ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಇಕೋ ಕ್ಲಬ್ ನ ಸಂಚಾಲಕರಾದ ಮಲ್ಲಿಕಾರ್ಜುನ ಭುಜನ್ನವರ ಮಾತನಾಡಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ, ಒಮ್ಮೆ ಉಪಯೋಗಿಸುವ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಲು ಗ್ರಾಮದಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ಆಂದೋಲನವನ್ನು ಹಮ್ಮಿಕೊಂಡಿರುವುದಾಗಿ ಹಾಗೂ ಪ್ಲಾಸ್ಟಿಕ್ ನ ಬಗೆಗಳು ಹಾಗೂ ಅವುಗಳಿಂದುಂಟಾಗುವ ದುಷ್ಪರಿಣಾಮಗಳನ್ನು, ತಡೆಗಟ್ಟುವ ಕ್ರಮಗಳು ಹಾಗೂ ಮರು ಚಕ್ರೀಕರಣಗೊಳಿಸುವ ವಿಧಾನಗಳನ್ನು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿದರು.
ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಎಸ್. ಎಂ. ಲೋಕನ್ನವರ ಗುರುಗಳು ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಶಿಲಾಯುಗದ ಮುಂದುವರಿದ ಭಾಗವಾಗಿ ಲೋಹಯುಗವಾಗಿದ್ದು, ಲೋಹ ಯುಗದ ಮುಂದುವರಿದ ಭಾಗವಾಗಿ ಇವತ್ತು ಪ್ಲಾಸ್ಟಿಕ್ ಯುಗವಾಗಿ ಪರಿವರ್ತನೆ ಆಗಿದ್ದು ಪ್ರತಿಯೊಂದು ಮನೆಗಳ ಪ್ರಮುಖ ವಸ್ತುಗಳಾಗಿ ಅಲಂಕರಿಸಿದೆ, ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಪ್ರೌಢ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಎಸ್. ಕೆ. ವಾಲಿಮರದ ಗುರುಗಳು ಎಲ್ಲ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿ ರೂಪಿಸಲು ಖಂಡಿತವಾಗಿ ನಿಮ್ಮಿಂದ ಸಾಧ್ಯವಿದೆ. ನೀವು ನಿಮ್ಮ ತಂದೆ, ತಾಯಿ, ಪೋಷಕರು ಹಾಗೂ ಅಕ್ಕಪಕ್ಕದ ಮನೆಯವರಿಗೆಲ್ಲ ಮಾಹಿತಿ ನೀಡಿ ಈ ಆಂದೋಲನದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.ತದನಂತರ 7,8, ಹಾಗೂ 9ನೇ ವಿದ್ಯಾರ್ಥಿಗಳು ಹಾಗೂ ಎಲ್ಲಾ ಶಿಕ್ಷಕ ವೃಂದ ಜಾಗೃತಿ ಜಾಥಾ ಆಂದೋಲನದಲ್ಲಿ ಪಾಲ್ಗೊಂಡು ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಿ ಮನೆಯಲ್ಲಿರುವ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿ, ಮರು ಚಕ್ರೀಕರಣಕ್ಕಾಗಿ ಮುಂದಿನ ಹಂತಕ್ಕೆ ಕಳುಹಿಸಿಕೊಡಲಾಯಿತು.
ಆಂದೋಲನದಲ್ಲಿ ಗುರುಗಳಾದ ಅಶೋಕ, ನಾಗರಾಜ ಪಾಟೀಲ, ಸವದತ್ತಿ, ಪಕೀರಪ್ಪನವರ, ಕು.ಮೂಲಿಮನಿ, ಮಾರುತಿ, ಕು.ರಾಮಲಿಂಗ, ಬಸವರಾಜ ಹಾಗೂ ಗುರುಮಾತೆರಾದ ಹೊಸಕೋಟಿ, ನದಾಫ, ವಿದ್ಯಾ, ಕು.ಕವಿತಾ, ದೀಪಾ ಶಿಕ್ಷಕಿಯರು ಹಾಗೂ 7,8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.