತಾರ ಹಾಗೂ NOC ತೆಗೆದುಕೊಳ್ಳಲಾಗುತ್ತಿಲ್ಲ. ಕಾರಣ ಇಲ್ಲಿನ ಆರೋಗ್ಯಾಧಿಕಾರಿಗಳೂ ಹಾಗೂ ನಿರ್ವಹಣಾಧಿಕಾರಿಗಳೂ ಯಾವುದೇ ಜವಾಬ್ದಾರಿ ಹೊರದೇ ಮುಖ್ಯಾಧಿಕಾರಿಗಳು ಬಂದ ಮೇಲೆಯೇ ಎಲ್ಲ ಕೆಲಸಗಳು ಆಗುತ್ತವೆ ಎನ್ನುತ್ತಿದ್ದಾರೆ.
ಈಗಾಗಲೇ ತಮಗೆ ಹತ್ತು ಹನ್ನೆರಡು NOC ಅರ್ಜಿಗಳು ಬಂದಿದ್ದು ಸಾಹೇಬರು ಇಲ್ಲದ ಕಾರಣ ಅವುಗಳನ್ನು ಕೊಡಲಾಗಿಲ್ಲ ಎಂದು ಆರೋಗ್ಯಾಧಿಕಾರಿ ಮುಗಳಖೋಡ ಹೇಳಿದರು.
ಅದರಂತೆಯೇ ನಿರ್ವಹಣಾಧಿಕಾರಿ ಎಮ್ ಎಸ್ ಪಾಟೀಲ ಅವರೂ ಕೂಡ ಮುಖ್ಯಾಧಿಕಾರಿಗಳು ಬಂದ ನಂತರವೇ ಮುಂದಿನ ಕೆಲಸಗಳು ನಡೆಯುತ್ತವೆ ಎಂದರು.
ಹಾಗಾದರೆ ಸಾರ್ವಜನಿಕರು ಅಲ್ಲಿಯ ತನಕ ಏನು ಮಾಡಬೇಕು ಎಂಬುದು ಪ್ರಶ್ನೆ. ಸಾಕಷ್ಟು ಖರ್ಚು ಮಾಡಿ ಮನೆ ಕಟ್ಟಿ ಕೊಂಡವರಿಗೆ ಸಕಾಲದಲ್ಲಿ ಪುರಸಭೆಯಿಂದ ಎನ್ ಓ ಸಿ ಸಿಗದಿದ್ದರೆ ಅದಕ್ಕೆ ವಿದ್ಯುತ್ ಸಂಪರ್ಕ ಸಿಗುವುದಿಲ್ಲ. ಸಾಹೇಬರು ಅನಾರೋಗ್ಯದ ರಜೆ ಹಾಕಿದ್ದರೆ ಬೇರೆ ಯಾರಿಗಾದರೂ ಜವಾಬ್ದಾರಿ ವಹಿಸಬೇಕಿತ್ತು. ಅವರು ಯಾರಿಗೂ ಜವಾಬ್ದಾರಿ ವಹಿಸಿಲ್ಲ ಎಂದು ಇಬ್ಬರೂ ಅಧಿಕಾರಿಗಳು ಹೇಳುತ್ತಾರೆ. ಇಂಥ ಅವ್ಯವಸ್ಥೆಯನ್ನು ಸರಿಪಡಿಸುವವರಾರು ? ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಯಾರು ತಪ್ಪಿಸಬೇಕು ? ಎಂಬುದು ಜನರ ಪ್ರಶ್ನೆಯಾಗಿದೆ.